7

ಪ್ರಶ್ನೋತ್ತರ

Published:
Updated:
ಪ್ರಶ್ನೋತ್ತರ

ಧನ್ಯ, ಬೆಳಗಾವಿ

ನಾನು ವೃತ್ತಿಪರ ಶಿಕ್ಷಣಕ್ಕೋಸ್ಕರ ಬ್ಯಾಂಕ್‌ ಆಫ್‌ ಇಂಡಿಯಾ 10–9–2014ರಲ್ಲಿ ₹ 78,000 ಸಾಲ ಪಡೆದಿದ್ದೆ. ಶಿಕ್ಷಣ ಮುಗಿಯಿತು. ಹಣಕಾಸಿನ ಸಮಸ್ಯೆಯಿಂದ ಕಂತು ಕಟ್ಟಲಾಗಲಿಲ್ಲ. ಈಗ ಅದು ₹ 3 ಲಕ್ಷವಾಗಿದೆ ಎನ್ನುತ್ತಾರೆ. ನಮ್ಮ ಕುಟುಂಬದ ವಾರ್ಷಿಕ ಆದಾಯ ಬರೀ ₹ 30,000 ದಯಮಾಡಿ ಏನು ಮಾಡಬೇಕು?

ಉತ್ತರ: ವೃತ್ತಿಪರ ಶಿಕ್ಷಣಕ್ಕೆ ಬಡ್ಡಿ ಅನುದಾನಿತ ಸಾಲ ಪಡೆಯುವ ಮುನ್ನ, ತಹಶೀಲ್ದಾರರಿಂದ ಆದಾಯದ ಸರ್ಟಿಫಿಕೇಟು ಪಡೆದು ಬ್ಯಾಂಕಿಗೆ ಸಲ್ಲಿಸಬೇಕು. ಈ ಶಿಕ್ಷಣ ಯೋಜನೆಯಲ್ಲಿ ಶಿಕ್ಷಣದ ಅವಧಿ ಹಾಗೂ ನಂತರ ಒಂದು ವರ್ಷ, (ಕೆಲಸ ಸಿಕ್ಕಿದಲ್ಲಿ 6 ತಿಂಗಳೊಳಗೆ) ಈ ಅವಧಿಗೆ ಅನುದಾನಿತ ಬಡ್ಡಿ ಸೌಲಭ್ಯವಿರುತ್ತದೆ. ಈ ಅವಧಿ ಮುಗಿದ ನಂತರ ಬ್ಯಾಂಕು ಬಡ್ಡಿ ಹಾಕುತ್ತದೆ. ಬಡ್ಡಿಯಿಂದಾಗಿ ನಿಮ್ಮ ₹ 78,000 ಸಾಲ, ಈಗ ₹ 3 ಲಕ್ಷವಾಗಿರಬೇಕು. ಬ್ಯಾಂಕಿನಲ್ಲಿ ಶಿಕ್ಷಣ ಸಾಲದ ಸ್ಟೇಟ್‌ಮೆಂಟ್‌ ಕೇಳಿ ಪಡೆಯಿರಿ. ಇದರಿಂದ ಅವರು ಎಂದಿನಿಂದ ಬಡ್ಡಿ ಹಾಕುತ್ತಿದ್ದಾರೆ ಎಂದು ತಿಳಿಯುತ್ತದೆ. ಶಿಕ್ಷಣದ ಅವಧಿ ಮುಗಿದ ನಂತರ ಇಲ್ಲಿ ವಿವರಿಸಿದ ಸಮಯ ಮುಗಿದ ನಂತರ, ಕುಟುಂಬದ ಆದಾಯ ಬರೇ ₹ 30,000 ಇದ್ದರೂ ಅನುದಾನಿತ ಬಡ್ಡಿ ದೊರೆಯುವುದಿಲ್ಲ.

ರಮೇಶ್‌, ಚಿಂತಾಮಣಿ

ನಾನು ನಿವೃತ್ತಿಯಾಗುತ್ತಿದ್ದೇನೆ. ನನಗೆ ಚಿಂತಾಮಣಿಯಲ್ಲಿ ಸ್ವಂತ ಮನೆ ಇದೆ.  ಬೆಂಗಳೂರು ಹಾಗೂ ಚಿಂತಾಮಣಿಯಲ್ಲಿ ಒಂದೊಂದು ನಿವೇಶನ ಇದೆ. ನಿವೃತ್ತಿಯಿಂದ ₹ 60 ಲಕ್ಷ ಹಾಗೂ ಇದುವರೆಗೆ ಗಳಿಸಿದ ₹ 40 ಲಕ್ಷ, ನಾನು, ನನ್ನ ಹೆಂಡತಿ, ಮಗ ಹೀಗೆ ಮೂರು ಭಾಗ ಮಾಡಿ 5–15 ವರ್ಷ ಠೇವಣಿ ಇರಿಸಿದರೆ ತೆರಿಗೆ ಉಳಿಸಬಹುದೇ? ಅಥವಾ ಜಕ್ಕೂರಿನಲ್ಲಿ 3–4 ಅಂತಸ್ತಿನ ಮನೆ ಕಟ್ಟುವುದು ಸೂಕ್ತವೇ ಅಥವಾ ಬೇರೆ ಮಾರ್ಗಗಳಿವೆಯೇ?

ಉತ್ತರ: ನೀವು ಪಿಂಚಣಿದಾರರಾಗಿದ್ದು, ಪಿಂಚಣಿ ಹಣದಿಂದ ಜೀವಿಸಲು ಸಾಧ್ಯವಾದಲ್ಲಿ ಜಕ್ಕೂರಿನಲ್ಲಿ 3–4 ಅಂತಸ್ತಿನ ಮನೆ ಕಟ್ಟುವುದೇ ಲೇಸು. ನಿಮ್ಮೊಡನಿರುವ ಹಣ ನಿಮ್ಮ ಮಗನಿಗೆ ಕೊಟ್ಟರೆ, ಅವರು ಅಲ್ಲಿ ಬರುವ ಬಡ್ಡಿ ಅವರ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕು. ನಿಮ್ಮ ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸಿದರೆ, ಠೇವಣಿ ಬಡ್ಡಿ ವರಮಾನ ನಿಮ್ಮ ಆದಾಯಕ್ಕೆ ಸೇರಿಸಿ ನೀವು ತೆರಿಗೆ ಕೊಡಬೇಕಾಗುತ್ತದೆ. ನೀವು ನಿವೃತ್ತರಾದ್ದರಿಂದ, ಇಳಿವಯಸ್ಸಿನಲ್ಲಿ ಹೆಚ್ಚಿನ ವರಮಾನದ ಆಸೆಯಿಂದ ಅನಿಶ್ಚಿತ ವರಮಾನದ ಹೂಡಿಕೆ ನಿಮಗೆ ತರವಲ್ಲ. ಸ್ಥಿರ ಆಸ್ತಿ ಅಂದರೆ ಮನೆ ಕಟ್ಟಿಸಿರಿ ಅಥವಾ ಬ್ಯಾಂಕ್‌ ಠೇವಣಿ ಇರಿಸಿ ಶಾಂತಿ ಹಾಗೂ ಸಮೃದ್ಧಿಯ ಜೀವನ ನಡೆಸಿರಿ.

ಎ.ಎಸ್‌. ಕದಂ, ಮುಧೋಳ

ನನ್ನ ವಯಸ್ಸು 67. ನನಗೆ  ನಿವೃತ್ತಿಯಿಂದ ₹ 6,71,832 ಬಂದಿದೆ. ನಾನು ನಿವೃತ್ತ ಸರ್ಕಾರಿ ನೌಕರ. ಈ ಹಣ ನನ್ನ, ನನ್ನ ಹೆಂಡತಿ, ಮೊಮ್ಮಕಳ ಹೆಸರಿನಲ್ಲಿ ಎಫ್.ಡಿ. ಇಡಬಹುದೇ, ಎಲ್‌.ಐ.ಸಿ. ಮಾಡಿಸಬಹುದೇ, ದ್ವಿಚಕ್ರ ವಾಹನ ಕೊಳ್ಳಬಹುದೇ ಹಾಗೂ ಮನೆಯನ್ನು ದುರಸ್ತಿ ಮಾಡಬಹುದೇ ತಿಳಿಸಿರಿ. ವಾರ್ಷಿಕ ಪಿಂಚಣಿ ₹ 3 ಲಕ್ಷದೊಳಗಿದೆ. ಅಂಚೆ ಕಚೇರಿಯಲ್ಲಿ ನನ್ನ ಹೆಸರಿನಲ್ಲಿ ₹ 1000 ಪಿ.ಪಿ.ಎಫ್‌., ಪತ್ನಿಯ ಹೆಸರಿನಲ್ಲಿ ₹ 1000 ಆರ್‌.ಡಿ. ತುಂಬುತ್ತೇನೆ. ತೆರಿಗೆ ಉಳಿಸಲು ಯಾವ ಮಾರ್ಗ ಸೂಕ್ತ?

ಉತ್ತರ: ನಿವೃತ್ತಿಯಿಂದ ಬಂದ ಹಣ ನೀವು ಪ್ರಶ್ನೆಯಲ್ಲಿ ಬಯಸಿದಂತೆ ಹೇಗೆ ಬೇಕಾದರೂ ನಿರ್ವಹಣೆ ಮಾಡಬಹುದು. ಆದರೆ, ನಿಮ್ಮ ಪತ್ನಿ ಹಾಗೂ ಮೊಮ್ಮಕ್ಕಳ ಹೆಸರಿನಲ್ಲಿ ಇರಿಸಿದ ಠೇವಣಿ ಬಡ್ಡಿ ನಿಮ್ಮ ವಾರ್ಷಿಕ ಒಟ್ಟು ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ. ನೀವು ಪಿ.ಪಿ.ಎಫ್‌. ಖಾತೆ ಪ್ರಾರಂಭಿಸಿ ಎಷ್ಟು ವರ್ಷಗಳಾದವು ಎಂಬುದು ತಿಳಿಯಲಿಲ್ಲ. ಇದೊಂದು 15 ವರ್ಷಗಳ ಯೋಜನೆ. ನಿಮ್ಮ ವಾರ್ಷಿಕ ಪಿಂಚಣಿ ಹಾಗೂ ಬಡ್ಡಿ ವರಮಾನ ₹ 3 ಲಕ್ಷ ದಾಟಿದಲ್ಲಿ, ಹಾಗೆ ದಾಟಿದ ಮೊತ್ತ ಪಿ.ಪಿ.ಎಫ್‌.ನಲ್ಲಿ ಇರಿಸಿ ತೆರಿಗೆ ವಿನಾಯ್ತಿ ಪಡೆಯಿರಿ. ನಿವೃತ್ತಿಯಿಂದ ಬಂದ ಹಣ ವಿಂಗಡಿಸಿ. ಕನಿಷ್ಠ ಶೇ 50 ರಷ್ಟು ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ. ಚಕ್ರಬಡ್ಡಿಯಲ್ಲಿ ಹಣ ಬೆಳೆಸಿಕೊಳ್ಳಿ. ಎಲ್‌.ಐ.ಸಿ.–ಪಿ.ಪಿ.ಎಫ್‌. ದೀರ್ಘಾವಧಿ ಹೂಡಿಕೆಗಳಾಗಿದ್ದು ಇದು ನಿಮಗೆ ಉಪಯೋಗವಾಗುವುದಿಲ್ಲ. ದ್ವಿಚಕ್ರ ವಾಹನ ಕೊಂಡುಕೊಳ್ಳಿ.

ಅಮಿನಸಾ ನದಾಫ್‌, ವಿಜಯಪುರ

ನಾನು ವೃತ್ತಿಯಲ್ಲಿ ರೈತ ಹಾಗೂ ಡ್ರೈವರ್‌. ಹಿರಿಯ ನಾಗರಿಕ. ಮಕ್ಕಳಿಗೆ ಶಿಕ್ಷಣ ಹಾಗೂ ಮದುವೆ ಮಾಡಿದ್ದೇನೆ. ಜಮೀನು ಮಾರಾಟ ಮಾಡಿ ₹ 33.90 ಲಕ್ಷ ಬಂದಿದೆ. ಜಮೀನು ಮಾರಾಟ ಮಾಡಿದ ಬಗ್ಗೆ ಎಲ್ಲಾ ಕಾಗದ ಪತ್ರಗಳಿವೆ. ನನಗೆ ಸಾಕಷ್ಟು ಶಿಕ್ಷಣ ಇಲ್ಲ. ತೆರಿಗೆ ಬರದಂತೆ ಹಾಗೂ ಹಣ ಹೂಡಿಕೆಯಲ್ಲಿ ನಿಮ್ಮ ಅಮೂಲ್ಯ ಸಲಹೆ ನೀಡಿ.

ಉತ್ತರ: ಬಂಡವಾಳ ಗಳಿಕೆ ತೆರಿಗೆ 48 ಪ್ರಕಾರ, ಗ್ರಾಮಾಂತರ ಪ್ರದೇಶದ ಕೃಷಿ ಜಮೀನು ಮಾರಾಟ ಮಾಡಿ ಬರುವ ಹಣಕ್ಕೆ, ತೆರಿಗೆ ಇರುವುದಿಲ್ಲ. ಜಮೀನು ಪಿತ್ರಾರ್ಜಿತವಾದ್ದರಿಂದ ನಿಮಗೆ ಬಂದಿರುವ ₹ 33.90 ಲಕ್ಷ ವಿಂಗಡಿಸಿ, ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಠೇವಣಿ ಇರಿಸಬಹುದು. ಶೇ 7.5 ಬಡ್ಡಿ ದರದಲ್ಲಿ ಈ ಮೊತ್ತಕ್ಕೆ ತಿಂಗಳಿಗೆ ₹ 21,187.50 ಬರುತ್ತದೆ. ಇದು ನಿಮ್ಮ ಜೀವನಕ್ಕೆ ಸಾಕಾಗುತ್ತದೆ. ಬ್ಯಾಂಕು ಹಾಗೂ ಅಂಚೆ ಕಚೇರಿ ಹೊರತುಪಡಿಸಿ, ಹೆಚ್ಚಿನ ಬಡ್ಡಿ ಆಸೆಯಿಂದ, ಬೇರೆಯವರ ಮಾತು ಕೇಳಿ, ಅಭದ್ರವಾದ ಹೂಡಿಕೆ ಮಾಡಬೇಡಿ. ಇದರಿಂದ ನೀವು ಅಸಲನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಂದೆ ಜಮೀನು ಹಾಗೂ ಹಣ ಎರಡೂ ಇಲ್ಲದೆ ಪೇಚಾಡಬೇಕಾದೀತು ಜೋಕೆ.

ವಿ.ಸೂ.: ನೀವು ಜಮೀನು ಮಾರಾಟ ಮಾಡಿ ಬರುವ ₹ 33.90ಕ್ಕೆ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಇಲ್ಲವಾದರೂ ನಿಮ್ಮ ಜಮೀನು ವಿಜಯಪುರದಿಂದ 10 ಕಿ.ಮೀ. ಒಳಗೆ ಇದ್ದರೆ ತೆರಿಗೆ ಬರುತ್ತದೆ. ತೆರಿಗೆ ಉಳಿಸಲು ನ್ಯಾಷನಲ್‌ ಹೈವೇ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಇಲೆಕ್ಟ್ರಿಫಿಕೇಷನ್‌ ಬಾಂಡುಗಳಲ್ಲಿ 3 ವರ್ಷಗಳ ಅವಧಿಗೆ ಠೇವಣಿ ಇರಿಸಬಹುದು.

ರಾಮಣ್ಣ, ಚಿತ್ರದುರ್ಗ

ನನ್ನ ಮಗಳು ಅಮೆರಿಕದಲ್ಲಿ ಕೆಲಸ ಮಾಡುತ್ತಾಳೆ. 5 ವರ್ಷದಿಂದ ಅಲ್ಲಿದ್ದಾಳೆ. ಅಲ್ಲಿ ಗಳಿಸಿದ ಹಣ ಸುಮಾರು ₹ 15 ಲಕ್ಷ ಎಸ್‌.ಬಿ.ಐ.ದಲ್ಲಿ ಠೇವಣಿ ಇಟ್ಟಿರುತ್ತಾಳೆ. ಅದಕ್ಕೆ 15ಜಿ ಕೊಟ್ಟಿರುತ್ತೇವೆ. ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಬಯಸುತ್ತೇನೆ

ಉತ್ತರ: ನಿಮ್ಮ ಪ್ರಶ್ನೆಯಲ್ಲಿ ₹ 15 ಲಕ್ಷ ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಮಗಳ ಹೆಸರಿನಲ್ಲಿ ಇಟ್ಟಿರುವ ಬಗ್ಗೆ ಸರಿಯಾದ ಮಾಹಿತಿ ತಿಳಿಸಿಲ್ಲ. ನಿಮ್ಮ ಹೆಸರಿನಲ್ಲಿ ಇಟ್ಟರೆ,  ನಿಮ್ಮ ವಾರ್ಷಿಕ ಆದಾಯ ₹ 2.50 ಲಕ್ಷಗಳ ತನಕ ನಿಮಗೆ ತೆರಿಗೆ ಬರುವುದಿಲ್ಲ. ನಿಮಗೆ ಬೇರೆ ಯಾವುದಾದರೂ ಆದಾಯವಿದ್ದರೆ ಬಡ್ಡಿ ಆದಾಯಕ್ಕೆ ಸೇರಿಸಿ ₹ 2.50 ಲಕ್ಷ ತನಕ ತೆರಿಗೆ ಬರುವುದಿಲ್ಲ. ಇದೇ ವೇಳೆ ನಿಮ್ಮ ಮಗಳು ಅವರ ಹೆಸರಿನಲ್ಲಿ ಅನಿವಾಸಿ ಭಾರತೀಯಳಾಗಿ (ಎನ್‌.ಆರ್‌.ಐ.) ಠೇವಣಿ ಮಾಡಿದಲ್ಲಿ ಅವರಿಗೆ ಠೇವಣಿ ಮೇಲೆ ಬರುವ ಬಡ್ಡಿಗೆ ಸಂಪೂರ್ಣ ತೆರಿಗೆ ವಿನಾಯ್ತಿ ಇದೆ. 15ಜಿ ಕೊಟ್ಟಿದ್ದು ನೋಡುವಾಗ, ಠೇವಣಿ ನಿಮ್ಮ ಹೆಸರಿನಲ್ಲಿಯೇ ಇರಬೇಕೆಂದು ಭಾವಿಸುತ್ತೇನೆ. ಇನ್ನೂ ಹೆಚ್ಚಿನ ಮಾಹಿತಿಗೆ ಎಸ್‌.ಬಿ.ಐ. ನಲ್ಲಿ ವಿಚಾರಿಸಿ.

ಅಮರೇಶ್‌, ಬಸವಕಲ್ಯಾಣ

ನಾನು ಎಸ್‌.ಬಿ.ಐ. ನಲ್ಲಿ ತಾತ್ಕಾಲಿಕ ಜವಾನನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಂಬಳ ₹ 7,000. ಅದರಲ್ಲಿ ₹ 3000 ಖರ್ಚು ಮಾಡಿ ₹ 4000 ಉಳಿಸುತ್ತೇನೆ. ಈ ಹಣ ಎಫ್‌.ಡಿ. ಅಥವಾ ಆರ್‌.ಡಿ. ಮಾಡಲು ನೀಡಿ?

ಉತ್ತರ: ನೀವು ಬಹಳ ಉತ್ತಮ ಹಾಗೂ ದೇಶದ ದೊಡ್ಡ ಬ್ಯಾಂಕ್‌ ಆದ ಎಸ್‌.ಬಿ.ಐ.ನಲ್ಲಿ ಕೆಲಸ ಮಾಡುತ್ತಿದ್ದೀರಿ. ಕೆಲಸ ತಾತ್ಕಾಲಿಕವಾದರೂ, 3 ವರ್ಷಗಳಲ್ಲಿ ಕಾಯಂ ಗೊಳಿಸುವ ಸಾಧ್ಯತೆ ಇದೆ. ಜವಾನ ಎನ್ನುವ ಕೀಳರಿಮೆ ಬಿಟ್ಟು ಚೆನ್ನಾಗಿ ದುಡಿಯಿರಿ. ನಿಮ್ಮ ಮೇಲಧಿಕಾರಿಗಳ ಪ್ರೀತಿಗೆ ಪಾತ್ರರಾಗಿರಿ. ಪ್ರಾರಂಭದಲ್ಲಿ ಜವಾನನಾಗಿ ಸೇರಿ  ಉನ್ನತ ಹುದ್ದೆಗೆ ಹೋದವರು ಹಲವರಿದ್ದಾರೆ. ಚೆನ್ನಾಗಿ ಕೆಲಸ ಮಾಡುವುದರ ಜೊತೆಗೆ ಬ್ಯಾಂಕಿನ ಕೆಲಸ ಕಲಿಯಿರಿ. ಮುಂದೊಂದು ದಿವಸ ನಿಮಗೆ ಉತ್ತಮ ಅವಕಾಶ ಬರುತ್ತದೆ. ಮಧ್ಯದಲ್ಲಿ ಬಿಡಬೇಡಿ, ಸ್ವಲ್ಪ ಹೆಚ್ಚಿನ ಸಂಬಳ ಸಿಗಬಹುದು, ಆದರೆ ಎಸ್‌.ಬಿ.ಐ. ನಂತಹ ಉತ್ತಮ ಸಂಸ್ಥೆ ಸಿಗಲಾರದು. ಕೆಲಸಕ್ಕೆ ಸೇರುತ್ತಲೇ ಉಳಿತಾಯ ಮಾಡಲು ಮನಸ್ಸು ಮಾಡಿದ ನಿಮಗೆ ಅಭಿನಂದನೆಗಳು. ₹ 4000 ಆರ್‌ ಡಿ 5 ವರ್ಷಗಳ ಅವಧಿಗೆ ಮಾಡಿರಿ. 5 ವರ್ಷಗಳ ನಂತರ ಬರುವ ಮೊತ್ತವನ್ನು ಆರ್‌.ಐ.ಡಿ. ಮಾಡಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಎನ್‌. ಮೂರ್ತಿ, ಬೆಂಗಳೂರು

ಬ್ಯಾಂಕ್‌ ಅಥವಾ ಅಂಚೆ ಕಚೇರಿಯ ಯಾವ ಯಾವ ಠೇವಣಿಗಳ ಮೇಲೆ ಬರುವ ಬಡ್ಡಿಗೆ ಆದಾಯ ತೆರಿಗೆ ವಿನಾಯ್ತಿ ಇದೆ. ಆರ್‌.ಡಿ. ಖಾತೆಯಲ್ಲಿ ಬರುವ ಬಡ್ಡಿಗೆ ತೆರಿಗೆ ಇದೆಯೇ?

ಉತ್ತರ: ಬ್ಯಾಂಕ್‌ ಹಾಗೂ ಅಂಚೆ ಕಚೇರಿಯಲ್ಲಿ ಇರಿಸುವ ಠೇವಣಿಗಳಲ್ಲಿ ಸೆಕ್ಷನ್‌ 10 (11) ಆಧಾರದ ಮೇಲೆ, ಪಿ.ಪಿ.ಎಫ್‌.ನಲ್ಲಿ ಬರುವ ಸಂಪೂರ್ಣ ಠೇವಣಿ ಮೇಲಿನ ಬಡ್ಡಿ ಹಾಗೂ ಸೆಕ್ಷನ್‌ 80 ಟಿ.ಟಿ.ಎ. ಆಧಾರದ ಮೇಲೆ ಉಳಿತಾಯ ಖಾತೆಯಲ್ಲಿ ಬರುವ ಗರಿಷ್ಠ ಬಡ್ಡಿ ₹ 10,000 ತನಕ ಆದಾಯ ತೆರಿಗೆ ವಿನಾಯ್ತಿ ಇದೆ. ಆರ್‌.ಡಿ. ಒಳಗೊಂಡು ಬೇರೆ ಎಲ್ಲಾ ಠೇವಣಿಗಳ ಮೇಲೆ ಬರುವ ಬಡ್ಡಿ ಹಣ ಆದಾಯ ತೆರಿಗೆಯಿಂದ ವಿನಾಯ್ತಿ ಪಡೆದಿಲ್ಲ.

ಶಾರದಮ್ಮ, ಯಾದಗಿರಿ

ನಾನು ಗೃಹಿಣಿ. ಕೆಲವು ವರ್ಷಗಳ ಹಿಂದೆ ಅಂಚೆ ಕಚೇರಿಯಲ್ಲಿ ಆರ್‌.ಡಿ. ಮಾಡಿ ಬಂದಿರುವ ₹ 6 ಲಕ್ಷ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ಠೇವಣಿ ಮಾಡಿದ್ದೇನೆ. ನನ್ನೊಡನೆ ಪ್ಯಾನ್‌ಕಾರ್ಡು ಇಲ್ಲ. ಪ್ಯಾನ್‌ಕಾರ್ಡ್‌ ಒದಗಿಸದಿರುವಲ್ಲಿ ಶೇ 20 ಬಡ್ಡಿ ಮೂಲದಲ್ಲಿ (ಟಿ.ಡಿ.ಎಸ್‌.) ತೆರಿಗೆ ಮುರಿಯುತ್ತೇವೆ ಎಂದು ಬ್ಯಾಂಕ್‌ನವರು ಹೇಳಿದ್ದಾರೆ.  ಮಾರ್ಗದರ್ಶನ ಮಾಡಿ?

ಉತ್ತರ: ಬ್ಯಾಂಕಿನವರು ಹೇಳಿರುವುದು ಸರಿಯೇ ಇದೆ. ಸೆಕ್ಷನ್‌ 194(ಎ) ಆಧಾರದ ಮೇಲೆ, ವಾರ್ಷಿಕ ಠೇವಣಿ ಬಡ್ಡಿ ₹ 10,000 ದಾಟಿದಲ್ಲಿ, ಪ್ಯಾನ್‌ಕಾರ್ಡ್‌ ಒದಗಿಸದಿರುವಲ್ಲಿ, ಬಡ್ಡಿ ಮೂಲದಲ್ಲಿ ಶೇ 20 ಕಡಿತ ಮಾಡಿ ಬ್ಯಾಂಕಿನಲ್ಲಿ ಮುಂದೆ ತೆರಿಗೆ ಕಚೇರಿಗೆ ರವಾನಿಸುತ್ತಾರೆ. ನೀವು ಆದಷ್ಟು ಬೇಗ ಪ್ಯಾನ್‌ಕಾರ್ಡ್‌ ಹೊಂದಿರಿ, ಜೊತೆಗೆ ಪ್ರತೀ ವರ್ಷ ಏಪ್ರಿಲ್‌ನಲ್ಲಿ 15ಜಿ ನಮೂನೆ ಫಾರಂ ಬ್ಯಾಂಕಿಗೆ ಒದಗಿಸಿರಿ. ನಿಮಗೆ ಬೇರಾವ ಆದಾಯವಿಲ್ಲವಾದಲ್ಲಿ ಗರಿಷ್ಠ ₹ 2.50 ಲಕ್ಷ ಬಡ್ಡಿ ಬರುವತನಕ ನಿಮಗೆ ಆದಾಯ ತೆರಿಗೆ ಭಯವಿರುವುದಿಲ್ಲ.

ಬಿ. ನಾಗರಾಜು, ಮಳವಳ್ಳಿ (ಮಂಡ್ಯ ಜಿಲ್ಲೆ)

ನಾನು ಕೆಎಸ್‌ಆರ್‌ಟಿಸಿ ನೌಕರ. ನನ್ನೊಡನೆ 20X30 ನಿವೇಶನ ಇದೆ. ನನಗೆ ಮನೆ ಕಟ್ಟಲು ₹ 15 ಲಕ್ಷ ಸಾಲ ಬೇಕಾಗಿದೆ. ನಾನು ಪ್ರಧಾನ ಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಸಾಲ ಪಡೆದರೆ, ಶೇ 3–4 ಬಡ್ಡಿ ದರ ರಿಯಾಯ್ತಿ ಹಾಗೂ ನಮ್ಮ ನಿಗಮದವರು ಕೊಡುವ ಶೇ 4 ಬಡ್ಡಿ ಸಹಾಯ ಧನ ಎರಡೂ ಪಡೆಯಬಹುದೇ?

ಉತ್ತರ: ಪ್ರಧಾನ ಮಂತ್ರಿ ಪಿಎಂಎವೈ ಯೋಜನೆಯಲ್ಲಿ ಪಟ್ಟಣದಲ್ಲಿ ಮನೆ ನಿರ್ಮಿಸುವಾಗ ಮಾತ್ರ ಅನುದಾನಿತ ಬಡ್ಡಿ ಸೌಲಭ್ಯವಿರುತ್ತದೆ. ಬಹುಶಃ ನಿಮ್ಮ ಹಳ್ಳಿಯಲ್ಲಿ ನಿರ್ಮಿಸುವ ಮನೆಗೆ ಈ ಯೋಜನೆ ಅನ್ವಯವಾಗುವುದಿಲ್ಲ.  ಓರ್ವ ವ್ಯಕ್ತಿ ಒಂದೇ ಒಂದು ಅನುದಾನಿತ ಬಡ್ಡಿ ಅಥವಾ ಸಹಾಯ ಧನ ಪಡೆಯಬಹುದು. ಎರಡೂ ಪಡೆಯುವಂತಿಲ್ಲ. ಆದರೂ ನಿಮ್ಮ ಮೇಲಿನ ಅಧಿಕಾರಿಗಳನ್ನು ವಿಚಾರಿಸಿ.

ಹೆಸರು, ಊರು ಬೇಡ

ಮಗಳಿಗೆ ಗಂಡನ ಅಕಾಲಿಕ ಮರಣದಿಂದಾಗಿ ₹ 15 ಲಕ್ಷ ಸರ್ಕಾರದಿಂದ ಬಂದಿದೆ. ಅನುಕಂಪದ ಆಧಾರದ ಮೇಲೆ ಸಣ್ಣ ಸರ್ಕಾರಿ ನೌಕರಿಯೂ ಸಿಕ್ಕಿದೆ. ಅವಳಿಗೆ ಒಂದು ಗಂಡು ಹಾಗೂ ಹೆಣ್ಣು ಹೀಗೆ ಎರಡು ಮಕ್ಕಳಿದ್ದಾರೆ. ಗಂಡನ ಕೆಲಸದಿಂದಾಗಿ ಪಿಂಚಣಿ ₹ 15,450 ಬರುತ್ತದೆ. ನೌಕರಿಯಿಂದ ಸುಮಾರು ₹ 15,000 ಬರುತ್ತದೆ. ನಿವೇಶನ ಕೊಳ್ಳುವ ವಿಚಾರ, ಮಕ್ಕಳ ಭವಿಷ್ಯ ಹಾಗೂ ಉಳಿತಾಯದ ವಿಚಾರದಲ್ಲಿ ನಿಮ್ಮ ಸಲಹೆ ನಮಗೆ ಬೇಕಾಗಿದೆ?

ಉತ್ತರ: ನಿಮ್ಮ ಮಗಳಿಗೆ ಬಂದಿರುವ ₹ 15 ಲಕ್ಷ ಅವರು ಬಯಸುವ ಬ್ಯಾಂಕಿನಲ್ಲಿ, ನಿವೇಶನಕೊಳ್ಳುವ ತನಕ, ಅವಧಿ ಠೇವಣಿಯಲ್ಲಿ ಇರಿಸಿರಿ. ಸದ್ಯಕ್ಕೆ ಒಂದು ವರ್ಷ ಇಡಿರಿ. ಅವಧಿಗೆ ಮುನ್ನ ನಿವೇಶನ ಕೊಳ್ಳುವುದಾದಲ್ಲಿ ಠೇವಣಿಯನ್ನು ಅವಧಿಗೆ ಮುನ್ನ ಪಡೆಯಬಹುದು. ಉಳಿತಾಯ ಖಾತೆಯಲ್ಲಿ ಅಲ್ಪಸ್ಪಲ್ಪ ಬಡ್ಡಿ ಬರುವುದರಿಂದ ಅಲ್ಲಿ ಗರಿಷ್ಠ ₹ 10,000 ಮಾತ್ರ ಇರಿಸಿರಿ. ಎರಡು ಮಕ್ಕಳ ಹೆಸರಿನಲ್ಲಿ ತಲಾ ₹ 5000, 5 ವರ್ಷಗಳ ಆರ್.ಡಿ. ಮಾಡಿರಿ. ಮಕ್ಕಳು ಪಿಯುಸಿ ಮುಗಿಸಿ ವೃತ್ತಿಪರ ಕೋರ್ಸ್ ಸೇರುವಲ್ಲಿ ಇದು ತುಂಬಾ ಅನುಕೂಲವಾಗುತ್ತದೆ. ನಿಮ್ಮ ಕುಟುಂಬದ ಎಲ್ಲರಿಗೆ ಶುಭ ಹಾರೈಸುತ್ತೇನೆ.

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ,

ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ಇ–ಮೇಲ್‌: businessdesk@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry