ಬುಧವಾರ, ಡಿಸೆಂಬರ್ 11, 2019
16 °C

ಕಾಳ್ಗಿಚ್ಚು ನಂದಿಸಲು ಹೆಲಿಕಾಪ್ಟರ್ ಬಳಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳ್ಗಿಚ್ಚು ನಂದಿಸಲು ಹೆಲಿಕಾಪ್ಟರ್ ಬಳಕೆ?

ಹುಣಸೂರು: ತಾಲ್ಲೂಕಿನ ನಾಗರಹೊಳೆ ಉದ್ಯಾನದಲ್ಲಿ ಸಂಭವಿಸುವ ಕಾಳ್ಗಿಚ್ಚು ನಂದಿಸಲು ಈಗಾಗಲೇ ಹಲವು ಮುನ್ನೆ ಚ್ಚರಿಕೆ ಕ್ರಮ ಕೈಗೊಂಡಿರುವ ಅರಣ್ಯ ಇಲಾಖೆ, ಈ ಬಾರಿ ಹೆಲಿಕಾಪ್ಟರ್ ಬಳಸಿಕೊಳ್ಳಲು ಚಿಂತಿಸಿದೆ. ಇದು ಕಾರ್ಯಗತವಾದರೆ ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

‘ಸೇನೆಯಿಂದ ಹೆಲಿಕಾಪ್ಟರ್‌ ಪಡೆದು ಬೆಂಕಿ ನಂದಿಸಲು ನಿರ್ಧರಿಸಲಾಗಿದೆ. ಈ ಕುರಿತು ಸರ್ಕಾರ ಸಮಯಾವಕಾಶ ಕೋರಿದೆ. ಸಕಾರಾತ್ಮಕ ಉತ್ತರದ ನಿರೀಕ್ಷೆಯಲ್ಲಿದ್ದೇವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಾಳ್ಗಿಚ್ಚು ನಂದಿಸಲು ಹೆಲಿಕಾಪ್ಟರ್ ಬಳಸಿಕೊಳ್ಳಲಾಗುತ್ತಿದೆ. ಹೆಲಿಕಾಪ್ಟರ್‌ನಿಂದ ಕನಿಷ್ಠ 3ರಿಂದ 4 ಸಾವಿರ ಲೀಟರ್‌ ನೀರು ಸುರಿಯಲು ಸಾಧ್ಯ’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಉದ್ಯಾನದಲ್ಲಿರುವ 140 ಕೆರೆ ಪೈಕಿ 100ರಲ್ಲಿ ಸಮೃದ್ಧವಾಗಿ ನೀರಿದೆ. ಸೋಲಾರ್‌ ಬಳಸಿಕೊಂಡು ಕೊಳವೆಬಾವಿಯಿಂದ ಕೆರೆಗೆ ನೀರು ತುಂಬಿಸುವ ಕೆಲಸ ನಿರಂತರವಾಗಿ ಸಾಗಿದೆ. ಅಲ್ಲದೆ, 2 ಸಾವಿರ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಒಂದು ಟ್ಯಾಂಕ್ ನಿರ್ಮಿಸಲಾಗಿದೆ. 50 ಮೀಟರ್‌ ಉದ್ದದ ಎರಡು ಜೆಟ್‌ ಸ್ಪ್ರೇ ಇದೆ. ಸಿಬ್ಬಂದಿ ಹೋಗಲು ಸಾಧ್ಯವಾಗದ ಕಡೆ ಇವುಗಳನ್ನು ಬಳಸಿಕೊಳ್ಳಲಾಗುವುದು. ಇಷ್ಟೆ ಅಲ್ಲದೆ, 30 ಜೀಪ್‌ ಕೂಡ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕಾಯಂ ಅಗ್ನಿಶಾಮಕ ಕೇಂದ್ರ: ನಾಗರಹೊಳೆ, ಅಂತರಸಂತೆ ಮತ್ತು ವೀರನಹೊಸಹಳ್ಳಿ ವಲಯದಲ್ಲಿ ಅಗ್ನಿಶಾಮಕ ಕೇಂದ್ರ ತೆರೆದು ಕಾಯಂ ವಾಹನ ಹೊಂದುವ ಬಗ್ಗೆ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಲ್ಲಿಂದ ಸಕಾರಾತ್ಮಕ ಉತ್ತರ ಬಂದಿದೆ ಎಂದು ಹೇಳಿದರು.

ಈಗಾಗಲೇ 1,800 ಕಿ.ಮೀ. ಫೈರ್‌ ಲೈನ್‌ (ಬೆಂಕಿ ರೇಖೆ) ನಿರ್ಮಿಸಲಾಗಿದೆ. 320 ಸಿಬ್ಬಂದಿ ನಿಯೋಜಿಸಿಕೊಂಡು ಅವಘಡ ಸಂಭವಿಸದಂತೆ ಎಚ್ಚರಿಕೆವಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಸಾಲಿನಲ್ಲಿ 11 ವೀಕ್ಷಣ ಗೋಪುರ ನಿರ್ಮಿಸಲಾಗಿದೆ.

ಕಳೆದ ಸಾಲಿನಲ್ಲಿ 8 ನಿರ್ಮಿಸಲಾಗಿತ್ತು. ಒಟ್ಟಾರೆ 19 ಗೋಪುರ ಇವೆ. ಇಲ್ಲಿ ಸಿಬ್ಬಂದಿ ಪಾಳಿಯಲ್ಲಿ ಅರಣ್ಯ ವೀಕ್ಷಣೆ ನಡೆಸುತ್ತಿದ್ದಾರೆ. ಪ್ರತಿ ಅರ್ಧ ಗಂಟೆಗೆ ಒಂದು ಬಾರಿ ಮಾಹಿತಿ ಕೇಂದ್ರಕ್ಕೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಪ್ರತಿಕ್ರಿಯಿಸಿ (+)