ಮಂಗಳವಾರ, ಮೇ 26, 2020
27 °C

ಇಂಗ್ಲಿಷ್ ಕನ್ನಡಿ; ಒಳಗಿನದು ಕನ್ನಡ ನುಡಿ!

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

ಇಂಗ್ಲಿಷ್ ಕನ್ನಡಿ; ಒಳಗಿನದು ಕನ್ನಡ ನುಡಿ!

ನನಗೆ ಕನ್ನಡದ್ದೇ ಆದ ಒಂದು ಮಾತಿನ ಪ್ರಪಂಚವಿಲ್ಲ. ಅದು ನನ್ನ ಇಕ್ಕಟ್ಟು ಹಾಗೂ ಬಿಕ್ಕಟ್ಟು.

ನಾಡಿನ ಜನಪ್ರಿಯ ನಿರೂಪಕಿ ಅಪರ್ಣಾ ಅವರ ಸಂಗಾತಿಯಾಗಿದ್ದೂ ಮಾತಿನ ಬಿಕ್ಕಟ್ಟು ಎದುರಿಸುತ್ತಿರುವ ಕುರಿತು ಕಥೆಗಾರ ನಾಗರಾಜ ವಸ್ತಾರೆ ಹೇಳಿಕೊಂಡಿದ್ದು ಅವರ ಕಥನಗಳಷ್ಟೇ ವಿಚಿತ್ರವಾಗಿತ್ತು. ಆದರೆ, ತಮ್ಮ ಮಾತನ್ನು ತಾವೇ ಸುಳ‍್ಳು ಮಾಡುವವರಂತೆ ಅವರು ಸುಮಾರು ಒಂದೂವರೆ ತಾಸು ನಿರರ್ಗಳವಾಗಿ ಮಾತನಾಡಿದರು.

ತಮ್ಮೊಳಗಿನ ಪ್ರಶ್ನೆಗಳಿಗೆ ತಾವೇ ಉತ್ತರ ಕಂಡುಕೊಳ್ಳುವಂತಿತ್ತು ಅವರ ಮಾತಿನ ಧಾಟಿ. ಇತ್ತೀಚೆಗಷ್ಟೇ ಎಂಟು ಪುಸ್ತಕಗಳನ್ನು ಒಮ್ಮೆಗೇ ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿದ ಪುಲಕ ಹಾಗೂ ಮುಜುಗರ ಎರಡನ್ನೂ ಅನುಭವಿಸಿರುವ ಅವರು, ತಾವು ಕಟ್ಟಿಕೊಂಡ ಬದುಕಿನ ಡಿಸೈನನ್ನೂ ಮಾತಿನಲ್ಲಿ ನಿರಚನಗೊಳಿಸಲು ಪ್ರಯತ್ನಿಸಿದಂತಿತ್ತು.

ವಸ್ತಾರೆ ಬೆಂಗಳೂರಿಗೆ ಬಂದುದು 1984ರಲ್ಲಿ. ಅಪ್ಪ ಬ್ಯಾಂಕ್‍ ಮ್ಯಾನೇಜರ್‍ ಆಗಿದ್ದವರು. ಎಲ್ಲಿಯಾದರೂ ನೆಲೆ ಕಂಡುಕೊಳ್ಳುವುದು ಕಷ್ಟವಾಗುವಂತಹ ನೌಕರಿ ಅವರದು. ಹೀಗೆ ಅಪ್ಪನ ನೌಕರಿಯ ಕಾರಣದಿಂದಾಗಿ ಪ್ರಾದೇಶಿಕ ಎನ್ನಬಹುದಾದ ಕನ್ನಡದ ಬೀಜವೊಂದು ವಸ್ತಾರೆಯವರಿಗೆ ದಕ್ಕದೆಹೋಯಿತು. ಹಳ್ಳಿಗಳಲ್ಲಿ ಬ್ಯಾಂಕ್‍ ಮ್ಯಾನೇಜರ್‍ ಬಗ್ಗೆ ಇರುವ ಬಗೆಯ ಗೌರವ ಕೂಡ ಕನ್ನಡ ಜಗತ್ತಿನಿಂದ ಅವರನ್ನು ಒಂದು ಅಂತರದಲ್ಲೇ ಉಳಿಸಿತು.

ಕನ್ನಡವನ್ನು ಆಡುನುಡಿಯನ್ನಾಗಿ ಸರಿಯಾಗಿ ದಕ್ಕಿಸಿಕೊಳ್ಳಲಾಗದೆ ಹೋದರೂ, ಶಾಲಾ ದಿನಗಳಲ್ಲಿ ಕನ್ನಡ ಮೇಷ್ಟರಾಗಬೇಕೆಂಬ ಬಲವಾದ ಆಸೆ ವಸ್ತಾರೆ ಅವರಿಗಿತ್ತಂತೆ. ಮಲ್ಲಾಡಿಹಳ್ಳಿಯಲ್ಲಿ ಕಲಿತ ಹೈಸ್ಕೂಲಿನ ಮೂರು ವರ್ಷಗಳು ತಕ್ಕಮಟ್ಟಿಗೆ ಕನ್ನಡದ ಬುನಾದಿ ಕಲ್ಪಿಸಿಕೊಟ್ಟವು. ಕಥೆಗಾರ ರಾಘವೇಂದ್ರ ಪಾಟೀಲರು ಅಲ್ಲಿ ಗುರುಗಳಾಗಿದ್ದರು.

‘ಆ ದಿನಗಳಲ್ಲಿ ನಾನು ರೆಬೆಲ್‍ ಆಗಿದ್ದೆ. ಕುವೆಂಪು ಅವರ ರಾಮಾಯಣ ದರ್ಶನಂ ಓದಿ, ಒಂದು ತಾಸಿನ ರೂಪಕ ಮಾಡಿ ಯಾರಿಗೂ ಹೇಳದೆ ತಾಲೀಮು ನಡೆಸಿ ಪ್ರದರ್ಶನ ನಡೆಸಿದ್ದೆವು. ಆ ರೂಪಕ ನೋಡಿ ರಾಘವೇಂದ್ರ ಸ್ವಾಮೀಜಿ ಬೆನ್ನುತಟ್ಟಿದ್ದರು. ಹಳಗನ್ನಡದಲ್ಲಿ ಬರೆಯಬೇಕು ಅನ್ನಿಸಿತ್ತು’. ಇದು ಮಲ್ಲಾಡಿಹಳ್ಳಿಯಲ್ಲಿ ಕಳೆದ ದಿನಗಳ ಬಗ್ಗೆ ವಸ್ತಾರೆಯವರ ನೆನಪು.

ಹೈಸ್ಕೂಲ್‍ ದಿನಗಳ ಕನ್ನಡದ ನಂಟು ಕಾಲೇಜಿನಲ್ಲಿ ಮತ್ತೆ ಕಡಿತಗೊಂಡಿತು. ಬೆಂಗಳೂರಿನಲ್ಲಿದ್ದಾಗ ನಿವೃತ್ತರಾದುದರಿಂದ ಹಾಗೂ ಊರಿನೊಂದಿಗೆ ಯಾವುದೇ ನಂಟು ಇರಲಿಲ್ಲವಾದುದರಿಂದ ವಸ್ತಾರೆಯವರ ತಂದೆ ಬೆಂಗಳೂರಿನಲ್ಲಿಯೇ ಬಿಡಾರ ಹೂಡಿದರು. ಕೊನೆಗೆ, ಊರಿನ (ಚಿಕ್ಕಮಗಳೂರಿನ ವಸ್ತಾರೆ) ನಂಟು ಉಳಿದುಕೊಂಡಿದ್ದು ಹೆಸರಿನೊಂದಿಗೆ ತಳಕು ಹಾಕಿಕೊಳ್ಳುವ ಮೂಲಕ.

ನಾಗರಾಜ ವಸ್ತಾರೆ ಹತ್ತನೇ ತರಗತಿಯವರೆಗೆ ಕನ್ನಡ ಮೀಡಿಯಂನಲ್ಲಿ ಓದಿದವರು. ಪಿಯುಸಿ ನಂತರ ಮಧ್ಯಮ ವರ್ಗದವರ ಕನಸುಗಳಾದ ಎಂಜಿನಿಯರಿಂಗ್‍, ವೈದ್ಯಕೀಯದ ಹೊರತಾಗಿ ಬೇರೆ ಏನನ್ನಾದರೂ ಮಾಡಬೇಕು ಎನ್ನುವ ಆಸೆಯಿಂದಾಗಿ ಆರ್ಕಿಟೆಕ್ಚರ್ ಸೇರಿಕೊಂಡರು. ‘ವರ್ಷವಾಗುವಷ್ಟರಲ್ಲಿ ಕಾಲೇಜಿನಲ್ಲಿ ಕಲಿಯುವುದೇನೂ ಇಲ್ಲ ಎನ್ನಿಸಿತು. ಆಗ ಊರು ಸುತ್ತತೊಡಗಿದೆ. ಕಲಿಕೆಯ ಕಾರಣಕ್ಕಾಗಿ ಬೆಂಗಳೂರಿನ ಪ್ರಮುಖ ವಾಸ್ತುಶಿಲ್ಪಿಗಳ ಪರಿಚಯವಾಯಿತು’ ಎನ್ನುವ ಅವರಿಗೆ ಬಯಲು ಮತ್ತು ಊರೇ ಪಾಠಶಾಲೆಯಾಗಿ ಪರಿಣಮಿಸಿದೆ.

ಕಾಲೇಜ್‍ ದಿನಗಳಲ್ಲಿ ಕಲಿಕೆಯ ಬಹುದೊಡ್ಡ ಸವಾಲಿಗೆ ವಸ್ತಾರೆ ತಮ್ಮನ್ನೊಡ್ಡಿಕೊಳ್ಳಬೇಕಾಯಿತು. ‘ಬಿ.ಎಂ.ಎಸ್‍ ಕಾಲೇಜಿನಲ್ಲಿ ನಾನು ವಾಸ್ತುಶಿಲ್ಪ ಕಲಿಯಲಿಕ್ಕೆ ಶುರು ಮಾಡಿದ ಮೇಲೆ ಅದರ ಜೊತೆಗೆ ಇಂಗ್ಲಿಷ್‍ ಕೂಡ ಕಲಿಯಬೇಕಾಯಿತು. ಇಂಗ್ಲಿಷ್‍ ಕಲಿಕೆಯಲ್ಲಿ ಎಷ್ಟರಮಟ್ಟಿಗೆ ತೊಡಗಿಕೊಂಡೆನೆಂದರೆ ಬರಬರುತ್ತಾ ಇಂಗ್ಲಿಷ್‍ನವನೇ ಆಗಿಹೋದೆ. ತುಂಬಾನೇ ಕಷ್ಟವಾಗಿದ್ದ ದಿನಗಳವು. ಇಂಗ್ಲಿಷ್‍ ಜೊತೆಗೆ ಆರ್ಥಿಕ ಸ್ಥಾನಮಾನ ಕೂಡ ಮೀರಬೇಕಿತ್ತು’ ಎನ್ನುವ ಅವರ ಮಾತುಗಳಲ್ಲಿ ತಾನು ಸಾಗಿಬಂದ ಹಾದಿಯ ನೆನಪುಗಳು ಯಾವುದೇ ಭಾವುಕತೆಯ ಸ್ಪರ್ಶವಿಲ್ಲದೆ ಇಣುಕುತ್ತವೆ.

ವಾಸ್ತುಶಿಲ್ಪದ ಗುಟ್ಟು- ಒಗಟುಗಳ ಅರಿಯುತ್ತಾ ತಾನೇ ಸೃಷ್ಟಿಸಿಕೊಂಡ ಇಂಗ್ಲಿಷ್‍ ಜಗತ್ತಿನಲ್ಲಿ ಮುಳುಗಿಹೋಗಿದ್ದ ವಸ್ತಾರೆ ಸಾಹಿತ್ಯಕ್ಕೆ ಮರಳಿದ್ದು ಒಂದು ಪುಸ್ತಕದ ನೆಪದಲ್ಲಿ. 2003ರಲ್ಲಿ ವಿಶಾಖಪಟ್ಟಣದಲ್ಲಿ ಒಂದು ಪ್ರಾಜೆಕ್ಟ್ ಮಾಡುವ ಅವಕಾಶ ಅವರಿಗೆ ದೊರೆತಿತ್ತು. ಆಗ ವಿಶಾಖಪಟ್ಟಣಕ್ಕೆ ನೇರ ವಿಮಾನ ಇರಲಿಲ್ಲ. ಹೈದರಾಬಾದ್‍ಗೆ ಹೋಗಿ ವಿಮಾನ ಬದಲಿಸಬೇಕಿತ್ತು. ವಿಮಾನದಲ್ಲಿ ಸಮಯ ಕಳೆಯಲು ಓದಲು ಬಯಸಿದ ಅವರಿಗೆ, ಏರ್‍ಪೋರ್ಟ್‍ನ ಪುಸ್ತಕದಂಗಡಿಯಲ್ಲಿ ಸಿಕ್ಕಿದ್ದು ಜಯಂತ ಕಾಯ್ಕಿಣಿಯವರ ‘ಬೊಗಸೆಯಲ್ಲಿ ಮಳೆ’ ಪುಸ್ತಕ. ಆ ಓದು ಅವರನ್ನು ಮಳೆಯಲ್ಲಿಯೇ ತೋಯಿಸಿತು. ‘ನನಗೆ ಅನ್ನಿಸಿದ್ದನ್ನೆಲ್ಲ ಈ ಮನುಷ್ಯ ಬರೆದುಬಿಟ್ಟಿದ್ದಾನಲ್ಲ. ನಾನೂ ಏಕೆ ಬರೆಯಬಾರದು’ ಅನ್ನಿಸಿತು. ‘ಅದೊಂದು ಅನಿಸಿಕೆ ಅಷ್ಟೇ. ಮತ್ತೆ ಯಾವಾಗಲೋ ಪದ್ಯ ಬರೆಯಬೇಕು ಎನ್ನಿಸಿತು. ಬರೆದೆ. ಅದು ಸುಧಾದಲ್ಲಿ ಪ್ರಕಟವಾಯಿತು. 2003- 2005ರ ಅವಧಿಯಲ್ಲಿ ಸಾಕಷ್ಟು ಬರೆದೆ. ಬರೆದುದೆಲ್ಲವೂ ಪತ್ರಿಕೆಗಳಲ್ಲಿ ಪ್ರಕಟಗೊಳ್ಳತೊಡಗಿತು. ನನಗೆ ತಿಳಿಯದೆಯೇ ನನ್ನ ಸುತ್ತ ಹೊಸ ಜಗತ್ತು ತೆರೆದುಕೊಳ್ಳತೊಡಗಿತು. ಯಾರು ಯಾರೋ ಫೋನ್‍ ಮಾಡತೊಡಗಿದರು. ಆಶ್ಚರ್ಯ ಎನ್ನಿಸಿತು. ಓದು- ಬರವಣಿಗೆಯ ಜೊತೆ ಒಂದು ಸಮುದಾಯದ ಜೊತೆ ಮಾತನಾಡಬಹುದು ಎನ್ನುವುದೇ ನನಗೆ ಅಚ್ಚರಿ.'

ಸಾಹಿತ್ಯ ಸುಖ- ಸಖ್ಯದ ಬಗ್ಗೆ ಮಾತನಾಡುವಾಗ ವಸ್ತಾರೆ ಕಣ್ಣುಗಳಲ್ಲಿ ಅಚ್ಚರಿಯ ಸೆಳಕೊಂದು ಹಾದುಹೋಗುತ್ತದೆ. ಅದು ಆ ಕ್ಷಣದ ಪುಲಕವಷ್ಟೇ! ‘ಇಲ್ಲಿಂದ ಹೊರಟ ತಕ್ಷಣ ನಾನು ಈ ಜಗತ್ತಿನಿಂದ ಸಂಪೂರ್ಣವಾಗಿ ಹೊರಗಿನವನಾಗಿಬಿಡುತ್ತೇನೆ. ಎರಡು ಜಗತ್ತುಗಳ ಜೊತೆ ಜೀಕುತ್ತಿರುತ್ತೇನೆ’ ಎನ್ನುವ ಧೋರಣೆ ಅವರದು.

‘ಹಳೆಯದು ಯಾವುದೂ ನನ್ನನ್ನು ಕಾಡೊಲ್ಲ. ಈ ದಿನದ ಈ ಕ್ಷಣ ನನಗೆ ಮುಖ್ಯ. ಅದನ್ನು ಹಿಡಿದಿಟ್ಟುಬಿಟ್ಟರೆ ನಾಳೆ ಅದು ನನ್ನದಾಗಿರೊಲ್ಲ. ಈ ಧೋರಣೆ ಆರ್ಕಿಟೆಕ್ಚರ್‍ನಿಂದ ನನಗೆ ಬಂದಿರಬೇಕು. ಒಂದು ಕಟ್ಟಡ ಕಟ್ಟಿದ ಮೇಲೆ ಅದು ಸಾರ್ವಜನಿಕರ ಬಳಕೆಗೆ ಸೇರಿದ್ದು. ಅವರ ವಿಮರ್ಶೆಗೆ ಬಿಟ್ಟುಬಿಡುತ್ತೇವೆ. ಅದರ ಮೇಲೆ ನಮಗೆ ಯಾವುದೇ ಹಕ್ಕು ಇರುವುದಿಲ್ಲ. ಅದೇ ರೀತಿ ಬರೆದ ಮೇಲೆ ಬರಹ ನನ್ನದಲ್ಲ. ನನ್ನ ವಾಸ್ತುಶಿಲ್ಪದ ಕೆಲಸಗಳನ್ನೂ ಡಾಕ್ಯುಮೆಂಟ್‍ ಮಾಡಿಲ್ಲ. 2002ರಲ್ಲಿ ನನಗೆ ರಾಷ್ಟ್ರಪ್ರಶಸ್ತಿ ಬಂತು - ದೇಶದ 10 ವಿನ್ಯಾಸಕಾರರಲ್ಲಿ ನಾನೊಬ್ಬ ಎನ್ನುವ ಗೌರವವದು. ದೆಹಲಿಯಲ್ಲಿ ಕಾರ್ಯಕ್ರಮ ನಡೆಯಿತು. ಆನಂತರ ತಿಳಿದದ್ದು ಆ ಪ್ರಶಸ್ತಿಯನ್ನು ಪ್ರಾಯೋಜಿಸಿದ್ದು ಒಂದು ಶೌಚಾಲಯದ ಕಂಪನಿ. ತುಂಬಾ ಸಿಟ್ಟು ಬಂತು - ಅವರು ಯಾರು ನನಗೆ ಪ್ರಶಸ್ತಿ ಕೊಡುವುದಕ್ಕೆ ಎಂದು’ – ಹೀಗೆ ತಮ್ಮ ಸ್ವಭಾವದಲ್ಲಿನ ವೈರುಧ್ಯಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಕನ್ನಡದಲ್ಲಿ ಬರೆಯುತ್ತಿದ್ದರೂ ಕನ್ನಡವಿನ್ನೂ ತಮಗೆ ಪೂರ್ಣವಾಗಿ ಒಲಿದಿಲ್ಲ ಎನ್ನುವ ಕೊರಗು ಅವರಿಗಿದ್ದೇ ಇದೆ. ‘ನಾನು ಆರ್‍ ವಿ ಕಾಲೇಜಿನಲ್ಲಿ ಪಾಠ ಮಾಡ್ತೇನೆ. ನನ್ನ ಉದ್ಯೋಗದ ಪರಿಸರ ಇಂಗ್ಲಿಷ್‍ಮಯ. ವೃತ್ತಿಯ ಅವಶ್ಯಕತೆಗಳೂ ಇಂಗ್ಲಿಷ್‍ನಲ್ಲಿಯೇ ಇರುತ್ತವೆ. ಸಾಹಿತ್ಯದ ವಸ್ತುಗಳೂ ಇಂಗ್ಲಿಷ್‍ ಜಗತ್ತಿನಿಂದಲೇ ದೊರೆಯುತ್ತವೆ’ ಎನ್ನುವ ಅವರಿಗೆ, ‘ನನ್ನ ಕಂಫರ್ಟ್‍ ಜೋನ್‍ ಕನ್ನಡ, ನನ್ನ ಒಳಮಾತು ಕನ್ನಡ’ ಎನ್ನುವ ಸ್ಪಷ್ಟತೆ ಇದೆ.

ವಿಶಿಷ್ಟವಾದ ಶಿಲ್ಪ ಹಾಗೂ ನುಡಿಗಟ್ಟು ವಸ್ತಾರೆಯವರ ಬರವಣಿಗೆಯ ವಿಶೇಷಗಳಲ್ಲೊಂದು. ವಾರಿಗೆಯ ಬರಹಗಾರರಲ್ಲಿ ಅವರದು ಒಡೆದುಕಾಣುವ ಶೈಲಿ. ಇದೇನು ಪ್ರಜ್ಞಾಪೂರ್ವಕವಾಗಿ ಆದುದಾ ಅಥವಾ ಸಹಜವಾದುದೆ?

‘ನಾನು ಪ್ರಜ್ಞಾಪೂರ್ವಕವಾಗಿ ಭಿನ್ನವಾಗಿ ಬರೆಯಲು ಪ್ರಯತ್ನಿಸುವುದಿಲ್ಲ. ಆ ಭಿನ್ನತೆ ಎಲ್ಲಿಂದ ಬರುತ್ತೆ ಗೊತ್ತಿಲ್ಲ. ನಾವೆಲ್ಲ ಕಂಪ್ಯೂಟರ್‍ ಯುಗದ ಲೇಖಕರು. ಕಂಪ್ಯೂಟರ್‍ ಇಲ್ಲದಿದ್ದರೆ ಕಂಪ್ಯೂಟರಿನಾಣೆ ನಾನು ಲೇಖಕನಾಗುತ್ತಿರಲಿಲ್ಲ. ನಾನು ನನ್ನ ಬರವಣಿಗೆಯ ಜೊತೆ ಪ್ರೇಮಕ್ಕೆ ಬೀಳುತ್ತೇನೆ. ಆ ಕಾರಣದಿಂದಾಗಿ ತಿದ್ದುವುದು ಕಡಿಮೆ, ಎಡಿಟ್‍ ಮಾಡುವುದು ಇನ್ನೂ ಕಷ್ಟ. ಏನನ್ನು ನೋಡಿದರೂ ಇದನ್ನು ಕನ್ನಡದಲ್ಲಿ ಹೇಗೆ ಹೇಳುವುದು ಎನ್ನುವುದು ನನ್ನ ತುರ್ತು. ನನ್ನ ಅನುಭವವನ್ನು ಹಿಡಿದಿಡಲು ಕನ್ನಡ ಸಾಲದು ಅನ್ನಿಸುತ್ತೆ. ಹಾಗಾಗಿ ಹೊಸ ಭಾಷೆ ರೂಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಭಾಷೆ ನನಗೆ ಒಲಿಯಬೇಕು, ನಾನು ಕನ್ನಡಕ್ಕೊಲಿಯಬೇಕು. ಬರೆಯುವಾಗ ಕನ್ನಡ ಎಲ್ಲಿ ಶುರುವಾಗುತ್ತೆ, ಇಂಗ್ಲಿಷ್‍ ಎಲ್ಲಿ ಸೇರಿಕೊಳ್ಳುತ್ತೆ ಎನ್ನುವುದು ಗೊತ್ತೇ ಆಗೊಲ್ಲ. ಕನ್ನಡ- ಇಂಗ್ಲಿಷ್‍ ಸೇರಿಕೊಂಡು ಹೊಸ ಟಂಕ ರೂಪುಗೊಳ್ಳುತ್ತೆ. ಪ್ರತಿದಿನ ಬೆಳಗ್ಗೆ ಟ್ರೆಡ್‍ಮಿಲ್‍ ಏರಿದ ತಕ್ಷಣ ಏನಾದರೂ ಹೊಳೆಯುತ್ತದೆ. ಅದನ್ನು ಬೆನ್ಹತ್ತಬೇಕು, ಮಾತು ಹುಡುಕಬೇಕು.’ – ಇದು ಬರವಣಿಗೆಯ ಪ್ರಕ್ರಿಯೆ ಕುರಿತಂತೆ ವಸ್ತಾರೆ ಅವರ ಅನುಭವ- ಅನಿಸಿಕೆ.

ವೃತ್ತಿ ಕೂಡ ತಮ್ಮ ಬರವಣಿಗೆಯ ಮೇಲೆ ಪ್ರಭಾವ ಬೀರಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ‘ಸಾಹಿತ್ಯದಲ್ಲಿ ಏನಿದೆ, ಅದೆಲ್ಲ ವಾಸ್ತುಶಿಲ್ಪದಲ್ಲಿ ಅಪರೋಕ್ಷವಾಗಿ ಇದೆ. ಸಾಹಿತ್ಯವನ್ನು ರಚಿಸುವಂತೆ ಒಂದು ಕಟ್ಟಡವನ್ನು, ಊರನ್ನು ಕಟ್ಟಿ ನಿಲ್ಲಿಸುತ್ತೇವೆ. ಮಾಧ್ಯಮ ಬೇರೆ ಇರಬಹುದು. ಸಾಧ್ಯತೆಗಳು ಅದುವೇ. ಬರವಣಿಗೆಯಲ್ಲಿ ತೊಡಗಿಕೊಂಡಷ್ಟೇ ತೀವ್ರತೆಯಿಂದ ಕೆಲಸದಲ್ಲೂ ತೊಡಗಿಕೊಂಡಿರುವೆ. ಪದ್ಯ, ಅಡುಗೆ, ವಾಸ್ತುಶಿಲ್ಪ – ಎಲ್ಲದರಲ್ಲೂ ನನ್ನ ಪೂರ್ಣಪ್ರಮಾಣದ ಇನ್‍ವಾಲ್ವ್ಮೆಂಟ್‍ ಇರುತ್ತೆ’ ಎನ್ನುತ್ತಾರೆ. ಹೌದು, ವಸ್ತಾರೆ ‘ನಳ ಪಾಕ’ದ ಪರಂಪರೆಗೆ ಸೇರಿದವರು. ಸೊಗಸಾಗಿ ಅಡುಗೆ ಮಾಡುತ್ತಾರಂತೆ. ಮನೆಗೆ ಅತಿಥಿಗಳು ಬಂದರೆ ಅವರದು ಅಡುಗೆಭಟ್ಟನ ಪಾತ್ರ.

ಊರನ್ನು ಹೆಸರಿನಲ್ಲಷ್ಟೇ ಉಳಿಸಿಕೊಂಡಿರುವ ವಸ್ತಾರೆಯವರಿಗೆ ತವರಿನ ನಂಟು ಆಕಸ್ಮಿಕವಾಗಿ ಎಡತಾಕಿದ ಪ್ರಸಂಗವೊಂದು ಸ್ವಾರಸ್ಯಕರವಾಗಿದೆ. ಚಿಕ್ಕಮಗಳೂರಿನಲ್ಲಿ ಬಿಲ್ಡರ್ಸ್‍ ಅಸೋಸಿಯೇಷನ್‍ ಒಂದಿದೆ. ಅದರ ಸಂಘದ ವಾರ್ಷಿಕೋತ್ಸವಕ್ಕೆ ಹೋದಾಗ ವಸ್ತಾರೆಯವರನ್ನು ವ್ಯಕ್ತಿಯೊಬ್ಬ ತಗುಲಿಕೊಂಡಿದ್ದಾನೆ. ಆತ ಕೂಡ ವಸ್ತಾರೆ ಗ್ರಾಮದವನು, ಹೆಸರು ಕೂಡ ನಾಗರಾಜ! ‘ಅವನು ನನ್ನ ಬೇರುಗಳನ್ನೆಲ್ಲ ತಡಕುತ್ತಾ ಹೋದಮೇಲೆ ಹತ್ತಿರದ ದಾಯಾದಿಗಳು ಎನ್ನುವುದು ತಿಳಿಯಿತು. ಅವನು ನನಗಿಂತಲೂ ಹೆಚ್ಚು ಅಥೆಂಟಿಕ್‍ ಆದ ನಾಗರಾಜ ವಸ್ತಾರೆ ಅನ್ನಿಸಿತು’ ಎಂದು ಕಥೆಗಾರ ವಸ್ತಾರೆ ಹೇಳುತ್ತಾರೆ.

ವಸ್ತಾರೆ ಅವರಿಗೆ ವೃತ್ತಿಯಿಂದ ಪ್ರವೃತ್ತಿಗೆ ನೆರವಾದಂತೆ, ಸಾಹಿತ್ಯದಿಂದ ಆರ್ಕಿಟೆಕ್ಚರ್‍ಗೆ ಸಹಾಯವಾಗುವುದಿದೆಯೇ? ‘ಯಾಕಿಲ್ಲ’ ಎನ್ನುವ ಅವರು, ತಮ್ಮ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಸಾಹಿತ್ಯದ ಸಾಕಷ್ಟು ಪ್ರಮೇಯಗಳನ್ನು ಬಳಸಿಕೊಳ್ಳುತ್ತಾರಂತೆ.

ಪ್ರಸ್ತುತ ಆಫ್ರಿಕಾದಲ್ಲಿನ ನೆಬಾನ್‍ ದೇಶದಲ್ಲಿ 6000 ಮನೆಗಳಿರುವ ಒಂದು ಟೌನ್‍ಷಿಪ್‍ ರೂಪಿಸುವ ಯೋಜನೆಯಲ್ಲಿ ವಸ್ತಾರೆ ತೊಡಗಿಕೊಂಡಿದ್ದಾರೆ. ಕಾಡನ್ನು ಕಡಿದು ನಾಡು ಮಾಡುವ ಯೋಜನೆಯದು. ‘ನನ್ನೊಳಗೊಂದು ಎಚ್ಚರವಿದೆ. ನಾನು ಇದನ್ನು ಮಾಡದೆ ಇದ್ದರೆ ಇನ್ನೊಬ್ಬ ಮಾಡ್ತಾನೆ. ನಾನು ಮಾಡಿದರೆ ಪರಿಸರಕ್ಕೆ ಕಡಿಮೆ ಹಾನಿ ಆಗಬಹುದು ಎನ್ನುವ ಎಚ್ಚರ ನನಗಿದೆ’ ಎನ್ನುತ್ತಾರೆ ವಸ್ತಾರೆ. ಈ ವಿವೇಕ ಸಾಹಿತ್ಯದಿಂದ ಒದಗುವಂತಹದ್ದು ಅಲ್ಲವೇ? ‘ನೆಬಾನ್ ದೇಶದ ಎಲ್ಲ ಜನ ಫ್ರೆಂಚ್‍ ಮಾತನಾಡುತ್ತಾರೆ. ಆ ಸಮುದಾಯ ಭಾಷೆಯ ಸಮೇತ ತನ್ನ ಸಂಸ್ಕೃತಿ ಮರೆತಿದೆ. ಒಂದು ಜನಾಂಗದ ಜೊತೆಗಿನ ಅಷ್ಟೂ ಸ್ಮೃತಿಗಳು ನಾಶವಾಗುವುದು ದುಃಖ ಅನ್ನಿಸುತ್ತೆ. ನಮ್ಮದೆಲ್ಲವನ್ನೂ ಮರೆತು ಇನ್ನೊಬ್ಬರಾಗಿ ಬದುಕುವುದು ಹೇಯ ಅನ್ನಿಸುತ್ತೆ’ – ಇಂಥ ಭಾವನೆ ನಮ್ಮದಾಗುವುದು ಕೂಡ ಸಾಹಿತ್ಯದ ಮೂಲಕವೇ ಅಲ್ಲವೇ?

‘ಆರ್ಕಿಟೆಕ್ಟ್ ಎಂದರೆ ಬರೀ ಪ್ಲಾನ್‍ ಬರೆದುಕೊಡುವುದಲ್ಲ. ಅವನಿಗೆ ತನ್ನ ಸುತ್ತಲ ಸಮಾಜ ಗೊತ್ತಿರಬೇಕು. ಒಳಸುಳಿಗಳು ಗೊತ್ತಿಲ್ಲದೆ ಹೋದರೂ ಎಲ್ಲ ವಿಷಯಗಳನ್ನು ತಕ್ಕಮಟ್ಟಿಗೆ ತಿಳಿದಿರಬೇಕು. ಹಾಗಾಗಿ ನಾನು ಸಮಾಜಕ್ಕೆ ತೆರೆದ ಕಣ್ಣು’ ಎನ್ನುವ ಅವರಿಗೆ, ‘ಬರಹ ಬೋಧನೆಯಾಗಿರಬಾರದು. ನನಗೆ ಇಸಂಗಳಲ್ಲಿ ನಂಬಿಕೆಯಿಲ್ಲ. ಯಾವುದೇ ಚೌಕಟ್ಟಿನಲ್ಲಿ ನನ್ನನ್ನು ಗುರ್ತಿಸಿಕೊಳ್ಳಲು ಇಷ್ಟವಿಲ್ಲ’ ಎನ್ನುವ ಸ್ಪಷ್ಟ ನಿಲುವುಗಳೂ ಇವೆ.

ಸಾಹಿತ್ಯ ಪರಂಪರೆಯ ಕುರಿತ ವಸ್ತಾರೆಯವರ ಮಾತುಗಳ ಬಗ್ಗೆ ಸಾಹಿತ್ಯದ ಚರ್ಚೆಗಳ ಸಂದರ್ಭದಲ್ಲಿ ಆಗಾಗ ಅಸಮಾಧಾನ ವ್ಯಕ್ತವಾಗುವುದಿದೆ. ಆದರೆ, ಅವರ ಮಾತಿನಲ್ಲಿ ಪರಂಪರೆಯ ಕುರಿತು ತಿರಸ್ಕಾರವಿಲ್ಲ ಎನ್ನುವುದನ್ನು ಗಮನಿಸಬೇಕು. ‘ಯಾವ ಸತ್ಯವೂ ಎಲ್ಲ ಕಾಲಕ್ಕೂ ಸತ್ಯವಲ್ಲ ಎನ್ನುವುದು ನಾನು ಕಂಡುಕೊಂಡಿರುವ ಇನ್ನೊಂದು ಸತ್ಯ. ಕನ್ನಡದ ಅಂತಃಸತ್ವದಲ್ಲಿ ನಂಬಿಕೆ ಇದ್ದರೆ ಯಾರೊಬ್ಬರನ್ನೂ ಆರಾಧಿಸುವ ಪ್ರಶ್ನೆ ಬರುವುದಿಲ್ಲ. ಬಿ.ಎಂ.ಶ್ರೀ ಇಂಗ್ಲಿಷ್‍ ಗೀತೆಗಳನ್ನು ತರದಿದ್ದರೆ, ಈ ನೆಲದಲ್ಲಿ ಬೇರೆಯ ಯಾವುದೋ ಸಹಜವಾಗಿಯೇ ಬರುತ್ತಿತ್ತು. ಇದು ನನ್ನ ಅರಿವು. ಆ ಕಾರಣದಿಂದಲೇ ಕುವೆಂಪು, ಅಡಿಗರಂತಹವರು ನನಗೆ ಅಚ್ಚರಿ ಹುಟ್ಟಿಸುವುದಿಲ್ಲ. ಅವರ ಕಾಲದ ಅಗತ್ಯವನ್ನು ಅವರು ಪೂರೈಸಿದ್ದಾರೆ. ಅವರು ಇಲ್ಲದೆ ಹೋಗಿದ್ದರೆ ಅವರ ಸ್ಥಾನದಲ್ಲಿ ಮತ್ತೊಬ್ಬರು ಇರುತ್ತಿದ್ದರು’ ಎನ್ನುವ ಸಹಜ ವಿಮರ್ಶೆಯ ನಿಲುವು ಅವರದು. 

ಪದ್ಯವಾಗಲೀ ಕವಿತೆಯಾಗಲೀ ನನಗೆ ಆ ಕ್ಷಣದ ಪುಲಕ ಮಾತ್ರ. ವಿವೇಕ ಶಾನಭಾಗರ ‘ನಿರ್ವಾಣ’ ಕಥೆ ಓದಿದಾಗ, ‘ಈ ಕಥೆಯನ್ನು ನಾನು ಬರೆಯಬೇಕಿತ್ತು’ ಅನ್ನಿಸಿ ಕೀಳರಿಮೆ ಉಂಟಾಗಿತ್ತು. ಆ ಕಥೆ ನನ್ನಲ್ಲಿ ಉಂಟು ಮಾಡಿದ ಮೊದಲ ಅನುಭವ ಇನ್ನೊಮ್ಮೆ ಉಂಟಾಗಬೇಕೆಂದು ನಿರೀಕ್ಷಿಸುವಂತಿಲ್ಲ. ನಾವು ರಚಿಸುವ ಕಟ್ಟಡಗಳ ಹಿಂದಿನ ಐಡಿಯಾಗಳಷ್ಟೇ ಮುಖ್ಯ. ಕಟ್ಟಡಗಳೆಲ್ಲ ಒಂದು ದಿನ ಮಣ್ಣಾಗಿಹೋಗುತ್ತವೆ ಎನ್ನುವುದು ವಸ್ತಾರೆಯವರು ಅನುಭವದಿಂದ ರೂಢಿಸಿಕೊಂಡಿರುವ ನಿಲುವು.

ಸಾಹಿತ್ಯದ ಮೂಲಕ ಹೊಸ ಜಗತ್ತಿನ ಸವಿ ಅನುಭವಿಸಿದಂತೆ ಕಹಿಯನ್ನೂ ವಸ್ತಾರೆ ಅನುಭವಿಸಿದ್ದಾರೆ. ‘ಆರ್ಕಿಟೆಕ್ಚರ್‍ನಲ್ಲಿ ಕೆಲವು ಅನ್‍ಸೆಡ್‍ಗಳಿರುತ್ತವೆ. ವೈಯಕ್ತಿಕವಾದ ದುಗುಡ- ದುಃಖಗಳಿರುತ್ತವೆ. ಅವುಗಳನ್ನು ಹೇಳಿಕೊಳ್ಳಲಿಕ್ಕೊಂದು ಭಾಷೆ ಬೇಕಿತ್ತು. ಒಳಗಿನಿಂದ ನನಗೆ ಒಲಿಯುವುದು ಕನ್ನಡವಾದ್ದರಿಂದ ಕನ್ನಡದಲ್ಲಿ ಹೇಳುತ್ತಿರುವೆ. ಆದರೆ, ಉಳಿದ ಕ್ಷೇತ್ರಗಳಲ್ಲಿನ ಕೊಳಕು ಹುಳುಕು ಇಲ್ಲಿಯೂ ಇವೆ. ಸಾಹಿತ್ಯಕ್ಕೆ ಬರುವವರೆಗೂ ನನಗೆ ಎದುರಾಗದ ಜಾತಿಯ ಪ್ರಶ್ನೆ ಇಲ್ಲಿಗೆ ಬಂದಮೇಲೆ ಶುರುವಾಯ್ತು. ಇದು ಅಸಹ್ಯ ಎನ್ನಿಸುತ್ತದೆ. ಇವರು ಸರಿಯಾದರೆ, ಅವರು ತಪ್ಪು ಎನ್ನುವ ನಿಲುವುಗಳೂ ನನ್ನ ಪಾಲಿಗೆ ಕಷ್ಟ’ ಎಂದು ವಸ್ತಾರೆ ಹೇಳುತ್ತಾರೆ.

ಮಾತು ಮುಗಿಸಿದ ನಾಗರಾಜ ವಸ್ತಾರೆ, ಬೀಳ್ಕೊಂಡು ಹೊರಟರು. ಅವರ ಪಾಲಿಗದು ಒಂದು ಜಗತ್ತಿನಿಂದ ಇನ್ನೊಂದು ಜಗತ್ತಿಗೆ ಪ್ರವೇಶಿಸುವ ಕ್ಷಣ. ತಕ್ಷಣ ನೆನಪಾದುದು ಕೆ.ಎಸ್‍. ನರಸಿಂಹಸ್ವಾಮಿ ಅವರ ‘ತುಂಗಭದ್ರೆ’ ಕವಿತೆ. ಅಪ್ಪ- ಅಮ್ಮನ ಎರಡು ದಡಗಳಿಗೆ ಓಡಾಡುವ ಕೂಸಿನ ಕುರಿತ ಪದ್ಯದಲ್ಲಿ ಕವಿ – ‘ಆ ಧೈರ್ಯ ನನಗಿಲ್ಲ, ನನ್ನಂಥ ಎಷ್ಟೋ ಬಾಳಿಗೆ ಇಲ್ಲ’ ಎಂದು ಉದ್ಗರಿಸುತ್ತಾರೆ. ವಸ್ತಾರೆ ಕೂಡ ತುಂಗಭದ್ರೆಯಂತೆಯೇ ಎರಡು ದಡ(ವಿಶ್ವ)ಗಳ ನಡುವೆ ಓಡಿಯಾಡುವವರು. ಆ ಓಡಾಟವನ್ನು ನೋಡುವುದೇ ಒಂದು ಸಂಭ‍್ರಮ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.