ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಕುಟುಂಬದ ಸೇವೆ ಮಾಡಲು ದೇಶವನ್ನು ಕಡೆಗಣಿಸಿದ ಕಾಂಗ್ರೆಸ್: ಮೋದಿ ಆರೋಪ

Last Updated 7 ಫೆಬ್ರುವರಿ 2018, 9:35 IST
ಅಕ್ಷರ ಗಾತ್ರ

ನವದೆಹಲಿ: ಒಂದು ಕುಟುಂಬದ ಸೇವೆ ಮಾಡುವುದಕ್ಕೋಸ್ಕರ ಕಾಂಗ್ರೆಸ್‌ ಪಕ್ಷ ಇಡೀ ದೇಶವನ್ನೇ ಕಡೆಗಣಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ್ದ ಭಾಷಣಕ್ಕೆ ವಂದನಾ ನಿರ್ಣಯ ಕೈಗೊಳ್ಳುವ ಸಂದರ್ಭ ಪ್ರತಿಪಕ್ಷದ ಕೆಲವು ಸಂಸದರು ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮಾತನಾಡಿದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

‘ಇದು ನಿಮ್ಮ ಗುಣ. ನೀವು ದೇಶವನ್ನು ವಿಭಜಿಸಿದ್ದೀರಿ. ಸ್ವಾತಂತ್ರ್ಯ ದೊರೆತು 70 ವರ್ಷವಾದರೂ ನೀವು ಬಿತ್ತಿದ ವಿಷದಿಂದಾಗಿ ದೇಶದ ಜನ ಈಗಲೂ ಕಷ್ಟ ಅನುಭವಿಸುತ್ತಿದ್ದಾರೆ’ ಎಂದು ಮೋದಿ ಹೇಳಿದರು.

‘ದಶಕಗಳಿಂದ ಒಂದು ಪಕ್ಷ ತನ್ನ ಇಡೀ ಸಾಮರ್ಥ್ಯವನ್ನು ಒಂದು ಕಟುಂಬದ ಸೇವೆ ಮಾಡಲು ವಿನಿಯೋಗಿಸಿದೆ. ಒಂದು ಕುಟುಂಬದ ಹಿತಾಸಕ್ತಿಯ ಮೇಲೆ ಇಡೀ ದೇಶದ ಹಿತಾಸಕ್ತಿಯನ್ನು ಪರಿಗಣಿಸಲಾಗುತ್ತಿತ್ತು’ ಎಂದು ಪರೋಕ್ಷವಾಗಿ ನೆಹರು–ಗಾಂಧಿ ಕುಟುಂಬವನ್ನು ಉದ್ದೇಶಿಸಿ ಮೋದಿ ಟೀಕಿಸಿದರು.

ಪಟೇಲ್ ಪ್ರಧಾನಿಯಾಗಿದ್ದರೆ ಇಡೀ ಕಾಶ್ಮೀರ ನಮ್ಮದಾಗಿರುತ್ತಿತ್ತು: ಜವಹರಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾಗುವ ಬದಲು ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಿದ್ದಿದ್ದರೆ ಇಡೀ ಕಾಶ್ಮೀರ ಇಂದು ನಮ್ಮದಾಗಿರುತ್ತಿತ್ತು ಎಂದು ಮೋದಿ ಅಭಿಪ್ರಾಯಪಟ್ಟರು.

‘ಪಂಡಿತ್ ನೆಹರು ಮತ್ತು ಕಾಂಗ್ರೆಸ್‌ನಿಂದಾಗಿಯೇ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ಕೆಲ ನಾಯಕರು ಹೇಗೆ ಹೇಳುತ್ತಾರೆ? ಅವರು ಭಾರತದ ಇತಿಹಾಸ ಓದಿದ್ದಾರೆಯೇ? ಏನು ಅಹಂಕಾರವಿದು’ ಎಂದು ಮೋದಿ ಪ್ರಶ್ನಿಸಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಹಣಕಾಸು ನೆರವು ನೀಡುವಂತೆ ಕೆಲವು ಸಂಸದರು ಸಂಸತ್‌ನಲ್ಲಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಕೇವಲ ರಾಜಕೀಯ ಹಿತಾಸಕ್ತಿಗಾಗಿ ಹಿಂದಿನ ಯುಪಿಎ ಸರ್ಕಾರ ದಕ್ಷಿಣ ಭಾರತದ ರಾಜ್ಯವನ್ನು ಒಡೆಯಿತು ಎಂದು ಟೀಕಿಸಿದರು. ಹೊಸ ರಾಜ್ಯಗಳ ರಚನೆ ವಿಚಾರ ಬಂದಾಗ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಅವರ ಆಡಳಿತ ಕಾಲದಲ್ಲಿ ಉತ್ತರಾಖಂಡ, ಜಾರ್ಖಂಡ್ ಮತ್ತು ಛತ್ತೀಸ್‌ಗಢ ಹೊಸದಾಗಿ ರಚನೆಯಾಗಿದ್ದವು. ಅದರ ಹಿಂದಿನ ದೂರದೃಷ್ಟಿಯನ್ನು ಗಮನಿಸಬೇಕು ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT