ಬುಧವಾರ, ಡಿಸೆಂಬರ್ 11, 2019
21 °C

ಪತನದ ಹಾದಿಯಲ್ಲಿ ಷೇರುಪೇಟೆ ಎಲ್‌ಟಿಸಿಜಿ ತೆರಿಗೆ ಪರಾಮರ್ಶೆ ಅಗತ್ಯ

Published:
Updated:
ಪತನದ ಹಾದಿಯಲ್ಲಿ ಷೇರುಪೇಟೆ ಎಲ್‌ಟಿಸಿಜಿ ತೆರಿಗೆ ಪರಾಮರ್ಶೆ ಅಗತ್ಯ

ಅರ್ಥ ವ್ಯವಸ್ಥೆಯ ನಾಡಿಮಿಡಿತ ಎಂದೇ ಪರಿಗಣಿಸಿರುವ ದೇಶಿ ಷೇರುಪೇಟೆಯು ಬಜೆಟ್‌ ಮಂಡನೆ ನಂತರ ನಿರಂತರವಾಗಿ ಪತನದ ಹಾದಿಯಲ್ಲಿಯೇ ಸಾಗಿರುವುದು ಆತಂಕ ಮೂಡಿಸಿದೆ. ಬಜೆಟ್‌ನಲ್ಲಿನ ತೆರಿಗೆ ಪ್ರಸ್ತಾವಗಳು ಹೂಡಿಕೆದಾರರ ಉತ್ಸಾಹ ಉಡುಗಿಸಿ, ತಲ್ಲಣ ಮೂಡಿಸಿವೆ. ಬಜೆಟ್‌ ಪ್ರಸ್ತಾವಗಳ ಜತೆಗೆ ಜಾಗತಿಕ ವಿದ್ಯಮಾನಗಳ ಪ್ರಭಾವವೂ ತಳಕು ಹಾಕಿಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್‌, 2017–18ನೇ ಸಾಲಿನ ಆರ್ಥಿಕ ವೃದ್ಧಿ ದರವನ್ನು ಶೇ 6.6ಕ್ಕೆ ತಗ್ಗಿಸಿದೆ. ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಇದು ಕೂಡ ಪೇಟೆಯಲ್ಲಿ ನಿರುತ್ಸಾಹಕ್ಕೆ ಕಾರಣವಾಗಿದೆ. ಇವೆಲ್ಲವುಗಳ ಒಟ್ಟಾರೆ ಫಲವಾಗಿ ಬಂಡವಾಳ ಪೇಟೆಯಲ್ಲಿನ ವಹಿವಾಟು ಮಹಾಕುಸಿತದತ್ತ ಸಾಗಿದೆ. ಆರು ವಹಿವಾಟಿನ ದಿನಗಳಲ್ಲಿ ಸಂವೇದಿ ಸೂಚ್ಯಂಕವು 2,164 ಅಂಶಗಳಷ್ಟು ಕುಸಿತ ಕಂಡಿದೆ. ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 10 ಲಕ್ಷ ಕೋಟಿಗಳಷ್ಟು ಕೊಚ್ಚಿಕೊಂಡು ಹೋಗಿದೆ. ಸಂವೇದಿ ಸೂಚ್ಯಂಕವು ಜನವರಿ ತಿಂಗಳಲ್ಲಿ ದಿನಕ್ಕೊಂದು ಏರುಗತಿಯ ದಾಖಲೆ ನಿರ್ಮಿಸುತ್ತ ಅಚ್ಚರಿಗೆ ಕಾರಣವಾಗಿತ್ತು. ಈಗ ಪ್ರಪಾತದತ್ತ ಸಾಗಿರುವುದು ಕಳವಳಕಾರಿ ವಿದ್ಯಮಾನವಾಗಿದೆ.

ಷೇರು ಮತ್ತು ಷೇರುಗಳಲ್ಲಿನ ಹೂಡಿಕೆಗೆ ಸಂಬಂಧಿಸಿದ ಮ್ಯೂಚುವಲ್‌ ಫಂಡ್‌ಗಳ ದೀರ್ಘಾವಧಿ ಲಾಭದ ಮೇಲೆ ಶೇ 10ರಷ್ಟು ತೆರಿಗೆ (ಎಲ್‌ಟಿಸಿಜಿ) ವಿಧಿಸುವ ಸರ್ಕಾರದ ನಡೆಗೆ ಷೇರುಪೇಟೆ ನಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ವಿತ್ತೀಯ ಕೊರತೆ ತುಂಬಿಕೊಳ್ಳುವುದಕ್ಕಾಗಿ ಷೇರು ಹೂಡಿಕೆದಾರರಿಂದ ಹೆಚ್ಚುವರಿ ವರಮಾನ ಸಂಗ್ರಹಿಸಲು ಸರ್ಕಾರ ಈ ಅವಸರದ ನಿರ್ಧಾರಕ್ಕೆ ಬಂದಿದೆ. 2004ರಲ್ಲಿ ಕೈಬಿಟ್ಟಿದ್ದ ಈ ತೆರಿಗೆಯನ್ನು ಮತ್ತೆ ಜಾರಿಗೆ ತಂದಿರುವುದು ಹೂಡಿಕೆದಾರರ ಪಾಲಿಗೆ ಅಪಥ್ಯವಾಗಿದೆ. ಷೇರು ಮತ್ತು ಇತರ ಹೂಡಿಕೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿದ್ದ ತಾರತಮ್ಯ ನಿವಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಇದರಿಂದ ವಹಿವಾಟಿನ ಮೇಲೆ ಕೆಲಮಟ್ಟಿಗೆ ಸಕಾರಾತ್ಮಕ ಪರಿಣಾಮಗಳೂ ಕಂಡು ಬರಲಿವೆ. ಸಣ್ಣ ಹೂಡಿಕೆದಾರರಿಗೆ ಇದರ ಬಿಸಿ ಅಷ್ಟಾಗಿ ತಟ್ಟುವುದಿಲ್ಲ ಎನ್ನುವುದು ನಿಜ. ಆದರೆ, ಮಧ್ಯಮ ವರ್ಗದ ಹೂಡಿಕೆದಾರರ ವರಮಾನ ನಷ್ಟವಾಗಲಿದೆ. ಜತೆಗೆ, ವಿದೇಶಿ ಹೂಡಿಕೆದಾರರಿಗೆ ತಪ್ಪು ಸಂದೇಶವನ್ನೂ ನೀಡಲಿದೆ. ಷೇರುಪೇಟೆ ಉತ್ತುಂಗಕ್ಕೆ ಏರಲು ಈ ಹೂಡಿಕೆದಾರರ ಪಾಲು ಗಮನಾರ್ಹವಾಗಿದೆ. ಎಲ್‌ಟಿಸಿಜಿ ಕಾರಣಕ್ಕೆ ವಿದೇಶಿ ಹೂಡಿಕೆಯ ಹೊರ ಹರಿವು ಆರಂಭಗೊಂಡರೆ ಪೇಟೆ ಇನ್ನಷ್ಟು ಕುಸಿತದತ್ತ ಸಾಗುವ ಅಪಾಯ

ಅಲ್ಲಗಳೆಯುವಂತಿಲ್ಲ.

ಈ ದೀರ್ಘಾವಧಿ ಬಂಡವಾಳ ಲಾಭವು ಹೂಡಿಕೆದಾರರ ಪಾಲಿಗೆ ಹೆಚ್ಚಿನ ಶ್ರಮ ಇಲ್ಲದೆ ದಕ್ಕಿರುತ್ತದೆ ಎನ್ನುವುದೂ ನಿಜ. ಆದರೆ, ಇಂತಹ ಹೂಡಿಕೆಗಳಲ್ಲಿ ನಷ್ಟದ ಸಾಧ್ಯತೆಯೂ ಇದ್ದೇ ಇರುತ್ತದೆ. ಜನರು ತಮ್ಮ ಉಳಿತಾಯವನ್ನು ಷೇರುಪೇಟೆಯಲ್ಲಿ ತೊಡಗಿಸುವುದನ್ನು ಉತ್ತೇಜಿಸಲು ಮತ್ತು ಉತ್ಪಾದನಾ ಉದ್ದೇಶಕ್ಕೆ ಸದ್ಬಳಕೆ ಆಗಬೇಕೆಂಬ ಸದುದ್ದೇಶದಿಂದ ಇದನ್ನು ಕೈಬಿಡಲಾಗಿತ್ತು. ಈಗ ಈ ಗುಮ್ಮ ಪೇಟೆಗೆ ಮರಳಿ ಬರುತ್ತಿರುವುದು ಪೇಟೆಯಲ್ಲಿ ಕಂಪನ ಮೂಡಿಸಿದೆ. ಪೇಟೆಯಲ್ಲಿ ಖಾಸಗಿ ಹೂಡಿಕೆ ಕಡಿಮೆ ಆಗುವುದು ಎಂದರೆ ದೇಶದ ಆರ್ಥಿಕತೆಯಲ್ಲಿನ ನಂಬಿಕೆಗೆ ಧಕ್ಕೆ ಒದಗಿದೆ ಎಂದೂ ಅರ್ಥವಾಗುತ್ತದೆ. ಇದು ಉಳಿತಾಯ ಪ್ರವೃತ್ತಿಗೂ ಅಡ್ಡಿಪಡಿಸುತ್ತದೆ.

ಉಳ್ಳವರಿಂದ ತೆರಿಗೆ ವಸೂಲಿ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಈ ತೆರಿಗೆ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ತನ್ನ ನಿಲುವಿಗೆ ಅಂಟಿಕೊಂಡಿದೆ. ಆರ್ಥಿಕತೆಯು ಹಳಿ ತಪ್ಪಬಾರದು, ದೇಶಿ ಮತ್ತು ವಿದೇಶಿ ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಯಾಗಬೇಕು ಹಾಗೂ ಷೇರುಪೇಟೆಯ ಬೆಳವಣಿಗೆ ಆಗಬೇಕು ಎನ್ನುವುದಾದರೆ ಇಂತಹ ಹಟಮಾರಿ ಧೋರಣೆ ಬಿಡಬೇಕು. ಷೇರುಪೇಟೆ ಇನ್ನಷ್ಟು ಉತ್ತುಂಗಕ್ಕೆ ಏರಿ ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಬೇಕೆಂದರೆ ಸರ್ಕಾರ ಈ ತೆರಿಗೆ ವಿಧಿಸುವ ನಿರ್ಧಾರ ಕೈಬಿಡುವುದೇ ಒಳಿತು. ವರಮಾನ ಸಂಗ್ರಹಿಸಲು ಈ ತೆರಿಗೆ ಅನಿವಾರ್ಯವಾಗಿದ್ದರೆ ದರವನ್ನಾದರೂ ತಗ್ಗಿಸಬಹುದು. ಜತೆಗೆ ಷೇರು ವಹಿವಾಟು ತೆರಿಗೆಯನ್ನೂ (ಎಸ್‌ಟಿಟಿ) ಕೈಬಿಡುವುದರಲ್ಲಿಯೇ ದೇಶಿ ಅರ್ಥ ವ್ಯವಸ್ಥೆಯ ಹಿತ ಅಡಗಿದೆ.

ಪ್ರತಿಕ್ರಿಯಿಸಿ (+)