ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆಯಿಂದ ಪೆಟ್ರೋಲ್‌ ತಯಾರಿಕೆ!

Last Updated 8 ಫೆಬ್ರುವರಿ 2018, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳು ಹಾಗೂ ಕಾರ್ಖಾನೆಗಳು ಹೊರಸೂಸುವ ಇಂಗಾಲದ ಡೈ ಆಕ್ಸೈಡ್‌ನಿಂದಲೇ ಪೆಟ್ರೋಲ್‌ ತಯಾರಾದರೆ ಹೇಗಿರುತ್ತದೆ?

ಇದು ಕೂಡಾ ಸಾಧ್ಯ ಎಂದು ದಾವಣಗೆರೆಯ ಸಿದ್ಧಗಂಗಾ ಪಿ.ಯು ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್‌ ತೋರಿಸಿಕೊಟ್ಟಿದ್ದಾನೆ. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಗುರುವಾರ ಹಮ್ಮಿಕೊಂಡಿದ್ದ ‘ಆವಿಷ್ಕಾರೋತ್ಸವ’ದಲ್ಲಿ ಈ ಕುರಿತ ಮಾದರಿಯನ್ನು ಪ್ರದರ್ಶನಕ್ಕಿಟ್ಟಿದ್ದಾನೆ.

ಗಾಳಿಯಲ್ಲಿರುವ ಇಂಗಾಲದ ಕಣವನ್ನು ಪೊಟಾಷಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಸಂಗ್ರಹಿಸಿ, ಅದನ್ನು ವಿವಿಧ ರಾಸಾಯನಿಕ ಪ್ರಕ್ರಿಯೆಗೆ ಒಳಗೊಳಿಸಿ ಪೆಟ್ರೋಲ್‌ ತಯಾರಿಸಬಹುದು ಪ್ರಜ್ವಲ್‌ ವಿವರಿಸಿದ.

‘ಜಗತ್ತಿನಲ್ಲಿ ಸದ್ಯ 2,400 ಕೋಟಿ ಟನ್‌ನಷ್ಟು ಪೆಟ್ರೋಲ್‌ ಬಳಕೆಯಾಗುತ್ತಿದೆ. 5,400 ಕೋಟಿ ಟನ್‌ನಷ್ಟು ಇಂಗಾಲದ ಡೈ ಆಕ್ಸೈಡ್‌ ವಾತಾವರಣ ಸೇರುತ್ತಿದೆ. ಈ ಇಂಗಾಲವನ್ನು ಬಳಸಿಕೊಂಡು ಸುಮಾರು 6,400 ಕೋಟಿ ಟನ್‌ನಷ್ಟು ಪೆಟ್ರೋಲ್‌ ಸಿದ್ಧಪಡಿಸಬಹುದು. ಇದರ ತಯಾರಿಕಾ ವೆಚ್ಚವೂ ಕಡಿಮೆ. ಈ ವಿಧಾನದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ತಯಾರಿಸಲು ಹೆಚ್ಚೆಂದರೆ ₹25 ವೆಚ್ಚವಾಗುತ್ತದೆ’ ಎಂದು ತಿಳಿಸಿದ.

‘ಇದಕ್ಕೆ ಪೇಟೆಂಟ್‌ ತೆಗೆದುಕೊಂಡಿಲ್ಲ. ಈ ಆವಿಷ್ಕಾರವನ್ನು ಇನ್ನಷ್ಟು ಸುಧಾರಿಸುವ ಆಲೋಚನೆ ಇದೆ’ ಎಂದು ಹೇಳಿದ.

ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೊರೇಟರಿಸ್‌ನಿಂದ (ಎನ್‌ಎಎಲ್‌) ರೂಪಿಸಲಾಗಿದ್ದ ‘ತ್ರಿನೇತ್ರ’ ಕ್ಯಾಮೆರಾ ಪ್ರಮುಖ ಆಕರ್ಷಣೆಯಾಗಿತ್ತು. ದೇಹದಿಂದ ಹೊರಹೊಮ್ಮುವ ಶಾಖದ ಆಧಾರದಲ್ಲಿ ಚಿತ್ರಣ ನೀಡುವ ಕ್ಯಾಮೆರಾವನ್ನು ಎನ್‌ಎಎಲ್‌ನ ಆನಂದ್‌ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಲೇಸರ್‌ ತಂತ್ರಜ್ಞಾನವನ್ನು ಬಳಸಿಕೊಂಡಿದ್ದಾರೆ.

ದಟ್ಟ ಮಂಜು ಕವಿದಾಗ 200 ಮೀಟರ್‌ನಷ್ಟು ದೂರದಲ್ಲಿರುವ ವಸ್ತುವೂ ಗೋಚರಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ರೈಲು ಓಡಿಸುವುದು ಕಷ್ಟಸಾಧ್ಯ. ಇಂತಹ ಕ್ಲಿಷ್ಟ ಸಂದರ್ಭದಲ್ಲೂ ನಿರಾಯಾಸವಾಗಿ ರೈಲು ಓಡಿಸಲು ಈ ಸಾಧನ ನೆರವಾಗಲಿದೆ. ರೈಲಿನ ಎಂಜಿನ್‌ಗೆ ತ್ರಿನೇತ್ರ ಕ್ಯಾಮೆರಾವನ್ನು ಅಳವಡಿಸಲಾಗಿರುತ್ತದೆ. ಆ್ಯಪ್‌ ಮೂಲಕ ಚಾಲಕ ದೃಶ್ಯವನ್ನು ವೀಕ್ಷಿಸಬಹುದು. ಈ ಸಾಧನಕ್ಕೆ ₹25,000 ವೆಚ್ಚವಾಗಲಿದೆ.

ಅಪಘಾತವಾದಾಗ ಚಾಲಕನ ವಿವರಗಳೊಂದಿಗೆ ಸಂದೇಶ ರವಾನಿಸುವ ಸ್ಮಾರ್ಟ್‌ ಚಾಲನಾ ಪರವಾನಗಿ, ಕಾರ್ಬನ್‌ ನ್ಯಾನೊಟ್ಯೂಬ್‌ ಬಳಸಿ ನೀರು ಶುದ್ಧೀಕರಿಸುವ ಸಾಧನ, ಆ್ಯಪ್ಟಿಟ್ಯೂಡ್‌ ಟೆಸ್ಟ್‌ ಟಾಯ್‌, ಟ್ರಾಫಿಕ್‌ ಟೈಂ ಬಾರ್‌, ತೆಂಗಿನ ನಾರಿನಿಂದ ತಯಾರಿಸಿದ ಕುಂಡ.... ಮುಂತಾದ ಅನೇಕ  ಆವಿಷ್ಕಾರಗಳು ಪ್ರೇಕ್ಷರ ಗಮನ ಸೆಳೆದವು.

ಸ್ವಯಂಚಾಲಿತ ಔಷಧಿ ನೀಡುವ ಸಾಧನ

ವಯಸ್ಸಾದವರಿಗೆ ಅನುಕೂಲವಾಗುವ ಸ್ವಯಂಚಾಲಿತ ಔಷಧಿ ನೀಡುವ ಸಾಧನವನ್ನು ವಿಬ್‌ಗಯಾರ್ ಹೈ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿ ಸೂರ್ಯನಾರಾಯಣ ಅಭಿವೃದ್ಧಿಪಡಿಸಿದ್ದಾನೆ.

‘ಅಜ್ಜ ಅಥವಾ ಅಜ್ಜಿಯಷ್ಟೇ ಮನೆಯಲ್ಲಿದ್ದಾಗ, ಕಾಲ ಕಾಲಕ್ಕೆ ಔಷಧಿ ತೆಗೆದುಕೊಳ್ಳುವುದನ್ನು ನೆನಪಿಸುವುದಕ್ಕಾಗಿ ಈ ಸಾಧನವನ್ನು ರೂಪಿಸಿದ್ದೇನೆ. ಸೆನ್ಸರ್‌ಗಳನ್ನು ಬಳಿಸಿಕೊಂಡು ಇದನ್ನು ಮಾಡಿದ್ದೇನೆ. ಗುರುಗಳು ಮಾರ್ಗದರ್ಶನ ಮಾಡಿದ್ದಾರೆ. ಈ ಸಾಧನ ತಯಾರಿಸಲು ₹456 ಖರ್ಚಾಗಿದೆ. ಔಷಧಿ ತೆಗೆದುಕೊಂಡ ನಂತರ ಸಂಬಂಧಿಸಿದವರಿಗೆ ಸಂದೇಶ ಹೋಗುವ  ವ್ಯವಸ್ಥೆಯನ್ನೂಅಳವಡಿಸುವ ಆಲೋಚನೆ ಇದೆ’ ಎಂದು ಬಾಲಕ ತಿಳಿಸಿದ.

ಫೆ.10ರವರೆಗೆ ಆವಿಷ್ಕಾರೋತ್ಸವ ಇರಲಿದೆ.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT