ಗುರುವಾರ , ಜೂನ್ 4, 2020
27 °C

ಮತಹಾಕುವುದು ವ್ಯಕ್ತಿಯ ಸ್ವಯಂಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತಹಾಕುವುದು ವ್ಯಕ್ತಿಯ ಸ್ವಯಂಗೌರವ

ಏಳು ದಶಕಗಳ ಸ್ವಾತಂತ್ರ್ಯದ ಅನುಭವ; ಅತ್ಯಂತ ವಿಶಿಷ್ಠವಾದ ಸಂವಿಧಾನ. 16 ಮಹಾ ಚುನಾವಣೆಗಳು, ವಿವಿಧ ರಾಜ್ಯಗಳು, ವಿವಿಧ ಪಕ್ಷಗಳು, ಹಲವಾರು ಧರ್ಮಗಳು, ನೂರಾರು ಜಾತಿಗಳು, ಸಾವಿರಾರು ಆಸಕ್ತಿಗಳು ಹಾಗೂ ಇನ್ನೂ ಹಲವಾರು ವೈವಿಧ್ಯತೆ ಭಾರತವನ್ನು ಒಂದು ಅಸಾಧಾರಣ ದೇಶವನ್ನಾಗಿ ಮಾಡಿರುವುದು ಗಮನೀಯ. 123 ತಿದ್ದುಪಡಿಗಳನ್ನು ಮಾಡಿಸಿಕೊಂಡಿರುವ, 395ರಿಂದ 448ಕ್ಕೆ ಬೆಳೆದಿರುವ ಸಂವಿಧಾನದ ವಿಧಿಗಳು ಭಾರತದ ಈ ವೈವಿಧ್ಯತೆಯ ಸಂಸ್ಕೃತಿಯನ್ನು ರಕ್ಷಿಸುತ್ತ ಬಂದಿವೆ. ಈ ಕಾರಣದಿಂದಾಗಿಯೇ ಭಾರತದ ಸಂವಿಧಾನವು ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದದ್ದು ಹಾಗೂ ‘ಕಾರ್ಯಾಚರಣೆ ಮಾಡುತ್ತಿರುವ ಸಂವಿಧಾನ’ ಎಂದು ಪ್ರಖ್ಯಾತಿ ಪಡೆದಿರುವುದು.

ದೇಶದಲ್ಲಿ ನಡದ ಅನೇಕ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ದುರಂತಗಳನ್ನು ಮೀರಿ ಪ್ರಪಂಚಕ್ಕೆ ಮಾದರಿಯಾಗಿರುವ ಭಾರತಕ್ಕೆ ಸಾಕ್ಷಿಯಾಗಿ ನಿಂತಿರುವುದೇ ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಂಬಿಕೆ ಹಾಗೂ ಆಚರಣೆ. ಪ್ರಜಾಪ್ರಭುತ್ವವನ್ನು ತಳಪಾಯವಾಗಿ ಮಾಡಿಕೊಂಡಿರುವ ನಮ್ಮ ಸಂವಿಧಾನವು ಜನರ ಆದ್ಯತೆಗಳನ್ನು ಪ್ರಮುಖವಾಗಿ ಪರಿಗಣಿಸುವುದರೊಂದಿಗೆ ಈ ದೇಶದ ಭವಿಷ್ಯವನ್ನು ಹಾಗೂ ಬದುಕನ್ನು ರೂಪಿಸಿಕೊಳ್ಳಲು ಅಧಿಕಾರವನ್ನು ಜನರ ಕೈಯಲ್ಲಿ ನೀಡಿರುವುದು ಅತ್ಯಂತ ವಿಶೇಷವಾದ ಬೆಳವಣಿಗೆ. ಪ್ರಜಾಪ್ರಭುತ್ವವನ್ನು ಕಟ್ಟಿ ಬೆಳೆಸುವಲ್ಲಿ ಪ್ರತಿಯೊಬ್ಬ ನಾಗರಿಕನ ಭಾಗವಹಿಸುವಿಕೆಯನ್ನು ಬಯಸುವ ಸಂವಿಧಾನವು ಭಾರತದ ಅಭಿವೃದ್ಧಿಯ ದಿಕ್ಕನ್ನು ಸಂಗಮಗೊಳಿಸಿದೆ.

ಪ್ರಜಾಪ್ರಭುತ್ವದ ಅನೇಕ ಆಯಾಮ ಮತ್ತು ಎಷ್ಟೋ ಅಂಶಗಳನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಕಲ್ಪನೆಯೇ ಅತ್ಯಂತ ಗೌರವಯುತವಾದುದು. ಸಮಾಜದ ವಿವಿಧ ಮೌಲ್ಯದ ಮಿಶ್ರಣವಾಗಿ ಕಾಣುವ ಪ್ರಜಾಪ್ರಭುತ್ವ ಇಂದು ‘ಭಾರತದ ಪ್ರಜಾಪ್ರಭುತ್ವ’ ಎಂಬ ಹೆಸರನ್ನು ಪಡೆದುಕೊಂಡಿದೆ. ಈ ಭಾರತದ ಪ್ರಜಾಪ್ರಭುತ್ವದ ವಿಶೇಷತೆ ಎಂದರೆ ಅದು ಒಂದು ಮೌಲ್ಯವಾಗಿ ಇಂದು ರೂಪುಗೊಂಡಿದೆ. ಈ ಮೌಲ್ಯವನ್ನು ರಕ್ಷಿಸುವುದು, ಬೆಳೆಸುವುದು ಹಾಗೂ ಅದನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿರುತ್ತದೆ ಅಲ್ಲವೇ?

ಒಬ್ಬ ಸಾಮಾನ್ಯ ನಾಗರಿಕ ಪ್ರಜಾಪ್ರಭುತ್ವವನ್ನು ಕಟ್ಟಿಬೆಳೆಸಲು ನಮ್ಮ ಸಂವಿಧಾನ ಹಾಕಿಕೊಳ್ಳುವ ಪ್ರಮುಖ ಸಾಧನವೇ ಮತದಾನ. ಮತದಾನವನ್ನು ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವನ್ನಾಗಿ ಪರಿಗಣಿಸಿ ಅದರ ಮುಖಾಂತರ ಸಾಮಾಜಿಕ, ರಾಜಕೀಯ ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬದಲಾವಣೆ ಮಾಡುವುದು ಸುಲಭದ ಕೆಲಸ ಅಲ್ಲ. ಆದರೂ ಏಳು ದಶಕಗಳಿಂದ ಈ ದೇಶದಲ್ಲಿ ಮತದಾನ ನಡೆಯುತ್ತಿದೆ ಮತ್ತು ಅದರ ಪರಿಣಾಮವನ್ನು ನಾವು ಕಂಡಿದ್ದೇವೆ.

ಪ್ರಜಾಪ್ರಭುತ್ವದ ಭಾಗವಾಗಿರುವ ಮತದಾನವು ಇಂದು ಯುವಕರಿಂದ ಆಕರ್ಷಣೆಗೆ ಒಳಗಾಗದೇ ಇರುವುದು ದುಃಖಕರ ಸಂಗತಿ. ಒಂದು ಸಮಗ್ರ ಬದುಕಿನ ಬದಲಾವಣೆಗಳನ್ನು ಯುವಜನತೆ ಕಾಣಬೇಕಾದರೆ ಅದು ಮತದಾನದ ಮುಖಾಂತರ ಸಾಧ್ಯ ಎಂಬುದನ್ನು ಈಗ ಸಾರಿ ಹೇಳುವ ಕಾಲ ಬಂದಿದೆ. ದೇವರು– ಧರ್ಮ– ಸಂಸ್ಕೃತಿ ಎಂಬ ವಿಷಯಗಳನ್ನು ನಾವು ಹೀಗೆ ನಮ್ಮ ಹೃದಯದಲ್ಲಿ ಸೂಕ್ಷ್ಮವಾಗಿ ಕಾಯ್ದಿರಿಸಿಕೊಂಡಿದ್ದೇವೆಯೊ, ಹಾಗೆಯೇ ಮತದಾನವನ್ನು ಅಷ್ಟೇ ಪಾವಿತ್ರ್ಯದಿಂದ ರಕ್ಷಣೆ ಮಾಡುವುದು ಹಾಗೂ ಆಚರಣೆಗೆ ತರುವುದು ಕೂಡ ಆಗಬೇಕಾಗಿದೆ. ನಮ್ಮ ಇಂದಿನ ಪರಿಸ್ಥಿತಿಯಲ್ಲಿ ಮತದಾನವನ್ನು ಬದುಕಿನಿಂದ ಹೊರಗಿನ ವಿಷಯವೆಂದು ಪರಿಗಣಿಸುವುದು ಸರಿಯಲ್ಲ. ಬದಲಾಗಿ ಅದು ಬದುಕಿನೊಡನೆ ಅವಿಭಾಜ್ಯವಾದ ಅಂಗವೆಂದು ಪರಿಗಣಿಸಿ ಬದುಕುವ ಯುವ ಸಮುದಾಯ ಈ ರಾಷ್ಟ್ರಕ್ಕೆ ಇಂದು ಅಗತ್ಯವಾಗಿದೆ.

ಈ ದೇಶದ ಪ್ರಜಾಪ್ರಭುತ್ವ ರಾಜಕಾರಣ ಉಳಿಸಲು ಬೆಳೆಸಲು ಎಲ್ಲ ಯುವ ಮನಸ್ಸುಗಳು ಹಾಗೂ ಯುವಕರು ಒಂದು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ‘ನಾವು ನಮ್ಮ ಭೌವಿಷ್ಯವನ್ನು ರೂಪಿಸಿಕೊಳ್ಳಲು ಶಾಂತಿಯುತವಾದ ಮತದಾನವೆಂಬ ಅಸ್ತ್ರವನ್ನು ಬಲಿಷ್ಠವಾದ ಸಾಂವಿಧಾನಿಕ ಸವಲತ್ತನ್ನು ಬಳಸುತ್ತೇವೆ. ಮಾತದಾನ ಮಾಡದೇ ಇರುವುದು ದೇಶದ್ರೋಹದ ಕೆಲಸ ಎಂದು ಪರಿಗಣಿಸುತ್ತೇವೆ. ಮತದಾನವನ್ನು ಸಮಾನತೆಯ ಬುನಾದಿ ಎಂದು ಪರಿಗಣಿಸುತ್ತೇವೆ. ಮತದಾನವು ಈ ದೇಶಕ್ಕೆ ನಾವು ಕೊಡುವ ಅತ್ಯಂತ ದೊಡ್ಡ ಕೊಡುಗೆ ಎಂದು ಪರಿಗಣಿಸುತ್ತೇವೆ’.

ಹೀಗೆ ಯುವಕರು ನಮ್ಮತನ ಇರುವ ಸಂವಿಧಾನ ಮತ್ತು ನಮ್ಮ ಕರ್ತವ್ಯದ ಕುರಿತು ಜಾಗೃತರಾಗಬೇಕು. ಜಾಗೃತ ಸಮಾಜ ಮತ್ತು ಜಾಗೃತ ಮನಸ್ಸು ಒಟ್ಟಿಗೆ ಸೇರಿ ಜಾಗರೂಕತೆಯ ಅಭಿವೃದ್ಧಿಗೆ ಸಾಕ್ಷಿಯಾಗುತ್ತದೆ.

ಡಾ.ಪಿ.ಎಲ್‌. ಧರ್ಮ (ಲೇಖಕರು ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಮಂಗಳೂರು ವಿಶ್ವವಿದ್ಯಾಲಯ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.