ಬುಧವಾರ, ಡಿಸೆಂಬರ್ 11, 2019
22 °C
ಏಡ್ಸ್‌ ಸೊಸೈಟಿ ಆಫ್‌ ಇಂಡಿಯಾ ಅಧ್ಯಕ್ಷ ಡಾ.ಐ.ಎಸ್‌.ಗಿಲಾಡ ಸಲಹೆ

ಎಚ್ಐವಿ ಬಾಧಿತರಿಗೆ ಜೀವನೋತ್ಸಾಹ ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್ಐವಿ ಬಾಧಿತರಿಗೆ ಜೀವನೋತ್ಸಾಹ ಮೂಡಿಸಿ

ಮೈಸೂರು: ‘ಎಚ್‌ಐವಿ ಮಹಾಮಾರಿಗೆ ತುತ್ತಾದವರಲ್ಲಿ ಮತ್ತೆ ಜೀವನೋತ್ಸಾಹ ಮೂಡಿಸುವುದು ಸವಾಲಿನ ಕೆಲಸ. ಸೋಂಕಿತರ ಹಿತರಕ್ಷಣೆಯಲ್ಲಿ ಆಶಾಕಿರಣ ಆಸ್ಪತ್ರೆಯ ಸೇವೆ ಶ್ಲಾಘನೀಯ’ ಎಂದು ಏಡ್ಸ್‌ ಸೊಸೈಟಿ ಆಫ್‌ ಇಂಡಿಯಾ ಅಧ್ಯಕ್ಷ ಡಾ.ಐ.ಎಸ್‌.ಗಿಲಾಡ ಹೇಳಿದರು.

ಆಶಾಕಿರಣ ಆಸ್ಪತ್ರೆ ವತಿಯಿಂದ ನಗರದಲ್ಲಿ ಹಮ್ಮಿಕೊಂಡ ‘ಎಚ್‌ಐವಿಇ’ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಮೂಲೆಮೂಲೆಯಿಂದ ಆಯ್ದ ಎಚ್‌ಐವಿ ತಜ್ಞ ವೈದ್ಯರು ಸೇರಿ ಏಡ್ಸ್‌ ಸೊಸೈಟಿ ಆಫ್‌ ಇಂಡಿಯಾ ಕಟ್ಟಿದ್ದಾರೆ. ನಿರಂತರ ಸಂಶೋಧನೆ, ಮಾಹಿತಿ ವಿನಿಮಯ ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಈ ಸಂಸ್ಥೆ ಆಯೋಜಿಸುತ್ತಿದೆ. ಆಶಾಕಿರಣ ಆಸ್ಪತ್ರೆಯಂಥ ಸೇವಾ ಸಂಸ್ಥೆಗಳಿಗೆ ಸಹಾಯಹಸ್ತ ಚಾಚಲು ನಾವು ಯಾವಾಗಲೂ ಸಿದ್ಧ’ ಎಂದರು.

ಆಸ್ಪತ್ರೆ ಚೇರ್ಮನ್‌ ಡಾ.ಎಸ್‌.ಎನ್‌.ಮೋತಿ ಮಾತನಾಡಿ, ‘ಆಶಾಕಿರಣ ಚಾರಿಟಬಲ್‌ ಟ್ರಸ್ಟ್‌ ಅಡಿಯಲ್ಲಿ ಕಳೆದ ಐದು ವರ್ಷಗಳಿಂದ ರಾಷ್ಟ್ರಮಟ್ಟದ ಸಮಾವೇಶ, ತರಬೇತಿ, ಮುಂದುವರಿದ ಶಿಕ್ಷಣ ಹಾಗೂ ಸಂಶೋಧನಾ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕ್ಷೇತ್ರದಲ್ಲಿರುವ ವೈದ್ಯರಿಗೆ ಇದೊಂದು ಸುವರ್ಣಾವಕಾಶ. ಮಾತ್ರವಲ್ಲ; ಪ್ರತಿ ವರ್ಷ 100 ಎಆರ್‌ಟಿ ವೈದ್ಯಾಧಿಕಾರಿಗಳಿಗೆ ಪೂರ್ಣ ಪ್ರಮಾಣದ ಶಿಷ್ಯವೇತನ ಕೂಡ ನೀಡುತ್ತಿದ್ದೇವೆ. ಇದರಲ್ಲಿ ಸಾರ್ವಜನಿಕ ಸಹಭಾಗಿತ್ವ ಇನ್ನಷ್ಟು ಹೆಚ್ಚಬೇಕಿದೆ’ ಎಂದರು.

ನ್ಯಾಕೊ (ಎನ್‌ಎಸಿಒ) ಸಲಹೆಗಾರ ಡಾ.ಮನೀಶ್ ಬಮ್ರೋತಿಯಾ, ಎಸ್‌ಡಿಎಂಐಎಂಡಿ ನಿರ್ದೇಶಕ ಡಾ.ಪರಶುರಾಮನ್‌ ವೇದಿಕೆ ಮೇಲಿದ್ದರು. ಆಸ್ಪತ್ರೆಯ ಉಪಾಧ್ಯಕ್ಷ ಡಾ.ಆರ್‌. ಮಹೇಶಕುಮಾರ್‌ ಸ್ವಾಗತಿಸಿದರು. ಕೆ.ಎಸ್‌.ಗುರುರಾಜ ವಂದಿಸಿದರು.

ಇದಕ್ಕೂ ಮುನ್ನ ಡಾ.ಸುನಿತಿ ಸೋಲೋಮನ್‌ ಸ್ಮರಣಾರ್ಥ ನಡೆದ ಮೊದಲ ಗೋಷ್ಠಿಯಲ್ಲಿ ಅಮೆರಿಕದ ಯುನಿವರ್ಸಿಟಿ ಹಾಸ್ಪಿಟಲ್ಸ್‌ ಆಫ್‌ ಲೈಸಿಸ್ಟರ್‌ನ ಡಾ.ಜ್ಯೋತಿ ಧರ್‌ ‘ಮಹಿಳೆಯರಲ್ಲಿ ಎಚ್‌ಐವಿ/ ಏಡ್ಸ್‌’ ಕುರಿತು ಉಪನ್ಯಾಸ ನೀಡಿದರು. ಹೆಣ್ಣುಮಕ್ಕಳಲ್ಲಿ ಸೋಂಕಿನ ಪ್ರಾಥಮಿಕ ಹಂತ, ಉಪಚಾರದ ವಿಧಾನ, ಬಾಧೆ ಇರುವ ಪತಿಯಿಂದ ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಿವ ರೀತಿ, ಕಾಯಿಲೆ ಇರುವ ತಾಯಿಯಿಂದ ಮಗುವಿಗೆ ಹರಡದಂತೆ ವಹಿಸಬೇಕಾದ ಎಚ್ಚರಿಕೆ, ಮುಂಜಾಗ್ರತಾ ಕ್ರಮಗಳ ಕುರಿತು ವಿವರ ನೀಡಿದರು.

ದೇಶದ ವಿವಿಧೆಡೆಯಿಂದ ಸುಮಾರು 200ಕ್ಕೂ ಹೆಚ್ಚು ಎಚ್‌ಐವಿ ತಜ್ಞರು ಇದರಲ್ಲಿ ಭಾಗವಹಿಸಿದ್ದಾರೆ.

ಪ್ರತಿಕ್ರಿಯಿಸಿ (+)