ಸೋಮವಾರ, ಡಿಸೆಂಬರ್ 9, 2019
22 °C

ಅಂಗನವಾಡಿ ಸ್ವರೂಪ ಬದಲಿಸಿದ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗನವಾಡಿ ಸ್ವರೂಪ ಬದಲಿಸಿದ ಅಭಿಯಾನ

ಬೆಂಗಳೂರು: ಕೇಂದ್ರಕ್ಕೆ ಕಾಲಿಡುತ್ತಿದ್ದಂತೆ ತುಳಸಿ, ಹೊಂಗೆ, ನಿಂಬೆ ಗಿಡಗಳು ಸ್ವಾಗತ ಬಯಸುತ್ತವೆ. ಒಳಾಂಗಣ ಪ್ರವೇಶಿಸುತ್ತಿದ್ದಂತೆ ಗೋಡೆಯ ಮೇಲಿನ ಬಣ್ಣದ ಚಿತ್ತಾರಗಳು ಮನ ಸೆಳೆಯುತ್ತವೆ. ಚಿಣ್ಣರ ಕೈಯಲ್ಲಿನ ಬಹುವಿಧದ ಕಲಿಕಾ ಸಾಮಗ್ರಿಗಳು ಶೈಕ್ಷಣಿಕ ವಾತಾವರಣಕ್ಕೆ ಸ್ಫೂರ್ತಿ ತುಂಬುತ್ತವೆ.

‘ಯುನೈಟೆಡ್‌ ವೇ ಬೆಂಗಳೂರು’ ಸಂಸ್ಥೆಯು ‘ಬಾರ್ನ್‌ ಲರ್ನ್‌’ ಅಭಿಯಾನದಡಿ ದತ್ತು ಪಡೆದಿರುವ ಸುಧಾಮ ನಗರ ಅಂಗನವಾಡಿ ಕೇಂದ್ರದ ಸ್ವರೂಪವಿದು.

ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸಲು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಔಪಚಾರಿಕ ಕಲಿಕೆಗೆ ಒತ್ತು ನೀಡುವ ದಿಸೆಯಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರ್ಪೊರೇಟ್‌ ಕಂಪನಿಗಳ ಸಹಯೋಗದೊಂದಿಗೆ ಬಾರ್ನ್‌ ಲರ್ನ್‌ ಅಭಿಯಾನ ಹಮ್ಮಿಕೊಂಡಿದೆ.

ಸಂಸ್ಥೆ ಈ ಅಭಿಯಾನವನ್ನು 2013–14 ರಲ್ಲಿ ಆರಂಭಿಸಿತು. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ 132 ಅಂಗನವಾಡಿ ಕೇಂದ್ರಗಳನ್ನು ದತ್ತು ಪಡೆದಿದೆ. 18,200 ಮಕ್ಕಳು ಹಾಗೂ 21,840 ತಾಯಂದಿರು ಅಭಿಯಾನದ ವ್ಯಾಪ್ತಿಗೆ ಒಳಪಟ್ಟಿದ್ದಾರೆ.

ತಾಯಂದಿರಿಗೆ ಪ್ರತಿ ತಿಂಗಳು ಆರೋಗ್ಯ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ಮೂರು ವರ್ಷದೊಳಗಿನ ಮಗುವಿನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆಯ ಮಾಪನ ಮಾಡಲಾಗುತ್ತದೆ. ಬೆಳವಣಿಗೆ ಕುಂಠಿತ ಇರುವ ಮಗುವಿಗೆ ಸೂಕ್ತ ಸೌಲಭ್ಯ ನೀಡುವುದು ಅಭಿಯಾನದ ಭಾಗವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕೌಶಲ ತರಬೇತಿ ನೀಡಿ ಗುಣಮಟ್ಟದ ಬೋಧನೆಗೆ ಪ್ರೋತ್ಸಾಹಿಸುತ್ತಿದೆ.

‘ಅಂಗನವಾಡಿಗಳನ್ನು ಮೂರು ವರ್ಷಗಳ ಅವಧಿಗೆ ದತ್ತು ಪಡೆಯುತ್ತೇವೆ. ಮೊದಲ ವರ್ಷದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಉಳಿದ ವರ್ಷಗಳಲ್ಲಿ ಶಾಲಾಪೂರ್ವ ಕಲಿಕೆಗೆ ಒತ್ತು ನೀಡುತ್ತೇವೆ. ಅಭಿಯಾನ ಆರಂಭವಾದ ನಂತರ ಅಂಗನವಾಡಿಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮುನೀಶ್‌ ಮೈಕಲ್ ಮಾಹಿತಿ ನೀಡಿದರು.

‘ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಭಿಯಾನದ ಪ್ರಮುಖ ಧ್ಯೇಯ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಆಟಿಕೆಗಳು, ಪಠ್ಯ ಸಾಮಗ್ರಿಗಳು ಪ್ಲಾಸ್ಟಿಕ್‌ ವಸ್ತುಗಳಾಗಿವೆ. ಮಕ್ಕಳ ಆರೋಗ್ಯ ಮತ್ತು ಪರಿಸರಕ್ಕೆ ಇವು ಮಾರಕ. ಹಾಗಾಗಿ ಸಂಸ್ಥೆಯು ಮರದ ಆಟಿಕೆಗಳನ್ನು ಒದಗಿಸುವ ಗುರಿ ಹೊಂದಿದೆ’ ಎಂದು ಅಭಿಯಾನದ ಸಂಯೋಜಕಿ ಭಾಗ್ಯ ತಿಳಿಸಿದರು.

‘ಮೊದಲು ಪ್ರತಿ ಮನೆಗೂ ತೆರಳಿ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವಂತೆ ಪೋಷಕರನ್ನು ಬೇಡಿಕೊಳ್ಳಬೇಕಿತ್ತು. ಅಭಿಯಾನ ಆರಂಭವಾದ ನಂತರ ಅವರೇ ಸ್ವಯಂಪ್ರೇರಣೆಯಿಂದ ಮಕ್ಕಳನ್ನು ಕೇಂದ್ರಗಳಿಗೆ ತಂದು ಬಿಡುತ್ತಿದ್ದಾರೆ. ಮಕ್ಕಳೂ ಕಲಿಕೆಯಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ. ಮಕ್ಕಳ ಹಾಜರಾತಿ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ’ ಎಂದು ಸುಧಾಮ ನಗರದ ಅಂಗನವಾಡಿ ಕಾರ್ಯಕರ್ತೆ ಕೆ.ವನಜಾಕ್ಷಿ ತಿಳಿಸಿದರು.

ಪ್ರತಿಕ್ರಿಯಿಸಿ (+)