ಕಾಂಗ್ರೆಸ್‌ನಲ್ಲೇ ಉಳಿಯಲು ಸತೀಶ್‌ ಜಾರಕಿಹೊಳಿ ಒಪ್ಪಿಗೆ

7

ಕಾಂಗ್ರೆಸ್‌ನಲ್ಲೇ ಉಳಿಯಲು ಸತೀಶ್‌ ಜಾರಕಿಹೊಳಿ ಒಪ್ಪಿಗೆ

Published:
Updated:

ಬೆಂಗಳೂರು: ಪಕ್ಷದೊಳಗೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಮುನಿಸಿಕೊಂಡಿದ್ದ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ನಲ್ಲೇ ಉಳಿದುಕೊಳ್ಳಲು ಸಮ್ಮತಿಸಿದ್ದಾರೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮಧ್ಯಸ್ಥಿಕೆಯಲ್ಲಿ ಸಿದ್ದರಾಮಯ್ಯ ಜೊತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು ಪಕ್ಷ ತೊರೆಯುವುದಿಲ್ಲ ಎಂದು ಸತೀಶ್‌ ಮಾತು ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೇಣುಗೋಪಾಲ್‌ ಮಂಗಳವಾರ ಸುಮಾರು ಒಂದು ಗಂಟೆ ಸತೀಶ ಜಾರಕಿಹೊಳಿ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಆನಂತರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸ ಕಾವೇರಿಗೆ ವೇಣುಗೋಪಾಲ್‌ ಕರೆದುಕೊಂಡು ಹೋದರು. ಮೂವರೂ ನಾಯಕರು ಸುಮಾರು ಎರಡು ಗಂಟೆ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಮಾತುಕತೆ ವೇಳೆ ಸತೀಶ ಜಾರಕಿಹೊಳಿ, ‘ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಆದರೆ, ನನ್ನ ಮಾತಿಗೂ ಮನ್ನಣೆ ನೀಡಬೇಕು ಎಂದು ಷರತ್ತು ಹಾಕಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದೂ ಗೊತ್ತಾಗಿದೆ.

‘ಹೊಸಪೇಟೆಯಲ್ಲಿ ಫೆ. 10ರಂದು ಪರಿಶಿಷ್ಟ ಪಂಗಡದ ಸಮಾವೇಶ ನಡೆಯಲಿದ್ದು ಅದರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭಾಗವಹಿಸುತ್ತಿದ್ದಾರೆ. ಆದರೆ, ಈ ಸಮಾವೇಶ ನಿಗದಿಪಡಿಸುವ ಸಂದರ್ಭದಲ್ಲಿ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಾಗ ನನ್ನನ್ನು ಬಳಸಿಕೊಂಡು ಬಳಿಕ ನಿರ್ಲಕ್ಷಿಸಿದ್ದೀರಿ. ಪಕ್ಷದ ಬೆಳಗಾವಿ ಜಿಲ್ಲಾ ಘಟಕದಲ್ಲಿರುವ ಭಿನ್ನಾಭಿಪ್ರಾಯ ಕೊನೆಗೊಳಿಸುವ ನಿಟ್ಟಿನಲ್ಲೂ ಪ್ರಯತ್ನ ಆಗಿಲ್ಲ’ ಎಂದು ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ, ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವೇಣುಗೋಪಾಲ್‌, ‘ಎಲ್ಲರೂ ಒಗ್ಗಟ್ಟಾಗಿದ್ದೇವೆ. ಪ್ರತಿ ಬಾರಿ ಸಭೆ ನಡೆಸಿದಾಗಲೂ ರಾಜ್ಯದ ಎಲ್ಲರ ಜೊತೆಗೂ ನಾನು ಚರ್ಚೆ ನಡೆಸುತ್ತೇನೆ’ ಎಂದು ಸಮಜಾಯಿಷಿ ನೀಡಿದರು.

ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರ ಜೊತೆ ಬೆಳಗಾವಿಯಲ್ಲಿ ಬುಧವಾರ ಸಭೆ ನಡೆಸಲಿದ್ದಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ‘ಅಂಥ ಯಾವುದೇ ಮಾಹಿತಿ ಇಲ್ಲ’ ಎಂದರು.

ಫೆ. 2ರಂದು ರಾಜ್ಯಕ್ಕೆ ಚಿದಂಬರಂ: ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ನೋಂದಣಿ ಹೊಣೆ ವಹಿಸಿರುವ ಹಿರಿಯ ನಾಯಕ ಪಿ. ಚಿದಂಬರಂ ಫೆ. 2ರಂದು ರಾಜ್ಯಕ್ಕೆ ಬರಲಿದ್ದಾರೆ.

ಚಿದಂಬರಂ ರಾಜ್ಯದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry