ಮಂಗಳವಾರ, ಡಿಸೆಂಬರ್ 10, 2019
19 °C

ಅಯೋಗ್ಯನ ಕಸರತ್ತು!

Published:
Updated:
ಅಯೋಗ್ಯನ ಕಸರತ್ತು!

ಹುರಿಗೊಂಡ ದೇಹ, ಮೈ ಒದ್ದೆಯಾಗಿಸಿ, ಹೊಳೆಯುತ್ತ ಹರಿಯುತ್ತಿರುವ ಬೆವರು, ಗೆರೆ ಎಳೆದಂತೆ ಟ್ರಿಮ್‌ ಮಾಡಿದ ಗಡ್ಡ, ಕೆಂಡವುಗುಳುವ ಕಣ್ಣುಗಳು... ಇದು ನೀನಾಸಂ ಸತೀಶ್‌ ಹೊಸ ಅವತಾರ. ‘ಅಯೋಗ್ಯ’ನಾಗಲು ಇಷ್ಟೊಂದು ಕಸರತ್ತು ಮಾಡುತ್ತಿದ್ದಾರೆ ಸತೀಶ್‌! ಯೋಗ್ಯತೆ ಗಿಟ್ಟಿಸಿಕೊಳ್ಳುವುದಕ್ಕಾಗಿ ಶ್ರಮಪಡುವುದು ನೋಡಿದ್ದೇವೆ, ಇದೇನು ಅಯೋಗ್ಯನಾಗಲೂ ಕಸರತ್ತು ಮಾಡಬೇಕಾ ಎಂದು ಕೇಳಬೇಡಿ. ಮಹೇಶ್‌ ನಿರ್ದೇಶನದ ‘ಅಯೋಗ್ಯ’ ಸಿನಿಮಾದ ಪಾತ್ರಕ್ಕಾಗಿ ಸತೀಶ್‌ ಹೀಗೆ ದೇಹವನ್ನು ಜಿಮ್‌ನಲ್ಲಿ ದಂಡಿಸುತ್ತಿದ್ದಾರೆ.

‘ಟೈಗರ್‌ ಗಲ್ಲಿ’ಯಲ್ಲಿ ಆ್ಯಕ್ಷನ್‌ ಹೀರೊ ಆಗಿ ಗೆಲ್ಲಲು ವಿಫಲರಾಗಿದ್ದ ಸತೀಶ್‌ ಅವರೀಗ ಇನ್ನಷ್ಟು ಸಿದ್ಧತೆಯೊಂದಿಗೆ ಮರಳುತ್ತಿದ್ದಾರೆ. ಹಾಗೆಂದು ‘ಅಯೋಗ್ಯ’ ಆ್ಯಕ್ಷನ್‌ ಒಂದನ್ನೇ ಇಟ್ಟುಕೊಂಡು ಬರುತ್ತಿರುವ ಚಿತ್ರವಲ್ಲ. ‘ಈ ಚಿತ್ರ ನನ್ನ ನಟನಾವೃತ್ತಿಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುತ್ತದೆ ಎಂಬ ನಂಬಿಕೆ ಇದೆ. ಆ್ಯಕ್ಷನ್‌, ಹಾಸ್ಯ, ಪ್ರೇಮ, ನೃತ್ಯ ಎಲ್ಲವೂ ಈ ಚಿತ್ರದಲ್ಲಿದೆ. ಹಾಗೆಯೇ ಮೊದಲ ಬಾರಿಗೆ ರವಿಶಂಕರ್‌ ಎದುರು ನಟಿಸುತ್ತಿದ್ದೇನೆ. ಅವರ ಅಷ್ಟೆತ್ತರದ ಆಳ್ತನ, ಖಡಕ್‌ ಧ್ವನಿ, ನಡುಕ ಹುಟ್ಟಿಸುವ ಅಭಿನಯ ಇದಕ್ಕೆ ಎದುರಾಗಿ ನಿಂತೂ ನಾಯಕ ಅನಿಸಿಕೊಳ್ಳಬೇಕು ಎಂದರೆ ಅದು ಸುಲಭಕ್ಕೆ ಆಗುವ ಮಾತಲ್ಲ. ಅದಕ್ಕಾಗಿಯೇ ನಾನೂ ಕಳೆದ ಎರಡು ತಿಂಗಳಿಂದ ಹರ್ಷ ಅವರ ಮಾರ್ಗದರ್ಶನದಲ್ಲಿ ಕ್ರಾಸ್‌ ಫಿಟ್‌ನೆಸ್‌ ಮತ್ತು ಬಾಡಿ ಬಿಲ್ಡಿಂಗ್‌ ಮಾಡುತ್ತಿದ್ದೇನೆ. ನನ್ನ ಮತ್ತು ರವಿಶಂಕರ್‌ ಮುಖಾಮುಖಿಯ ರೋಚಕತೆಯನ್ನು ಈ ಚಿತ್ರದಲ್ಲಿ ನೋಡುತ್ತೀರಿ’ ಎಂದು ತಮ್ಮ ಜಿಮ್‌ ಶ್ರಮದ ಹಿಂದಿನ ಕಾರಣವನ್ನು ವಿವರಿಸುತ್ತಾರೆ ಸತೀಶ್‌.

ರವಿಶಂಕರ್‌ ಈ ಚಿತ್ರದಲ್ಲಿ ಗ್ರಾಮಪಂಚಾಯ್ತಿ ಸದಸ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥಾನಾಯಕ ಗ್ರಾಮಪಂಚಾಯ್ತಿ ಅಧ್ಯಕ್ಷ ಆಗಬೇಕು ಎಂದು ಹೊರಟಿರುವವನು. ಈ ಇಬ್ಬರ ಹಣಾಹಣಿಯೇ ಚಿತ್ರದ ಕಥಾವಸ್ತು.

ಕಳೆದ ಎರಡು ತಿಂಗಳಿಂದ ಸತೀಶ್‌ ಪ್ರತಿದಿನ ಆರ್‌.ಆರ್‌. ನಗರದ ಗೋಲ್ಡ್‌ ಜಿಮ್‌ನಲ್ಲಿ ಎರಡು ಗಂಟೆಗಳ ಕಾಲ ಮೈ ದಂಡಿಸುತ್ತಿದ್ದಾರೆ. ಹರ್ಷ ಅವರ ಮಾರ್ಗದರ್ಶನದಲ್ಲಿ ಈ ಕಸರತ್ತು ನಡೆಯುತ್ತಿದೆ.

ಸಂಪೂರ್ಣ ಮಂಡ್ಯದ ಸುತ್ತಮುತ್ತ ಹಳ್ಳಿಗಳಲ್ಲಿಯೇ ಚಿತ್ರೀಕರಣವಾಗುತ್ತಿರುವ ಈ ಚಿತ್ರದ ಎಪ್ಪತ್ತರಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದೆ. ಮಂಡ್ಯದ ಖಡಕ್‌ ಹುಡುಗನಾಗಿಯೇ ಸತೀಶ್‌ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್‌ ಈ ಚಿತ್ರದ ನಾಯಕಿ. ಸಾಧುಕೋಕಿಲ, ಸುಂದರ್‌ ರಾಜು, ಅರುಣಾ ಬಾಲರಾಜ್‌ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲಿ ಚಿತ್ರತಂಡವಿದೆ.

ಪ್ರತಿಕ್ರಿಯಿಸಿ (+)