ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿ ಸ್ವಚ್ಛತೆಗಿಳಿದ ನ್ಯಾಯಾಧೀಶರು

Last Updated 5 ಫೆಬ್ರುವರಿ 2018, 6:46 IST
ಅಕ್ಷರ ಗಾತ್ರ

ಕೆ.ಆರ್.ನಗರ: ಸ್ವಚ್ಛತೆ ಕೇವಲ ಆಚರಣೆ ಯಾಗಿ ಮಾಡುವುದಲ್ಲ, ಶ್ರಮ ವಹಿಸಿ ಪ್ರತಿನಿತ್ಯ ನಡೆಸಬೇಕು ಎಂದು ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ ಬಸವರಾಜಪ್ಪ ಹೇಳಿದರು. ಇಲ್ಲಿನ ಹಳೆ ಯಡತೊರೆಯ ಅರ್ಕೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಚ್ಛತೆ ಜೀವನದ ಭಾಗವಾಗವಾಗ ಬೇಕು. ಇದರಿಂದ ಆರೋಗ್ಯವಂತರಾಗಿ ಬದುಕಲು ಸಾಧ್ಯ. ಆರೋಗ್ಯವಂತ ಸಮಾಜವೇ ದೇಶದ ಸದೃಢ ಸಮಾಜವಾಗುತ್ತದೆ. ಆರೋಗ್ಯವಂತರು ಹೆಚ್ಚಿದ್ದರೆ ದೇಶ ಅಭಿವೃದ್ಧಿಗೆ ಹತ್ತಿರ ಬಂದಂತೆ. ಮನೆ, ಕಚೇರಿ, ಸಾರ್ವಜನಿಕ ಎಲ್ಲ ಸ್ಥಳ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರತಿ ಯೊಬ್ಬರು ಸಹಕರಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮಿಮೋಹನ್, 15 ದಿನದ ಒಳಗೆ ತಾಲ್ಲೂಕು ಬಯಲು ಶೌಚಮುಕ್ತವಾ ಗಲಿದೆ. ಕಾವೇರಿ ನೀರು ಕುಡಿಯಲು ಅಲ್ಲ, ಸ್ನಾನ ಮಾಡಲೂ ಯೋಗ್ಯ ವಾಗಿಲ್ಲ. ನದಿ ಹರಿಯುವ ಎಲ್ಲ ಕಡೆಯೂ ನೀರು ಮಲಿನವಾಗಿದೆ. ದೈಹಿಕ ಮತ್ತು ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಬೇಕೆಂದರೆ ನಾವು ಉಪ ಯೋಗಿಸುವ ನದಿ ನೀರು ಶುದ್ಧವಾಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದರು.

ಕುಟುಂಬ ಸಮೇತರಾಗಿ ಸ್ವಚ್ಛತೆಯಲ್ಲಿ ಭಾಗಿ: ನ್ಯಾಯಾಧೀಶ ಬಸವರಾಜಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಶ್ರೀನಾಥ್, ಹೆಚ್ಚುವರಿ ನ್ಯಾಯಾಧೀಶ ರಮೇಶ್ ಗಾಣಿಗೇರ್ ಅವರು ಕುಟುಂಬ ಸಮೇತರಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ನದಿಯಲ್ಲಿ ಕೊಳೆತ ಬಟ್ಟೆ, ಕಲುಷಿತ ನೀರು, ಮಾಟ– ಮಂತ್ರದ ವಸ್ತು ಗಮನಿಸಿದ ನ್ಯಾಯಾಧೀಶರು, ಪೌರ ಕಾರ್ಮಿಕರು, ಅಧಿಕಾರಿಗಳು, ವಿದ್ಯಾರ್ಥಿಗಳೊಂದಿಗೆ ಶುಚಿಗೊಳಿಸಿದರು. ನದಿಯಲ್ಲಿ ಬಿಸಾಕಿದ ಸುಮಾರು ಒಂದು ಟ್ರ್ಯಾಕ್ಟರ್‌ನಷ್ಟು ಕೊಳತೆ ಬಟ್ಟೆ ಹೊರ ತೆಗೆದರು.

ದಂಡದ ಎಚ್ಚರಿಕೆ: ದೇವಸ್ಥಾನ ಆವರಣ ಸ್ವಚ್ಛತೆ ಮಾಡುವಾಗ ಅಲ್ಲಿ ಐಸ್ ಕ್ರೀಮ್ ವ್ಯಾಪಾರಿಯೊಬ್ಬ ಗ್ರಾಹಕರಿಗಾಗಿ ಕಾಯುತ್ತಿದ್ದ. ಅಲ್ಲಿ ಕಸ ಹಾಕಲು ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಐಸ್ ಕ್ರೀಮ್ ಗೆ ಸಂಬಂಧಿಸಿದ ತ್ಯಾಜ್ಯ ಸುತ್ತಲೂ ಬಿದ್ದಿದ್ದವು. ಇದನ್ನು ಗಮನಿಸಿದ ನ್ಯಾಯಾಧೀಶ ಬಸವರಾಜಪ್ಪ ವ್ಯಾಪಾರಿಗೆ ಬುದ್ಧಿ ಹೇಳಿದರು. ಅಲ್ಲದೆ, ನಮ್ಮೊಂದಿಗೆ ಸ್ವಚ್ಛತಾ ಕಾರ್ಯಕ್ಕೆ ಇಳಿಯುವಂತೆ ಪೊರಕೆ ಕೊಡಲು ಮುಂದಾದರು.

ಆದರೆ, ಇದಕ್ಕೆ ವ್ಯಾಪಾರಿ ನಿರಾಕರಿಸಿದ. ಅಲ್ಲದೆ, ಇಲ್ಲಿ ಕಸ ಬಿದ್ದಿರು ವುದಕ್ಕೆ ನಾನು ಕಾರಣನಲ್ಲ ಎಂದು ವಾಗ್ವಾದಕ್ಕೆ ನಿಂತ. ಇದರಿಂದ ಕೆರಳಿದ ನ್ಯಾಯಾಧೀಶರು, ಐಸ್ ಕ್ರೀಮ್ ಗಾಡಿ ವಶಕ್ಕೆ ಪಡೆದು ದಂಡ ಹಾಕುವಂತೆ ಸ್ತಳದಲ್ಲಿದ್ದ ಪೊಲೀಸರಿಗೆ ಸೂಚಿಸಿದರು.

ಇದೇ ವೇಳೆ ನದಿಯಲ್ಲಿ ಹಲವು ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರು. ಇವರ ಬಳಿ ತೆರಳಿದ ನ್ಯಾಯಾಧೀಶರು, ಬಟ್ಟೆ ತೊಳೆಯಬೇಡಿ. ನೀರು ಸಾಕಷ್ಟು ಕಲುಷಿತಗೊಂಡಿದೆ ಎಂದು ಬುದ್ಧಿ ಹೇಳಿದರು. ಆದರೆ, ಇವರ ಮಾತಿಗೆ ಮನ್ನಣೆ ನೀಡದ ಕೆಲವು ಮಹಿಳೆಯರು ವಾಗ್ವಾದಕ್ಕೆ ಇಳಿದರು. ಅಲ್ಲದೆ, ಬಟ್ಟೆ ತೊಳೆಯುವುದು ಮುಂದುವರಿಸಿದರು.

ಇದರಿಂದ ಬೇಸರಗೊಂಡ ಅವರು, ಇಬ್ಬರು ಮಹಿಳೆಯರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ನಂತರ ಐಸ್ ಕ್ರೀಮ್ ವ್ಯಾಪಾರಿ ಮತ್ತು ಮಹಿಳೆಯರು ಕ್ಷಮೆ ಕೋರಿದ ನಂತರ ಬಿಟ್ಟು ಕಳುಹಿಸಲಾಯಿತು. ನದಿಯಲ್ಲಿರುವ ಗೋಡೆ, ಕಲ್ಲುಗಳ ಮೇಲೆ ಬಟ್ಟೆ ತೊಳೆಯುವುದು ನಿಷೇಧಿಸಲಾಗಿದೆ ಎಂಬ ಫಲಕ ಅಳವ ಡಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ್ ಮಹೇಶಚಂದ್ರ ಅವರಿಗೆ ಸೂಚಿಸಿದರು.

ಈಗಾಗಲೇ ನದಿಯಲ್ಲಿ ಫಲಕ ಹಾಕಲಾಗಿತ್ತು. ಕೆಲವು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಇಒ ಎಂ.ರಾಜು, ಸಹಾಯಕ ಪ್ರಾಧ್ಯಾಪಕ ಹರೀಶ್ ಗೌಡ, ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಮಹದೇವಪ್ಪ, ಕಾರ್ಯದರ್ಶಿ ಧರ್ಮ, ಹಿರಿಯ ವಕೀಲರಾದ ಕೆ.ಪಿ.ಮಂಜುನಾಥ್, ಸತೀಶ್, ಎಲ್.ವಿ.ರವಿಶಂಕರ್, ಗೋವಿಂದರಾಜು, ಪುರಸಭೆ ಪೌರ ಕಾರ್ಮಿಕರು, ಎನ್ಎಸ್ಎಸ್ ವಿದ್ಯಾರ್ಥಿ ಗಳು ಇದ್ದರು.

* * 

ನದಿ ನೀರು ಕುಡಿಯಲು, ಸ್ನಾನ ಮಾಡಲು ಯೋಗ್ಯವಾಗಿ ಉಳಿದಿಲ್ಲ. ಹೀಗೆ ಮುಂದುವರೆದರೆ ಮುಂದೊಂದು ದಿನ ತೊಂದರೆ ಎದುರಿಸಬೇಕಾಗುತ್ತದೆ
ಬಸವರಾಜಪ್ಪ, ಸಿವಿಲ್ ಹಿರಿಯ ಶ್ರೇಣಿ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT