ಸೋಮವಾರ, ಮೇ 25, 2020
27 °C
ಎಂಟನೇ ತರಗತಿಯ ಬಾಲಾರೋಪಿ ಪೊಲೀಸರ ವಶಕ್ಕೆ

ಪಾರಿವಾಳ ಹಿಡಿಯಲು ಹೋದ ಮಗು ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾರಿವಾಳ ಹಿಡಿಯಲು ಹೋದ ಮಗು ಕೊಲೆ

ಬೆಂಗಳೂರು: ತನ್ನ ಪಾರಿವಾಳ ಹಿಡಿಯಲು ಬಂದನೆಂಬ ಕಾರಣಕ್ಕೆ ಎರಡು ವರ್ಷದ  ಮಗು ವೆಂಕಟೇಶ್‌ನನ್ನು ಕೊಲೆ ಮಾಡಿದ ಆರೋಪದಡಿ 14 ವರ್ಷದ ಬಾಲಕನನ್ನು ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ಬಾಲಕ, ಕೆಂಪಾಪುರದ ಬಸವೇಶ್ವರ ಬಡಾವಣೆ ನಿವಾಸಿ ಬಸವರಾಜು ಹಾಗೂ ವೆಂಕಮ್ಮ ದಂಪತಿ ಮಗ. ಈ ಕುಟುಂಬದ ಪರಿಚಯದವನಾ

ಗಿರುವ ಬಾಲಾರೋಪಿಯು ಎಂಟನೇ ತರಗತಿಯಲ್ಲಿ ಓದುತ್ತಿದ್ದಾನೆ. 

‘ಕೆಲ ದಿನಗಳ ಹಿಂದಷ್ಟೇ ಬಾಲಾರೋಪಿಯ ತಂದೆಯು ಪಾರಿವಾಳ ತಂದಿದ್ದರು. ಅದನ್ನು ಇಷ್ಟಪಟ್ಟಿದ್ದ ಮಗು ವೆಂಕಟೇಶ್‌, ದೂರದಲ್ಲೇ ನಿಂತು ಅದನ್ನು ನೋಡಿ ಖುಷಿಪಡುತ್ತಿದ್ದ. ಅದು ಬುಧವಾರ ಮಧ್ಯಾಹ್ನ ಮನೆಯಿಂದ ಹೊರಗೆ ಹಾರಿ ಹೋಗಿತ್ತು. ಅದನ್ನು ಹಿಡಿಯಲು ವೆಂಕಟೇಶ್ ಸೇರಿದಂತೆ ಹಲವು ಮಕ್ಕಳು ಬೆನ್ನಟ್ಟಿದ್ದರು. ಅದೇ ವೇಳೆ ಮನೆಯ ಸಮೀಪದ ನೀಲಗಿರಿ ತೋಪಿನಲ್ಲಿ ಜಗಳವಾಡಿದ್ದ ಬಾಲಾರೋಪಿಯು ವೆಂಕಟೇಶ್‌ಗೆ ಹೊಡೆದಿದ್ದ. ಎದೆಯ ಮೇಲೆ ಕುಳಿತು ಮುಖಕ್ಕೆ ಗುದ್ದಿದ್ದ. ಉಸಿರುಗಟ್ಟಿ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

‘ರಾಯಚೂರಿನ ಬಸವರಾಜು ಪತ್ನಿ ಹಾಗೂ ಮೂವರು ಮಕ್ಕಳ ಜತೆ ನೆಲೆಸಿದ್ದರು. ಮನೆಯ ಬಳಿ ಕ್ಯಾಂಟಿನ್‌ ನಡೆಸುತ್ತಿದ್ದರು. ಬಾಲಾರೋಪಿಯ ತಂದೆಯೂ ಬೀದಿಬದಿಯಲ್ಲಿ ಚಹಾ ಮಾರುತ್ತಿದ್ದರು. ಈ ಎರಡು ಕುಟುಂಬಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಇತ್ತೀಚೆಗೆ ತಾಯಿ ಜತೆ ಬಾಗಲಕೋಟೆಗೆ ಹೋಗಿದ್ದ ಬಾಲಕ, ಬುಧವಾರ ಬೆಳಗ್ಗೆ ನಗರಕ್ಕೆ ಬಂದಿದ್ದ. ಮನೆಯ ಸಮೀಪವೇ ಮಕ್ಕಳ ಜತೆ ಆಟವಾಡುತ್ತಿದ್ದಾಗ, ಪಾರಿವಾಳ ಹಾರಿ ಹೋಗಿತ್ತು’ ಎಂದರು.

ತಂದೆ ಮೇಲಿತ್ತು ಅನುಮಾನ: ಸಂಜೆಯಾದರೂ ಮಗು ವಾಪಸ್‌ ಬಾರದಿದ್ದರಿಂದ ಗಾಬರಿಗೊಂಡ ಬಸವರಾಜ್ ದಂಪತಿ, ಹುಡುಕಾಟ ನಡೆಸಿದ್ದರು. ನೀಲಗಿರಿ ತೋಪಿನಿಂದ ಮನೆಗೆ ಬಂದಿದ್ದ ಬಾಲಾರೋಪಿಯನ್ನೂ ವಿಚಾರಿಸಿದ್ದರು. ಅದಕ್ಕೆ ಆತ, ‘ಆತನನ್ನು ಯಾರೋ ಕರೆದುಕೊಂಡು ಹೋದರು’ ಎಂದು ಹೇಳಿದ್ದ. ಭಯಗೊಂಡ ದಂಪತಿ, ತೋಪಿಗೆ ಹೋದಾಗ ವಿಷಯ ಗೊತ್ತಾಯಿತು.

‘ಬಾಲಾರೋಪಿಯ ತಂದೆಯೇ ಮಗನನ್ನು ಕೊಲೆ ಮಾಡಿರಬಹುದು’ ಎಂದು ದಂಪತಿ ಅನುಮಾನಪಟ್ಟಿದ್ದರು. ಹೀಗಾಗಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು. ‘ಬೆಳಿಗ್ಗೆ 10 ಗಂಟೆಗೆ ಚಹಾ ಮಾರಲು ಹೋದವನು, ಮಧ್ಯಾಹ್ನ ಮನೆಗೆ ವಾಪಸ್‌ ಬಂದಿದ್ದೇನೆ. ನನಗೂ ಕೊಲೆಗೂ  ಸಂಬಂಧವಿಲ್ಲ’ ಎಂದು ಹೇಳಿಕೆ ನೀಡಿದ್ದರು. ಸ್ಥಳೀಯರನ್ನು ವಿಚಾರಿಸಿದಾಗ, ನಿರ್ದೋಷಿ ಎಂಬುದು ತಿಳಿಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಆಪ್ತ ಸಮಾಲೋಚನೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ

‘ಯಾರು ಕೊಲೆ ಮಾಡಿದ್ದಾರೆ ಎಂಬುದು ಆರಂಭದಲ್ಲಿ ಗೊತ್ತಾಗಲಿಲ್ಲ. ಪಾರಿವಾಳ ಬೆನ್ನಟ್ಟಿದ್ದ ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ನೆರವಿನಿಂದ ಆಪ್ತ ಸಮಾಲೋಚನೆಗೆ ಒಳಪಡಿಸಿದೆವು. ಆಗ, ಬಾಲಾರೋಪಿಯು ತಪ್ಪೊಪ್ಪಿಕೊಂಡ. ಆತನನ್ನು ಬಾಲಮಂದಿರಕ್ಕೆ ಕಳುಹಿಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.