ನೆಲ, ಜಲ ಸಮಸ್ಯೆ ಜೀವಂತ: ಹಿರೇಮಠ ವಿಷಾದ

7
ಬನ್ನಿಕೊಪ್ಪದಲ್ಲಿ ಶಿರಹಟ್ಟಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ; ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸಲು ಸಲಹೆ

ನೆಲ, ಜಲ ಸಮಸ್ಯೆ ಜೀವಂತ: ಹಿರೇಮಠ ವಿಷಾದ

Published:
Updated:
ನೆಲ, ಜಲ ಸಮಸ್ಯೆ ಜೀವಂತ: ಹಿರೇಮಠ ವಿಷಾದ

ಶಿರಹಟ್ಟಿ(ವೆಂಕೋಬರಾಯರ ವೇದಿಕೆ): ‘ಕರ್ನಾಟಕ ಏಕೀಕರಣ ಗೊಂಡು 60 ವರ್ಷ ಕಳೆದರೂ ನೆಲ, ಜಲ ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ರಾಜಕಾರಣಿಗಳ ದಿಟ್ಟ ನಿಲುವಿನ ಕೊರತೆಯೇ ಇದಕ್ಕೆ ಕಾರಣ’ ಎಂದು ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿ.ಜಿ.ಹಿರೇಮಠ ಹೇಳಿದರು.

ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಅನ್ನದಾನೀಶ್ವರ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

‘ಇತ್ತೀಚಿನ ಸಾಹಿತ್ಯ ವಲಯದಲ್ಲೂ ಬದ್ಧತೆ ಉಳಿದಿಲ್ಲ. ಸಾಮಾಜಿಕ ಮೌಲ್ಯ ಗಳನ್ನು ಬೆಳಸಬೇಕಾದ ಸಾಹಿತಿಗಳು ಜಾತಿ, ಧರ್ಮ, ಪ್ರಾದೇಶಿಕತೆ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾಲೆಳೆಯುವ ಪರಂಪರೆ, ಮನಸ್ಸು ಗಳನ್ನು ಒಡೆಯುವ ಕೆಲಸ, ರಾಜಕೀಯ ವ್ಯಾಪಾರೀಕರಣ, ಶಕ್ತಿ ಪ್ರದರ್ಶನ ಮಾಡುತ್ತಿರುವುದು ದುರ್ದೈವದ ಸಂಗತಿ. ಸಾಹಿತಿ ಎಂದರೆ ಸಂಶಯದಿಂದ ಹಾಗೂ ಅಸಹ್ಯವಾಗಿ ನೋಡುವಂತಹ ಪರಿಸ್ಥಿತಿ ಇದೆ. ಸಾಹಿತಿಯಾದವನು ದೀಪ ಹಚ್ಚುವ ಕೆಲಸ ಮಾಡಬೇಕು, ಅದನ್ನು ಬಿಟ್ಟು ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗಬಾರದು’ ಎಂದರು.

‘ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಒಂದೆಡೆಯಾದರೆ, ಕನ್ನಡಕ್ಕೆ ದ್ರೋಹ ಬಗೆದು ಸಮಾಜ ಲೂಟಿ ಹೊಡೆಯುವ ಸಂಸ್ಥೆಗಳು ಇನ್ನೊಂದೆಡೆ ಇವೆ. ಈ ಬಗ್ಗೆ ಉನ್ನತ ಮಟ್ಟದ ಚರ್ಚೆಗಳು ನಡೆಯಬೇಕಿದೆ. ಕನ್ನಡ ಭಾಷೆ ಉಳಿಯಬೇಕಾದರೆ, ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಭಂಡಾರಕ್ಕೆ 12ನೇ ಶತಮಾನದ ಶರಣ ಸಾಹಿತ್ಯದ ಕೊಡುಗೆ ಅತ್ಯಮೂಲ್ಯವಾಗಿದೆ. ಪುರಂದರ ದಾಸರು, ಕನಕದಾಸರು ಸೇರಿದಂತೆ ಹಲವರು ಕನ್ನಡ ಸಾಹಿತ್ಯ ಶ್ರೀಮಂತ ಗೊಳಿಸಿದ್ದಾರೆ’ ಎಂದು ಮುಂಡರಗಿಯ ಅನ್ನದಾನೀಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮುಂಬೈ, ಮದ್ರಾಸ್‌, ಹೈದ್ರಾಬಾದ್ ಪ್ರಾಂತ್ಯಗಳಿಗೆ ಹರಿದು ಹಂಚಿಹೋಗಿದ್ದ ಕರ್ನಾಟಕ ಹಲವಾರು ಸ್ಥಳಗಳನ್ನು ಒಟ್ಟು ಗೂಡಿಸಿ ಸಮಗ್ರ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಅನೇಕ ಹೋರಾಟಗಾರರ ಶ್ರಮ ಅನನ್ಯವಾಗಿದೆ’ ಎಂದು ಸಮ್ಮೇಳನ ಉದ್ಘಾಟಿಸಿದ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಶಿರಹಟ್ಟಿ ಕ್ಷೇತ್ರ ಭಾವೈಕ್ಯ ಹಾಗೂ ಸೌಹಾರ್ದಕ್ಕೆ ಪ್ರಖ್ಯಾತಿ ಪಡೆದಿದೆ. ಫಕೀರೇಶ್ವರ ಮಠ, ಸಸ್ಯಕಾಶಿ ಕಪ್ಪತ ಗುಡ್ಡ, ಶ್ರೀಮಂತಗಡ, ರಾಮಲಿಂಗೇಶ್ವರ ಸೇರಿದಂತೆ ಹಲವು ಪವಿತ್ರ ಸ್ಥಳಗಳನ್ನು ಹೊಂದಿದೆ’ ಎಂದರು.

ಬನ್ನಿಕೊಪ್ಪ ಬೃಹನ್ಮಠದ ಡಾ.ಸುಜ್ಞಾನ ದೇವ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್‌.ಪಿ.ಬಳಿಗೇರ, ರೇಖಾ ಅಳವಂಡಿ ಭಾಗವಹಿಸಿದ್ದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಿರಿಜಾ ಶಂಕ್ರಪ್ಪ ಕುರಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಬುಡನಶಾ ಮಕಾಂದರ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಉಮಾ ಹೊನಗಣ್ಣವರ, ದೇವಪ್ಪ ಲಮಾಣಿ, ಎಚ್‌.ಡಿ.ಮಾಗಡಿ, ಶಿವ ಪ್ರಕಾಶ ಮಹಾಜನಶೆಟ್ಟರ, ಭೀಮಸಿಂಗ್‌ ರಾಠೋಡ, ಎಂ.ಎಸ್‌.ದೊಡ್ಡಗೌಡರ, ತಿಮ್ಮರಡ್ಡಿ ಅಳವಂಡಿ, ಆರ್‌.ಆರ್‌.ಗಡ್ಡದೇವರಮಠ ಇದ್ದರು.

ಕನ್ನಡ ಸಾಹಿತ್ಯ ಪರಿಷತ್‌ ಶಿರಹಟ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ ಸ್ವಾಗತಿಸಿದರು. ಸಮ್ಮೇಳನದಲ್ಲಿ ವಿವೇಕಾನಂದ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಹುಬಲಿ ಜೈನರ, ಎನ್‌.ಸಿ.ಹಿರೇಮಠ ಕಾರ್ಯಕ್ರಮ ನಿರೂಪಿಸಿ ದರು. ಎಂ.ಎ.ಮಕಾಂದಾರ ವಂದಿಸಿದರು.

_ ಮಂಜುನಾಥ ಅರಪಲ್ಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry