ಶುಕ್ರವಾರ, ಡಿಸೆಂಬರ್ 6, 2019
24 °C

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಶಿಬಿರ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಶಿಬಿರ ಸಮಾರೋಪ

ಯರದಮ್ಮನಹಳ್ಳಿ(ಸಂಡೂರು): ವಸತಿ ಶಾಲೆಗಳ ಪ್ರವೇಶಕ್ಕೆ ತರಬೇತಿ ನೀಡಲು ಹಲವು ಕೇಂದ್ರಗಳು ಹುಟ್ಟಿಕೊಂಡಿವೆ. ಆದರೆ. ತಾಲ್ಲೂಕಿನ ಗೊಲ್ಲಲಿಂಗಮ್ಮನಹಳ್ಳಿ (ಜಿ.ಎಲ್.ಹಳ್ಳಿ) ಕ್ಲಸ್ಟರ್‌ನ ಯರದಮ್ಮನಹಳ್ಳಿಯಲ್ಲಿ ಕಳೆದ 2ವರ್ಷದಿಂದ ಸರ್ಕಾರಿ ಶಾಲೆಗಳ ಶಿಕ್ಷಕರೇ ಗ್ರಾಮೀಣ ವಿದ್ಯಾರ್ಥಿಗಳಿಗೆ ಸದ್ದಿಲ್ಲದೇ ಪರೀಕ್ಷಾ ತರಬೇತಿ ನೀಡುತ್ತಿದ್ದಾರೆ.

ಕಳೆದ ನವಂಬರ್ ತಿಂಗಳಿಂದ ಜನವರಿವರೆಗೆ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಂದು ನಡೆದ ಈ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಶನಿವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಎಎಸ್‌ ಅಧಿಕಾರಿ ಡಾ. ಸುಖಪುತ್ರ, ಸತತ ಪರಿಶ್ರಮದಿಂದ ಮಾತ್ರ ಗುರಿ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಶ್ರದ್ಧೆ, ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು. ಗುರು ಹಿರಿಯರ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ವಿದ್ಯೆ ಕಲಿತರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಮುಖ್ಯ ಶಿಕ್ಷಕ ಕೆ.ರವಿ ಮಾತನಾಡಿ, ಪ್ರತಿ ಶನಿವಾರ ಮತ್ತು ಭಾನುವಾರ 5ನೇ ತರಗತಿಯ 120 ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳ 20 ಶಿಕ್ಷಕರಿಂದ ಕನ್ನಡ, ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಓಎಂಆರ್ ಶೀಟ್‌ಗಳನ್ನು ನೀಡಿ ನಾಲ್ಕು ಪರೀಕ್ಷೆಗಳನ್ನು ನಡೆಸಲಾಗಿದೆ. ಅವುಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗಿದೆ. ಹಿಂದಿನ ವರ್ಷ ತರಬೇತಿ ಪಡೆದ 120 ಮಕ್ಕಳಲ್ಲಿ 74 ವಿದ್ಯಾರ್ಥಿಗಳು ಮುರಾರ್ಜಿ, ಕಿತ್ತೂರುರಾಣಿ ಚನ್ನಮ್ಮ, ಆದರ್ಶ, ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ ಎಂದರು.

ತರಬೇತಿ ಅವಧಿಯಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ನೀಡಿ, ಪ್ರೋತ್ಸಾಹಿಸಿದರು. ಡಾ.ರಾಷ್ಯ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೋಪಾಲರೆಡ್ಡಿ, ಮುಖಂಡರಾದ ಯರಿಸ್ವಾಮಿರೆಡ್ಡಿ, ಲಕ್ಷ್ಮಣ, ಕೆ.ಜಿ. ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಕೆ. ರಾಮಚಂದ್ರ, ಕುಮಾರಸ್ವಾಮಿ, ಸಿಆರ್‌ಪಿ ಕೃಷ್ಣಾನಾಯ್ಕ, ಮುಖ್ಯ ಶಿಕ್ಷಕರು, ತರಬೇತಿ ನೀಡಿದ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನನಗೆ ಓಎಂಆರ್ ಸೀಟ್ ಎಂದರೇನೆಂದು ಗೊತ್ತಿರಲಿಲ್ಲ. ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ಬೇರೆಡೆ ಹೋಗಿ ಹೆಚ್ಚಿನ ಫೀಜು ತುಂಬಿ ತರಬೇತಿ ಪಡೆಯಲು ಆಗುವುದಿಲ್ಲ. ನಮ್ಮ ಗ್ರಾಮದಲ್ಲಿಯೇ ಸುತ್ತಲಿನ ಗ್ರಾಮಗಳ ಶಿಕ್ಷಕರು ಉಚಿತವಾಗಿ ತರಬೇತಿ ನೀಡಿರುವುದು ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ– ಪ್ರತಾಪ್,

ಪ್ರತಿಕ್ರಿಯಿಸಿ (+)