ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ?

7

ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ?

Published:
Updated:
ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ?

ನವದೆಹಲಿ (ಪಿಟಿಐ): ವಿಶ್ವದ ಅತಿದೊಡ್ಡ ರಿಟೇಲ್‌ ಸಂಸ್ಥೆಯಾಗಿರುವ ವಾಲ್‌ಮಾರ್ಟ್‌ ಸ್ಟೋರ್ಸ್‌ ಇಂಕ್, ಭಾರತದ ಪ್ರಮುಖ ಅಂತರ್ಜಾಲ ಮಾರಾಟ ಸಂಸ್ಥೆಯಾಗಿರುವ (ಇ–ಕಾಮರ್ಸ್‌) ಬೆಂಗಳೂರಿನ ಫ್ಲಿಪ್‌ಕಾರ್ಟ್‌ನಲ್ಲಿ ಶೇ 15 ರಿಂದ ಶೇ 20ರಷ್ಟು ಪಾಲು ಖರೀದಿಸಲು ಮುಂದಾಗಿದೆ.

ವಾಲ್‌ಮಾರ್ಟ್‌ನ ಜಾಗತಿಕ ಸಿಇಒ ಡೌಗ್‌ ಮ್ಯಾಕ್‌ಮಿಲನ್‌ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಬಂಡವಾಳ ಹೂಡಿಕೆ ಬಗ್ಗೆ ಫ್ಲಿಪ್‌ಕಾರ್ಟ್‌ ಜತೆ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದ್ದಾರೆ.  ಬೆಂಗಳೂರಿನಲ್ಲಿ  ಇರುವ ಫ್ಲಿಪ್‌ಕಾರ್ಟ್‌ ಕಚೇರಿಗೂ ಅವರು ಭೇಟಿ ನೀಡಿದ್ದರು. ಈ ಸಂಗತಿಯನ್ನು ಉನ್ನತ ಅಧಿಕಾರಿಗಳಿಬ್ಬರು ಖಚಿತಪಡಿಸಿದ್ದಾರೆ. ಆದರೆ, ‍‍ಪಾಲು ಖರೀದಿ ಒಪ್ಪಂದ ಇನ್ನೂ ಅಂತಿಮಗೊಳ್ಳದ ಕಾರಣಕ್ಕೆ ಈ ವಿಷಯದಲ್ಲಿ ತಮ್ಮ ಹೆಸರು ಉಲ್ಲೇಖಿಸಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕದ ವಾಲ್‌ಮಾರ್ಟ್‌, ₹ 6,500 ಕೋಟಿಗಳಷ್ಟು ಬಂಡವಾಳ ತೊಡಗಿಸಲು ಒಲವು ತೋರಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಲು ಫ್ಲಿಪ್‌ಕಾರ್ಟ್‌ ವಕ್ತಾರರು ನಿರಾಕರಿಸಿದ್ದಾರೆ.

‘ವಾಲ್‌ಮಾರ್ಟ್‌ ಪಾಲಿಗೆ ಭಾರತ ಆದ್ಯತಾ ಮಾರುಕಟ್ಟೆಯಾಗಿದೆ. ಕ್ಯಾಷ್‌ ಆ್ಯಂಡ್‌ ಕ್ಯಾರಿ ವಹಿವಾಟು, ಜಾಗತಿಕ ತಂತ್ರಜ್ಞಾನ ಕೇಂದ್ರ ಮತ್ತು ಜಾಗತಿಕ ಹೊರಗುತ್ತಿಗೆ ವಿಷಯಕ್ಕೆ ಸಂಬಂಧಿಸಿದಂತೆ ಸಿಇಒ ಮ್ಯಾಕ್‌ಮಿಲನ್‌ ಭಾರತಕ್ಕೆ ಭೇಟಿ ನೀಡಿದ್ದರು’ ಎಂದು ವಾಲ್‌ಮಾರ್ಟ್‌ ಇಂಡಿಯಾದ ವಕ್ತಾರ ಹೇಳಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸಲು ಸಂಸ್ಥೆ ಉತ್ಸುಕವಾಗಿದೆ ಎಂದು ಹೇಳಿರುವ ವಕ್ತಾರ, ಈ ಸಂಬಂಧದ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಒಂದು ವೇಳೆ ವಾಲ್‌ಮಾರ್ಟ್‌ನಿಂದ ಬಂಡವಾಳ ಹೂಡಿಕೆ ಕಾರ್ಯಗತಗೊಂಡರೆ, ಅದರಿಂದ  ಫ್ಲಿಪ್‌ಕಾರ್ಟ್‌ನ ಹಣಕಾಸು ಪರಿಸ್ಥಿತಿ ಮತ್ತು ಸರಕುಗಳ ಪೂರೈಕೆ ಸರಣಿ ಬಲವರ್ಧನೆಯಾಗಲಿದೆ. ಸರಕುಗಳ ಖರೀದಿ ಮತ್ತು ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚು ದಕ್ಷತೆ ಅಳವಡಿಸಿಕೊಳ್ಳಲೂ ಸಾಧ್ಯವಾಗಲಿದೆ.

ಗಮನಾರ್ಹ ಏರಿಕೆ ಕಾಣುತ್ತಿರುವ ಭಾರತದ ಇ–ಕಾಮರ್ಸ್‌ ವಹಿವಾಟಿನಲ್ಲಿ ಪಾಲು ಹೊಂದಲೂ ವಾಲ್‌ಮಾರ್ಟ್‌ಗೆ ಸಾಧ್ಯವಾಗಲಿದೆ. ದೇಶದ ಅಂತರ್ಜಾಲ ತಾಣಗಳ ಮಾರಾಟ ವಹಿವಾಟು ಸದ್ಯಕ್ಕೆ ₹ 2.14 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry