ಶುಕ್ರವಾರ, ಡಿಸೆಂಬರ್ 13, 2019
27 °C

‘ನಮ್ಮೂರ ಶಾಲೆಗೆ ಮೂಲಸೌಕರ್ಯ ಕಲ್ಪಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಮ್ಮೂರ ಶಾಲೆಗೆ ಮೂಲಸೌಕರ್ಯ ಕಲ್ಪಿಸಿ’

ಬೆಂಗಳೂರು: ‘ನಮ್ಮ ಶಾಲೆಗೆ ಕಂಪ್ಯೂಟರ್‌ ಬಂದು ಒಂದು ವರ್ಷ ಆಗಿದೆ. ಅದನ್ನು ಒಮ್ಮೆಯೂ ಬಳಸಿಲ್ಲ. ಉಪಯೋಗಿಸಲು ಬರಲ್ಲ ಅಂತ ಅಲ್ಲ, ನಮ್ಮ ಶಾಲೆಯಲ್ಲಿ ವಿದ್ಯುತ್ತೇ ಇಲ್ಲ ಅದಕ್ಕೆ. ಕಿಟಕಿಗಳ ಮೂಲಕ ತರಗತಿ ಒಳಗೆ ಹರಿಯುವ ಬೆಳಕಿನಲ್ಲಿಯೇ ಪಾಠ ಸಾಗುತ್ತದೆ’

–ಹೀಗೆ ಶಾಲೆಯಲ್ಲಿನ ಅವ್ಯವಸ್ಥೆ ಬಗ್ಗೆ ಐದನೇ ತರಗತಿ ವಿದ್ಯಾರ್ಥಿ ಸಂಜನಾ ವಿವರಿಸಿದಳು. 

ದಾಸನಪುರ ಹೋಬಳಿಯ ಗೋವಿಂದಪುರದಲ್ಲಿರುವ ‘ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಗೆ ಮೂಲಸೌಲಭ್ಯವನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

1ರಿಂದ 5ನೇ ತರಗತಿವರೆಗೆ ಹದಿನಾಲ್ಕು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 1998ರಲ್ಲಿ ಈ ಶಾಲೆ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. ಮಧ್ಯಾಹ್ನದ ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ಮನೆಗಳಿಂದ ನೀರು ತರುತ್ತಾರೆ. ಶಾಲೆಯ ಮೇಲ್ಛಾವಣಿಯೂ ಸಂಪೂರ್ಣವಾಗಿ ಹಾಳಾಗಿದ್ದು, ಕುಸಿದು ಬೀಳುವ ಹಂತದಲ್ಲಿದೆ. ವಿದ್ಯಾರ್ಥಿಗಳು ಜೀವ ಭಯದಲ್ಲಿ ಪಾಠ ಕೇಳುವಂತಹ ಪರಿಸ್ಥಿತಿ ಇದೆ.

‘ಸ್ವಚ್ಛಭಾರತ ಯೋಜನೆಯಲ್ಲಿ ಮನೆಗಳಿಗೆ ಶೌಚಾಲಯವನ್ನು ಕಟ್ಟಿಸಿಕೊಡಲಾಗುತ್ತಿದೆ. ಆದರೆ, ಸರ್ಕಾರಿ ಶಾಲೆಯಲ್ಲಿಯೇ ಶೌಚಾಲಯದ ವ್ಯವಸ್ಥೆ ಮಾಡಿಲ್ಲ. ವಿದ್ಯಾರ್ಥಿಗಳು ಬಯಲನ್ನು ಆಶ್ರಯಿಸಿದ್ದಾರೆ. ಆದರೆ, ವಿದ್ಯಾರ್ಥಿನಿಯರ ಪಾಡು ಹೇಳತೀರದು. ಶಾಲೆಯ ಸಮೀಪದ ಮನೆಗಳ ಶೌಚಾಲಯಕ್ಕೆ ಹೋಗುತ್ತಿದ್ದಾರೆ’ ಎಂದು ಸ್ಥಳೀಯರು ಹೇಳಿದರು.

‘ಈ ಬಗ್ಗೆ ಗ್ರಾಮ ಪಂಚಾಯಿತಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟರೂ ಯಾವ ಪ್ರಯೋಜನವಾಗಿಲ್ಲ’ ಎಂದು ಪೋಷಕರು ಕಳವಳ ವ್ಯಕ್ತಪಡಿಸಿದರು.

‘ಮುದ್ದು ಮಲ್ಲಯ್ಯ ಎನ್ನುವರು ಶಾಲೆಗಾಗಿ ಜಾಗವನ್ನು ನೀಡಿದ್ದಾರೆ. ಆದರೆ, ಅದು ಈಗ ಒತ್ತುವರಿಯಾಗಿದೆ. ಜಾಗಕ್ಕೆ ಸಂಬಂಧಪಟ್ಟ ದಾಖಲೆಗಳು ಶಾಲೆಯಲ್ಲಿವೆ. ಶಾಲೆಯ ಜಾಗವನ್ನು ಬಿಡಿಸಿ, ಸುತ್ತಲು ಗೋಡೆ ನಿರ್ಮಿಸಿ ಕೊಡಬೇಕು. ಇಲ್ಲವಾದ್ದಲ್ಲಿ ಶಾಲೆಯ ಜಾಗ ಸಂಪೂರ್ಣವಾಗಿ ಒತ್ತುವರಿಯಾಗುತ್ತದೆ’ ಎಂದು ಗ್ರಾಮದ ನಿವಾಸಿ ಮಲ್ಲಣ್ಣ ಒತ್ತಾಯಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಜಿ.ಅರ್.ಬಸವರಾಜು, ‘ಬೆಂಗಳೂರು ಉತ್ತರ ವಲಯದಲ್ಲಿರುವ ಪೊಲೀಸ್ ವಸತಿಗೃಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುರಸ್ತಿಗೆ ₹10 ಲಕ್ಷಗಳನ್ನು ನೀಡಲಾಗಿತ್ತು. ಅಲ್ಲಿ ಉಳಿದ ₹7.4 ಲಕ್ಷ ಹಣದಲ್ಲಿ ಗೋವಿಂದ ಪುರ ಶಾಲೆಯ ಕಟ್ಟಡ ದುರಸ್ತಿಗೆ ಬಳಸಲು ಆದೇಶ ನೀಡಿದ್ದೇನೆ. ಬಹುಬೇಗನೆ ಕಟ್ಟಡ ದುರಸ್ತಿ ಕೆಲಸಗಳು ನಡೆಯುತ್ತವೆ’ ಎಂದು ಹೇಳಿದರು.

ವರ್ಷವಾದರೂ ಬಾರದ ವಿದ್ಯಾರ್ಥಿ ವೇತನ

ಈ ಶಾಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೂರು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ 2016–17ನೇ ಸಾಲಿನ  ವಿದ್ಯಾರ್ಥಿ ವೇತನ ವರ್ಷವಾದರೂ ಕೈಸೇರಿಲ್ಲ. ‘ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ವರ್ಷದಿಂದ ಮನವಿ ಮಾಡುತ್ತಿದ್ದೇವೆ. ಏನೂ ಪ್ರಯೋಜನವಾಗಿಲ್ಲ’ ಎಂದು ಶಿಕ್ಷಕಿಯೊಬ್ಬರು ಅಸಮಧಾನ ವ್ಯಕ್ತಪಡಿಸಿದರು.

–ನಿರ್ವಾಣ ಸಿದ್ದಯ್ಯ

ಪ್ರತಿಕ್ರಿಯಿಸಿ (+)