ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟದಲ್ಲಿ ಶಾಸಕರ ಅಹೋರಾತ್ರಿ ಧರಣಿ

Last Updated 31 ಜನವರಿ 2018, 10:00 IST
ಅಕ್ಷರ ಗಾತ್ರ

ಅರಸೀಕೆರೆ: ಸತತ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ರೈತರೊಂದಿಗೆ ಸೋಮವಾರ ಸಂಜೆಯಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿ ಗೀಜಿಹಳ್ಳಿ ಹೊರ ಭಾಗದಲ್ಲಿ ಸುಳಿ ಒಣಗಿರುವ ತೆಂಗಿನ ತೋಟದಲ್ಲಿ ರೈತರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಧರಣಿ ನಡೆಸುತ್ತ ಅಲ್ಲಿಯೇ ಮಲಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಶಿವಲಿಂಗೇಗೌಡ ಅವರು, ಜಿಲ್ಲೆಯಲ್ಲಿ ಎರಡು ನದಿಗಳು ಹರಿದರೂ ನೀರಾವರಿಯಿಂದ ತಾಲ್ಲೂಕಿನ ಜನತೆ ವಂಚಿತರಾಗಿದ್ದಾರೆ. ಸತತ ಬರದ ಛಾಯೆಗೆ ಸಿಲುಕಿ ಅಂತರ್ಜಲ ಕುಸಿತದಿಂದ ರೈತರ ಪ್ರಮುಖ ವಾಣಿಜ್ಯ ಬೆಳೆ ತೆಂಗು ಸುಳಿ ಒಣಗಿ ನಾಶವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ 29 ಲಕ್ಷ ತೆಂಗಿನ ಮರಗಳಿದ್ದು, ವಿವಿಧ ರೋಗಗಳ ಬಾಧೆ ಹಾಗೂ ಅಂತರ್ಜಲ ಕುಸಿತದಿಂದ ಈಗಾಗಲೇ 8ಲಕ್ಷ ತೆಂಗಿನ ಮರಗಳ ಸುಳಿ ಒಣಗಿವೆ. ಸುಮಾರು 9 ಲಕ್ಷ ಮರಗಳಲ್ಲಿ ಒಂದೊಂದಾಗಿ ಗರಿ ಇಳಿ ಬೀಳುತ್ತಿದ್ದು, ಅವು ಸಹ ನಾಶವಾಗುವ ಹಂತಕ್ಕೆ ಬಂದಿವೆ. ನಷ್ಟಕ್ಕೊಳಗಾದ ತೆಂಗು ಬೆಳೆಗಾರರಿಗೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕು. ಅಲ್ಲಿವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಹೇಳಿದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಬಿಳಿ ಚೌಡಯ್ಯ, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವತ್ಸಲಾ ಶೇಖರಪ್ಪ, ಜಿ.ಪಂ ಸದಸ್ಯೆ ಲೀಲಾ ಧರ್ಮಶೇಖರ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಪ್ರೇಮಾ ಧರ್ಮೇಶ್‌, ತಾ.ಪಂ ಮಾಜಿ ಅಧ್ಯಕ್ಷ ಹಾರನಳ್ಳಿ ಶಿವಮೂರ್ತಿ, ತಾ.ಪಂ ಮಾಜಿ ಸದಸ್ಯ ಮುದುಡಿ ಗಂಗಾಧರ್‌, ರೈತರಾದ ಅಗ್ಗುದ ಶೇಖರಣ್ಣ, ಹರತನಹಳ್ಳಿ ಜಯಣ್ಣ, ಸೋಮಶೆಟ್ಟಿಹಳ್ಳಿ ಸತೀಶ್‌ ಇದ್ದರು.

ಎ.ಸಿ ಮನವೊಲಿಕೆ ವಿಫಲ

ಧರಣಿ ನಡೆಸುತ್ತಿರುವ ಸ್ಥಳಕ್ಕೆ ಉಪ ವಿಭಾಗಾಧಿಕಾರಿ, ಎಚ್‌.ಎಲ್‌. ನಾಗರಾಜ್‌, ಚನ್ನರಾಯಪಟ್ಟಣದ ಶಾಸಕ ಸಿ.ಎಸ್‌. ಬಾಲಕೃಷ್ಣ ಹಾಗೂ ಅಧಿಕಾರಿಗಳು ಮಂಗಳವಾರ ಸಂಜೆ ಭೇಟಿ ನೀಡಿ ಧರಣಿ ಕೈಬಿಡುವಂತೆ ಮನವೊಲಿಸಲು ಯತ್ನಿಸಿದರೂ ಶಾಸಕರು ಧರಣಿ ಮುಂದುವರಿಸಿದರು.

ನಾಗರಾಜ್‌ ಮಾತನಾಡಿ, ತಾಲ್ಲೂಕಿನಲ್ಲಿ ನಷ್ಟ ಹೊಂದಿರುವ ತೆಂಗಿನ ಮರಗಳ ಪರಿಸ್ಥಿತಿ ಹಾಗೂ ತೆಂಗು ಬೆಳೆಗಾರರ ಆರ್ಥಿಕ ಸಂಕಷ್ಟದ ಬಗ್ಗೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಕಳುಹಿಸಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ‘ನಾನು ವಿಧಾನಸಭೆಯಲ್ಲಿ ರೈತರ ದುಃಸ್ಥಿತಿಯನ್ನು ವಿವರಿಸಿದ್ದರೂ ಇದುವರೆಗೂ ಸರ್ಕಾರ ಸ್ಪಂದಿಸದೆ ಇರುವುದರಿಂದ ಪ್ರತಿಭಟನೆಗೆ ಇಳಿಯಬೇಕಾಯಿತು. ತೆಂಗು ಬೆಳೆಗಾರರಿಗೆ ಪರಿಹಾರ ದೊರೆಯಬೇಕು ಅಲ್ಲಿವರೆವಿಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಬಾಲಕೃಷ್ಣ ಮಾತನಾಡಿ, ‘ಶಾಸಕರ ಧರಣಿಗೆ ನಮ್ಮ ಬೆಂಬಲವಿದೆ. ಮಹಾಮಸ್ತಾಭಿಷೇಕ ಇರುವುದರಿಂದ ಪಾಲ್ಗೊಳ್ಳಲಾಗುತ್ತಿಲ್ಲ. ಇಲ್ಲದಿದ್ದರೆ ಶಾಸಕರ ಜತೆ ಧರಣಿ ಕೂರುತ್ತಿದೆ’ ಎಂದು ಹೇಳಿದರು. ತಹಶೀಲ್ದಾರ್‌ ಎನ್‌.ವಿ.ನಟೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT