ಕಾಗೋಡು ತಿಮ್ಮಪ್ಪ ಸುತ್ತ ಕುತೂಹಲದ ಚಿತ್ತ!

7

ಕಾಗೋಡು ತಿಮ್ಮಪ್ಪ ಸುತ್ತ ಕುತೂಹಲದ ಚಿತ್ತ!

Published:
Updated:
ಕಾಗೋಡು ತಿಮ್ಮಪ್ಪ ಸುತ್ತ ಕುತೂಹಲದ ಚಿತ್ತ!

ಶಿವಮೊಗ್ಗ: ಐದು ಬಾರಿ ಶಾಸಕರಾಗಿ ಚುನಾಯಿತರಾದ ಹಿರಿಯ ಸಮಾಜವಾದಿ ಕಾಗೋಡು ತಿಮ್ಮಪ್ಪ ಅವರು ಈ ಬಾರಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಇದುವರೆಗೂ ನಡೆದ 14 ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್ ಗೆಲುವು ಕಂಡಿದೆ. ಅದರಲ್ಲಿ ನಾಲ್ಕು ಬಾರಿ ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಎರಡು ಬಾರಿ ಪ್ರಜಾ ಸೋಷಿಯಲಿಸ್ಟ್ ಪಕ್ಷ, ಎರಡು ಬಾರಿ ಬಿಜೆಪಿ, ಒಮ್ಮೆ ಜನತಾ ಪಕ್ಷ ಕ್ಷೇತ್ರದಲ್ಲಿ ಆಧಿಪತ್ಯ ಸ್ಥಾಪಿಸಿವೆ.

ದಶಕದ ನಂತರ ಮೊದಲ ಗೆಲುವು: 1962ರಲ್ಲೇ ಕಾಗೋಡು ತಿಮ್ಮಪ್ಪ ಚುನಾವಣಾ ರಾಜಕೀಯಕ್ಕೆ ಧುಮುಕಿದರೂ ಮೊದಲ ಗೆಲುವು ದೊರಕಿದ್ದು ದಶಕದ ನಂತರ. 1972ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಗೆಲುವು ಕಂಡರು. ಮತ್ತೆ 1989ರವರೆಗೂ ಅಜ್ಞಾತವಾಸ. ಆ ವರ್ಷ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಕಂಡ ಅವರು ಅಲ್ಲಿಂದ ಸತತ ಮೂರು ಬಾರಿ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯ ಗೋಪಾಲಕೃಷ್ಣ ಬೇಳೂರು ವಿರುದ್ಧ ಪರಾಭವಗೊಂಡಿದ್ದರು.

2013ರಲ್ಲಿ ಇದೇ ಕೊನೆಯ ಚುನಾವಣೆ ಎಂದು ಘೋಷಿಸಿದ್ದ ಕಾಗೋಡು ಭಾರಿ ಮತಗಳ (71,960: ಪಡೆದ ಮತಗಳು) ಅಂತರದಿಂದ ಆಯ್ಕೆಯಾಗುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದರು. ಕಾಗೋಡು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ. ಹಾಗಾಗಿ, ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಕಳೆದ ಒಂದು ವರ್ಷದಿಂದಲೂ ಚರ್ಚಾ ವಿಷಯವಾಗಿತ್ತು.

ಬೆಂಗಳೂರಿನಲ್ಲಿ ವೈದ್ಯ ವೃತ್ತಿಯಲ್ಲಿರುವ ಅವರ ಪುತ್ರಿ ರಾಜನಂದಿನಿ ಕಾಂಗ್ರೆಸ್ ಕಾರ್ಯಕ್ರಮ ಗಳಲ್ಲಿ ದಿಢೀರ್ ಎಂದು ಕಾಣಿಸಿಕೊಳ್ಳತೊಡಗಿದ್ದು ಉತ್ತರಾಧಿಕಾರಿ ಚರ್ಚೆಗೆ ಮತ್ತಷ್ಟು ರೆಕ್ಕೆಪುಕ್ಕ ತೊಡಿಸಿದೆ. ಬಿಜೆಪಿ ತೊರೆದು ಈಚೆಗೆ ಕಾಂಗ್ರೆಸ್ ಸೇರಿದ ಬಿ.ಆರ್‌. ಜಯಂತ್, ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಅವರು ಈ ಬಾರಿ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರದಲ್ಲಿ ಆಳವಾದ ಹಿಡಿತ ಹೊಂದಿರುವ ಕಾಗೋಡು ಮಗಳಿಗೆ ಸ್ಥಾನ ಬಿಟ್ಟುಕೊಟ್ಟು ತಾವೇ ಚುನಾವಣಾ ಉಸ್ತುವಾರಿ ವಹಿಸಿಕೊಂಡು ಗೆಲ್ಲಿಸುವ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ಬಿ.ಆರ್.ಜಯಂತ್ ಹಿಂದೆಯೂ ಚುನಾವಣೆ ಎದುರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಅವರು ಎರಡನೇ ಸ್ಥಾನ ಪಡೆದಿದ್ದರು. ಕಲಗೋಡು 4 ಬಾರಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದು, ಒಂದು ಅವಧಿ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ. ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹೊಸನಗರ ತಾಲ್ಲೂಕಿನ ಕಸಬ, ಕೆರೆಹಳ್ಳಿ ಹೋಬಳಿ ಸೇರುತ್ತವೆ. ಹಾಗಾಗಿ, ಅವರಿಗೆ ಟಿಕೆಟ್‌ ನೀಡಿದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಒಂದು ವೇಳೆ ಕಾಗೋಡು ಚುನಾವಣೆಗೆ ನಿಲ್ಲುವುದಾಗಿ ಘೋಷಿಸಿದರೆ ಉಳಿದ ಎಲ್ಲರೂ ತೆರೆಮರೆಗೆ ಸರಿಯಲಿದ್ದಾರೆ.

ಹಾಲಪ್ಪ– ಬೇಳೂರು ಮಧ್ಯೆ ಪೈಪೋಟಿ?: ಪ್ರಬಲ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಅವರನ್ನು ಸುಮಾರು 15 ಸಾವಿರ ಮತಗಳ ಅಂತರದಿಂದ ಮಣಿಸಿ 2004ರಲ್ಲಿ ಅಚ್ಚರಿಯ ಗೆಲುವು ಸಾಧಿಸಿದ್ದ ಬಿಜೆಪಿಯ ಗೋಪಾಲಕೃಷ್ಣ ಬೇಳೂರು, 2008ರಲ್ಲೂ ಎರಡನೇ ಗೆಲುವಿನ ಸಂಭ್ರಮ ಆಚರಿಸಿದ್ದರು. ಆದರೆ, 2013ರಲ್ಲಿ ಕೆಜೆಪಿ–ಬಿಜೆಪಿ ಗೊಂದಲದಲ್ಲಿ ಮೂರನೇ ಸ್ಥಾನಕ್ಕೆ ಸರಿದರು. ಹಿಂದೆ ಸೊರಬ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರು ಆ ಕ್ಷೇತ್ರವನ್ನು ಈಚೆಗೆ ಬಿಜೆಪಿ ಸೇರಿದ ಕುಮಾರ್‌ ಬಂಗಾರಪ್ಪ ಅವರಿಗೆ ಬಿಟ್ಟುಕೊಟ್ಟರೆ ಸಾಗರ ಕ್ಷೇತ್ರದಿಂದ ಟಿಕೆಟ್ ಪಡೆಯುತ್ತಾರೆ ಎಂಬ ಸುದ್ದಿ ಇದೆ. ಇದು ನಿಜವಾದರೆ ಬೇಳೂರು ನಿರ್ಧಾರ ಏನು ಎಂಬ ಪ್ರಶ್ನೆ ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ.

ಜೆಡಿಎಸ್ ಸೇರಿದಂತೆ ಉಳಿದ ಪಕ್ಷಗಳು ಅಲ್ಲಿ ಗೌಣ. ಒಂದು ವೇಳೆ ಬೇಳೂರು ಜೆಡಿಎಸ್‌ ಕಡೆ ಮುಖ ಮಾಡಿದರೆ ತ್ರಿಕೋನ ಸ್ಪರ್ಧೆ ಖಚಿತ. ಬ್ರಾಹ್ಮಣ ಮಹಾಸಭಾದ ಅಬಸೆ ದಿನೇಶ್‌ಕುಮಾರ್ ಜೋಷಿ , ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್, ಗ್ರಾಮಾಂತರ ಘಟಕದ ಅಧ್ಯಕ್ಷ ಪ್ರಸನ್ನ ಕರೆಕೈ ಅವರೂ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry