ಬುಧವಾರ, ಡಿಸೆಂಬರ್ 11, 2019
16 °C

ಜನಪರ ಸರ್ಕಾರಕ್ಕೆ ಒತ್ತು

Published:
Updated:
ಜನಪರ ಸರ್ಕಾರಕ್ಕೆ ಒತ್ತು

ಪ್ರಜಾವಾಣಿ ಕೇಳಿದ ಆರು ಪ್ರಶ್ನೆಗಳು

* ನಿಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಯಾವ ವಿಷಯಕ್ಕೆ ಆದ್ಯತೆ ದೊರೆಯಲಿದೆ?

*ಲೋಕಾಯುಕ್ತ ಬಲಪಡಿಸುವ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗುವುದೇ?

*ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆ ಭರವಸೆ ಕೊಡುತ್ತೀರಾ?

* ಹಿಂದಿನ ಪ್ರಣಾಳಿಕೆಯ ಎಷ್ಟು ಅಂಶಗಳು ಈ ಪ್ರಣಾಳಿಕೆಯಲ್ಲಿ ಪುನರಾವರ್ತನೆ ಆಗಲಿವೆ?

* ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಬಗ್ಗೆ ನಿಮ್ಮ ಪಕ್ಷದ ನಿಲುವೇನು?

* ಕರಾವಳಿಯಲ್ಲಿ ನಡೆಯುತ್ತಿರುವ ಕೋಮು ರಾಜಕಾರಣದ ಬಗ್ಗೆ ಏನು ಹೇಳುತ್ತೀರಿ?

===========

–ರಮೇಶ್‌ ಬಾಬು, ಜೆಡಿಎಸ್‌ ವಕ್ತಾರ

*ಅಂಗನವಾಡಿ ಕಾರ್ಯಕರ್ತೆಯರ ಕಾಯಂ ಮತ್ತು ಗೌರವ ಧನ ₹ 10,000ಕ್ಕೆ ಹೆಚ್ಚಳ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಐದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭ. ಪರಿಸರಕ್ಕೆ ಹಾನಿ ಮಾಡುವ ಗಣಿಗಾರಿಕೆ ನಿಷೇಧದಂಥ ಕಾರ್ಯಕ್ರಮಗಳು ಜಾರಿಗೆ ಬರಲಿವೆ.

* ಲೋಕಾಯುಕ್ತ ಸಂಸ್ಥೆಯನ್ನು ಪುನರ್‌ರಚನೆ ಮಾಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಸಂಸ್ಥೆಯನ್ನು ದುರ್ಬಲಗೊಳಿಸಿತ್ತು. ಈಗಿರುವ ಕಾಯ್ದೆಗೆ ತಿದ್ದುಪಡಿ ತಂದು ಹಳೆಯ ಕಾಯ್ದೆಯನ್ನೇ ಉಳಿಸಿಕೊಳ್ಳಲಾಗುವುದು. ಸದ್ಯದ ಸ್ವರೂಪದಲ್ಲಿ ಲೋಕಾಯುಕ್ತ ಇದ್ದರೂ ಒಂದೇ, ಬಿಟ್ಟರೂ ಒಂದೇ.

*‍ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶವಿದೆ. ಈ ಮಾತನ್ನು ನಾವು ರಾಜಕೀಯ ಲಾಭವನ್ನು ಗಮನದಲ್ಲಿಟ್ಟುಕೊಂಡು ಹೇಳುತ್ತಿಲ್ಲ. ಹಿಂದುಳಿದವರಿಗೆ ಒಳಮೀಸಲಾತಿ ನೀಡುವ ಸಂಬಂಧ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ಸಂಕಲ್ಪ ಮಾಡಿದ್ದರು. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದ್ದರು.

*ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಆಕ್ರೋಶವಿದೆ. ಜನರ ನಾಡಿ ಮಿಡಿತ ಏನು ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತು. ರಾಜ್ಯ ಸರ್ಕಾರದ ಹಲವು ಹಗರಣಗಳನ್ನು ಎಚ್‌.ಡಿ.ಕುಮಾರಸ್ವಾಮಿಯೇ ಬಯಲಿಗೆಳೆದಿದ್ದಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಂತ– ಹಂತವಾಗಿ ಭ್ರಷ್ಟಾಚಾರ ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಾಗೃತಿ ದಳಗಳನ್ನು ರಚಿಸಲಾಗುವುದು.

* ಮುಂಬೈ– ಕರ್ನಾಟಕ ಭಾಗಕ್ಕೆ ಕುಡಿಯುವ ನೀರು ಒದಗಿಸುವುದಕ್ಕಾಗಿ ಮಹದಾಯಿ ಯೋಜನೆಯನ್ನು ಜಾರಿಗೆ ತರುತ್ತೇವೆ. ಈ ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಕ್ಕೆ ಮನವಿ ಮಾಡುತ್ತೇವೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಮಾತುಕತೆ ಮೂಲಕವೇ ವಿವಾದ ಇತ್ಯರ್ಥಪಡಿಸಲು ಒತ್ತು ನೀಡುತ್ತೇವೆ.

* ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಆ ಸಮಾಜವೇ ಮಾತುಕತೆ ಮೂಲಕ ಒಂದು ತೀರ್ಮಾನಕ್ಕೆ ಬರಬೇಕು. ಲಿಂಗಾಯತ ಮತ್ತು ವೀರಶೈವ ಮಠಾಧೀಶರು ಒಟ್ಟಿಗೆ ಸೇರಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೂ ಬದ್ಧರಾಗುತ್ತೇವೆ.

* ಕೋಮುವಾದ ಹುಟ್ಟುಹಾಕಿದ ಕೀರ್ತಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಲ್ಲಬೇಕು. ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಹುಬ್ಬಳ್ಳಿ ಈದ್ಗಾ ಸಮಸ್ಯೆ ಬಗೆಹರಿಸಿದ್ದರು. ಈದ್ಗಾ ವಿಷಯವನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದವು. ಗೌಡರ ಅವಧಿಯಲ್ಲಿ ಕೋಮು ಗಲಭೆಗಳು ನಡೆದಿರಲಿಲ್ಲ. ಮುಂದೆಯೂ ನಮ್ಮ ಸರ್ಕಾರ ಬಂದರೆ ಕೋಮು ಗಲಭೆಗೆ ಅವಕಾಶ ನೀಡದೆ, ಅಲ್ಪಸಂಖ್ಯಾತರ ಹಿತರಕ್ಷಣೆ ಮಾಡುತ್ತೇವೆ.

ಇನ್ನಷ್ಟೂ ಓದು: 

ಸರ್ವರ ಅಭ್ಯುದಯವೇ ಕಾಂಗ್ರೆಸ್‌ ಧ್ಯೇಯ –ವೀರಪ್ಪ ಮೊಯಿಲಿ, ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ

ಒಡೆದಾಳುವ ಸಂಸ್ಕೃತಿಗೆ ತಿಲಾಂಜಲಿ –ಎಸ್. ಸುರೇಶ್ ಕುಮಾರ್, ಬಿಜೆಪಿ ಪ್ರಣಾಳಿಕೆ ಸಮಿತಿ ಮುಖ್ಯಸ್ಥ

ಪ್ರತಿಕ್ರಿಯಿಸಿ (+)