7

ಸಂತೋಷ್ ಹತ್ಯೆ: ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

Published:
Updated:

ರಾಮನಗರ: ಬೆಂಗಳೂರಿನಲ್ಲಿ ಗುರುವಾರ ಹತ್ಯೆಯಾದ ಸಂತೋಷ್‌ ಪ್ರಕರಣದಲ್ಲಿ ಮತೀಯ ಸಂಘಟನೆಗಳ ಕೈವಾಡವಿದ್ದು, ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಸಂಕೀರ್ಣದ ಎದುರು ಪ್ರತಿಭಟನೆ ನಡೆಸಿದರು.

‘ರಾಜ್ಯದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆ ಸರಣಿ ಮುಂದುವರಿಯುತ್ತಲೇ ಇದ್ದು, ಇದು 24ನೇಯದ್ದಾಗಿದೆ. ಇವುಗಳಲ್ಲಿ ಎನ್ಐಎಯು, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ, ಎಸ್‌ಡಿಪಿಐ ಸಂಘಟನೆಗಳ ಕಾರ್ಯಕರ್ತರ ಕೈವಾಡವಿದೆ. ಈ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯೊಡನೆ ನೇರ ಸಂಪರ್ಕ ಹೊಂದಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡಿವೆ’ ಎಂದು ಆರೋಪಿಸಿದರು.

ಈ ಎಲ್ಲ ಪ್ರಕರಣಗಳನ್ನು ಎನ್‌ಐಎಗೆ ವಹಿಸುವಂತೆ ಆಗ್ರಹಿಸುತ್ತಾ ಬಂದಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ. ಅಂತಹ ಸಂಘಟನೆಗಳಿಗೆ ಸರ್ಕಾರವು ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ದೂರಿದರು. ಇದು ಹೀಗೆಯೇ ಮುಂದುವರಿದಲ್ಲಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಯಾಗಲಿದೆ. ಹೀಗಾಗಿ ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಸಂತೋಷ್‌ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು. ಅವರ ಕುಟುಂಬದ ಸದಸ್ಯರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಈ ಕುರಿತು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಜಗದೀಶ ಗೌಡ, ಜಿ.ವಿ. ಪದ್ಮನಾಭ್‌, ಜಗನ್ನಾಥ್‌, ರುದ್ರದೇವರು, ರಾಮಾಂಜನೇಯ, ಎಚ್‌. ಲೀಲಾವತಿ, ಉಮಾ, ಸಿ. ರಮೇಶ್‌, ಕೆ. ನಾಗೇಂದ್ರ , ಆನಂದಸ್ವಾಮಿ, ವಿನೋದ್‌ ಭಗತ್‌, ಚನ್ನಪ್ಪ, ಚಂದ್ರಶೇಖರ ರೆಡ್ಡಿ, ರಾಜು, ಶಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry