ಶುಕ್ರವಾರ, ಡಿಸೆಂಬರ್ 13, 2019
27 °C

ಬೀದಿಗೆ ಬಂದ ಬಡವರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದಿಗೆ ಬಂದ ಬಡವರ ಬದುಕು

ಹರಿಹರ: ತಾಲ್ಲೂಕಿನ ಬುಳ್ಳಾಪುರ ಗ್ರಾಮದ ಗೋಮಾಳದಲ್ಲಿ ತಹಶೀಲ್ದಾರ್ ರೆಹಾನ್ ಪಾಷಾ ನೇತೃತ್ವದಲ್ಲಿ ಮಂಗಳವಾರ ನಡೆದ ಅಕ್ರಮ ಮನೆಗಳ ತೆರವು ಕಾರ್ಯಾಚಾರಣೆ ವೇಳೆ ಸಂಘರ್ಷ ಉಂಟಾಗಿದ್ದರಿಂದ ಪೊಲೀಸರು ಗ್ರಾಮಸ್ಥರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಮಹಿಳೆಯರು, ವೃದ್ಧರು ಸೇರಿ ಹತ್ತಾರು ಜನ ಗಾಯಗೊಂಡಿದ್ದು, 20 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬುಳ್ಳಾಪುರ ಗ್ರಾಮದ ಗೋಮಾಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ 19 ಕುಟುಂಬಗಳಿಗೆ ಸರ್ಕಾರದಿಂದ 2005ರಲ್ಲಿ ಹಕ್ಕುಪತ್ರ ವಿತರಿಸಲಾಗಿತ್ತು. ಬುಳ್ಳಾಪುರ ಹಳೆ ಗ್ರಾಮದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಮನೆಗಳು ಹಾಳಾಗಿರುವ ಕಾರಣ ಗ್ರಾಮಸ್ಥರು ಗೋಮಾಳದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು.

ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡರೆ ತಮಗೂ ನಿವೇಶನ ದೊರೆಯುತ್ತದೆ ಎಂಬ ಆಸೆಯಿಂದ ಕೆಲವೇ ದಿನಗಳಲ್ಲಿ 42 ತಾತ್ಕಾಲಿಕ ಮನೆಗಳು ನಿರ್ಮಾಣಗೊಂಡಿದ್ದವು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಂದಾಯ ಇಲಾಖೆಯು ಜಿಲ್ಲಾಡಳಿತದ ಆದೇಶದ ಮೇರೆಗೆ ಜ.17ರಂದು ಅಕ್ರಮ ಮನೆಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಗ್ರಾಮಸ್ಥರ ಮನವಿ ಮೇರೆಗೆ ನಾಲ್ಕು ದಿನಗಳ ಅವಕಾಶವನ್ನು ತಾಲ್ಲೂಕು ಆಡಳಿತ ನೀಡಿತ್ತು.

ಗಡುವು ಮುಗಿದರೂ ಗ್ರಾಮಸ್ಥರು ಮನೆಗಳನ್ನು ತೆರವುಗೊಳಿಸಿರಲಿಲ್ಲ. ಹೀಗಾಗಿ ಪೊಲೀಸ್‌ ಭದ್ರತೆಯಲ್ಲಿ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ತೆರವು ಕಾರ್ಯಾಚರಣೆ ಆರಂಭಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ವಾಗ್ವಾದ ನಡೆಸಿ, ಪ್ರತಿಭಟಿಸಿದರು. ಘರ್ಷಣೆ ವಿಕೋಪಕ್ಕೆ ತಲುಪಿದಾಗ ಪೊಲೀಸರು ಲಘು ಲಾಠಿ ಪ್ರಹಾರದ ಮೂಲಕ ಜನರ ಗುಂಪನ್ನು ಚದುರಿಸಿ, ಮನೆಗಳನ್ನು ತೆರವುಗೊಳಿಸಲು ಅನುವು ಮಾಡಿಕೊಟ್ಟರು.

‘ಮನೆಯಲ್ಲಿರುವ ದವಸ ಧಾನ್ಯ ಹಾಗೂ ವಸ್ತುಗಳನ್ನು ಸಾಗಿಸಲು ಅವಕಾಶ ಮಾಡಿಕೊಡಿ. ಮನೆಯ ಗಂಡಸರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾನು ಸಾಗಿಸಲು ಸಹಾಯ ಮಾಡಿ’ ಎಂದು ಸಂತ್ರಸ್ತೆ ಚಂದ್ರಮ್ಮ ಗೋಗರಿಯುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಅವರ ಬೇಡಿಕೆಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು, ಸ್ವಯಂ ತೆರವುಗೊಳಿಸಲು ಅವಕಾಶ ಮಾಡಿಕೊಟ್ಟರು.

ಸ್ಥಳಕ್ಕೆ ಬಂದ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಎಚ್.ಎಚ್. ಬಸವರಾಜ್, ‘ಗೋಮಾಳದಲ್ಲಿ ನಿವೇಶನಕ್ಕೆ ಆಗ್ರಹಿಸಿ 94-ಸಿ ನಿಯಮದಡಿ 42ಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಪರಿಶೀಲಿಸಬೇಕಾದ ಅಧಿಕಾರಿಗಳೇ ತೆರವು ಕಾರ್ಯಾಚರಣೆ ನಡೆಸಿರುವುದು ದುರದೃಷ್ಟಕರ. ಸೇಡಿನ ರಾಜಕಾರಣದ ಹಿನ್ನೆಲೆಯಲ್ಲಿ ತೆರವು ಕಾರ್ಯ ನಡೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ರೆಹಾನ್ ಪಾಷಾ ಮಾತನಾಡಿ, ‘ಗ್ರಾಮ ವ್ಯಾಪ್ತಿಯ 21 ಎಕರೆ ಗೋಮಾಳ ಜಮೀನಿನಲ್ಲಿ 10 ಎಕರೆ ತೋಟಗಾರಿಕೆ, 2.5 ಎಕರೆ ಶಿಕ್ಷಣ ಇಲಾಖೆ, 1 ಎಕರೆ ಆಶ್ರಯ ಯೋಜನೆ ಹಾಗೂ 12 ಗುಂಟೆ ಸಾಗುವಳಿಗೆ ಮಂಜೂರು ಮಾಡಲಾಗಿದೆ. ಉಳಿದ ಜಮೀನಿನಲ್ಲಿ ಗ್ರಾಮದ ಕೆಲವರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು ಸ್ಥಳ ಪರಿಶೀಲನೆಯಿಂದ ಖಚಿತವಾಗಿತ್ತು. ಸಾಕಷ್ಟು ಸಮಯಾವಕಾಶ ನೀಡಿದ್ದರೂ ತೆರವುಗೊಳಿಸದಿರುವುದರಿಂದ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಆಡಳಿತ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟು ತೆರವು ಕಾರ್ಯಾಚರಣೆ ನಡೆಸಬೇಕಾಗಿತ್ತು. ಈ ಕಾರ್ಯಾಚರಣೆಯಿಂದ ಬಡವರ ಬದುಕು ಬೀದಿಗೆ ಬಿದ್ದಂತಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಮನೆ ಕೆಡವಿದವರಿಗೆ ಮಜ್ಜಿಗೆ!

ಮನೆ ತೆರವುಗೊಂಡು ಬೀದಿಗೆ ಬಿದ್ದರೂ, ಮನೆಗಳನ್ನು ತೆರವುಗೊಳಿಸಿ ಬಾಯಾರಿದ ಪೊಲೀಸರಿಗೆ ಮಜ್ಜಿಗೆ ನೀಡುವ ಮೂಲಕ ಸಂತ್ರಸ್ತೆ ಚಂದ್ರಮ್ಮ ಹಳ್ಳಿಯ ಮುಗ್ಧತೆಗೆ ಸಾಕ್ಷಿಯಾದರು.

ಕಾರ್ಯಾಚರಣೆ ಸಂದರ್ಭದಲ್ಲಿ ಮನೆಯಲ್ಲಿದ್ದ ಸಾಮಗ್ರಿಗಳನ್ನು ಸಾಗಿಸಲು ಅವಕಾಶ ನೀಡಲು ಪೊಲೀಸರಲ್ಲಿ ಮನವಿ ಮಾಡಿ, ಒಂದು ಗಂಟೆ ಕಾಲಾವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮನೆಯ ಸಾಮಗ್ರಿಗಳನ್ನು ರಸ್ತೆ ಬದಿಯಲ್ಲಿ ಪೇರಿಸಿಟ್ಟುಕೊಂಡರು.

ರಣ ಬಿಸಿಲಿನಲ್ಲಿ ಮನೆಗಳನ್ನು ತೆರವುಗೊಳಿಸಿದ ಪೊಲೀಸರಿಗೆ ಗುಂಡಾಲಿ ತುಂಬಾ ತಣ್ಣನೆ ಮಜ್ಜಿಗೆ ಮಾಡಿಕೊಟ್ಟು ಅವರ ಬಾಯಾರಿಕೆಯನ್ನು ನೀಗಿಸಿದರು. ‘ಮನೆಗಳನ್ನು ಒಡೆದು ಹಾಕಿದರೂ ಚಿಂತೆಯಿಲ್ಲ. ನಮ್ಮ ಮನೆಯ ದವಸಧಾನ್ಯ ಹಾಗೂ ಸರಂಜಾಮುಗಳನ್ನು ಸಾಗಿಸಲು ಅವಕಾಶ ನೀಡಿದ ಪೊಲೀಸರ ಹೊಟ್ಟೆ ತಣ್ಣಗಿರಲಿ ಎಂದು ಮಜ್ಜಿಗೆ ಹಂಚುತ್ತಿದ್ದೇನೆ’ ಎಂದ ಚಂದ್ರಮ್ಮ, ನೋವನ್ನು ಮರೆಮಾಚಿ ನಗೆ ಬೀರಿದರು.

‘ಪೊಲೀಸರಿಂದ ದೌರ್ಜನ್ಯ’

‘ಮಹಿಳೆಯರು, ವೃದ್ಧರು ಎಂಬುದನ್ನೂ ಗಮನಿಸದೇ ಪೊಲೀಸರು ಕಂಡಕಂಡವರ ಮೇಲೆ ಲಾಠಿ ಬೀಸಿದ್ದಾರೆ. ಮೀನುಖಂಡ, ತೊಡೆ ಬಾವು ಬರುವಂತೆ ಹೊಡೆದಿದ್ದಾರೆ. ಕೆಲವರಿಗೆ ರಕ್ತದ ಗಾಯಗಳಾಗಿವೆ. ಇಷ್ಟೊಂದು ದೌರ್ಜನ್ಯ ಮಾಡಿದವರ ಕೈಗೆ ನಾಗರ ಹಾವು ಕಡಿಯಲಿ’ ಎಂದು ಗ್ರಾಮದ ಗಿರಿಜಮ್ಮ, ಲಲಿತಮ್ಮ ಶಪಿಸಿದರು.

ಪ್ರತಿಕ್ರಿಯಿಸಿ (+)