ಭಾನುವಾರ, ಜೂನ್ 7, 2020
29 °C

ರಾಜಕೀಯ ಲಾಭಕ್ಕೆ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯ ಲಾಭಕ್ಕೆ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸುತ್ತಿಲ್ಲ

ಕೋಲಾರ: ‘ರಾಜಕೀಯ ಲಾಭಕ್ಕೆ ಅಥವಾ ಬಿಟ್ಟಿ ಪ್ರಚಾರಕ್ಕಾಗಿ ಜಿಲ್ಲೆಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸುತ್ತಿಲ್ಲ. ಈ ಭಾಗದ ಕ್ಯಾನ್ಸರ್‌ ರೋಗಿಗಳ ಮೇಲಿನ ಕಾಳಜಿಯಿಂದ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಬಳಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಗುರುತಿಸಲಾಗಿರುವ ಜಾಗವನ್ನು ಗುರುವಾರ ಪರಿಶೀಲಿಸಿ ಮಾತನಾಡಿ, ಸತತ ಏಳೆಂಟು ತಿಂಗಳಿಂದ ಕ್ಯಾನ್ಸರ್ ಕೇಂದ್ರಕ್ಕೆ ಜಾಗ ಹುಡುಕುತ್ತಿದ್ದೆವು. ಈಗ ಕಂದಾಯ ಇಲಾಖೆ ಜಾಗವೇ ಸಿಕ್ಕಿದೆ ಎಂದರು.

ಕಲ್ಲೂರು ಗ್ರಾಮದ ಬಳಿ ಸರ್ವೆ ನಂಬರ್ 31ರಲ್ಲಿರುವ 38 ಎಕರೆ 20 ಗುಂಟೆ ಕಂದಾಯ ಜಮೀನಾಗಿದ್ದು, ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಳಿಸಿ ದಾಖಲೆಪತ್ರಗಳನ್ನು ಸಿದ್ಧಪಡಿಸಲಾಗಿದೆ. ಕಂದಾಯ ಇಲಾಖೆಯಿಂದ ಅನುಮತಿ ಪಡೆದು ಶೀಘ್ರವೇ ಒಪ್ಪಂದ ಮಾಡಿಕೊಂಡು ಭೂಮಿಯನ್ನು ಟಾಟಾ ಟ್ರಸ್ಟ್‌ಗೆ ಹಸ್ತಾಂತರಿಸುತ್ತೇವೆ ಎಂದು ತಿಳಿಸಿದರು.

ಜನರ ಪುಣ್ಯ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಆರಂಭಕ್ಕೆ ಅವಕಾಶ ಸಿಕ್ಕಿರುವುದು ಈ ಭಾಗದ ಜನರ ಪುಣ್ಯ. ಬಡ ರೋಗಿಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದರು. ಅವರ ಗೋಳು ನೋಡಲಾಗದೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಜಾರಿಗೆ ತರಲು ಪ್ರಯತ್ನಿಸಿದೆ. ಜನ ಸಹ ಅದಕ್ಕೆ ಸಹಕಾರ ನೀಡಿದರು. ಕಾಯ್ದೆಯಡಿ ನಿಗದಿಪಡಿಸಿದ ದರಪಟ್ಟಿಯನ್ನು ಖಾಸಗಿ ಆಸ್ಪತ್ರೆಯವರು ಪಾಲಿಸದಿದ್ದರೆ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಫೆ.15ರಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಆರಂಭವಾಗಲಿದ್ದು, ಇದಕ್ಕೆ ಸರ್ಕಾರ ಶೇ 75ರಷ್ಟು ಅನುದಾನ ನೀಡಲಿದೆ. ಈ ಎರಡು ಆಸ್ಪತ್ರೆಗಳ ನಿರ್ವಹಣೆಗೆ ಹಣಕಾಸು ನೆರವು ಹಾಗೂ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಸಿದ್ಧವಾಗಿದೆ. ರಾಜ್ಯದೆಲ್ಲೆಡೆ ಫೆ.26ರಂದು ಸಾರ್ವತ್ರಿಕ ಆರೋಗ್ಯ ಯೋಜನೆ ಘೋಷಣೆಯಾಗಲಿದೆ ಎಂದು ವಿವರಿಸಿದರು.

ಉತ್ತಮ ಸೇವೆ: ‘ಲಾಭ ಗಳಿಕೆ ಉದ್ದೇಶಕ್ಕಾಗಿ ಆಸ್ಪತ್ರೆ ಸ್ಥಾಪಿಸುತ್ತಿಲ್ಲ. ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವುದು ಸಂಸ್ಥೆಯ ಮೂಲ ಉದ್ದೇಶ' ಎಂದು ಟಾಟಾ ಟ್ರಸ್ಟ್‌ನ ಪ್ರತಿನಿಧಿ ಲಕ್ಷ್ಮಣ್ ಸೇತುರಾಮ್ ತಿಳಿಸಿದರು.

ನಾಲ್ಕೈದು ವಾರದಲ್ಲಿ ಕೇಂದ್ರದ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಲಿದೆ. ಡಿಪಿಆರ್‌ ಸಲ್ಲಿಸಿದ ಬಳಿಕ 10 ದಿನದಲ್ಲಿ ಟ್ರಸ್ಟ್‌ಗೆ ಭೂಮಿ ಹಸ್ತಾಂತರಿಸುವುದಾಗಿ ಸರ್ಕಾರ ತಿಳಿಸಿದೆ. ಕೇಂದ್ರದ ನಿರ್ಮಾಣ ವೆಚ್ಚವನ್ನು ಅಂದಾಜಿಸಿಲ್ಲ ಎಂದು ಮಾಹಿತಿ ನೀಡಿದರು.

ಜನ ವಿವಿಧ ರೀತಿಯ ಕಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ 2017ರ ಆಗಸ್ಟ್‌ನಿಂದ ಜನವರಿವರೆಗೆ ಸಮೀಕ್ಷೆ ನಡೆಸಿದ್ದು, ಈ ಭಾಗದ ಸಾಕಷ್ಟು ರೋಗಿಗಳು ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಇದನ್ನು ಅರಿತು ಟ್ರಸ್ಟ್‌ ಈ ಭಾಗದಲ್ಲಿ ಕ್ಯಾನ್ಟರ್‌ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾಡಲು ನಿರ್ಧರಿಸಿದೆ. ಇದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಪಕ್ಕದ ಆಂಧ್ರಪ್ರದೇಶದ ಜನರಿಗೂ ಅನುಕೂಲವಾಗುತ್ತದೆ. ಸರ್ಕಾರ ಕೇಂದ್ರಕ್ಕೆ ಹಣಕಾಸು ನೆರವು ನೀಡಲಿದೆ ಎಂದು ವಿವರಿಸಿದರು.

ಸಂಶೋಧನಾ ಕೇಂದ್ರ: ಕ್ಯಾನ್ಸರ್ ಕಾಯಿಲೆಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಬೇಕು. ಉದ್ದೇಶಿತ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಕೇಂದ್ರ, ಹೊರ ಮತ್ತು ಒಳ ರೋಗಿಗಳ ವಿಭಾಗ, ಸಾಮಾನ್ಯ ವಾರ್ಡ್, ವಿಶೇಷ ವಾರ್ಡ್, ರೇಡಿಯೊ ಥೆರಪಿ, ಕಿಮೊ ಥೆರಪಿ, ರಕ್ತ ಪರೀಕ್ಷೆ ಪ್ರಾಯೋಗಾಲಯ, ಶಸ್ತ್ರಚಿಕಿತ್ಸೆ ವಿಭಾಗ ಇರುತ್ತವೆ. ಕ್ಯಾನ್ಸರ್ ಹರಡುವಿಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದರ ಜತೆಗೆ ಪ್ಯಾರಾ ಮೆಡಿಕಲ್, ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು. ಜಿಲ್ಲೆಯ ಜತೆಗೆ ಹೊರಗಿನ ರೋಗಿಗಳು ಬಂದರೂ ಚಿಕಿತ್ಸೆ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ಶ್ರೀನಿವಾಸಪುರ ತಹಶೀಲ್ದಾರ್ ರವಿ, ಟಾಟಾ ಟ್ರಸ್ಟ್‌ನ ಸಲಹೆಗಾರ ವಿಜಯಕುಮಾರ್, ವಾಸ್ತುಶಿಲ್ಪಿ ರವಿಶಂಕರ್, ಕೋಚಿಮುಲ್ ಅಧ್ಯಕ್ಷ ಬ್ಯಾಟಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಹಾಜರಿದ್ದರು.

* * 

ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರವನ್ನು ಕೋಲಾರ ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಕಾಣದ ಕೈಗಳ ಅಸಹಕಾರದಿಂದ ಕೇಂದ್ರಕ್ಕೆ ಜಾಗ ಸಿಗಲಿಲ್ಲ. ಹೀಗಾಗಿ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೇಂದ್ರ ಸ್ಥಾಪಿಸುವ ನಿರ್ಧಾರ ಮಾಡಲಾಯಿತು.

–ಕೆ.ಆರ್‌.ರಮೇಶ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.