ರಾಜಕಾರಣಿಗಳ ಕುಮ್ಮಕ್ಕಿನಿಂದ ಗಡಿ ವಿವಾದ ಜೀವಂತ: ಕಾಪಸೆ

7

ರಾಜಕಾರಣಿಗಳ ಕುಮ್ಮಕ್ಕಿನಿಂದ ಗಡಿ ವಿವಾದ ಜೀವಂತ: ಕಾಪಸೆ

Published:
Updated:

ನಿಪ್ಪಾಣಿ: ರಾಜಕೀಯ ಹಿತಾಸಕ್ತಿಯುಳ್ಳ ಕೆಲವರ ಪ್ರಚೋದನೆಯಿಂದ ಸದಾಕಾಲ ಗಡಿಯಲ್ಲಿ ಬಿಗಿ ವಾತಾವರಣ ಇರುವುದು ಕಳವಳಕಾರಿ ಸಂಗತಿ ಎಂದು ಸಾಹಿತಿ ಡಾ.ಗುರುಲಿಂಗ ಕಾಪಸೆ ಆತಂಕ ವ್ಯಕ್ತಪಡಿಸಿದರು.

ನಗರದ ಆಶೀರ್ವಾದ ಸಾಂಸ್ಕೃತಿಕ ಭವನದಲ್ಲಿ ಈಚೆಗೆ ನಡೆದ ಜಿಲ್ಲಾ ಗಡಿ ಹೋರಾಟಗಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ‘ದಕ್ಷಿಣ ಮಹಾರಾಷ್ಟ್ರದ ಬಹುಪಾಲು ಭಾಗ ಕರ್ನಾಟಕದ ರಾಜರ ಆಡಳಿತಕ್ಕೆ ಒಳಪಟ್ಟಿತ್ತು. ಅಲ್ಲಿ ಸಿಕ್ಕಿರುವ ಮುಕ್ಕಾಲು ಶಾಸನಗಳು ಕನ್ನಡದಲ್ಲಿ ಇರುವುದೇ ಇದಕ್ಕೆ ಸಾಕ್ಷಿ. ಮರಾಠಿಯ ಜ್ಞಾನೇಶ್ವರಿಯ ಮೇಲೂ ಶರಣರ ವಚನ ಮತ್ತು ಕನ್ನಡದ ಪ್ರಭಾವವಿದೆ. ಅಷ್ಟೇ ಅಲ್ಲದೇ ಸಾಂಗಲಿ, ಸೊಲ್ಲಾಪುರ, ಪಂಢರಪುರ ಇವೆಲ್ಲ ಅಚ್ಚಗನ್ನಡ ಪ್ರದೇಶಗಳಾಗಿದ್ದು, ಶಿವಾಜಿಯ ಮೂಲ ಸಹ ಕನ್ನಡ ನೆಲವೇ ಆಗಿದೆ. ಇತಿಹಾಸ ಹೀಗಿರುವಾಗ ಗಡಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಕಚ್ಚಾಡುವುದೇಕೆ?’ ಎಂದು ಪ್ರಶ್ನಿಸಿದರು.

ಚಿಂಚಣಿಯ ಅಲ್ಲಮಪ್ರಭು ಸ್ವಾಮಿಜಿ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಸುಧಾರಿಸಲು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಅಗತ್ಯವಾಗಿದೆ ಎಂದರು. ಸಮಾವೇಶದಲ್ಲಿ ಕನ್ನಡ ಹೋರಾಟಗಾರ ಬಿ.ಆರ್.ಪಾಟೀಲ, ಎಂ.ಡಿ.ಅಲಾಸೆ, ಸಂಜಯ ಪಾಟೀಲ, ಸಂಜೀವ ಬಡಿಗೇರ, ಕಸ್ತೂರಿ ಭಾವಿ, ರವೀಂದ್ರ ತೋಟಗೇರ, ಬಸವರಾಜ ಖಾನಪ್ಪನವರ, ಅನೀಲ ನೇಷ್ಠಿ, ಎಸ್.ಎಲ್. ಕಾಮನೆ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನದ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ಕಸಾಪ ಸ್ಥಳೀಯ ಘಟಕದ ಅಧ್ಯಕ್ಷ ಹಜರತಅಲಿ ದೇಗಿನಾಳ, ಚಿಕ್ಕೋಡಿ ಘಟಕದ ಅಧ್ಯಕ್ಷ ಶ್ರೀಪಾದ ಕುಂಬಾರ, ಬೆಳಗಾವಿಯ ಬಸವರಾಜ ಸಸಾಲಟ್ಟಿ, ಜ್ಯೋತಿ ಬಾದಾಮಿ, ರಾವಸಾಹೇಬ ಜನವಾಡೆ, ಮಾರುತಿ ಕೊಣ್ಣೂರಿ, ಸುರೇಶ ಕಾನಪೇಟ, ಹನುಮಂತ ನಾಯಕ, ವಿವೇಕ ಕಾಂಬಳೆ ಇದ್ದರು. ಪ್ರೊ.ಕುಮಾರ ತಳವಾರ ಸ್ವಾಗತಿಸಿದರು. ಈರಣ್ಣ ಶಿರಗಾವೆ ಕಾರ್ಯಕ್ರಮ ನಿರೂಪಿಸಿದರು. ಡಾ.ದೇವೇಂದ್ರ ಬಡಿಗೇರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry