ಮಂಗಳವಾರ, ಡಿಸೆಂಬರ್ 10, 2019
20 °C

ಗುರುವಿನ ಋಣ ತೀರಿಸಲು ಶಿಷ್ಯನ ಒಲವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುವಿನ ಋಣ ತೀರಿಸಲು ಶಿಷ್ಯನ ಒಲವು!

ಚಾಮರಾಜನಗರ: ಬಿಜೆಪಿಯಿಂದ ದೂರ ಸರಿದಿರುವ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಕಾಂಗ್ರೆಸ್‌ನತ್ತ ಹೆಜ್ಜೆ ಹಾಕಿದ್ದಾರೆ.

ಪಕ್ಷಕ್ಕೆ ಸೇರಿಸಿಕೊಳ್ಳುವ ಸಂಬಂಧ ಸಿದ್ದರಾಮಯ್ಯ ಅವರು ಚಾಮರಾಜನಗರ ಮತ್ತು ಮೈಸೂರು ಭಾಗದ ವಿವಿಧ ನಾಯಕರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ ಮುಂತಾದವರು ಕೃಷ್ಣಮೂರ್ತಿ ಸೇರ್ಪಡೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಸೇರ್ಪಡೆಯಾದರೆ ಕೊಳ್ಳೇಗಾಲದಿಂದ ಟಿಕೆಟ್ ನೀಡಲಾಗುತ್ತದೆ.

ಕೊಳ್ಳೇಗಾಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿರುವ ಶಾಸಕ ಎಸ್‌.ಜಯಣ್ಣ, ಮಾಜಿ ಶಾಸಕ ಬಾಲರಾಜ್, ಮುಖಂಡರಾದ ಬಿ.ಪಿ.ಪುಟ್ಟಬುದ್ದಿ, ಡಿ.ಎನ್.ನಟರಾಜ್‌, ಕಿನಕನಹಳ್ಳಿ ರಾಚಯ್ಯ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೊರಗಿನಿಂದ ಕರೆತಂದು ಟಿಕೆಟ್ ನೀಡುವ ಬದಲು, ಪಕ್ಷದಲ್ಲಿ ದುಡಿದವರಿಗೆ ಅವಕಾಶ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.

ಸಿದ್ದರಾಮಯ್ಯ ಆಸಕ್ತಿ: ತಮ್ಮ ರಾಜಕೀಯ ಗುರುವಾದ ಮಾಜಿ ಸಚಿವ ದಿ.ಬಿ.ರಾಚಯ್ಯ ಅವರ ಋಣ ತೀರಿಸಲು, ಅವರ ಮಗ ಕೃಷ್ಣಮೂರ್ತಿ ಅವರನ್ನು ಪಕ್ಷಕ್ಕೆ ಕರೆತಂದು ಗೆಲ್ಲಿಸಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ. ಮಗನಿಗೆ ಸೂಕ್ತ ರಾಜಕೀಯ ನೆಲೆ ಕಲ್ಪಿಸುವಂತೆ ರಾಚಯ್ಯ ಪತ್ನಿ ಗೌರಮ್ಮ ಅವರೂ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಹಾಲಿ ಶಾಸಕರಿಗೆ ಟಿಕೆಟ್‌ ನೀಡಬೇಕು. ಯಾರೋ ನಡೆಸಿದ ಸಮೀಕ್ಷೆಯಲ್ಲಿ ಶಾಸಕ ಜಯಣ್ಣ ವಿರುದ್ಧ ಅಭಿಪ್ರಾಯ ವ್ಯಕ್ತವಾಗಿದೆ ಎಂಬ ಕಾರಣಕ್ಕೆ ಕಡೆಗಣಿಸುವುದು ಸರಿಯಲ್ಲ. ಒಂದು ವೇಳೆ ಅವರ ಅನಾರೋಗ್ಯದ ಕಾರಣವೊಡ್ಡಿ ಟಿಕೆಟ್‌ ನಿರಾಕರಿಸಿದರೆ ಉಳಿದ ನಾಲ್ವರು ಆಕಾಂಕ್ಷಿಗಳಲ್ಲಿ ಯಾರಿಗಾದರೂ ನೀಡಲಿ. ಪಕ್ಷಕ್ಕಾಗಿ ದುಡಿದವರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್‌ ನೀಡುವುದು ಸರಿಯಲ್ಲ’ ಎಂದು ಮುಖಂಡ ಬಿ.ಪಿ.ಪುಟ್ಟಬುದ್ದಿ ಹೇಳಿದರು.

‘ಕೃಷ್ಣಮೂರ್ತಿ ಅವರು ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್‌ ವಿರೋಧಿಸಿಕೊಂಡೇ ಬಂದವರು. ಅವರ ಹಿಂದೆ ಅಷ್ಟೇನೂ ದೊಡ್ಡ ಬೆಂಬಲಿಗರ ಪಡೆಯಿಲ್ಲ. ಅವರಿಂದ ಪಕ್ಷಕ್ಕೆ ಯಾವ ಲಾಭವೂ ಇಲ್ಲ’ ಎನ್ನುತ್ತಾರೆ ಮಾಜಿ ಶಾಸಕ ಬಾಲರಾಜು.

ಹಿನ್ನೆಲೆ: 1999ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಲ್ಲಿ ಜೆಡಿಯುನಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಆರ್.ಧ್ರುವನಾರಾಯಣ ವಿರುದ್ಧ ಜಯಗಳಿಸಿದ್ದರು. 2004 ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಆರ್.ಧ್ರುವನಾರಾಯಣ ಎದುರು ಕೇವಲ ಒಂದು ಮತದಿಂದ ಸೋತಿದ್ದರು. 2009ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಮತ್ತೆ ಧ್ರುವನಾರಾಯಣ ಎದುರು ಪರಾಭವಗೊಂಡಿದ್ದರು.

***

ಕಾಂಗ್ರೆಸ್ ಸೇರ್ಪಡೆ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತುಕತೆ ನಡೆದಿದೆ.

–ಎ.ಆರ್.ಕೃಷ್ಣಮೂರ್ತಿ, ಮುಖಂಡ

ಪ್ರತಿಕ್ರಿಯಿಸಿ (+)