ಮಂಗಳವಾರ, ಮೇ 26, 2020
27 °C

ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ: ಪ್ರಸಿದ್ಧ ಕೃಷ್ಣ ಬಿರುಗಾಳಿಗೆ ಅಸ್ಸಾಂ ಪತನ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ: ಪ್ರಸಿದ್ಧ ಕೃಷ್ಣ ಬಿರುಗಾಳಿಗೆ ಅಸ್ಸಾಂ ಪತನ

ಬೆಂಗಳೂರು: ಮಧ್ಯಮವೇಗಿ ಪ್ರಸಿದ್ಧಕೃಷ್ಣ ಅವರ ಸ್ವಿಂಗ್ ದಾಳಿಯ ಮುಂದೆ ಅಸ್ಸಾಂ ತಂಡದ  ಆಟ ನಡೆಯಲಿಲ್ಲ.

ಬ್ಯಾಟ್ಸ್‌ಮನ್‌ಗಳಿಗೇ ಹೆಚ್ಚು ನೆರವು ನೀಡಿದ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಪ್ರಸಿದ್ಧ (33ಕ್ಕೆ6) ಬೌಲಿಂಗ್‌ನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿತು. ಅಸ್ಸಾಂ ಎದುರು 111 ರನ್‌ಗಳಿಂದ ಗೆದ್ದ ತಂಡವು ‘ಎ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು. ಬುಧವಾರ ಬರೋಡಾ ತಂಡದ ಎದುರು ಕರ್ನಾಟಕ ಜಯಿಸಿತ್ತು.

ಟಾಸ್ ಗೆದ್ದ ಅಸ್ಸಾಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್. ವಿನಯಕುಮಾರ್ ಮತ್ತು ವಿಕೆಟ್‌ಕೀಪರ್ ಸಿ.ಎಂ.ಗೌತಮ್ ಅವರಿಗೆ ವಿಶ್ರಾಂತಿ ನೀಡಿದ ತಂಡ ಬ್ಯಾಟಿಂಗ್ ಮಾಡಿತು. ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ (84; 87ಎ, 10ಬೌಂ, 2ಸಿ), ಹಂಗಾಮಿ ನಾಯಕ ಕರುಣ್ ನಾಯರ್ (58; 57ಎ, 6ಬೌಂ, 1ಸಿ) ಮತ್ತು ಆರ್. ಸಮರ್ಥ್ (ಔಟಾಗದೇ 70; 61ಎ, 4ಬೌಂ, 1ಸಿ) ಅರ್ಧಶತಕಗಳ ಬಲದಿಂದ ಆತಿಥೇಯ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 303 ರನ್ ಗಳಿಸಿತು.

ಗುರಿ ಬೆನ್ನತ್ತಿದ ಅಸ್ಸಾಂ ತಂಡವು 47.2 ಓವರ್‌ಗಳಲ್ಲಿ 192 ರನ್ ಗಳಿಸಿ ಆಟ ಮುಗಿಸಿತು. ಪ್ರಸಿದ್ಧ ಕೃಷ್ಣಗೆ ಉತ್ತಮ ಜೊತೆ ನೀಡಿದ ಟಿ. ಪ್ರದೀಪ್ ಎರಡು ವಿಕೆಟ್ ಕಬಳಿಸಿದರು. ಅವರು ವಿನಯ್ ಬದಲು ಸ್ಥಾನ ಪಡೆದಿದ್ದರು. ಗೌತಮ್ ಬದಲು ಕೆ.ಎಲ್. ರಾಹುಲ್ ವಿಕೆಟ್‌ ಕೀಪಿಂಗ್ ನಿರ್ವಹಿಸಿದರು.

ವಿನಯ್ ಗೈರುಹಾಜರಿಯಲ್ಲಿ ಬೌಲಿಂಗ್ ಸಾರಥ್ಯ ವಹಿಸಿದ ಅಭಿಮನ್ಯು ಮಿಥುನ್ ಅವರು ಉತ್ತಮ ಬೌಲಿಂಗ್ ಮಾಡಿದರೂ ವಿಕೆಟ್‌ ಒಲಿಯಲಿಲ್ಲ. ಆದರೆ ಕೃಷ್ಣ ನಾಲ್ಕನೇ ಓವರ್‌ನಲ್ಲಿ ಮೊದಲ ಯಶಸ್ಸು ಗಳಿಸಿದರು.

ರಿಶಬ್ ದಾಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಕೃಷ್ಣ ಹಾಕಿದ ಆರನೇ ಓವರ್‌ನಲ್ಲಿ ಔಟ್‌ಸ್ವಿಂಗರ್‌ ತಡವಿದ ಅಭಿಷೇಕ್ ಠಾಕೂರಿ ಮೊದಲ ಸ್ಲಿಪ್‌ನಲ್ಲಿದ್ದ ಮಯಂಕ್ ಅಗರವಾಲ್ ಕಷ್ಟಪಟ್ಟು ಮಾಡಿದ ಕ್ಯಾಚ್‌ಗೆ ಔಟಾದರು. ಎಂಟನೇ ಓವರ್‌ನಲ್ಲಿ ಕೃಷ್ಣ ಹಾಕಿದ ನೇರ ಎಸೆತಕ್ಕೆ ನಾಯಕ ಗೋಕುಲ್ ಶರ್ಮಾ ಬೌಲ್ಡ್ ಆದರು. ಶಿವಶಂಕರ್ ರಾಯ್ (64; 93ಎ, 6ಬೌಂ, 1ಸಿ) ರಿಯಾನ್ ಪರಾಗ್ (22 ರನ್) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 38 ರನ್ ಸೇರಿಸಿದರು. 20ನೇ ಓವರ್‌ನಲ್ಲಿ ಪರಾಗ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಜೊತೆಯಾಟ ಮುರಿದರು.

ಕೃಷ್ಣ ತಮ್ಮ ಎರಡನೇ ಸ್ಪೆಲ್‌ನಲ್ಲಿ ಮತ್ತೆ ರಿವರ್ಸ್ ಸ್ವಿಂಗ್ ಅಸ್ತ್ರ ಬಳಸಿದರು. ಅರ್ಧಶತಕ ಗಳಿಸಿದ್ದ ಶಿವಶಂಕರ್ ಮತ್ತು  ಜೀತುಮೋನಿ  ಕಲೀಟಾ ಅವರಣ್ನು ಔಟ್ ಮಾಡಿದರು. ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಅಬು ನಚೀಮ್ (ಔಟಾಗದೆ 43) ಮತ್ತು ಮೃಣ್ಮಯ್ ದತ್ತಾ ( 1 ರನ್) 42 ರನ್ ಸೇರಿಸಿದರು. ಮೃಣ್ಮಯ್ ಅವರನ್ನು ಕ್ಲೀನ್‌ ಬೌಲ್ಟ್ ಮಾಡಿದ ಪ್ರಸಿದ್ಧ ಪಂದ್ಯಕ್ಕೆ ತೆರೆ ಎಳೆದರು.

ಮಯಂಕ್ ಕೈಗೂಡದ ಮತ್ತೊಂದು ಶತಕ: ಬುಧವಾರ ಇಲ್ಲಿ  ಶತಕ ಗಳಿಸಿದ್ದ ಮಯಂಕ್ ನೂರರ ಗಡಿ ದಾಟುವ ಹಾದಿಯಲ್ಲಿ ಎಡವಿದರು. ಕೆ.ಎಲ್. ರಾಹುಲ್ (22; 32ಎ, 4ಬೌಂ) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ ಅಸ್ಸಾಂ ತಂಡದ ದುರ್ಬಲ ಬೌಲಿಂಗ್‌ನ ಲಾಭ ಪಡೆದರು. 12ನೇ ಓವರ್‌ನಲ್ಲಿ ರಾಹುಲ್ ಅವರು ಮೃಣ್ಮಯ್ ದತ್ತಾ ಅವರ ಎಸೆತವನ್ನು ತಡವಿ ಅಭಿಷೇಕ್ ಠಾಕೂರಿಗೆ ಕ್ಯಾಚಿತ್ತರು. ಮೊದಲ ವಿಕೆಟ್‌ಗೆ 58 ರನ್ ಸೇರಿತ್ತು.

ನಂತರ ಮಯಂಕ್ ಜೊತೆಗೂಡಿದ ಕರುಣ್ ನಾಯರ್ ಬೌಲರ್‌ಗಳ ಬೆವರಿಳಿಸಿದರು. ಉತ್ತಮ ಫಾರ್ಮ್‌ನಲ್ಲಿರುವ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಬೌಂಡರಿಗೆರೆ ದಾಟಿಸಿದರು.  ಮಯಂಕ್ ಎತ್ತಿದ ಎರಡು ಸಿಕ್ಸರ್‌ಗಳಲ್ಲಿ ಚೆಂಡು ಮೈದಾನದ ಹೊರಗೆ ಹೋಗಿ ಬಿದ್ದವು. ಎರಡನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಸೇರಿದವು.

ಶತಕದತ್ತ ದಾಪುಗಾಲಿಟ್ಟಿದ್ದ ಮಯಂಕ್ 28ನೇ ಓವರ್‌ನಲ್ಲಿ ಸ್ಪಿನ್ನರ್ ರಿಯಾನ್ ಪರಾಗ್ ಎಸೆತವನ್ನು ಲೇಟ್ ಕಟ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿದರು.

ಗೌತಮ್‌ಗೆ ಗಾಯ: ಎಡಗೈ ಹೆಬ್ಬೆರಳಿಗೆ ಗಾಯವಾದ ಕಾರಣ ವಿಕೆಟ್ ಕೀಪರ್ ಸಿ.ಎಂ. ಗೌತಮ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಮೈದಾನದ ಸಮೀಪದಲ್ಲಿ ಅವರ ಹೆಬ್ಬೆರಳಿನ ಸ್ಕ್ಯಾನಿಂಗ್ ನಡೆಸಲಾಗಿದೆ. ಶುಕ್ರವಾರ ವೈದ್ಯರ ಸಲಹೆಯ ನಂತರ ಮುಂದಿನ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಂಡದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.