ಮಂಗಳವಾರ, ಡಿಸೆಂಬರ್ 10, 2019
26 °C
ಚಳಿ, ಹವಾಮಾನ ಇಲಾಖೆ

ಮತ್ತೆ ಹೆಚ್ಚಾಗಿದೆ ಚಳಿ ಅಬ್ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಹೆಚ್ಚಾಗಿದೆ ಚಳಿ ಅಬ್ಬರ

ಬೆಂಗಳೂರು: ರಾಜ್ಯದಲ್ಲಿ ಎರಡು ದಿನಗಳಿಂದ ಚಳಿಯ ಅಬ್ಬರ ತೀವ್ರವಾಗಿದ್ದು, ವಿಪರೀತ ಶೀತಗಾಳಿ ಬೀಸುತ್ತಿದೆ.

‘ಜನವರಿ ತಿಂಗಳ ಅಂತ್ಯಕ್ಕೆ ಸಾಮಾನ್ಯವಾಗಿ ರಾಜ್ಯದಲ್ಲಿ ಚಳಿಯ ಪ್ರಭಾವ ಕಡಿಮೆಯಾಗುತ್ತದೆ. ಆದರೆ, ಈ ವರ್ಷ ಫೆಬ್ರುವರಿ ಆರಂಭವಾದರೂ ನಡುಕ ಹುಟ್ಟಿಸುವ ಚಳಿ ವೃದ್ಧಿಸುತ್ತಲೇ ಇದೆ. ಶುಭ್ರ ಆಕಾಶ ಹಾಗೂ ಶೀತ ಗಾಳಿ ಹೆಚ್ಚಾಗುವುದರಿಂದ ಮುಂದಿನ ಮೂರು ದಿನಗಳು ಚಳಿ ಇನ್ನಷ್ಟು ಹೆಚ್ಚಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಎಂ.ಮೇತ್ರಿ ತಿಳಿಸಿದರು.

‘ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ ಹಾಗೂ ಪಂಜಾಬ್‌ ಕಡೆಯಿಂದ ತಂಪಾದ ಗಾಳಿ ದಕ್ಷಿಣಕ್ಕೆ ಬೀಸುತ್ತಿರುವುದರಿಂದ ರಾಜ್ಯದಲ್ಲಿ ಚಳಿಯ ಅನುಭವವಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶೇ 84ರಷ್ಟು ಭೌಗೋಳಿಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ನಿಂದ 16 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಕೋಲಾರ ಜಿಲ್ಲೆಯ ಹುತ್ತೂರು ಹೋಬಳಿಯಲ್ಲಿ ಬುಧವಾರ ಅತಿ ಕಡಿಮೆ 6.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಗದಗ, ಚಿಕ್ಕಮಗಳೂರು, ಬೀದರ್‌, ತುಮಕೂರು, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಕನಿಷ್ಠ ಉಷ್ಣಾಂಶ 6 ಡಿಗ್ರಿ ಸೆಲ್ಸಿಯಸ್‌ನಿಂದ 8 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ.

‘ಕನಿಷ್ಠ ಉಷ್ಣಾಂಶದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಉತ್ತರ ಕರ್ನಾಟಕ ಬಯಲು ಪ್ರದೇಶವಾಗಿರುವುದರಿಂದ ಚಳಿ ಹೆಚ್ಚಾಗಿದ್ದು, ಕನಿಷ್ಠ ಉಷ್ಣಾಂಶದಲ್ಲಿ ಮೂರರಿಂದ ಐದು ಡಿಗ್ರಿಯಷ್ಟು ಕುಸಿತವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಕನಿಷ್ಠ ಉಷ್ಣಾಂಶ ಒಂದರಿಂದ ಮೂರು ಡಿಗ್ರಿಯಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಚಳಿ ಕೊಂಚ ಹೆಚ್ಚಿದೆ’ ಎಂದು ಹೇಳಿದರು.

‘ಕೆಲ ದಿನಗಳ ಹಿಂದೆ ಚೆನ್ನೈ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ವಾತಾವರಣದಲ್ಲಿ ತೇವಾಂಶ ಹಾಗೂ ತೆಳು ಮೋಡ ಹರಿದಾಡಿತ್ತು. ಆ ಕಾರಣ ರಾಜ್ಯದಲ್ಲಿ ಚಳಿ ಕಡಿಮೆಯಾಗಿತ್ತು. ಇನ್ನೇನು ಚಳಿ ಮುಗಿದೇ ಹೋಯಿತು ಎನ್ನುವಾಗ, ತಂಪಾದ ಗಾಳಿ ಬೀಸಲು ಪ್ರಾರಂಭವಾಗಿದೆ. ಇದರಿಂದ ಈ ಸಲ ಚಳಿಯ ದಿನಗಳು ಹೆಚ್ಚಾಗಬಹುದು’ ಎಂದು ವಿಶ್ಲೇಷಿಸಿದರು.

ಶೀತಗಾಳಿಗೆ ಮೈನಡುಕ: ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ಗಂಟೆವರೆಗೆ ಮಂಜು ಮುಸುಕಿದ ವಾತಾವರಣ ಇರುತ್ತದೆ. ಸೂರ್ಯನ ಝಳ ಬೀಳುತ್ತಿದ್ದರೂ ಶೀತಗಾಳಿಯಿಂದಾಗಿ ಚಳಿ ಅನುಭವವಾಗುತ್ತಿದೆ. ರಾತ್ರಿ ಹಾಗೂ ಬೆಳಗ್ಗಿನ ಜಾವ ಮೈಕೊರೆಯುವ ಚಳಿ ಇದೆ. ಬೆಂಗಳೂರಿನಲ್ಲಿ ಬುಧವಾರ ಕನಿಷ್ಠ ಉಷ್ಣಾಂಶ 13.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ನಗರದಲ್ಲಿ ಸಾಮಾನ್ಯವಾಗಿ ಕನಿಷ್ಠ ಉಷ್ಣಾಂಶ 16 ಡಿಗ್ರಿಯಿಂದ 18 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ.

ಪ್ರತಿಕ್ರಿಯಿಸಿ (+)