ಮಂಗಳವಾರ, ಡಿಸೆಂಬರ್ 10, 2019
20 °C

ಹಾಮೂಲ್‌ನಲ್ಲಿ ಪೆಟ್ ಬಾಟಲ್ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಮೂಲ್‌ನಲ್ಲಿ ಪೆಟ್ ಬಾಟಲ್ ಘಟಕ

ಹಾಸನ: ಐದು ಲಕ್ಷ ಲೀಟರ್ ಸಾಮರ್ಥ್ಯದ ಪೆಟ್ ಬಾಟಲ್‌ (200 ಗ್ರಾಂ) ತಯಾರಿಕ ಘಟಕ ಆರಂಭಿಸಲಾಗುವುದು ಎಂದು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು.

ನಗರದ ಡೇರಿ ಆವರಣದಲ್ಲಿ ಹಾಲು ಉತ್ಪಾದಕರುಗಳ ಕುಂದು, ಕೊರತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ₹ 37 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಟೆಂಡರ್‌ ಕರೆಯಲಾಗಿದ್ದು, ₹ 65 ಕೋಟಿ ವೆಚ್ಚದಲ್ಲಿ ಯಂತ್ರೋಪಕರಣ ಖರೀದಿಸಲಾಗುವುದು. ಈ ಯೋಜನೆಯನ್ನು ಕೆಎಂಫ್‌ ಕೈಗೆತ್ತಿಕೊಂಡಿದೆ ಎಂದರು.

ಹಾಮೂಲ್‌ನ ಹೆಚ್ಚುವರಿ ಹಾಲನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ವಿವಿಧ ಮೂಲಭೂತ ಸೌಕರ್ಯಗಳಿಗೆ ಅಂದಾಜು ₹ 320 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು.

ಹಾಲು ಶೇಖರಣೆ ಮಾಡುವ ಕಾರ್ಯದರ್ಶಿಗಳು ಹಾಗೂ ಹಾಲು ಪರೀಕ್ಷೆ ಮಾಡುವವರಿಗೆ ಫೆ. 5ರಿಂದಲೇ ಲೀಟರ್‌ಗೆ 10 ಪೈಸೆ ಪ್ರೋತ್ಸಾಹ ಧನವನ್ನು ಹಾಮೂಲ್‌ ನೀಡಲಿದೆ. ಹೆಚ್ಚುವರಿಯಾಗಿ ವರ್ಷಕ್ಕೆ ₹ 3 ಕೋಟಿ ಹೊರೆ ಬೀಳಲಿದೆ. 1 ಸಾವಿರ ಲೀಟರ್‌ ಹಾಲು ಶೇಖರಣೆ ಮಾಡಿದರೆ ₹ 3 ಸಾವಿರ ಸಿಗಲಿದೆ ಎಂದು ನುಡಿದರು.

ಇನ್ನು 20 ದಿನಗಳಲ್ಲಿ ₹ 65 ಕೋಟಿ ವೆಚ್ಚ ಐಸ್‌ಕ್ರೀಂ ಘಟಕ ಕಾರ್ಯಾರಂಭ ಮಾಡಲಿದ್ದು, 85 ರೀತಿಯ ಐಸ್‌ಕ್ರೀಂ ತಯಾರಿಸಲಾಗುವುದು. ದಿನಕ್ಕೆ 10 ಸಾವಿರ ಲೀಟರ್‌ ಐಸ್‌ಕ್ರೀಂಗೆ ಬೇಡಿಕೆ ಬಂದಿದೆ. ಈಗಾಗಲೇ ಅಮೂಲ್‌ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 3 ಲಕ್ಷ ಲೀಟರ್‌ ಸಾಮರ್ಥ್ಯದ ಹಾಲಿನ ಪುಡಿ ಘಟಕ ನಿರ್ಮಾಣ ಮಾಡಲಾಗುವುದು. ಬೆಂಗಳೂರು ಮಾರುಕಟ್ಟೆಯಲ್ಲಿ ಹಾಲು ಮಾರಾಟ ಮಾಡಲು ಸರ್ಕಾರ ಇನ್ನೂ ಅವಕಾಶ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ 20 ಲಕ್ಷ ಲೀಟರ್‌ ಹಾಲು ಮಿಲಿಟರಿಗೆ ಪೂರೈಕೆ ಮಾಡಲಾಗುತ್ತಿದ್ದು, ಅದನ್ನು ಮುಂದಿನ ವರ್ಷ 60ಲಕ್ಷಕ್ಕೆ ಹೆಚ್ಚಿಸಲಾಗುವುದು. ಒಕ್ಕೂಟ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ₹ 5 ಕೋಟಿ ಇತ್ತು. ಈಗ ₹ 1,400 ಕೋಟ ವಹಿವಾಟು ಇದೆ ಎಂದು ವಿವರಿಸಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ಎಚ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ನಾಯಕರಹಳ್ಳಿ ನಾರಾಯಣಗೌಡ ಇದ್ದರು.

ಪಶು ಆಹಾರ ಘಟಕದಿಂದ ₹ 48 ಕೋಟಿ

ಹಾಸನ ಪಶು ಆಹಾರ ಘಟಕದಿಂದ ಎರಡು ವರ್ಷದಲ್ಲಿ ₹ 48 ಕೋಟಿ ಲಾಭವಾಗಿದ್ದು, ಒಂದು ಚೀಲ ಪಶು ಆಹಾರಕ್ಕೆ ₹ 100 ಇಳಿಕೆಯಾಗಿದೆ. ಒಕ್ಕೂಟದಿಂದ ರೈತರ ಖಾತೆಗೆ ಜಮಾ ಮಾಡುವ ಹಣವನ್ನು ಸಾಲ ಮರು ಪಾವತಿಗೆ ಬ್ಯಾಂಕ್ ಕಡಿತ ಮಾಡಿಕೊಳ್ಳದಂತೆ 20 ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ ಎಂದು ರೇವಣ್ಣ ಹೇಳಿದರು.

* * 

ಲಾರಿಯಲ್ಲಿ ಹಾಲು ಕದಿಯುವವರನ್ನು ದಾಖಲೆ ಸಮೇತ ಹಿಡಿದುಕೊಟ್ಟರೆ ₹ 25 ಸಾವಿರ ನಗದು ಬಹುಮಾನ ನೀಡಲಾಗುವುದು

ಎಚ್‌.ಡಿ.ರೇವಣ್ಣ

 ಶಾಸಕ

ಪ್ರತಿಕ್ರಿಯಿಸಿ (+)