ಬುಧವಾರ, ಡಿಸೆಂಬರ್ 11, 2019
26 °C
‘ಸಾಧನೆಯ ಶಿಖರಾರೋಹಣ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಹೇಳಿಕೆ

ಅಧಿಕಾರ ಬಿಸಿಲು ಕುದುರೆಯಂತೆ; ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕಾರ ಬಿಸಿಲು ಕುದುರೆಯಂತೆ; ದೇವೇಗೌಡ

ಮೈಸೂರು: ‘ಪ್ರಜೆಗಳ ರಕ್ಷಣೆಗೆ ಕುಳಿತವರು ತೆಗೆದುಕೊಳ್ಳುವ ನಿರ್ಧಾರದಲ್ಲಿ ಸಣ್ಣ ಲೋಪವಾದರೂ ಸಮಸ್ಯೆ ಆಗುತ್ತದೆ. ಈ ಬಗ್ಗೆ ಅಧಿಕಾರದಲ್ಲಿ ಇರುವವರು ಎಚ್ಚರ ವಹಿಸಬೇಕು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪ್ರಧಾನಮಂತ್ರಿಗಳಾಗಿ ಎಚ್‌.ಡಿ.ದೇವೇಗೌಡ ಅವರ ಸಾಧನೆ ಕುರಿತ ‘ಸಾಧನೆಯ ಶಿಖರಾರೋಹಣ’ ಕೃತಿಯ ಪರಿಷ್ಕೃತ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ಅಧಿಕಾರದಲ್ಲಿದ್ದಾಗ ನಿರ್ಣಯ ತೆಗೆದುಕೊಂಡು ಮನೆಗೆ ಬಂದು ಅವುಗಳ ಸಾಧಕ–ಬಾಧಕವನ್ನು ವಿಶ್ಲೇಷಿಸುತ್ತಿದ್ದೆ. ಅವುಗಳಲ್ಲಿ ಮಾರ್ಪಾಡು ಮಾಡಬೇಕೇ ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೆ’ ಎಂದರು.

ಅಧಿಕಾರ ಎನ್ನುವುದು ಬಿಸಿಲು ಕುದುರೆ ಇದ್ದಂತೆ. ಅದರ ಹಿಂದೆ ಓಡುವವರು ಪೆಟ್ಟು ತಿನ್ನುತ್ತಾರೆ. ದೇಶದ ಇಂದಿನ ಸ್ಥಿತಿ ನೋಡಿದಾಗ ಮನಸ್ಸಿನಲ್ಲಿ ಸಹಿಸಲು ಸಾಧ್ಯವಾಗುತ್ತಿಲ್ಲ. ದೇಶದ ಬಗ್ಗೆ ಆಲೋಚನೆ ಮಾಡಿದಾಗ ಸಹನೆಯ ಕಟ್ಟೆ ಮೀರುತ್ತಿದೆ. ಕರ್ನಾಟಕದ ರಾಜಕಾರಣದ ಬಗ್ಗೆಯೂ ಬೇಸರ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ತಪ್ಪನ್ನು ತಿಳಿಸಿ: ‘ನಾನು ತಪ್ಪು ಮಾಡಿದ್ದರೆ ಅದನ್ನು ತಿಳಿಸಬೇಕು. ಮುಂದಿನ ಪುಸ್ತಕದಲ್ಲಿ ಅದನ್ನೂ ನಮೂದು ಮಾಡುತ್ತೇನೆ. ನನ್ನ ಜೀವನ ಚರಿತ್ರೆಯನ್ನು ಮಗಳು ಬರೆಯುತ್ತಿದ್ದಾಳೆ. ಪತ್ನಿ ಚೆನ್ನಮ್ಮ ಅವರ ಕುರಿತ ಪುಸ್ತಕವನ್ನು ನಾನೇ ಬರೆಯುತ್ತೇನೆ. ಅದು ಈ ಹೋರಾಟದ ವಿರಾಮದ ಬಳಿಕ’ ಎಂದು ಹೇಳಿದರು.

‘ಶಿಖರಾರೋಹಣ ಕೃತಿಯಲ್ಲಿ ನನ್ನ 11 ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಒಂದು ದೋಷವನ್ನಾದರೂ ಹುಡುಕಬೇಕಿತ್ತು. ನಾನೂ ತಪ್ಪು ಮಾಡಿದ್ದೇನೆ. ಅದಕ್ಕೆ ತಕ್ಕ ಶಿಕ್ಷೆ ಆಗಿದೆ. ತಪ್ಪು ಮಾಡಬಾರದು ಎಂಬ ಪಾಠವನ್ನೂ ಕಲಿತಿದ್ದೇನೆ. ಅಧಿಕಾರದ ವ್ಯಾಮೋಹ ಎಂಬುದು ರಾಜಕಾರಣಿಗಳಲ್ಲಿ ಇರುವ ಕೆಟ್ಟ ಗುಣ. ಶಾಸಕನಾಗಬೇಕು, ಮಂತ್ರಿಯಾಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಲ್ಲೇ ಇರುತ್ತಾರೆ’ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಕೃತಿ ಬಿಡುಗಡೆ ಮಾಡಿದರು. ವಿಶ್ರಾಂತ ಕುಲಪತಿ ಡಾ.ಬಿ.ಷೇಕ್‌ ಅಲಿ ಅಧ್ಯಕ್ಷತೆ ವಹಿಸಿದ್ದರು.

ಚೆನ್ನಮ್ಮ ದೇವೇಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ, ಲೇಖಕರಾದ ಡಾ.ಪ್ರಧಾನ್‌ ಗುರುದತ್ತ, ಡಾ.ಸಿ.ನಾಗಣ್ಣ ಇದ್ದರು.

**

ದೇಶದ ಸ್ಥಿತಿ ಬಗ್ಗೆ ನೊಂದುಕೊಳ್ಳುತ್ತೇನೆ: ಇಂದು ದೇಶದ ಸ್ಥಿತಿ ದಾರಿ ತಪ್ಪುತ್ತಿದ್ದು, ಅದರ ಬಗ್ಗೆ ಬೇಸರ ಇದೆ. ಅದನ್ನು ಸರಿಪಡಿಸುವವರು ಯಾರೋ ಗೊತ್ತಿಲ್ಲ. ಎಲ್ಲ ಸಮಸ್ಯೆಗಳನ್ನು ಎದುರಿಸುವ ಪ್ರಬುದ್ಧತೆ ಇದೆ ಎಂದು ದೇವೇಗೌಡ ತಿಳಿಸಿದರು.

‘ಪ್ರಧಾನಿಯಾಗಿದ್ದ 10 ತಿಂಗಳು 10 ದಿನ ನನ್ನ ಪಾಲಿಗೆ ಅಗ್ನಿಪರೀಕ್ಷೆ. ಆ ದಿನಗಳಲ್ಲಿ 20 ಗಂಟೆ ಕೆಲಸ ಮಾಡುತ್ತಿದ್ದೆ. ರಾಷ್ಟ್ರರಾಜಕಾರಣದಲ್ಲಿ ಉತ್ತರದವರ ಜತೆ ದಕ್ಷಿಣದವರು ಉಳಿಯುವದು ಕಷ್ಟ. ಅವರ ಬಗ್ಗೆ ಯಾರೂ ಚಕಾರ ಎತ್ತಲು ಸಾಧ್ಯವಿಲ್ಲ ಎಂದರು.

ಅಧಿಕಾರಕ್ಕೆ ಅಂಟಿಕೊಂಡವನಲ್ಲ: ಅಧಿಕಾರಕ್ಕೆ ಅಂಟಿಕೊಂಡ್ಡಿದ್ದರೆ ನಾನು ಸ್ವಾಭಿಮಾನ ಕಳೆದುಕೊಳ್ಳಬೇಕಿತ್ತು. ಯಾವುದೇ ಕಾರಣಕ್ಕೂ ದಾರಿ ತಪ್ಪಬಾರದು ಎಂದು ನಿರ್ಧಾರ ಮಾಡಿದ್ದೆ. ಕಾಂಗ್ರೆಸ್‌ನವರನ್ನು ಕೇಳಿ ನಿರ್ಣಯ ಮಾಡಬೇಕು. ಅಲ್ಲದೆ, ಇದುವರೆಗೆ ತೆಗೆದುಕೊಂಡ ನಿರ್ಣಯಕ್ಕೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ ಮುಖಂಡ ಧವನ್‌ ಹೇಳಿದ್ದರು. ಪ್ರಧಾನಮಂತ್ರಿ ಸ್ಥಾನದ ಮೇಲೆ ಗೌರವ ಇಟ್ಟು ಅವರು ಹೇಳಿದ್ದಕ್ಕೆ ಒಪ್ಪದೆ ಅಧಿಕಾರ ಕಳೆದುಕೊಂಡೆ. ಈ ಕಾರಣದಿಂದಾಗಿಯೇ ನರೇಂದ್ರ ಮೋದಿ ಅವರ ಬಗ್ಗೆ ಅನವಶ್ಯಕವಾಗಿ ಮಾತನಾಡುವುದಿಲ್ಲ. ತಪ್ಪು ಮಾಡಿದಾಗ ಅವರಲ್ಲಿಯೇ ತಿಳಿಸುತ್ತೇನೆ ಎಂದು ದೇವೇಗೌಡ ಹೇಳಿದರು.

ಪ್ರತಿಕ್ರಿಯಿಸಿ (+)