ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ಹತ್ತಿಕ್ಕಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ ವಿದ್ಯಾರ್ಥಿ

Last Updated 8 ಫೆಬ್ರುವರಿ 2018, 19:47 IST
ಅಕ್ಷರ ಗಾತ್ರ

ಬೆಂಗಳೂರು: ನಿರಂತರ ಪರಿಶ್ರಮ ಹಾಗೂ ಶ್ರದ್ಧೆಯಿಂದ ಓದಿ ಅತಿಹೆಚ್ಚು ಅಂಕ ಗಳಿಸಿದ್ದ ವಿದ್ಯಾರ್ಥಿಗಳು ಚಿನ್ನಕ್ಕೆ ಮುತ್ತಿಟ್ಟರು. ಅವರ ಮುಖದಲ್ಲಿ ಸಾರ್ಥಕ ಭಾವ ಗೋಚರಿಸುತ್ತಿತ್ತು. ಮಕ್ಕಳ ಸಾಧನೆ ಕಂಡು ಪೋಷಕರು ಪುಳಕಗೊಂಡರು.

ಬೆಂಗಳೂರು ವಿಶ್ವವಿದ್ಯಾಲಯವು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 53ನೇ ಘಟಿಕೋತ್ಸವದಲ್ಲಿ ಕಂಡುಬಂದ ದೃಶ್ಯಗಳಿವು.

ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನಿ ಎ.ಎಸ್‌.ಕಿರಣ್‌ ಕುಮಾರ್‌ ಪದವಿ ಪ್ರದಾನ ಮಾಡಿದರು.

ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಗ್ರಾಜುಯೇಟ್‌ ಸ್ಟಡೀಸ್‌ನ ಎನ್‌.ಎಲ್.ಧನುಷ್‌ ಬಿಸಿಎ ಪದವಿಯಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಆರನೇ ಪ್ರಯತ್ನದಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ) ಪರೀಕ್ಷೆಯಲ್ಲಿ ಪಾಸಾಗಿದ್ದರು.

‘ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ನನ್ನೂರು. ತಂದೆ ಲಿಂಗರಾಜು ಕೃಷಿಕ. ತಾಯಿ ಉಷಾರಾಣಿ ಗೃಹಿಣಿ. 2012ರ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದೆ. ಗಣಿತದಲ್ಲಿ ಸೊನ್ನೆ ಅಂಕ ಬಂದಿತ್ತು. ಐದು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣನಾಗಿರಲಿಲ್ಲ. ಕೊನೆಗೂ ಶೇ 52ರಷ್ಟು ಅಂಕಗಳೊಂದಿಗೆ ಉತ್ತೀರ್ಣನಾದೆ’ ಎಂದು ಧನುಷ್‌ ಅನುಭವ ಹಂಚಿಕೊಂಡರು.

‘ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ ಎಂದು ಕೆಲವರು ಹೀಯಾಳಿಸಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದೆ. ಆದರೆ, ತಂದೆ–ತಾಯಿ ನನ್ನ ಬೆಂಬಲಕ್ಕೆ ನಿಂತರು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಹುಟ್ಟಿತು. ಕಷ್ಟಪಟ್ಟು ಓದಿ ಬಿಸಿಎನಲ್ಲಿ ಶೇ 91ರಷ್ಟು ಅಂಕ ಪಡೆದಿದೆ’ ಎಂದು ಹೇಳುವಾಗ ಅವರ ಮುಖದಲ್ಲಿ ಸಾಧಿಸಿದ ಛಲ ಕಾಣುತ್ತಿತ್ತು.

‘ಸದ್ಯ, ಜರ್ಮನಿಯ ವಿಶ್ವವಿದ್ಯಾಲಯವೊಂದರಲ್ಲಿ ಆಟೊಮೋಟಿವ್‌ ಸಾಫ್ಟ್‌ವೇರ್‌ ಅಪ್ಲಿಕೇಷನ್‌ ವಿಷಯದಲ್ಲಿ ಎಂ.ಎಸ್ಸಿ ಓದುತ್ತಿದ್ದೇನೆ. ಬಳಿಕ
ಕೃಷಿ ಮಾಡಲು ನಿರ್ಧರಿಸಿದ್ದೇನೆ’ ಎಂದರು.

ಮಗನ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಲಿಂಗರಾಜು ಹಾಗೂ ಉಷಾರಾಣಿ, ‘ಧನುಷ್‌ನಲ್ಲಿ ಒಳ್ಳೆಯ ಗುಣಗಳಿವೆ. ಕೊಳೆಗೇರಿಯ ಮಕ್ಕಳಿಗೆ ಪ್ರತಿದಿನ ಮನೆ ಪಾಠ ಮಾಡುತ್ತಿದ್ದ. ಜೀವನದಲ್ಲಿ ಏನಾದರೂ ಸಾಧಿಸುವ ಛಲ ಅವನಲ್ಲಿತ್ತು’ ಎಂದು ಹೇಳಿದರು.

ಮಹಾರಾಣಿ ವಿಜ್ಞಾನ ಕಾಲೇಜಿನ (ಮಹಿಳಾ) ಬಿ.ರಶ್ಮಿ ಅವರು ಎಂ.ಎಸ್ಸಿಯಲ್ಲಿ (ಭೌತಶಾಸ್ತ್ರ) ಒಂದು ಚಿನ್ನದ ಪದಕ ಹಾಗೂ ಏಳು ನಗದು ಬಹುಮಾನ ಗಳಿಸಿದ್ದಾರೆ. ಟಿ.ಬಾಲಕೃಷ್ಣ ತುಂಗ ಹಾಗೂ ಕೆ.ಇಂದಿರಾ ದಂಪತಿ ಪುತ್ರಿಯಾದ ಇವರು, ಸಂಶೋಧನೆ ಮಾಡುವ ಹಂಬಲ ಇಟ್ಟುಕೊಂಡಿದ್ದಾರೆ.

‘ಉಪನ್ಯಾಸಕರು ಬೋಧನೆ ಜತೆಗೆ ಚರ್ಚೆಗೂ ಅವಕಾಶ ನೀಡುತ್ತಿದ್ದರು. ಪ್ರತಿಯೊಂದೂ ವಿಷಯದ ಬಗ್ಗೆ ಚರ್ಚಿಸುತ್ತಿದ್ದೆವು. ಪರೀಕ್ಷೆಗಾಗಿ ವಿಶೇಷ ತಯಾರಿ ನಡೆಸಿರಲಿಲ್ಲ. ಚಿನ್ನದ ಪದಕ ಬರುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ’ ಎಂದು ರಶ್ಮಿ ತಿಳಿಸಿದರು.

ವಿದ್ಯಾವರ್ಧಕ ಸಂಘ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ವೈ.ಸಾಯಿ ಜ್ಯೋತಿ ಸನ್ಮತಿ ಬಿ.ಕಾಂ.ನಲ್ಲಿ ಒಂದು ಚಿನ್ನದ ಪದಕ ಹಾಗೂ 9 ನಗದು ಬಹುಮಾನ ಪಡೆದಿದ್ದಾರೆ.

‘ಪ್ರತಿದಿನ 4 ಗಂಟೆ ಅಧ್ಯಯನ ನಡೆಸುತ್ತಿದ್ದೆ. ಉಪನ್ಯಾಸಕರು ಹಾಗೂ ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಸದ್ಯ ಲೆಕ್ಕ ಪರಿಶೋಧನೆ (ಸಿ.ಎ) ಕಲಿಯುತ್ತಿದ್ದೇನೆ’ ಎಂದು ಸನ್ಮತಿ ಹೇಳಿದರು.

****

ವೈಯಕ್ತಿಕ ಪ್ರಯತ್ನದ ಜತೆಗೆ ತಂಡದ ಸ್ಫೂರ್ತಿಯಿಂದ ಯಶಸ್ಸು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕು
-ಎ.ಎಸ್‌.ಕಿರಣ್‌ ಕುಮಾರ್‌

ಕಡಿಮೆ ಮೊತ್ತದ ದತ್ತಿನಿಧಿಗಳನ್ನು ದಾನಿಗಳಿಗೆ ಹಿಂದಿರುಗಿಸುತ್ತೇವೆ. ಹೆಚ್ಚಿನ ಮೊತ್ತದ ದತ್ತಿಯಿಂದ ಬರುವ ಹಣದಲ್ಲಿ ಚಿನ್ನದ ಪದಕ ನೀಡುತ್ತೇವೆ

-ಪ್ರೊ.ವಿ.ಸುದೇಶ್‌, ಹಂಗಾಮಿ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ
  ***

ಸಂಶೋಧನೆಗೆ ಅಂಧತ್ವ ಅಡ್ಡಿ ಬರಲಿಲ್ಲ

ಕಲಬುರ್ಗಿಯ ಚಿಂಚೋಳಿ ತಾಲ್ಲೂಕಿನ ಸಾಲೆಬೀರನಹಳ್ಳಿಯ ನಾಗಶೆಟ್ಟಿ ಕನ್ನಡ ವಿಷಯದಲ್ಲಿ ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಕುವೆಂಪು ಕಾವ್ಯಗಳಲ್ಲಿ ಅಂತರ್‌ದೃಷ್ಟಿ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಸದ್ಯ, ಜೆ.ಸಿ.ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

‘ಪ್ರಬಂಧ ಮಡಿಸಲು ತುಂಬ ಕಷ್ಟವಾಯಿತು. ಲೇಖನಗಳನ್ನು ಬ್ರೈಲ್‌ ಲಿಪಿಯಲ್ಲೇ ಬರೆಯುತ್ತಿದ್ದೆ. ಅದನ್ನು ಪತ್ನಿ ಗೀತಾ ಹಾಗೂ ವಿದ್ಯಾರ್ಥಿಗಳು ಅಕ್ಷರ ರೂಪಕ್ಕೆ ಇಳಿಸುತ್ತಿದ್ದರು. ಪದವಿ ಕಾಲೇಜು ಉಪನ್ಯಾಸಕನಾಗಬೇಕೆಂಬ ಆಸೆ ಇದೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕೆಂಬ ಉದ್ದೇಶ ಇದೆ’ ಎಂದು ನಾಗಶೆಟ್ಟಿ ತಿಳಿಸಿದರು.

ಸಂಶೋಧನೆ ಆಸಕ್ತಿ

ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ಸಹನಾ ಶ್ರೀಧರ್‌ ಬಿ.ಎಸ್ಸಿಯಲ್ಲಿ ಒಂದು ಚಿನ್ನ ಹಾಗೂ ಎಂಟು ನಗದು ಬಹುಮಾನ ಪಡೆದಿದ್ದಾರೆ. ಅವರು ಶ್ರೀಧರ್‌– ವಿಜಯ ಮಾಲಾ ದಂಪತಿ ಪುತ್ರಿ.

‘ಸರ್‌ ಸಿ.ವಿ.ರಾಮನ್‌ ಸಂಶೋಧನಾ ಸಂಸ್ಥೆಯಲ್ಲಿ ಫೆಲೋಶಿಪ್‌ ಪಡೆದು ಯೋಜನೆಯೊಂದರ ಮೇಲೆ ಕೆಲಸ ಮಾಡುತ್ತಿದ್ದೇನೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡುವ ಕನಸಿದೆ. ಆದರೆ, ಮೂಲ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇತ್ತು.’ ಎಂದರು.

ಚಿನ್ನದ ಪದಕ ಘೋಷಿಸಿ ನಗದು ಬಹುಮಾನ ನೀಡಿರುವುದು ಹಾಗೂ ಪ್ರಮಾಣಪತ್ರದಲ್ಲಿ ದೋಷಗಳ ಬಗ್ಗೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು.

‘ಪ್ರಮಾಣಪತ್ರದಲ್ಲಿ ಚಿನ್ನದ ಪದಕ ಎಂದು ನಮೂದಿಸಿದ್ದನ್ನು ಅಳಿಸಿ, ನಗದು ಬಹುಮಾನ ಎಂದು ಮುದ್ರಿಸಲಾಗಿದೆ. ಅಲ್ಲದೆ, ಪ್ರತಿ ಪದಕಕ್ಕೆ ₹500 ಶುಲ್ಕ ಕಟ್ಟಿಸಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದರು.

‘ನಮಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ನೀಡಲಾಗಿದೆ. ಆದರೆ, ಪ್ರಮಾಣಪತ್ರದಲ್ಲಿ ಬಿ.ಕಾಂ.ನಲ್ಲಿ ಅತಿಹೆಚ್ಚು ಅಂಕ ಪಡೆದಿದ್ದಕ್ಕಾಗಿ ನಗದು ಬಹುಮಾನ ನೀಡಲಾಗಿದೆ ಎಂದು ಮುದ್ರಿಸಲಾಗಿದೆ’ ಎಂದು ಶೇಷಾದ್ರಿಪುರ ಕಾಲೇಜಿನ ಸಿ.ಸುಜಿತ್‌ ಹಾಗೂ ಎಂಇಎಸ್‌ ಕಾಲೇಜಿನ ಮೋನಿಷಾ ಸಿ.ಶಂಕರ್‌ ಹೇಳಿದರು.

ಇದಕ್ಕೆ ಉತ್ತರಿಸಿದ ಪ್ರೊ.ಸಿ.ಶಿವರಾಜು, ‘ಒಟ್ಟು 268 ಚಿನ್ನದ ಪದಕಗಳನ್ನು ಘೋಷಿಸಿದ್ದು, ಈ ಪೈಕಿ 79 ಚಿನ್ನದ ಪದಕಗಳನ್ನು ಪ್ರಥಮ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ವಿ.ವಿ.ಯಿಂದಲೇ ನೀಡಲಾಗಿದೆ. ದಾನಿಗಳು ಸ್ಥಾಪಿಸಿರುವ ದತ್ತಿನಿಧಿಯಿಂದ 33 ಚಿನ್ನದ ಪದಕಗಳನ್ನು ನೀಡಲಾಗಿದೆ. ದತ್ತಿನಿಧಿಯ 111 ಚಿನ್ನದ ಪದಕಗಳನ್ನು ನಗದು ಬಹುಮಾನವಾಗಿ ಪರಿವರ್ತಿಸಲಾಗಿದೆ. ಈ ಬಗ್ಗೆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT