ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ

7

ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ

Published:
Updated:

ಹುಮನಾಬಾದ್: ಭಾಲ್ಕಿ ತಾಲ್ಲೂಕಿನ ಗ್ರಾಮವೊಂದರ ವಿದ್ಯಾರ್ಥಿನಿ ಕೊಲೆ ಖಂಡಿಸಿ, ಹಡಪದ ಸಮಾಜ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಹಳೆ ತಹಶೀಲ್ದಾರ್‌ ಕಚೇರಿಯಿಂದ ಪ್ರಮುಖ ಬೀದಿಗಳ ಮೂಲಕ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಅವರಿಗೆ ಬರೆದ ಮನವಿಪತ್ರವನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಭಾಲ್ಕಿ ತಾಲ್ಲೂಕಿನ ಗಾಯಮುಖ ಸಮೀಪದ ಅರಣ್ಯ ಪ್ರದೇಶದಲ್ಲಿ ವಿದ್ಯಾರ್ಥಿನಿ ಕೊಲೆ ನಡೆದಿದೆ. ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ವಿದ್ಯಾರ್ಥಿನಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು. ಜೊತೆಗೆ ಜಿಲ್ಲೆಯ ಸಂಸದ, ಜಿಲ್ಲಾ ಉಸ್ತುವಾರಿ ಸಚಿವರು ಒಳಗೊಂಡಂತೆ ಎಲ್ಲ ಶಾಸಕ ವಯಕ್ತಿಕ ನೆರವು ನೀಡಬೇಕು. ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡಿವುದರ ಜೊತೆಗೆ ಉಳಿದವರ ಶಿಕ್ಷಣದ ವೆಚ್ಚ ಸರ್ಕಾರವೇ ಭರಿಸಬೇಕು ಎಂದು ಅವರು ಒತ್ತಾಯಿಸಿದರು.

ಹಡಪದ ಸಮಾಜ ಅಧ್ಯಕ್ಷ ಶಿವಶಂಕರ ಹಡಪದ, ಸವಿತಾ ಸಮಾಜ ಅಧ್ಯಕ್ಷ ಗೋಪಾಲ ಹೀರಾಪೂರ, ವೀರಶೈವ ಲಿಂಗಾಯತ ಸಮಾಜ ಮುಖಂಡ ಸಿದ್ದಲಿಂಗಪ್ಪ ಪಾಟೀಲ, ದಲಿತ ಮುಖಂಡ ಸುರೇಶ ಘಾಂಗ್ರೆ, ಗಂಗಾಮಾತಾ ಕೋಲಿ ಸಮಾಜ ಅಧ್ಯಕ್ಷ ನಾಗಭೂಷಣ ಸಂಗಮ್, ಕನ್ನಡ ಸೇನೆಯ ದತ್ತು ಲದ್ದೆ, ದಲಿತ ಸೇನೆ ಅಧ್ಯಕ್ಷ ವೀರಪ್ಪ ಧುಮ್ಮನಸೂರ, ಜೈಕರ್ನಾಟಕ ಸಂಘದ ಅಧ್ಯಕ್ಷ ರವಿ ಭಂಡಾರಿ, ಶ್ರೀರಾಮ ಸೇನೆಯ ಗುರು ಸ್ವಾಮಿ, ಯುತ್‌ ಕಾಂಗ್ರೆಸ್ ಅಧ್ಯಕ್ಷ ಉಮೇಶ ಜಂಬಗಿ, ಬಿಜೆಪಿ ಮುಖಂಡ ಬ್ಯಾಂಕ್‌ರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry