ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ನರಕ ಸದೃಶ ಕೊಳೆಗೇರಿಗಳು: ಬಿಜೆಪಿ ಸಮೀಕ್ಷಾ ವರದಿ

Last Updated 11 ಫೆಬ್ರುವರಿ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸ್ಲಂ ಮೋರ್ಚಾದ ಕಾರ್ಯಕರ್ತರು ಕೊಳೆಗೇರಿಗಳಿಗೆ ಭೇಟಿ ನೀಡಿ ಸಿದ್ಧಪಡಿಸಿರುವ ‘ಸ್ಲಮ್ ದುರ್ಭಾಗ್ಯ– ಇದು ನಾಗರಿಕತೆಯಲ್ಲ ನರಕದ ಕತೆ’ ಎಂಬ ಸಮೀಕ್ಷಾ ವರದಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭಾನುವಾರ ಬಿಡುಗಡೆ ಮಾಡಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಮೋರ್ಚಾ ಅಧ್ಯಕ್ಷ ಜಯಪ್ರಕಾಶ್ ಅಂಬಾರ್ಕರ್ ನೇತೃತ್ವದಲ್ಲಿ ಚಾಮರಾಜ ನಗರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ತುಮಕೂರು ಜಿಲ್ಲೆಗಳನ್ನು ಬಿಟ್ಟು ಉಳಿದ ಜಿಲ್ಲೆಗಳ ಕೊಳೆಗೇರಿಗಳಲ್ಲಿ ಸಮೀಕ್ಷೆ ನಡೆದಿದೆ.

ರಾಜ್ಯದಲ್ಲಿ 2,804 ಕೊಳೆಗೇರಿಗಳಿದ್ದು, 40.50 ಲಕ್ಷ ಜನ ವಾಸಿಸುತ್ತಿದ್ದಾರೆ. 976 ಕೊಳೆಗೇರಿಗಳ 46 ಸಾವಿರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಈ ಮನೆಗಳಲ್ಲಿ 16.71 ಲಕ್ಷ ಮಂದಿ ವಾಸಿಸುತ್ತಿದ್ದಾರೆ.

ಕರ್ನಾಟಕದಲ್ಲಿ 100 ಜನರ ಪೈಕಿ 5 ಜನ ಹಾಗೂ ಬೆಂಗಳೂರಿನಲ್ಲಿ 100 ಜನರ ಪೈಕಿ 14 ಜನ ಕೊಳೆಗೇರಿಗ ಳಲ್ಲಿದ್ದಾರೆ. ಒಂದು ಚದರಡಿ ಅಳತೆಯ ಜಾಗದಲ್ಲಿ 10ಜನ ಬದುಕುತ್ತಿದ್ದಾರೆ ಎಂದೂ ಸಮೀಕ್ಷೆ ವಿವರಿಸಿದೆ.

100ಕ್ಕಿಂತ ಕಡಿಮೆ ಜನ ವಾಸಿಸುವ 73, 10,000ಕ್ಕಿಂತ ಕಡಿಮೆ ಜನ ವಾಸಿಸುವ 16 ಹಾಗೂ 50,000ಕ್ಕೂ ಹೆಚ್ಚು ಜನ ಇರುವ ಬೆಂಗಳೂರಿನ ದೇವರ ಜೀವನಹಳ್ಳಿ ಕೊಳೆಗೇರಿಯಲ್ಲಿ ಸಮೀಕ್ಷೆ ನಡೆಸಲಾಗಿದೆ. ಅವಶ್ಯ ಇರುವಷ್ಟು ನೀರಿನ ವ್ಯವಸ್ಥೆ ಇಲ್ಲದೇ ಇರುವುದು ಎದ್ದು ಕಾಣಿಸಿದೆ. ಸಾರ್ವ ಜನಿಕ ಶೌಚಾಲಯ, ರಸ್ತೆ, ಆಸ್ಪತ್ರೆ, ಶಾಲೆಗಳು ಇಲ್ಲ. ಮನೆಗಳ ಮುಂದೆ ಕೊಳೆತು ನಾರುವ ಚರಂಡಿಗಳು ಕಣ್ಣಿಗೆ ರಾಚುವಂತೆ ಇದೆ. ಇಲ್ಲಿರುವ ಹಿರಿಯ ನಾಗರಿಕರು ಹಸಿವು ಹಾಗೂ ರೋಗದಿಂದ ಬಳಲುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ ಎಂದು ವರದಿ ಹೇಳಿದೆ.

ಸಮೀಕ್ಷೆ ನಡೆಸಲಾದ ಕೊಳೆಗೇರಿಗಳಲ್ಲಿ ಶೇ 20.5 ರಷ್ಟು ಪರಿಶಿಷ್ಟ ಜಾತಿ, ಶೇ 5.2ರಷ್ಟು ಪರಿಶಿಷ್ಟ ಪಂಗಡದ ಸಮುದಾಯವರು ವಾಸಿಸುತ್ತಿದ್ದಾರೆ. ಶೇ 41 ರಷ್ಟು ಜನರು ಜಾತಿ ಮಾಹಿತಿ ನೀಡಿಲ್ಲ. ಹಿಂದುಳಿದ ಸಮುದಾಯಕ್ಕೆ ಸೇರಿದವರು ಶೇ 7.6ರಷ್ಟು ಜನರಿದ್ದಾರೆ.

ತಾವು ವಾಸಿಸುವ ಜಾಗ ಯಾರಿಗೆ ಸೇರಿದ್ದು ಎಂಬ ಬಗ್ಗೆ ಶೇ 11.8 ಜನರಿಗೆ ಮಾಹಿತಿ ಇಲ್ಲ. ಶೇ 59ರಷ್ಟು ಭೂಮಿ ಸರ್ಕಾರಿ ಭೂಮಿ. ಕೆಲವು ಪ್ರದೇಶಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಸೇರಿದ ಜಮೀನಿನಲ್ಲಿವೆ ಎಂದು ವರದಿ ಸ್ಪಷ್ಟಪಡಿಸಿದೆ.

ಜನರ ಬದುಕಿನ ಕಣ್ಣೀರ ಕಥನ

‘ಒಂದು ಸಾವಿರ ಕಾರ್ಯಕರ್ತರು ಒಂದು ವರ್ಷ  ಸಮೀಕ್ಷೆ ನಡೆಸಿದ್ದಾರೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಲಸ ಮಾಡಿಲ್ಲ’ ಎಂದು ಎನ್‌. ರವಿಕುಮಾರ್ ಹೇಳಿದರು.

‘ಶೇ 59ರಷ್ಟು ಕೊಳಚೆ ಪ್ರದೇಶದ ಮಾಲೀಕತ್ವ ಸರ್ಕಾರದ ಕೈಯಲ್ಲಿದೆ. ಆದರೂ ಹಕ್ಕುಪತ್ರ ವಿತರಿಸಿಲ್ಲ. ಸರ್ಕಾರ ಈ ಜನರನ್ನು ಮತ ಬ್ಯಾಂಕ್ ಎಂದಷ್ಟೇ ಭಾವಿಸಿದೆ. ಅಲ್ಲಿನ ಜನರ ಬದುಕು ನೋಡಿದರೆ ಕಣ್ಣೀರು ಬರುತ್ತದೆ. ನರಕ ಸದೃಶ ಬದುಕಿನ ಕಥನದ ವರದಿಯನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಲು ಪಕ್ಷ ನಿರ್ಧರಿಸಿದೆ’ ಎಂದು ಅವರು ಹೇಳಿದರು.

ದ.ಕ, ಉಡುಪಿಯಲ್ಲಿ ಕೊಳೆಗೇರಿ ವಾಸ್ತವ್ಯ ನಡೆದಿಲ್ಲ

ಮಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಬಿಜೆಪಿ ನಾಯಕರು ಶನಿವಾರ ರಾತ್ರಿ ಕೊಳೆಗೇರಿಗಳಲ್ಲಿ ವಾಸ್ತವ್ಯ ಮಾಡಿದ್ದರೂ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ನಡೆಯಲಿಲ್ಲ. ಇದೇ 18ರಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪ್ರವಾಸ ಆಯೋಜನೆ ಆಗಿರುವುದರಿಂದ ಈ ರಿಯಾಯಿತಿ ಸಿಕ್ಕಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ತಿಳಿಸಿದೆ.

‘ಅಮಿತ್‌ ಶಾ ಪ್ರವಾಸಕ್ಕೆ ಜಿಲ್ಲಾ ಘಟಕ ಸಜ್ಜಾಗುತ್ತಿದೆ. ಬಳಿಕ ಜಿಲ್ಲೆಯಲ್ಲಿ ಮಹಿಳಾ ಮೋರ್ಚಾ ಸಮಾವೇಶ ಆಯೋಜಿಸಲಾಗಿದ್ದು ಸಾಲುಸಾಲು ಕಾರ್ಯಕ್ರಮಗಳು ನಡೆಯಲಿವೆ. ಆದರೂ, ಕೊಳೆಗೇರಿಗಳಲ್ಲಿ ವಾಸ್ತವ್ಯ ಕೈ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯೋಜಿಸಲಾಗುವುದು.  ಕರಾವಳಿಯಲ್ಲಿ ಕೊಳೆಗೇರಿಗಳು ಬಹಳ ಕಡಿಮೆ. ಆದರೆ, ಮೂಲ್ಕಿಯ ಬಿಜಾಪುರ ಕಾಲೊನಿ ಸೇರಿದಂತೆ ಹಲವು ಕಾಲೊನಿಗಳಿವೆ. ಅವು ಕೊಳೆಗೇರಿಗಳಲ್ಲವಾದರೂ ಹಿಂದುಳಿದ ಪ್ರದೇಶಗಳಾಗಿವೆ. ಅಲ್ಲಿ ವಾಸ್ತವ್ಯ ಮಾಡುವ ಪ್ರಸ್ತಾವದ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಘಟಕದ ಅಧ್ಯಕ್ಷ ಸಂಜೀವ ಮಠಂದೂರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ 18ಕಡೆಗಳಲ್ಲಿ ಬಿಜೆಪಿ ಸ್ಲಂ ಮೋರ್ಚಾ ಘಟಕಗಳನ್ನು ಆರಂಭಿಸಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ನೀಡ
ಲಾಗುತ್ತಿದೆ ಎಂದು ಸ್ಲಂ ಮೋರ್ಚಾದ ಮುಖಂಡ ರಾಮ ಅಮೀನ್‌ ಪಚ್ಚನಾಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT