ಶುಕ್ರವಾರ, ಜೂನ್ 5, 2020
27 °C

‘ಧರ್ಮ ಒಡೆಯುವ ಕಾರ್ಯ ಸರಿಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಧರ್ಮ ಒಡೆಯುವ ಕಾರ್ಯ ಸರಿಯಲ್ಲ’

ಯಾಳವಾರ (ಬಸವನ ಬಾಗೇವಾಡಿ): ‘ಬಸವಣ್ಣನವರು 12ನೇ ಶತಮಾನದಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿ ಮಾಡಿದ್ದಾರೆ. ಆದರೆ ಇಂದು ಕೆಲವರು ಅವರ ಹೆಸರನ್ನು ಹೇಳಿಕೊಂಡು ಅಧರ್ಮದ ಕೆಲಸ ಮಾಡಲು ಹೊರಟಿದ್ದಾರೆ’ ಎಂದು ಶ್ರೀಶೈಲ ಪೀಠಾಧೀಶ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಭಾನುವಾರ ಭ್ರಮರಾಂಬ ಮಲ್ಲಿಕಾರ್ಜುನ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೀಪಸ್ತಂಭ, ಪಾದಗಟ್ಟಿ ಹಾಗೂ ಭವ್ಯರಥದ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವೀರಶೈವ– ಲಿಂಗಾಯತ ಎರಡು ಬೇರೆ ಬೇರೆ ಅಲ್ಲ. ಆದರೆ ಇದರ ಇಬ್ಭಾಗಕ್ಕೆ ಕೆಲವರು ನಿಂತುಕೊಂಡಿದ್ದಾರೆ. ಇದಕ್ಕೆ ಸಮಾಜ ಸೊಪ್ಪು ಹಾಕದೆಯೇ, ಧರ್ಮ ಒಡೆಯುವವರನ್ನೇ ಸಮಾಜದಿಂದ ಹೊರ ಹಾಕುವ ಕಾರ್ಯವನ್ನು ಮಾಡಬೇಕಿದೆ’ ಎಂದರು.

‘ಮೂರ್ತಿ ಪೂಜೆ ಸಂಸ್ಕೃತಿಯು ಸನಾತನ ಪರಂಪರೆಯಿಂದ ಬಂದಿದೆ. ಶರಣರು ಮೂರ್ತಿ ಪೂಜೆ ಬೇಡ ಎಂದಿಲ್ಲ. ಆದರೆ ಇಂದು ಕೆಲವರು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳಲು ಮೂರ್ತಿ ಪೂಜೆ ಮಾಡಬೇಡಿ, ವೀರಶೈವ-ಲಿಂಗಾಯತ ಬೇರೆ ಬೇರೆ’ ಎಂದು ಹೇಳುತ್ತಿರುವುದರಲ್ಲಿ ಅರ್ಥವೇ ಇಲ್ಲ. ಜನರು ಜಾಗೃತಿಯಿಂದ ಹೆಜ್ಜೆ ಇಡಬೇಕಿದೆ’ ಎಂದು ಹೇಳಿದರು.

ಕರಿಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮಿಜಿ ಮಾತನಾಡಿ, ‘ವೀರಶೈವ ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಕೆಲ ಸಂಶೋಧಕರು ವೀರಶೈವ- ಲಿಂಗಾಯತ ಬೇರೆ- ಬೇರೆ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದು ಹೇಳಿದರು. ಬಾಗಕೋಟೆಯ ರಾಮರೂಢ ಮಠದ ರಾಮರೂಢ ಸಮೀಜಿ, ಮಾಜಿ ಶಾಸಕ ಶಿವಪುತ್ರಪ್ಪ ದೇಸಾಯಿ, ರವಿ ಕೊಟ್ರಗಸ್ತಿ ಮಾತನಾಡಿದರು.

ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕಾಶೀನಾಥ ಸ್ವಾಮಿಜಿ, ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಬಿ.ಎಸ್.ಪಾಟೀಲ(ಯಾಳಗಿ), ರಾಜುಗೌಡ ನಾಡಗೌಡ್ರ, ಸಾಹೇಬಗೌಡ ದೊಡಮನಿ, ಆನಂದಗೌಡ ದೊಡಮನಿ, ಎಸ್.ಎಸ್ ಛಾಯಾಗೋಳ, ಬಾಳಾಸಾಹೇಬಗೌಡ ಪಾಟೀಲ, ದೊಡ್ಡಪ್ಪಗೌಡ ಹಾದಿಮನಿ, ಸುರೇಶಗೌಡ ಪಾಟೀಲ, ಎಂ.ಸಿ.ನ್ಯಾಮಣ್ಣವರ, ಪಿ.ಎಸ್. ಪಾಟೀಲ, ಬಾಪುಗೌಡ ಪಾಟೀಲ, ನಾನಾಗೌಡ ಹಾದಿಮನಿ, ಗುರಲಿಂಗಪ್ಪ ಮಾನ್ವಿ, ಗದಗಯ್ಯ ಹಿರೇಮಠ, ಅರವಿಂದ ನಾಗರಾಳ, ಅಪ್ಪಣಗೌಡ ಮೂಲಿಮನಿ, ಸಿದ್ಧರಾಮ ಜಯವಾಡಗಿ, ಸೋಮನಗೌಡ ಕೇಶಟ್ಟಿ ಇತರು ಇದ್ದರು. ಪ್ರೊ.ಶೇಷಾಚಲ ಹವಾಲ್ದಾರ ಸ್ವಾಗತಿಸಿದರು. ಬಿ.ವೈ.ಭಂಟನೂರ, ಎಸ್.ಎಸ್ ತಬ್ಬಣ್ಣವರ ನಿರೂಪಿಸಿದರು. ಐ.ಬಿ.ಹಿರೇಮಠ ವಂದಿಸಿದರು.

* * 

‘ಬಸವಣ್ಣನವರ ವಚನಗಳನ್ನು ಸಂಪೂರ್ಣ ಅಧ್ಯಯನ ಮಾಡದೆಯೇ ತಮಗೆ ಅನುಕೂಲಕ್ಕೆ ಬೇಕಾದಂತಹ ಕೆಲವು ವಚನಗಳನ್ನು ಆಯ್ಕೆ ಮಾಡಿಕೊಂಡು ಧರ್ಮ ಒಡೆಯುವ ಕಾರ್ಯಕ್ಕೆ ಕೆಲವರು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.