ಸೋಮವಾರ, ಡಿಸೆಂಬರ್ 9, 2019
24 °C

ರಾಜ್ಯದ ವಿವಿಧ ಕಡೆ ಮಳೆ ಸಿಂಚನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯದ ವಿವಿಧ ಕಡೆ ಮಳೆ ಸಿಂಚನ

ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಉಡುಪಿ, ಕಲಬುರ್ಗಿ, ಗದಗ, ಕಾರವಾರ, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಕೋಲಾರ, ಚಿತ್ರದುರ್ಗ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ಜಿಲ್ಲೆಗಳಲ್ಲಿ ಮಳೆ ಬಿದ್ದಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುರುವಾರ ಗುಡುಗುಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಭಾಗದಿಂದ ಬರುತ್ತಿರುವ ಚಳಿಗಾಲದ ಮಾರುತಗಳು ಮತ್ತು ದಕ್ಷಿಣದಿಂದ ಬೀಸುತ್ತಿರುವ ತೇವಾಂಶ ಭರಿತ ಮಾರುತಗಳ ಸಂಘರ್ಷದಿಂದ ಅಕಾಲಿಕ ಮಳೆ ಕಾಣಿಸಿಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ವಿಭಾಗದ ಹಂಗಾಮಿ ನಿರ್ದೇಶಕ ಸುಂದರ ಎಂ.ಮೇತ್ರಿ ತಿಳಿಸಿದರು.

ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ತಮಿಳುನಾಡಿಗೆ ಹೊಂದಿಕೊಂಡಂತೆ ಹಾಗೂ ಅರಬ್ಬಿ ಸಮುದ್ರದ ರಾಜ್ಯದ ಕರಾವಳಿ ಭಾಗದಲ್ಲಿ ಬುಧವಾರ ವಾಯುಭಾರ ಕುಸಿತ ಕಾಣಿಸಿಕೊಂಡಿದೆ. ಅಲ್ಲದೇ, ಗೋವಾದ ಕೊಂಕಣ ತೀರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವುದರಿಂದ ಉತ್ತರ ಒಳನಾಡಿನ ಪ್ರದೇಶಗಳಲ್ಲಿಯೂ ಮೋಡ ಕವಿದ ವಾತಾವರಣ ಉಂಟಾಗಿದೆ. ಇಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌. ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಳಿಗಾಲದಲ್ಲಿ ಮಳೆ ಸುರಿಯುವುದು ಅಪರೂಪದ ಸಂಗತಿಯೇನಲ್ಲ. ಐದು ವರ್ಷಕ್ಕೊಮ್ಮೆ ಇಂತಹ ವಿದ್ಯಮಾನ ನಡೆಯುತ್ತಿರುತ್ತದೆ. ರಾಜ್ಯದಲ್ಲಿ ಫೆಬ್ರುವರಿಯಲ್ಲಿ 2 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಕೆಲವೊಮ್ಮೆ ಜನವರಿಯಲ್ಲಿ ಅಕಾಲಿಕ ಮಳೆಯಾಗುತ್ತದೆ’ ಎಂದರು.

‘ಈಗ ಮಳೆಯಾಗಿರುವುದರಿಂದ ಕನಿಷ್ಠ ಉಷ್ಣಾಂಶದಲ್ಲಿ 2 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗುತ್ತದೆ. ಮೋಡ ಕವಿದ ವಾತಾವರಣ ಇರುವುದರಿಂದ ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆಯಾಗುತ್ತದೆ. ಇದು ಚಳಿಗಾಲ ಮುಗಿಯುವ ಮುನ್ಸೂಚನೆ’ ಎಂದು ವಿವರಿಸಿದರು.

‘ವಾತಾವರಣದಲ್ಲಿ ಒತ್ತಡದ ವ್ಯತ್ಯಾಸದಿಂದ ಈ ಅಕಾಲಿಕ ಮಳೆ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಇದು ಬಹಳ ದಿನ ಇರುವುದಿಲ್ಲ. ಒಂದೊಮ್ಮೆ, ತುಂಬಾ ದಿನ ಕಾಣಿಸಿಕೊಂಡರೆ ಬೇಸಿಗೆ ಮಳೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇರುತ್ತದೆ. ಆದರೆ, ಈಗ ಆ ರೀತಿಯ ವಾತಾವರಣ ಇಲ್ಲ’ ಎಂದು ಹವಾಮಾನ ತಜ್ಞ ಎಂ.ಬಿ. ರಾಜೇಗೌಡ ಹೇಳಿದರು.

1901ರಲ್ಲಿ ಫೆಬ್ರುವರಿಯ ದಾಖಲೆ ಮಳೆ

ಕಳೆದ ಮೂರು ವರ್ಷಗಳಲ್ಲಿ ಫೆಬ್ರುವರಿಯಲ್ಲಿ ಮಳೆಯಾಗಿಲ್ಲ. ಹಾಗಾಗಿ ಇದು ಅಪರೂಪ ಎನಿಸುತ್ತದೆ. 2014ರ ಫೆಬ್ರುವರಿಯಲ್ಲಿ 0.2 ಮಿ.ಮೀ ಮಳೆಯಾಗಿತ್ತು. ಬೆಂಗಳೂರಿನಲ್ಲಿ 1901ರ ಫೆ.22ರಂದು 67.3 ಮಿ.ಮೀ ಮಳೆಯಾಗಿದ್ದು ಇದುವರೆಗಿನ ದಾಖಲೆ. ನಗರದಲ್ಲಿ ಬುಧವಾರ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ 20.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಪ್ರತಿಕ್ರಿಯಿಸಿ (+)