ಭಾನುವಾರ, ಡಿಸೆಂಬರ್ 8, 2019
25 °C

ಸರ್ಕಾರಿ ಅಧಿಕಾರಿಗಳಿಗೆ ಸೀಮಿತವಾದ ದಶಮಾನೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಅಧಿಕಾರಿಗಳಿಗೆ ಸೀಮಿತವಾದ ದಶಮಾನೋತ್ಸವ

ಗುಡಿಬಂಡೆ: ಜಿಲ್ಲಾ ದಶಮಾನೋತ್ಸವದ ಅಂಗವಾಗಿ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ದಶಮಾನೋತ್ಸವ ಸಾರ್ವಜನಿಕರ ವಿರೋಧದಿಂದ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿತ್ತು.

ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಸುರಸ್ಮಗಿರಿ ವೇದಿಕೆಯಲ್ಲಿ ಬುಧವಾರ ತಾಲ್ಲೂಕು ಮಟ್ಟದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ತಾಲ್ಲೂಕು ಮಟ್ಟದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಜನರನ್ನು ಸೇರಿಸಲು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡುವ ಗಿಮಿಕ್ ಸಹ ನಡೆದಿತ್ತು.

ಸಿಪಿಎಂ ಮುಖಂಡ ಎಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಹಿಂದುಳಿದ ತಾಲ್ಲೂಕು ಗುಡಿಬಂಡೆಗೆ ಹಿಂದಿನಿಂದಲೂ ನಿರ್ಲಕ್ಷ್ಯ ಭಾವನೆಯಿಂದ ಕಾಣುತ್ತಿದ್ದಾರೆ. ಚಿಕ್ಕಬಳ್ಳಾಫುರ ಜಿಲ್ಲೆಯಾಗಿ 10 ವರ್ಷಗಳು ತುಂಬಿದ ಕಾರಣ ದಶಮಾನೋತ್ಸವ ಕಾರ್ಯಕ್ರಮ ನಡೆಸುತ್ತಿದ್ದಾರೆ ಆದರೆ ಯಾವ ಪುರುಷಾರ್ಥಕ್ಕಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದರು.

ತಾಲ್ಲೂಕಿನಲ್ಲಿ ಅನೇಕ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಗೋಜಿಗೆ ಹೋಗಿಲ್ಲ. ಅಷ್ಟೇ ಅಲ್ಲದೇ ಜಿಲ್ಲಾಧಿಕಾರಿಗಳು ಇಲ್ಲಿಯವರೆಗೂ ಎಷ್ಟು ಬಾರಿ ತಾಲ್ಲೂಕಿಗೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಇದು ಅವರ ನಿರ್ಲಕ್ಷ್ಯತೆ ಕೈಗನ್ನಡಿಯಾಗಿದೆ ಎಂದು ದೂರಿದರು.

ಪಟ್ಟಣ ಪಂಚಾಯತಿ ಸದಸ್ಯ ದ್ವಾರಕನಾಥನಾಯ್ಡು ಮಾತನಾಡಿ, ದಶಮಾನೋತ್ಸವ ಲಾಂಛನದ ಬಗ್ಗೆ ಕಳೆದ 10 ದಿನಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಗುಡಿಬಂಡೆಗೆ ಸಂಬಂಧಿಸಿದ ಲಾಂಛನವೊಂದನ್ನು ಸೇರಿಸಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ನಮ್ಮ ಮನವಿಯನ್ನು ತಿರಸ್ಕರಿಸಿದ ಜಿಲ್ಲಾಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ದೂರಿದರು.

ಈ ನಿಟ್ಟಿನಲ್ಲಿ ತಾಲ್ಲೂಕು ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಸ್ವಾಮಿಯವರು ಆಹ್ವಾನ ಪತ್ರಿಕೆ ಹಾಗೂ ಬ್ಯಾನರ್‍ಗಳಲ್ಲಿ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಹಾಕುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇದೇ ವಿಚಾರವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಾಂಛನ ಕಣ್ತಪ್ಪಿನಿಂದ ಮುದ್ರಿತವಾಗಿದೆ. ಮತ್ತೆ ಅದನ್ನು ಬದಲಾಯಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿಯಾದದು. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ಷಮಾಪಣೆ ಕೋರಬೇಕು ಎಂದು ಆಗ್ರಹಿಸಿದರು.

ಬೆಳಿಗ್ಗೆ 10 ಗಂಟೆಗೆ ಪ್ರಾರಂಭ ವಾಗಬೇಕಿದ್ದ ಕಾರ್ಯಕ್ರಮ ಸಂಜೆ 3 ಗಂಟೆಯಾದರೂ ಪ್ರಾರಂಭ ವಾಗಿಲ್ಲ. ಕಾರ್ಯಕ್ರಮಕ್ಕೆ ಚುನಾಯಿತ ಪ್ರತಿನಿ ಧಿಗಳು ಕಾರ್ಯಕ್ರಮಕ್ಕೆ ಗೈರಾಗಿ ಪ್ರತಿಭಟನಾಕಾರಿಗೆ ಬೆಂಬಲ ನೀಡಿದರು.

ಫೆ.2, 3 ಮತ್ತು 4ರಂದು ಜಿಲ್ಲಾಧಿಕಾರಿಗಳು ನಡೆಸುವ ಕಾರ್ಯ ಕ್ರಮದಲ್ಲಿ ಗುಡಿಬಂಡೆಗೆ ಸಂಬಂಧಿಸಿದ ಲಾಂಛನವನ್ನು ನಮೂದಿಸದೇ ಇದ್ದರೆ ಜಿಲ್ಲೆಯಲ್ಲಿ ನಡೆಯುವಂತಹ ಜಿಲ್ಲಾ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)