ಶುಕ್ರವಾರ, ಡಿಸೆಂಬರ್ 6, 2019
26 °C

ಕಾಡಿನ ಕಿಡಿ, ಅವ್ಯವಸ್ಥೆಗೆ ಹಿಡಿದ ಕನ್ನಡಿ

Published:
Updated:
ಕಾಡಿನ ಕಿಡಿ, ಅವ್ಯವಸ್ಥೆಗೆ ಹಿಡಿದ ಕನ್ನಡಿ

ಬಂಡೀಪುರ ಅರಣ್ಯದ ಕಲ್ಕೆರೆ ವಲಯದಲ್ಲಿ ಕಾಡಿಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಲು ಹೋಗಿ ಅರಣ್ಯ ರಕ್ಷಕಮುರುಗಪ್ಪ ತಮ್ಮಗೋಳ ಅವರು ಬೆಂಕಿಗೆ ಆಹುತಿಯಾದದ್ದು ಮತ್ತು ಬಂಡೀಪುರ ಅರಣ್ಯಕ್ಕೆ ಬಿದ್ದ ಬೆಂಕಿಯಲ್ಲಿ ಎಷ್ಟೋ ‍ಪ್ರಾಣಿ–ಪಕ್ಷಿಗಳು ಸುಟ್ಟು ಕರಕಲಾದದ್ದು ಕಳೆದ ವರ್ಷ ಘಟಿಸಿದ ಎರಡು ದಾರುಣ ಪ್ರಸಂಗಗಳು.

ಹೀಗೆ ಕಾಳ್ಗಿಚ್ಚಿನ ರಭಸಕ್ಕೆ ಬೂದಿಯಾದ ಪ್ರಾಣಿ– ಪಕ್ಷಿಗಳಿಗೆ ಲೆಕ್ಕವೇ ಇಲ್ಲ. ಆ ಕಿಡಿ ನಿಜಕ್ಕೂ ಈ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಪ್ರತಿವರ್ಷ ಫೆಬ್ರುವರಿ– ಜೂನ್‍ ಅವಧಿಯಲ್ಲಿ ಕಾಳ್ಗಿಚ್ಚು ನಿರೀಕ್ಷಿತವೇ. ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಜ್ವಾಲೆಗೆ ಅದೆಷ್ಟೋ ಅರಣ್ಯ ಸಂಪತ್ತು ನಾಶವಾಗಿದೆ. ವನ್ಯ ಜೀವಿಗಳು, ಪಕ್ಷಿ ಸಂಕುಲ ಸಾವು–ನೋವಿಗೆ ಈಡಾಗಿವೆ. ಸುಟ್ಟ ಕಾಡು ಬೆಳೆಯಬೇಕೆಂದರೆ ಮತ್ತೆ ಅದೆಷ್ಟು

ವರ್ಷಗಳು ಬೇಕೋ!

2014ರಲ್ಲಿ ದೇಶದ 57,127 ಚದರ ಕಿ.ಮೀ. ಅರಣ್ಯ ಪ್ರದೇಶ ಕಾಳ್ಗಿಚ್ಚಿಗೆ ಆಹುತಿಯಾಗಿತ್ತು. 2015ರ ಭಾರತದ ಅರಣ್ಯದ ಪರಿಸ್ಥಿತಿ ವರದಿ ಪ್ರಕಾರ ದೇಶದ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ 7.94 ಲಕ್ಷ ಚದರ ಕಿ.ಮೀ. ಅದರಲ್ಲಿ ದಖ್ಖನ್ ವಲಯ, ಈಶಾನ್ಯ ಭಾಗ ಮತ್ತು ಪಶ್ಚಿಮಘಟ್ಟದ ಶೇ 7ರಷ್ಟು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ. 2016ನೇ ಸಾಲಿನಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ಮಣಿಪುರ, ಜಾರ್ಖಂಡ್, ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಅಪಾರ ಪ್ರಮಾಣದ ಅರಣ್ಯ ಹಾಗೂ ಜೀವ ವೈವಿಧ್ಯವನ್ನು ಕಳೆದುಕೊಂಡಿವೆ.

ಫೆಬ್ರುವರಿ– ಜೂನ್ ಸಮಯದಲ್ಲಿ ದೇಶದ 387ಕ್ಕೂ ಹೆಚ್ಚು ಜಿಲ್ಲೆಗಳ ವ್ಯಾಪ್ತಿಯ ಕಾಡು ಕಾಳ್ಗಿಚ್ಚಿನ ಅಪಾಯ ಎದುರಿಸುತ್ತಿದೆ ಎಂದು ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‍ನ ‘ಕರೆಂಟ್ ಸೈನ್ಸ್’ ನಿಯತಕಾಲಿಕೆಯು ವಿಶ್ಲೇಷಣಾ ವರದಿ ಪ್ರಕಟಿಸಿತ್ತು. ಹಲವು ಭಾಗಗಳಲ್ಲಿ ವಾತಾವರಣದ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು. ಬೇಸಿಗೆಯಲ್ಲಿ ನೀರಿನ ಅಂಶ ಕಡಿಮೆಯಾಗಿ ಎಲೆ ಉದುರುವ ಮರಗಳಿಂದ ಅತಿಹೆಚ್ಚು ಪ್ರಮಾಣದ ಎಲೆ ಭೂಮಿಗೆ ಬೀಳುತ್ತವೆ. ‘ಕಿಡಿ’ಗೇಡಿ ಅರಣ್ಯ ಭಕ್ಷಕರಿಗೆ ಇಷ್ಟು ಸಾಕು. ಪಾಪದ ಕಿಡಿ ವನ ಸಂಪತ್ತನ್ನೇ ಸುಟ್ಟುಹಾಕುತ್ತಿದೆ. 1988ರಲ್ಲಿ ಜಾರಿಗೆ ಬಂದಿರುವ ರಾಷ್ಟ್ರೀಯ ಅರಣ್ಯ ನೀತಿಯ ಅನ್ವಯ ಅರಣ್ಯ ಅತಿಕ್ರಮಣ, ಹುಲ್ಲು ಮೇಯಿಸುವುದು ಮತ್ತು ಕಾಡಿಗೆ ಬೆಂಕಿ ಹಾಕುವುದನ್ನು ನಿಷೇಧಿಸಲಾಗಿದೆ. ಆದರೆ ಇದರ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಕಳ್ಳರು ಕಾಡಿಗೆ ಬೆಂಕಿಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು ನಿಂತಿಲ್ಲ.

ಕಳೆದ ಬಾರಿ ಬಂಡೀಪುರ ಹಾಗೂ ನಾಗರಹೊಳೆ ಅಭಯಾರಣ್ಯಕ್ಕೆ ಬೆಂಕಿ ತಗುಲಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿತ್ತು. ಇದಕ್ಕೆ ಕಾರಣ ವಿಪತ್ತುಗಳನ್ನು ನಿರ್ವಹಿಸಲು ಸಿಬ್ಬಂದಿಯ ಕೊರತೆ. ‘ರಾಜ್ಯದ ಬಹುತೇಕ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಣಾ ಪ್ರದೇಶದಲ್ಲಿ

ಶೇ 50ರಷ್ಟು ಹುದ್ದೆಗಳು ಖಾಲಿ ಇವೆ’ ಎಂದು ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದರು. ಇದು ನಮ್ಮ ವ್ಯವಸ್ಥೆಯ ದರ್ಪಣ.

2014 ರಿಂದ 2017ರವರೆಗಿನ ಅವಧಿಯಲ್ಲಿ ಬಂಡೀಪುರ, ನಾಗರಹೊಳೆಯ ಅಭಯಾರಣ್ಯಗಳ

ವ್ಯಾಪ್ತಿಯ ಮಂಗಲ, ಮದ್ದೂರು, ಆನೆಕ್ಯಾಂಪ್, ಮೊಳೆಯೂರು, ಕಲ್ಕೆರೆ, ಎನ್. ಬೇಗೂರು, ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಒಟ್ಟು 2,700 ಎಕರೆಯಷ್ಟು ಅರಣ್ಯ ಸಂಪತ್ತು ಕಾಳ್ಗಿಚ್ಚಿಗೆ ನಾಶವಾಗಿತ್ತು ಎಂದು ಅರಣ್ಯ ಇಲಾಖೆ ವರದಿ ದೃಢಪಡಿಸುತ್ತದೆ.

ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಪಶ್ಚಿಮಘಟ್ಟ ಶ್ರೇಣಿಯ ಬೆಳಂದೂರು, ನಾಡವಳ್ಳಿ, ರಿಪ್ಪನ್‍ಪೇಟೆ ಸಮೀಪದ ಹರತಾಳು ಮೀಸಲು ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿ 100 ಹೆಕ್ಟೇರ್ ಕಾಡು ನಾಶವಾಗಿತ್ತು. ಬೀಟೆ, ಹೊನ್ನೆ, ತೇಗ ಸೇರಿದಂತೆ ಬೆಲೆಬಾಳುವ ಎರಡು ಸಾವಿರಕ್ಕೂ ಹೆಚ್ಚು ಮರಗಳು ಸುಟ್ಟು ಬೂದಿಯಾದವು. ಹಾಸನ ಜಿಲ್ಲೆಯ ಸಕಲೇಶಪುರದ ಕಂಚಿನಕುಮರಿಯ ಪಶ್ಚಿಮಘಟ್ಟ ಅರಣ್ಯಪ್ರದೇಶದಲ್ಲಿ ಬೆಂಕಿ ತಗುಲಿ ಸುಮಾರು 50 ಎಕರೆಯಷ್ಟು ಅರಣ್ಯ ಸಂಪತ್ತು ನಾಶವಾಗಿತ್ತು.

ಇನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರಾದ ಕಪ್ಪತಗುಡ್ಡಕ್ಕೆ ಕಾಳ್ಗಿಚ್ಚು ತಗುಲಿ 10 ಎಕರೆಗೂ ಹೆಚ್ಚು ಕಾಡು ನಾಶವಾಗಿತ್ತು. ಕಪ್ಪತಗುಡ್ಡದಲ್ಲಿ ಏಷ್ಯಾದಲ್ಲೇ ಎಲ್ಲೂ ಸಿಗದ ಅಪಾರ ಪ್ರಮಾಣದ ಔಷಧ ಗಿಡ ಮತ್ತು ಅಪರೂಪದ ಪ್ರಾಣಿ ಸಂಪತ್ತು ಇದೆ.

ಹಿಂದಿನ ಕಾಲದಲ್ಲಿ ಕಳ್ಳತನ ಮಾಡುವವರು ಊರಿನ ಹೊರಗೆ ಬಣವೆಗಳಿಗೆ ಬೆಂಕಿ ಹಾಕಿ, ಊರಿನ ಜನ ಬೆಂಕಿ ನಂದಿಸಲು ಹೋದಾಗ ಮನೆಗಳಿಗೆ ನುಗ್ಗಿ ಇದ್ದ ಬದ್ದ ಹಣ, ಆಭರಣ, ದವಸ-ಧಾನ್ಯಗಳನ್ನು ದೋಚುತ್ತಿದ್ದರಂತೆ. ಈಗ ಕಾಡ್ಗಳ್ಳರು ಮಾಡುತ್ತಿರುವುದು ಅದನ್ನೇ. ಅರಣ್ಯದ ಯಾವುದೋ ಒಂದು ಭಾಗದಲ್ಲಿ ಬೆಂಕಿ ಹಾಕುತ್ತಾರೆ. ಅರಣ್ಯ ಸಿಬ್ಬಂದಿ ನಂದಿಸಲು ಹೋಗುತ್ತಿದ್ದಂತೆ ತಮಗೆ ಬೇಕಾದ ಮರದ ದಿಮ್ಮಿ, ಪ್ರಾಣಿಗಳ ಚರ್ಮ, ಆನೆಗಳ ದಂತ, ಜಿಂಕೆಯ ಕೊಂಬುಗಳನ್ನು ಕಳ್ಳಸಾಗಣೆ ಮಾಡುತ್ತಾರೆ. ದುರ್ಗಮ ಪ್ರದೇಶಗಳಲ್ಲಿ ಗಾಂಜಾ ಬೆಳೆಯುವ ಕಳ್ಳರು ಅದನ್ನು ಸಾಗಿಸಲು ವಾಮಮಾರ್ಗ ಅನುಸರಿಸಲೇಬೇಕಾಗುತ್ತದೆ.

ಬುಡಕಟ್ಟುವಾಸಿಗಳಾದ ಸೋಲಿಗರು, ಕಾಡುಕುರುಬರು, ಜೇನುಕುರುಬರು ಕಾಡನ್ನೇ ಜೀವನಾಧಾರ ಆಗಿಸಿಕೊಂಡವರು. ಉಪಉತ್ಪನ್ನಗಳ ಮೂಲಕ ಬದುಕು ಸಾಗಿಸುತ್ತಿರುವ ಮಂದಿ. ಅವರು ಕಳ್ಳಬೇಟೆಗಾರರಲ್ಲ. ಅದರಾಚೆಗೆ ವಾಸಿಸುವ ಮಧ್ಯವರ್ತಿಗಳು, ಕಾಳಧನಿಕರು ಕಾಡನ್ನೇ ಬಂಡವಾಳ ಮಾಡಿಕೊಂಡು ಕಾಡು ಹಾಗೂ ವನ್ಯಜೀವಿಗಳಿಗೆ ಕಂಟಕವಾಗಿದ್ದಾರೆ.

ಅರಣ್ಯ ಸಂರಕ್ಷಣೆ ಆಗಬೇಕೆಂದರೆ ಸರ್ಕಾರ ಮೊದಲು ಗಿರಿಜನರಿಗೆ ಉದ್ಯೋಗ ಭದ್ರತೆ ಕೊಡಬೇಕು. ಇನ್ನು ಲಂಟಾನ ಎಂಬ ಕಳೆ ಇಡಿ ಕಾಡನ್ನೇ ಸುತ್ತುವರಿಯುತ್ತಿದೆ. ಅದನ್ನು ಕಿತ್ತುಹಾಕುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಾಣಿಪಕ್ಷಿಗಳಿಗೆ ತೊಂದರೆಯಾಗುತ್ತಿದೆ. ಲಂಟಾನ ಬೆಳೆ ಬೇಗ ಒಣಗುವುದರಿಂದ ಕಾಡಿಗೆ ಬೆಂಕಿ ಬಿದ್ದರೆ ಬೇಗೆ ಉರಿದು ಹೋಗುತ್ತದೆ. ಅರಣ್ಯಕ್ಕೆ ಬೆಂಕಿ ಹಚ್ಚುವ ‘ಕಿಡಿ’ಗೇಡಿಗಳನ್ನು ಪತ್ತೆಹಚ್ಚಲು ಅರಣ್ಯ ಇಲಾಖೆ ಸಿದ್ಧವಾಗಬೇಕಿದೆ. ಮೊನ್ನೆಯಷ್ಟೇ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬಿದ್ದ ಬೆಂಕಿ 10 ಎಕರೆ ಕಾಡನ್ನೇ ನಾಶಮಾಡಿದೆ.

ಈ ವರ್ಷ ಕಾಳ್ಗಿಚ್ಚು ತಪ್ಪಿಸಲು ಸರ್ಕಾರ ಈಗಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ‘ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡು’ವ ಬದಲು ಈಗಲೇ ಯೋಜನೆ ರೂಪಿಸಿಕೊಂಡರೆ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು.

-ಎಸ್.ಎಂ. ಸೋಮನಗೌಡ

ಪ್ರತಿಕ್ರಿಯಿಸಿ (+)