ರನ್ನ ನಾಡು: ಗದಾಯುದ್ಧಕ್ಕೆ ತಾಲೀಮು

7

ರನ್ನ ನಾಡು: ಗದಾಯುದ್ಧಕ್ಕೆ ತಾಲೀಮು

Published:
Updated:
ರನ್ನ ನಾಡು: ಗದಾಯುದ್ಧಕ್ಕೆ ತಾಲೀಮು

ಮುಧೋಳ: ರನ್ನ ಕವಿಯ ‘ಗದಾಯುದ್ಧ’ದ ನಾಯಕ–ಪ್ರತಿನಾಯಕರ ಆಡಂಬೋಲವಾದ ಮುಧೋಳದಲ್ಲಿ ಮತದಾರರ ಪ್ರಭುವೇ ನಾಯಕ. ಹಾಗಾಗಿ ಇಲ್ಲಿ ಪಕ್ಷ ಗೌಣ, ಅಭ್ಯರ್ಥಿಗಳೇ ಪ್ರತಿನಾಯಕರು. ಸೋಲು–ಗೆಲುವಿಗೆ ಇಬ್ಬರೂ ಸಮಾನಬಾಧಿತರು.

ಘಟಪ್ರಭೆ ತಟದ ಸಕ್ಕರೆ ಕಣಜ ಎನಿಸಿದ ಮುಧೋಳ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರ. ಈಗಾಗಲೇ ಇಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ರಂಗೇರಿದೆ. ‘ಗದಾಯುದ್ಧ’ಕ್ಕೆ ಸೇನಾನಿಗಳ ಆಯ್ಕೆ ಮಾತ್ರ ಬಾಕಿ ಉಳಿದಿದ್ದರೂ ಬಿಜೆಪಿಯಲ್ಲಿ ಹಾಲಿ ಶಾಸಕ ಗೋವಿಂದ ಕಾರಜೋಳ ಅವರಿಗೆ ಆ ಸ್ಥಾನ ಅಬಾಧಿತವಾಗಿ ಮುಂದುವರೆದಿದೆ. ಆದರೆ ಕಾಂಗ್ರೆಸ್‌ ಪಾಳಯದ ನೇತೃತ್ವ ವಹಿಸಲು ಸಚಿವ ಆರ್.ಬಿ.ತಿಮ್ಮಾಪುರ ಮುಂಚೂಣಿಯಲ್ಲಿದ್ದರೂ ಅವರೊಂದಿಗೆ ಮುಖಂಡರಾದ ಸತೀಶ್ ಬಂಡಿವಡ್ಡರ, ಮುತ್ತಣ್ಣ ಬೆನ್ನೂರ, ಡಾ.ರವೀಂದ್ರ ಲಕ್ಷಣ್ಣವರ ಹಾಗೂ ಕಲ್ಲೋಳ್ಳೆಪ್ಪ ಬಂಡಿವಡ್ಡರ ಟಿಕೆಟ್‌ಗಾಗಿ ಪೈಪೋಟಿಗೆ ಇಳಿದಿದ್ದಾರೆ. ಜೆಡಿಎಸ್‌ನ ತೆನೆ ಹೊತ್ತ ಮಹಿಳೆಯ ಕೈ ಹಿಡಿಯಲು ಶಂಕರನಾಯ್ಕ ಸಜ್ಜಾಗಿದ್ದಾರೆ.

ಮುಧೋಳದಲ್ಲಿ ಇದುವರೆಗೂ ನಡೆದ ಚುನಾವಣೆಯಲ್ಲಿ ಮತದಾರರು ಪಕ್ಷಕಿಂತ ವ್ಯಕ್ತಿಗೆ ಪ್ರಾಧಾನ್ಯತೆ ನೀಡುತ್ತಾ ಬಂದಿದ್ದಾರೆ. ಚುನಾವಣೆ ಬಂತೆಂದರೆ ಅಭ್ಯರ್ಥಿಗಳ ನಡುವೆ ತುರುಸಿನ ಪೈಪೋಟಿ ಸಾಮಾನ್ಯ.

ಮುಧೋಳ ಕ್ಷೇತ್ರ 1978 ರಿಂದಲೂ ಮೀಸಲು (ಎಸ್‌ಸಿ) ಕ್ಷೇತ್ರವಾಗಿದೆ. ಮಾರ್ಪಟ್ಟಿತು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ವೇಳೆ ಮೀಸಲು ಸ್ಥಾನ ಮುಂದುವರೆದಿದೆ. ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ಬಳಿಕ ಹಾಲಿ ಶಾಸಕ ಗೋವಿಂದ ಕಾರಜೋಳ ಹೊರತಾಗಿ ಬೇರೆ ಯಾರೂ ಸತತ ಎರಡು ಬಾರಿ ಆಯ್ಕೆಯಾಗಿಲ್ಲ. ಕಾರಜೋಳ ಇಲ್ಲಿ ಹ್ಯಾಟ್ರಿಕ್ ಸಾಧನೆಯ ಜೊತೆಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಜೊತೆಗೆ ಸಚಿವರಾಗಿಯೂ ಕೆಲಸ ಮಾಡಿ ಗುರುತಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ಹಾಗೂ ಯಡಿಯೂರಪ್ಪ ಅವರೊಂದಿಗಿನಿ ನಿಕಟತೆ ಕಾರಜೋಳ ಅವರಿಗೆ ಟಿಕೆಟ್‌ ಖಾತರಿಪಡಿಸಿದೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಉಳಿದ ಆರು ಕ್ಷೇತ್ರಗಳೂ ಕಾಂಗ್ರೆಸ್‌ ಪಾಲಾಗಿದ್ದರೂ ಮುಧೋಳವನ್ನು ಕಮಲದ ಖಾತೆಯಲ್ಲಿಯೇ ಉಳಿಸಿದ ಶ್ರೇಯ ಮತ್ತು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಅವರ ಬೆನ್ನಿಗಿದೆ.

ವೀಕ್ಷಕರಿಗೆ ಅಹವಾಲು ಸಲ್ಲಿಕೆ: ಇತ್ತೀಚೆಗೆ ಮುಧೋಳಕ್ಕೆ ಬಂದಿದ್ದ ಕೆಪಿಸಿಸಿ ವಿೀಕ್ಷಕರಿಗೆ ಸಚಿವ ಆರ್.ಬಿ.ತಿಮ್ಮಾಪುರ, ಉದ್ಯಮಿ ಸತೀಶ ಬಂಡಿವಡ್ಡರ, ಡಾ.ರವೀಂದ್ರ ಲಕ್ಷಣ್ಣವರ, ಕಲ್ಲೋಳ್ಳೆಪ್ಪ ಬಂಡಿವಡ್ಡರ, ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಬೆಣ್ಣೂರ ಅರ್ಜಿ ಸಲ್ಲಿಸಿದ್ದಾರೆ.

ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಆರ್.ಬಿ.ತಿಮ್ಮಾಪುರ ಈ ಬಾರಿ ವಿಧಾನಪರಿಷತ್‌ ಸದಸ್ಯರಾಗಿದ್ದು, ಮತ್ತೊಮ್ಮೆ ಅವರಿಗೆ ಸಂಪುಟದರ್ಜೆ ಸಚಿವ ಸ್ಥಾನ ಒಲಿದುಬಂದಿದೆ. ಹಾಗಾಗಿ ಪಕ್ಷದಲ್ಲೂ ಪ್ರಭಾವಿಯಾಗಿರುವ ಅವರಿಗೆ ಟಿಕೆಟ್ ತಪ್ಪಿಸುವುದು ಸುಲಭವಲ್ಲ. ಸಚಿವರಾದ ಬಳಿಕ ಹಳೆಯ ಸ್ನೇಹಿತರೊಂದಿನ ಬಾಂಧವ್ಯ ಗಟ್ಟಿ ಮಾಡಿಕೊಂಡಿದ್ದಾರೆ. ಪಕ್ಷದ ಸಂಘಟನೆಗೆ ಹೆಚ್ಚಿನ ಸಮಯ ನೀಡುತ್ತಿದ್ದಾರೆ. ಜನಪರ ಕಾರ್ಯದಲ್ಲಿ ತೊಡಗಿದ್ದಾರೆ ಇವೆಲ್ಲವೂ ಅವರಿಗೆ ಪೂರಕವಾಗಲಿವೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಎರಡೂವರೆ ದಶಕ ಪಕ್ಷ ನಿಷ್ಠೆ, ತಳಮಟ್ಟದಿಂದಲೇ ಪಕ್ಷದ ಸಂಘಟನೆಯಲ್ಲಿ ಕೈ ಜೋಡಿಸಿರುವುದು, ಜನರೊಂದಿಗಿನ ಒಡನಾಟ ಹಾಗೂ ಹೈಕಮಾಂಡ್‌ ನಾಯಕರೊಂದಿಗಿನ ಸಂಪರ್ಕ ಸತೀಶ್ ಬಂಡಿವಡ್ಡರ ಹಾಗೂ ಮುತ್ತಣ್ಣ ಬೆನ್ನೂರ ಅವರಿಗೆ ಶ್ರೀರಕ್ಷೆ. ‘ನಾನು ಈಗಾಗಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದೇನೆ. ಹಾಗಾಗಿ ನನಗೇ ಟಿಕೆಟ್ ಸಿಗಲಿದೆ’ ಎಂದು ಸತೀಶ ಬಂಡಿವಡ್ಡರ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜೆಡಿಎಸ್‌ನಲ್ಲಿ ಶಂಕರ ನಾಯ್ಕ ನಮ್ಮ ಪಕ್ಷದ ಅಭ್ಯರ್ಥಿ ಎಂದು ಇತ್ತೀಚೆಗೆ ಮುಧೋಳದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ..ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಅಲ್ಲಿಯೂ ಯಾವುದೇ ಗೊಂದಲವಿಲ್ಲ.

ಕ್ರೀಡೆ, ಉದ್ಯೋಗ ಮೇಳ..

ಕಾಂಗ್ರೆಸ್ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ಹೈಕಮಾಂಡ್‌ ಎದುರು ಬಲ ಪ್ರದರ್ಶನ ಹಾಗೂ ಮತದಾರರ ಗಮನ ಸೆಳೆಯಲು ಕಬಡ್ಡಿ ಟೂರ್ನಿ ಆಯೋಜಿಸಿದ್ದಾರೆ. ರಿಯಾಯತಿ ದರದಲ್ಲಿ ಉಪಹಾರ ನೀಡುವ ಜೊತೆಗೆ ಮನೆಗೊಂದು ಮರ ಅಭಿಯಾನ, ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಶಿಬಿರ, ಉದ್ಯೋಗ ಮೇಳವನ್ನು ಈಗಾಗಲೇ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಗಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry