ಶುಕ್ರವಾರ, ಡಿಸೆಂಬರ್ 6, 2019
25 °C
ನೈಜ ವಿದ್ಯಾರ್ಥಿ ಹೆಸರಲ್ಲಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಕ್ರಮ

ಗ್ರಾಮೀಣಾಭಿವೃದ್ಧಿ ವಿ.ವಿ. ಪರೀಕ್ಷೆಗೆ ಬೆರಳಚ್ಚು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣಾಭಿವೃದ್ಧಿ ವಿ.ವಿ. ಪರೀಕ್ಷೆಗೆ ಬೆರಳಚ್ಚು ದಾಖಲೆ

ಗದಗ: ಇಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಮೊದಲ ಸೆಮಿಸ್ಟರ್‌ ಪರೀಕ್ಷೆಗಳು ಸೋಮವಾರದಿಂದ ಪ್ರಾರಂಭವಾಗಿದ್ದು, ನೈಜ ವಿದ್ಯಾರ್ಥಿ ಹೆಸರಿನಲ್ಲಿ ನಕಲಿ ವಿದ್ಯಾರ್ಥಿ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಬೆರಳಚ್ಚು ದಾಖಲೆ ಪಡೆದುಕೊಳ್ಳಲಾಗುತ್ತಿದೆ.

ಎಂ.ಎ. ಗ್ರಾಮೀಣಾಭಿವೃದ್ಧಿ, ಎಂ.ಎಸ್.ಡಬ್ಲ್ಯೂ- ಸಮುದಾಯ ಅಭಿವೃದ್ಧಿ ಹಾಗೂ ಎಂ.ಎಸ್ಸಿ ಜಿಯೊ ಇನ್‌ಫಾರ್ಮೆಟಿಕ್ಸ್‌ ವಿಭಾಗಗಳ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆಗೆ ಹಾಜರಾದರು. ಎಲ್ಲರ ಹೆಬ್ಬೆರಳಿನ ಗುರುತು ಪಡೆದು ದೃಢೀಕರಿಸಿದ ಬಳಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.

‘ಇದೊಂದು ಮುನ್ನೆಚ್ಚರಿಕೆ ಕ್ರಮ. ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವಾಗಲೇ ಎಲ್ಲ ವಿದ್ಯಾರ್ಥಿಗಳ ಬೆರಳಚ್ಚು ಪಡೆದಿದ್ದು, ಅದರ ನೆರವಿನಿಂದ ಅಕ್ರಮ ತಡೆಯುವ ಪ್ರಯತ್ನ ನಡೆಸಲಾಗಿದೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸುರೇಶ ವಿ. ನಾಡಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸ್‌ ನೇಮಕಾತಿ, ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಈಗಾಗಲೇ ಬೆರಳಚ್ಚು ದಾಖಲೆ ಪಡೆದುಕೊಂಡು ಅಭ್ಯರ್ಥಿಗಳ ನೈಜತೆ ದೃಢೀಕರಿಸುವ ವ್ಯವಸ್ಥೆ ಇದೆ. ಆದರೆ, ವಿಶ್ವವಿದ್ಯಾಲಯ ನಡೆಸುವ ಪರೀಕ್ಷೆಯಲ್ಲಿ ಈ ಪ್ರಯತ್ನ ಇದೇ ಮೊದಲು’ ಎಂದು ಅವರು ಹೇಳಿದರು.

‘ಪರೀಕ್ಷಾ ಪ್ರವೇಶ ಪತ್ರವನ್ನು ಆನ್‌ಲೈನ್‌ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ 40 ಪುಟಗಳ ಪ್ರತ್ಯೇಕ ಬಾರ್‌ಕೋಡ್‌ ಇರುವ ಉತ್ತರ ಪತ್ರಿಕೆಗಳನ್ನು ಕೊಡಲಾಗುತ್ತಿದ್ದು, ಗಣಕೀಕೃತ ಕೋಡಿಂಗ್ ಮತ್ತು ಡಿಕೋಡಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮೌಲ್ಯಮಾಪಕರಿಗೆ ಸಹ ಯಾವ ವಿದ್ಯಾರ್ಥಿಯ ಉತ್ತರ ಪತ್ರಿಕೆ ಎಂಬುದನ್ನು ಪತ್ತೆ ಹೆಚ್ಚಲು ಸಾಧ್ಯವಾಗುವುದಿಲ್ಲ’ ಎಂದು ಕುಲಪತಿ ಡಾ.ಬಿ. ತಿಮ್ಮೇಗೌಡ ಅಭಿಪ್ರಾಯಪಟ್ಟರು.

ಗ್ರಾಮೀಣಾಭಿವೃದ್ಧಿ ವಿವಿಯ ಎಲ್ಲ 5 ವಿಭಾಗಗಳು ಸೇರಿ ಪ್ರಸಕ್ತ ಸಾಲಿನಲ್ಲಿ ಒಟ್ಟು 125 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಮೊದಲ ಸೆಮಿಸ್ಟರ್‌ ಎಂ.ಕಾಂ -ಮತ್ತು ಎಂ.ಬಿ.ಎ ಪರೀಕ್ಷೆಗಳು ಫೆ.12ರಿಂದ ಪ್ರಾರಂಭವಾಗಲಿವೆ.

ಪ್ರತಿಕ್ರಿಯಿಸಿ (+)