ಶುಕ್ರವಾರ, ಜೂನ್ 5, 2020
27 °C

ತಿಂಗಳ ಒಳಗೆ ಭೂ ಹಕ್ಕು ವಿತರಣೆ ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿಂಗಳ ಒಳಗೆ ಭೂ ಹಕ್ಕು ವಿತರಣೆ ಪೂರ್ಣ

ಶಿವಮೊಗ್ಗ: ಶರಾವತಿ ಯೋಜನೆ ಮುಳುಗಡೆಯ ಎಲ್ಲ ಸಂತ್ರಸ್ತರಿಗೂ ಈ ತಿಂಗಳ ಅಂತ್ಯದ ಒಳಗೆ ಭೂಮಿ ಸಾಗುವಳಿ ಹಕ್ಕು ನೀಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮುಳುಗಡೆ ಸಂತ್ರಸ್ತರ ಭೂಹಕ್ಕು ನೀಡುವಿಕೆ ಪ್ರಕ್ರಿಯೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

50 ವರ್ಷಗಳ ಹಿಂದೆ ಅಣೆಕಟ್ಟೆ ನಿರ್ಮಾಣದ ನಂತರ ಅಂದಿನ ಕೇಂದ್ರ ಸರ್ಕಾರ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು 8324 ಎಕರೆ ಬಿಡುಗಡೆ ಮಾಡಿತ್ತು. ಆದರೆ, ಆರ್‌ಟಿಸಿ ದಾಖಲೆಗಳಲ್ಲಿ ಈಗಲೂ ಅರಣ್ಯ ಎಂದೇ ನಮೂದಾಗಿತ್ತು. ಈ ಎಲ್ಲ ಭೂಮಿಯನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಡಿ ನೋಟಿಫಿಕೇಶನ್ ಮಾಡಿ, ಕಂದಾಯ ಭೂಮಿಯಾಗಿ ಪರಿಗಣಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಜಂಟಿ ಸರ್ವೆ ಕಾರ್ಯದ ನಂತರ 6,459 ಎಕರೆ ಡಿ ನೋಟಿಫಿಕೇಷನ್ ಮಾಡಲಾಗಿದೆ. ಅದರಲ್ಲಿ ಈಗಾಗಲೇ 1502 ಕುಟುಂಬಗಳ ಹೆಸರಿಗೆ 3,121 ಎಕರೆ ಭೂಮಿಯ ಪಹಣಿ ವಿತರಿಸಲಾಗಿದೆ ಎಂದು ವಿವರ ನೀಡಿದರು.

ಜಂಟಿ ಸರ್ವೆ ಕಾರ್ಯದ ಸಮಯದಲ್ಲಿ 1,322 ಎಕರೆ ಭೂಮಿ ಹೊಂದಾಣಿಕೆಯಾಗಿಲ್ಲ. ಬಿಡುಗಡೆಯಾದ ಭೂಮಿಯೂ, ಜನರು ಸಾಗುವಳಿ ಮಾಡಿದ ಭೂಮಿ ಬೇರೆಬೇರೆಯಾಗಿವೆ. ಈ ವ್ಯತ್ಯಾಸ ಸರಿಪಡಿಸಲು ಜನರು ವಾಸಿಸುತ್ತಿರುವ ಭೂಮಿಯನ್ನೇ ನೀಡಲು ಹೊಸದಾಗಿ ಪ್ರಸ್ತಾಪ ಸಲ್ಲಿಸಬೇಕು. ಮತ್ತೆ ತಿದ್ದುಪಡಿ ಮಾಡಿ ಭೂ ಹಕ್ಕು ದೊರಕಿಸುವ ಪ್ರಕ್ರಿಯೆಗೆ ಆರಂಭಿಸಬೇಕು. ಅದಕ್ಕಾಗಿ ಫೆ. 5ರಂದು ಬೆಂಗಳೂರಿಗೆ ಬರುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಈಗಾಗಲೇ ಬಿಡುಗಡೆಯಾಗಿರುವ ಜಮೀನು ಡಿನೋಟಿಫೈ ಮಾಡಲು ಕ್ರಮ ಕೈಗೊಳ್ಳಲಾಗುವುದು. ಡಿನೋಟಿಫೈ ಆಗಿರುವ ಪ್ರಕರಣಗಳಲ್ಲಿ ಫಲಾನುಭವಿಗಳಿಗೆ ಕಾಲಮಿತಿಯ ಒಳಗಾಗಿ ಸಾಗುವಳಿ ಪತ್ರ ನೀಡಲಾಗುವುದು. ಎಲ್ಲಾ ಪ್ರಕ್ರಿಯೆ ಫೆಬ್ರುವರಿ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿ, ‘ಈಗಾಗಲೇ ಬಿಡುಗಡೆ ಮಾಡಲಾಗರುವ ಭೂಮಿಯಲ್ಲಿ 2,325 ಎಕರೆ ಡಿನೋಟಿಫಿಕೇಶನ್ ಮಾಡಬೇಕು. ಈಗಾಗಲೇ ಮೊದಲ ಹಂತದಲ್ಲಿ ಡಿನೋಟಿಫಿಕೇಶನ್ ಆಗಿರುವ 1,031 ಎಕರೆ ಭೂಮಿಯ ಪಹಣಿ ಸಿದ್ಧವಾಗುತ್ತಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 789 ಎಕರೆ, ಹೊಸನಗರ 140, ತೀರ್ಥಹಳ್ಳಿ 200 ಎಕರೆ ಪೂರ್ಣಗೊಳ್ಳುವ ಹಂತ ತಲುಪಿವೆ. ಸುಮಾರು 500 ಜನ ಫಲಾನುಭವಿಗಳಿಗೆ ಒಂದು ವಾರದ ಒಳಗಾಗಿ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ‘ತಾಲ್ಲೂಕಿನ ಹಲವು ಪ್ರಕರಣಗಳಲ್ಲಿ ಫಲಾನುಭವಿಗಳು ಇರುವ ಸ್ಥಳಕ್ಕೂ, ಸರ್ವೆ ಮಾಡಿದ ಭೂಮಿಗೂ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದ ಸಂತ್ರಸ್ತ ಕುಟುಂಬಗಳಿಗೆ ಸಾಗುವಳಿ ಹಕ್ಕು ದೊರಕಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ಹೊಂದಾಣಿಕೆಯಾಗದ ಭೂಮಿ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಜನರು ನೆಲೆಸಿರುವ ಭೂಮಿ ಡಿನೋಟಿಫಿಕೇಷನ್ ಮಾಡಲು ತಕ್ಷಣ ಪ್ರಸ್ತಾವ ಸಲ್ಲಿಸಬೇಕು. ತೀರ್ಥಹಳ್ಳಿ ತಾಲ್ಲೂಕಿನ ಕೊಂಬಿನಕೈಯಲ್ಲಿ ಪುನರ್ವಸತಿಗಾಗಿ 342 ಎಕರೆ ಭೂಮಿ ಬಿಡುಗಡೆಯಾಗಿದೆ. ಡಿನೋಟಿಫೈ ಪ್ರಕ್ರಿಯೆ ಪೂರ್ಣಗೊಳಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕಾಗೋಡು ಸೂಚಿಸಿದರು.

ಚುನಾವಣೆ ಘೋಷಣೆಯಾದರೆ ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಹಾಗಾಗಿ, ತ್ವರಿತವಾಗಿ ಕೆಲಸ ಮಾಡಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಉಳಿದ ಪ್ರಗತಿ ಪ್ರಕ್ರಿಯೆ ಕುರಿತು ಪರಿಶೀಲಿಸಲು 15 ದಿನದ ಒಳಗೆ ಮತ್ತೆ ಸಭೆ ಕರೆಯಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್ ಕುಮಾರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ನಾಗರಾಜ್ ಸಿಂಗ್ರೇರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.