ಭಾನುವಾರ, ಜೂನ್ 7, 2020
29 °C

ಮಹಾಮಸ್ತಕಾಭಿಷೇಕಕ್ಕೆ ಟಾಂಗಾಗಳು

ಕೆ.ಎಸ್. ಗಿರೀಶ್ Updated:

ಅಕ್ಷರ ಗಾತ್ರ : | |

ಮಹಾಮಸ್ತಕಾಭಿಷೇಕಕ್ಕೆ ಟಾಂಗಾಗಳು

ಮೈಸೂರು: ಶ್ರವಣಬೆಳಗೊಳದಲ್ಲಿ ನಡೆಯುವ ವಿಶ್ವ ವಿಖ್ಯಾತ ಬಾಹುಬಲಿಯ ಮಹಾಮಸ್ತಕಾಭಿಷೇಕ ಅಂಗವಾಗಿ ನಗರದ ಟಾಂಗಾಗಳಿಗೆ ಬೇಡಿಕೆ ಬಂದಿದೆ. ಸೋಮವಾರದಿಂದಲೇ ಇಲ್ಲಿಂದ ಟಾಂಗಾಗಳು ಶ್ರವಣಬೆಳಗೊಳಕ್ಕೆ ಪಯಣ ಆರಂಭಿಸಿವೆ. ಮಹಾಮಸ್ತಕಾಭಿಷೇಕಕ್ಕೆ ಬರುವ ಜೈನಯತಿಗಳ ಮೆರವಣಿಗೆಗೆ, ಪ್ರಯಾಣಕ್ಕೆ ಹಾಗೂ ಇನ್ನಿತರ ಕಾರ್ಯಗಳಿಗಾಗಿ ಇಲ್ಲಿಂದ ಟಾಂಗಾಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ.

ಇಲ್ಲಿನ ಕಾಡಾ ಕಚೇರಿ ಆವರಣದಲ್ಲಿ ಸೋಮವಾರ 7 ದೊಡ್ಡ ಟಾಂಗಾಗಾಡಿಗಳು ಹಾಗೂ 22 ಚಿಕ್ಕ ಟಾಂಗಾಗಾಡಿಗಳನ್ನು ಬಾಡಿಗೆಗೆ ಪಡೆದು ಶ್ರವಣಬೆಳಗೊಳಕ್ಕೆ ಸಾಗಿಸಲಾಯಿತು. ಕ್ಯಾಂಟರ್‌ನಲ್ಲಿ ಮೂರು ಚಿಕ್ಕಚಿಕ್ಕ ಟಾಂಗಾಗಳನ್ನು ಸಾಗಿಸಿದರೆ, ದೊಡ್ಡ ಟಾಂಗಾಗಾಡಿಗಳನ್ನು ಪ್ರತ್ಯೇಕವಾಗಿ ಕ್ಯಾಂಟರಿನಲ್ಲಿ ಸಾಗಿಸಲಾಯಿತು.

ಕುದುರೆಗಳನ್ನು ಟೆಂಪೊಗೆ ಹತ್ತಿಸಲು, ಟಾಂಗಾಗಳನ್ನು ಟೆಂಪೊ ಒಳಗೆ ಹಾಕಲು ಟಾಂಗಾವಾಲಾಗಳು ಬಹು ಪ್ರಯಾಸಪಟ್ಟರು. ಇನ್ನು ಮಸ್ತಕಾಭೀಷೇಕ ಮುಗಿಯುವವರೆಗೂ ಅವು ಅಲ್ಲಿಯೇ ಇರುತ್ತವೆ. ದೊಡ್ಡ ಗಾಡಿಗಳಿಗೆ ಒಂದು ದಿನಕ್ಕೆ ₹ 9 ಸಾವಿರ ಹಾಗೂ ಚಿಕ್ಕ ಚಿಕ್ಕ ಗಾಡಿಗಳಿಗೆ ₹ 1,500 ಬಾಡಿಗೆಯನ್ನು ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ 22 ದೊಡ್ಡ ಟಾಂಗಾ ಗಾಡಿಗಳು, 40 ಚಿಕ್ಕಗಾಡಿಗಳು ಇವೆ. 60ಕ್ಕೂ ಹೆಚ್ಚಿನ ಮಂದಿ ಟಾಂಗಾವಾಲಾಗಳು ಬದುಕಿಗಾಗಿ ಈ ವೃತ್ತಿಯನ್ನೇ ಅವಲಂಬಿಸಿದ್ದಾರೆ. ದಸರೆ, ಕ್ರಿಸ್‌ಮಸ್‌ ಹಾಗೂ ಬೇಸಿಗೆ ರಜಾದಿನಗಳನ್ನು ಬಿಟ್ಟರೆ ಉಳಿದ ಸಮಯದಲ್ಲಿ ಇವರಿಗೆ ಯಾವುದೇ ಲಾಭವಾಗುವುದಿಲ್ಲ. ಉಳಿದ ತಿಂಗಳುಗಳಲ್ಲಿ ಬಹುತೇಕ ಮಂದಿ ಬರಿಗೈಯಲ್ಲಿ ಮನೆಗೆ ವಾಪಾಸಾಗುವಂತಹ ಸ್ಥಿತಿ ಇರುತ್ತದೆ. ಮಾರ್ವಾಡಿಗಳು ಹಾಗೂ ಇತರ ಶ್ರೀಮಂತರ ಮದುವೆಗಳಿದ್ದಾಗ ಟಾಂಗಾಗಳಿಗೆ ಬೇಡಿಕೆ ಇದೆ. ಆದರೆ, ಇದರಿಂದ ಟಾಂಗಾವಾಲಾಗಳಿಗೆ ಹೆಚ್ಚಿನ ಲಾಭವಾಗುವುದಿಲ್ಲ.

ಕುದುರೆ ಸಾಕುವುದು ದುಬಾರಿ!

ಇವತ್ತಿನ ಪರಿಸ್ಥಿತಿಯಲ್ಲಿ ಕುದುರೆ ಸಾಕುವುದು ಬಲು ದುಬಾರಿಯಾಗಿದೆ ಎಂದು ಟಾಂಗಾವಾಲಾ ನಿಸಾರ್ ತಿಳಿಸಿದರು. ಚಿಕ್ಕ ಗಾಡಿಗೆ ಕಟ್ಟುವಂತಹ ಕುದುರೆಗಳಿಗೆ ₹ 45ರಿಂದ ₹ 50 ಸಾವಿರದವರೆಗೆ ಬೆಲೆ ಇದ್ದರೆ, ದೊಡ್ಡ ಸಾರೋಟಿಗೆ ಬಳಸುವ ಕುದುರೆಗಳಿಗೆ ₹ 1 ಲಕ್ಷದಿಂದ 5 ಲಕ್ಷದವರೆಗೆ ಇದೆ. ಕುದುರೆಯ ವಯಸ್ಸು ಕಡಿಮೆ ಇದ್ದಷ್ಟು ಬೆಲೆ ಹೆಚ್ಚು ಎಂದು ಅವರು ಹೇಳುತ್ತಾರೆ.

ಹುರುಳಿ ಬೆಲೆ ಕೆ.ಜಿಗೆ ₹ 80ಕ್ಕೆ ಜಿಗಿದಿದ್ದು, ಕುದುರೆ ಸಾಕುವುದು ಕಷ್ಟಕರವಾಗಿ ಪರಿಣಮಿಸಿತ್ತು. ಸದ್ಯ, ಇದೀಗ ಬೆಲೆ ₹ 40ಕ್ಕೆ ಕಡಿಮೆಯಾಗಿದೆ. ಚಿಕ್ಕ ಗಾಡಿಗೆ ಕಟ್ಟುವಂತಹ ಕುದುರೆಗೆ ಕನಿಷ್ಠ ಎಂದರೂ ನಿತ್ಯ ₹ 300ರಿಂದ 500ರವರೆಗೆ ಖರ್ಚಾಗುತ್ತದೆ. ದೊಡ್ಡ ಕುದುರೆಗಳಿಗೆ ₹ 700ರಿಂದ 800ರ ವರೆಗೆ ವೆಚ್ಚವಾಗುತ್ತದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.