ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಪಿನ್ನರ್‌ಗಳದ್ದೇ ಭಯ; ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ಭಾರತ

ಮೂರನೇ ಪಂದ್ಯದಲ್ಲೂ ಕೊಹ್ಲಿ ಬಳಗಕ್ಕೆ ಜಯದ ವಿಶ್ವಾಸ
Last Updated 6 ಫೆಬ್ರುವರಿ 2018, 20:15 IST
ಅಕ್ಷರ ಗಾತ್ರ

ಕೇಪ್‌ಟೌನ್‌: ಜೋಹಾನ್ಸ್‌ಬರ್ಗ್‌ನ ಅಪಾಯಕಾರಿ ಪಿಚ್‌ನಲ್ಲಿ ನಡೆದ ಕುತೂಹಲಕಾರಿ ಟೆಸ್ಟ್‌ನಲ್ಲಿ ಲಭಿಸಿದ ಗೆಲುವು ಕೊಹ್ಲಿ ಬಳಗಕ್ಕೆ ಅತೀವ ವಿಶ್ವಾಸ ತುಂಬಿದಂತಿದೆ. ಆ ವಿಶ್ವಾಸ, ಸ್ಫೂರ್ತಿ, ಭರವಸೆ ಏಕದಿನ ಕ್ರಿಕೆಟ್‌ ಸರಣಿಯಲ್ಲೂ ಸದ್ದು ಮಾಡುತ್ತಿವೆ.

ಅದೇ ಛಲದಲ್ಲಿ ಮುನ್ನುಗ್ಗುತ್ತಿರುವ ಭಾರತ ತಂಡದ ಆಟಗಾರರು ದಕ್ಷಿಣ ಆಫ್ರಿಕಾ ನೆಲದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಗಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 2–0 ಮುನ್ನಡೆ ಸಾಧಿಸಿರುವ ಪ‍್ರವಾಸಿಗರು ಬುಧವಾರ ಇಲ್ಲಿನ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲೂ ಗೆಲುವು ಒಲಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ‌

1992–92 ಹಾಗೂ 2010–11ರಲ್ಲಿ ನಡೆದ ಏಕದಿನ ಸರಣಿಗಳಲ್ಲಿ ಆರಂಭಿಕ ಪಂದ್ಯಗಳನ್ನು ಗೆದ್ದಿದ್ದ ಭಾರತ 2–0ಯಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ, ನಂತರದ ಪಂದ್ಯಗಳಲ್ಲಿ ಎದುರಾಳಿಗೆ ಶರಣಾಗಿ ಸರಣಿ ಸೋತಿತ್ತು. ಉಭಯ ದೇಶಗಳ ನಡುವಣ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಮ್ಮೆಯೂ ಮೂರು ಪಂದ್ಯ ಗೆದ್ದಿಲ್ಲ. ಹೀಗಾಗಿ, ಈ ಪಂದ್ಯದಲ್ಲಿ ಗೆದ್ದರೆ ಇತಿಹಾಸ ಸೃಷ್ಟಿಯಾಗಲಿದೆ.

ಗಾಯದ ಸಮಸ್ಯೆ: ದಕ್ಷಿಣ ಆಫ್ರಿಕಾ ತಂಡದ ಸದ್ಯದ ಪರಿಸ್ಥಿತಿ ಗಮನಿಸಿದರೆ ಕೊಹ್ಲಿ ಪಡೆಗೆ ಗೆಲುವು ಕಷ್ಟವಾಗಲಾರದು. ಏಕೆಂದರೆ ಆತಿಥೇಯ ತಂಡವೀಗ ಗಾಯದ ಸಮಸ್ಯೆಗೆ ಸಿಲುಕಿದೆ. ಎಬಿ ಡಿವಿಲಿಯರ್ಸ್‌, ಫಫ್‌ ಡುಪ್ಲೆಸಿ ಅವರು ಸರಣಿಯಲ್ಲಿ ಆಡುತ್ತಿಲ್ಲ. ಕ್ವಿಂಟನ್‌ ಡಿಕಾಕ್‌ ಕೂಡ ಗಾಯಗೊಂಡು ಹೊರಬಿದ್ದಿದ್ದಾರೆ. ಈ ಸಮಸ್ಯೆಗಳ ಜೊತೆಗೆ ಭಾರತದ ‘ರಿಸ್ಟ್‌ ಸ್ಪಿನ್ನರ್‌’ಗಳಾದ ಯಜುವೇಂದ್ರ ಚಾಹಲ್‌ ಹಾಗೂ ಕುಲದೀಪ್‌ ಯಾದವ್‌ ಅವರು ತಲೆನೋವಾಗಿ ಪರಿಣಮಿಸಿ ದ್ದಾರೆ. ಇವರಿಬ್ಬರು ಮೊದಲ ಎರಡು ಪಂದ್ಯಗಳಲ್ಲಿ 13 ವಿಕೆಟ್‌ ಹಂಚಿ ಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಕೊಹ್ಲಿ ಅಬ್ಬರ, ಎರಡನೇ ಪಂದ್ಯದಲ್ಲಿ ಸ್ಪಿನ್ನರ್‌ಗಳ ಕೈಚಳಕಕ್ಕೆ ದಕ್ಷಿಣ ಆಫ್ರಿಕಾ ಶರಣಾಗಿತ್ತು. ನಾಯಕ ಏಡನ್‌ ಮರ್ಕ ರಮ್‌ ಅವರ ಪ್ರಯೋಗ ಯಶಸ್ವಿಯಾಗುತ್ತಿಲ್ಲ. ಬ್ಯಾಟಿಂಗ್‌ ಕ್ರಮಾಂಕದಲ್ಲಿನ ಬದಲಾವಣೆಯೂ ಫಲ ನೀಡುತ್ತಿಲ್ಲ. ಆತಿಥೇಯರು ಈ ಕ್ರೀಡಾಂಗಣದಲ್ಲಿ ಆಡಿದ 33 ಪಂದ್ಯಗಳಲ್ಲಿ 28ರಲ್ಲಿ ಗೆಲುವು ಲಭಿಸಿದೆ. ಮತ್ತೆ ಅಗ್ರಪಟ್ಟಕ್ಕೇರಲು ಈ ತಂಡಕ್ಕೆ ಇಲ್ಲಿ ಗೆಲುವು ಅನಿವಾರ್ಯ. ಈ ತಂಡದ ಅನುಭವಿ ಬ್ಯಾಟ್ಸ್‌ಮನ್‌ ಹಾಶೀಮ್‌ ಆಮ್ಲಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿಕೆಟ್‌ ಕೀಪರ್‌ ಹೆನ್ರಿಕ್‌ ಕ್ಲಾಸೆನ್‌ ಅವರು ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

(ಎಡರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಯಜುವೇಂದ್ರ ಚಾಹಲ್‌ ಮತ್ತೊಮ್ಮೆ ಉತ್ತಮ ಸಾಧನೆಯ ಭರವಸೆಯಲ್ಲಿದ್ದಾರೆ)

ಬದಲಾವಣೆ ಸಾಧ್ಯತೆ ಕಡಿಮೆ: ಎರಡೂ ಪಂದ್ಯಗಳಲ್ಲಿ ಯಾವುದೇ ಸಮಸ್ಯೆ ಎದುರಿಸದ ಭಾರತ ತಂಡ ದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ಎಲ್ಲಾ ಆಟಗಾರರು ಉತ್ತಮ ಫಾರ್ಮ್‌ನಲ್ಲಿಯೇ ಇದ್ದಾರೆ.

ನಾಯಕ ಕೊಹ್ಲಿ ಸಾರಥ್ಯದಲ್ಲಿ ಆಕ್ರಮಣಕಾರಿ ಆಟ ಮುಂದುವರಿಸುವ ತವಕದಲ್ಲಿದೆ.

ಸೆಂಚುರಿಯನ್‌ನಲ್ಲಿ ಒಲಿದ ಗೆಲುವು ಈ ತಂಡಕ್ಕೆ ಐಸಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಪಟ್ಟ ತಂದುಕೊಟ್ಟಿದೆ. ಆ ಸ್ಥಾನವನ್ನು ಗಟ್ಟಿಪಡಿಸಿಕೊಳ್ಳಲು ಇಲ್ಲಿ ಗೆಲುವು ಅಗತ್ಯವಿದೆ. ಈ ಕ್ರೀಡಾಂಗಣದಲ್ಲಿ ಭಾರತ ತಂಡದವರು ಇದುವರೆಗೆ ಎರಡು ಏಕದಿನ ಪಂದ್ಯಗಳಲ್ಲಿ ಗೆದ್ದು ಎರಡರಲ್ಲಿ ಸೋತಿದ್ದಾರೆ.

**

ತಂಡ ಇಂತಿವೆ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್ ಶಮಿ, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌.

ದಕ್ಷಿಣ ಆಫ್ರಿಕಾ: ಏಡನ್‌ ಮರ್ಕರಮ್‌ (ನಾಯಕ), ಹಾಶೀಮ್‌ ಆಮ್ಲಾ, ಜೀನ್‌ ಪಾಲ್‌ ಡುಮಿನಿ, ಇಮ್ರಾನ್‌ ತಾಹೀರ್‌, ಡೇವಿಡ್‌ ಮಿಲ್ಲರ್‌, ಮಾರ್ನ್‌ ಮಾರ್ಕೆಲ್‌, ಕ್ರಿಸ್‌ ಮಾರಿಸ್‌, ಲುಂಗಿ ಗಿಡಿ, ಆ್ಯಂಡಿಲಿ ಪಿಶುವಾಯೊ, ಕಗಿಸೊ ರಬಾಡ, ತಬ್ರೇಜ್‌ ಶಂಶಿ, ಕೈಯಲ್ ಜೊಂಡೊ, ಫರ್ಹಾನ್‌ ಬೆಹ್ರದೀನ್‌, ಹೆನ್ರಿಕ್‌ ಕ್ಲಾಸೆನ್‌ (ವಿಕೆಟ್‌ ಕೀಪರ್‌).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT