ಬುಧವಾರ, ಡಿಸೆಂಬರ್ 11, 2019
16 °C

ಚಾರ್ಲೊಟ್ಟೆ ಕಲ್ಲಾಗೆ ಚಿನ್ನ

Published:
Updated:
ಚಾರ್ಲೊಟ್ಟೆ ಕಲ್ಲಾಗೆ ಚಿನ್ನ

ಪ್ಯೊಂಗ್‌ಯಾಂಗ್‌ (ಎಎಫ್‌ಪಿ): ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾಕೂಟ ಮೊದಲದಿನವೇ ಚಿನ್ನದ ಬೇಟೆ ಆರಂಭವಾಗಿದೆ. ಸ್ವೀಡನ್‌ನ ಚಾಲ್ಲೊಟ್ಟೆ ಕಲ್ಲಾ ಮೊದಲ ಚಿನ್ನ ಪಡೆಯುವ ಮೂಲಕ ಇತಿಹಾಸ ಬರೆದರು. ಐಸ್‌ಹಾಕಿ ಸ್ಪ‍ರ್ಧೆಯಲ್ಲಿ ಕೊರಿಯಾದ ಜಂಟಿತಂಡವು ಸ್ಪರ್ಧಿಸುವ ಮೂಲಕ ಕ್ರೀಡಾಕೂಟದಲ್ಲಿ ಗಮನಸೆಳೆಯಿತು.

ಸ್ವೀಡನ್‌ಗೆ ಮೊದಲ ಪದಕ: 7.5 ಕಿ.ಮೀ ಕ್ರಾಸ್‌ಕಂಟ್ರಿ ಸ್ಕಿಯಾಥ್ಲಾನ್‌ ಸ್ಪರ್ಧೆಯಲ್ಲಿ ಸ್ವೀಡನ್‌ನ ಚಾಲ್ಲೊಟ್ಟೆ ಕಲ್ಲಾ  ಚಿನ್ನ ಪಡೆದರೆ, ನಾರ್ವೆಯ ಮ್ಯಾರಿಟ್‌ ಬ್ಜೊರ್‌ಗೆನ್‌ ಬೆಳ್ಳಿ ಪದಕ ಪಡೆದರು. ಮ್ಯಾರಿಟ್‌ ಅವರು ಈ ಮೂಲಕ ಒಲಿಂಪಿಕ್ಸ್‌ನಲ್ಲಿ 11ನೇ ಪದಕ ಪಡೆದಿದ್ದು, ಚಳಿಗಾಲದ ಒಲಿಂಪಿಕ್ಸ್‌ ಗರಿಷ್ಠ ಪದಕ ಪಡೆದ ಇತಿಹಾಸ ಸೃಷ್ಟಿಸಿದರು. 2010 ಹಾಗೂ 2014ರಲ್ಲಿ ಕ್ರಮವಾಗಿ ನಾಲ್ಕು ಹಾಗೂ ಮೂರು ಚಿನ್ನದ ಪದಕ ಪಡೆದಿದ್ದರು. ಫಿನ್ಲೆಂಡ್‌ನ ಕ್ರಿಸ್ಟಾ ಪರಮಕೊಸ್ಕಿ ಕಂಚಿನ ಪದಕ ಪಡೆದರು.

34ನೇ ಸ್ಥಾನ ಪಡೆದ ಶಿವ ಕೇಶವನ್‌: ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಲೂಜ್‌ ಸ್ಪರ್ಧೆಯಲ್ಲಿ ಎರಡನೇ ಸುತ್ತಿನ ಬಳಿಕ ಭಾರತದ ಶಿವ ಕೇಶವನ್‌ 34ನೇ ಸ್ಥಾನ ಪಡೆದರು.

ಮೊದಲ ಸುತ್ತಿನಲ್ಲಿ 36ನೇ ಸ್ಥಾನ ಪಡೆದ ಅವರು, ಎರಡನೇ ಸುತ್ತಿನಲ್ಲಿ 31ನೇ ಸ್ಥಾನ ಪಡೆದರು. ಒಟ್ಟಾರೆ ಸ್ಪರ್ಧೆಯಲ್ಲಿ ಸರಾಸರಿಯಲ್ಲಿ 34ನೇ ಸ್ಥಾನ ಪಡೆದರು. ಎರಡು ಸುತ್ತು ಕೂಡ ತುರುಸಿನ ಸ್ಪರ್ಧೆ ನಡೆದಿತ್ತು. 1,344 ಮೀಟರ್‌ ಟ್ರ್ಯಾಕ್‌ನ್ನು ಮೊದಲ ಸುತ್ತಿನಲ್ಲಿ 50.578 ಸೆಕೆಂಡುಗಳ ಅಂತರದಲ್ಲಿ ಕ್ರಮಿಸಿದರೆ, ಎರಡನೇ ಸುತ್ತಿನಲ್ಲಿ 48.690 ಸೆಕೆಂಡುಗಳಲ್ಲಿ ಕ್ರಮಿಸಿದರು.

ಆಟದ ಆರಂಭದಲ್ಲಿ ಎಡ ಮತ್ತು ಬಲಕ್ಕೆ ವಾಲಿದರೂ ನಂತರ ಆಟದಲ್ಲಿ ಹಿಡಿತ ಸಾಧಿಸಿದರು. ಶಿವ ಆಟದ ವೇಳೆ ಸಾಕಷ್ಟು ಸಂಖ್ಯೆಯಲ್ಲಿದ್ದ ಭಾರತದ ಪ್ರೇಕ್ಷಕರು ಹಾಗೂ ಅವರ ಕುಟುಂಬಸ್ಥರು ಭಾರತದ ಧ್ವಜ ಹಿಡಿದು ಸಂಭ್ರಮಿಸಿದರು. ಭಾನುವಾರ ನಡೆಯಲಿರುವ ಸ್ಪರ್ಧೆಯಲ್ಲಿ ಅಂತಿಮ ಫಲಿತಾಂಶ ಹೊರಬೀಳಲಿದೆ.

ಇಂಟರ್‌ನೆಟ್‌ ಸ್ಥಗಿತದ ಬಗ್ಗೆ ತನಿಖೆ: ಶುಕ್ರವಾರ ಉದ್ಘಾಟನಾ ಕಾರ್ಯಕ್ರಮದ ವೇಳೆ ಇಂಟರ್‌ನಲ್‌ ಇಂಟರ್‌ನೆಟ್‌ ಹಾಗೂ ವೈ–ಫೈ ಸ್ಥಗಿತಗೊಂಡ ಬಗ್ಗೆ ದಕ್ಷಿಣ ಕೊರಿಯಾವು ತನಿಖೆಗೆ ಆದೇಶಿಸಿದೆ. ದಕ್ಷಿಣ ಕೊರಿಯಾದ ರಕ್ಷಣಾಇಲಾಖೆಯ ಸೈಬರ್‌ತಜ್ಞರ ತಂಡ, ಇತರೆ ನಾಲ್ಕು ಇಲಾಖೆಯ ತಂಡದ ತಜ್ಞರನ್ನು ತನಿಖೆಗೆ ಸೇರಿಸಲಾಗಿದೆ. ಇದರ ಹೊರತಾಗಿಯೂ ಹೈಟೆಕ್‌ ಉದ್ಘಾಟನಾ ಸಮಾರಂಭಕ್ಕೆ ಯಾವುದೇ ತೊಂದರೆಯಾಗಿರಲಿಲ್ಲ.

ಪ್ರತಿಕ್ರಿಯಿಸಿ (+)