ಬುಧವಾರ, ಡಿಸೆಂಬರ್ 11, 2019
16 °C

‘ಸೇನಾ ಶಿಬಿರದ ಮೇಲೆ ದಾಳಿ ಅಫ್ಜಲ್‌ ಗುರು ತಂಡದ ಕೈವಾಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸೇನಾ ಶಿಬಿರದ ಮೇಲೆ ದಾಳಿ ಅಫ್ಜಲ್‌ ಗುರು ತಂಡದ ಕೈವಾಡ’

ಶ್ರೀನಗರ: ಜಮ್ಮುವಿನ ಸಂಜುವಾನ್‌ ಸೇನಾ ಶಿಬಿರದ ಮೇಲೆ ಶನಿವಾರ ನಡೆದ ದಾಳಿ ಹಿಂದೆ ಜೈಷ್‌–ಇ–ಮಹಮ್ಮದ್’ ಉಗ್ರ ಸಂಘಟನೆಯ ‘ಅಫ್ಜಲ್ ಗುರು ತಂಡದ’ ಸಂಚು ಇದೆ ಎಂಬ ಅನುಮಾನ ವ್ಯಕ್ತವಾಗಿದೆ.

ಈ ತಂಡ ದೇಶದ ಭದ್ರತಾ ಏಜೆನ್ಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಭದ್ರತಾ ಪಡೆಗಳ ಮೇಲೆ ಮತ್ತು ಸೇನಾ ಶಿಬಿರಗಳ ಮೇಲೆ ಇದೇ ತಂಡದ ಆತ್ಮಹತ್ಯಾ ದಾಳಿಕೋರರು ದಾಳಿ ಮಾಡಿದ್ದಾರೆ. 2001ರಲ್ಲಿ ಸಂಸತ್‌ ಮೇಲೆ ದಾಳಿ ಮಾಡಿದ್ದ ಅಫ್ಜಲ್ ಗುರುವನ್ನು 2013ರಲ್ಲಿ ಗಲ್ಲಿಗೇರಿಸಲಾಗಿತ್ತು. ಇದಾದ ಬಳಿಕವೂ ಈ ತಂಡ ಹಲವು ದಾಳಿಗಳನ್ನು ಮಾಡಿದೆ.

2017ರ ಅಕ್ಟೋಬರ್‌ 2ರಂದು ಶ್ರೀನಗರ ವಿಮಾನನಿಲ್ದಾಣದ ಸಮೀಪವಿದ್ದ ಗಡಿ ಭದ್ರತಾ ಪಡೆಯ ಶಿಬಿರದ ಮೇಲೆ ದಾಳಿ ಮಾಡಲಾಗಿತ್ತು. ಅದೇ ವರ್ಷದ ಆಗಸ್ಟ್‌ನಲ್ಲಿ ಪುಲ್ವಾಮಾ ಜಿಲ್ಲಾ ಪೊಲೀಸ್‌ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಎಂಟು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಎರಡೂ ದಾಳಿಗಳ ಹೊಣೆಯನ್ನು ಇದೇ ತಂಡ ಹೊತ್ತುಕೊಂಡಿತ್ತು.

2016ರ ನವೆಂಬರ್‌ನಲ್ಲಿ ಜಮ್ಮುವಿನ ನಗ್ರೋಟಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಏಳು ಅಧಿಕಾರಿಗಳು ಮೃತಪಟ್ಟಿದ್ದರು. ಅದಕ್ಕೂ ಮುನ್ನ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ನಡೆಸಿದ ದಾಳಿಯ ನಂತರ ದೊರಕಿದೆ ಎನ್ನಲಾದ ಚೀಟಿಯಲ್ಲಿ ‘ದೀರ್ಘಕಾಲ ಇರಲಿದೆ ಜೈಷ್‌–ಇ–ಮಹಮ್ಮದ್, ಕಥುವಾದಿಂದ ರಾಜ್‌ಬಾಗ್‌, ರಾಜ್‌ಬಾಗ್‌ನಿಂದ ದೆಹಲಿವರೆಗೆ, ಅಫ್ಜಲ್‌ ಗುರುವಿಗಾಗಿ ಜೀವ ಕೊಡಲು ತಯಾರಿರುವ ಅಫ್ಜಲ್‌ ಬೆಂಬಲಿಗರನ್ನು ನೀವು ಕಾಣುತ್ತಲೇ ಇರುವಿರಿ’ ಎಂಬ ಹೇಳಿಕೆಗಳು ಇದ್ದವು.

ಸಂಸತ್‌ ಮೇಲಿನ ದಾಳಿಗೂ ಮುನ್ನ, 2001ರ ಅಕ್ಟೋಬರ್‌ 1ರಂದು ಜಮ್ಮು–ಕಾಶ್ಮೀರ ವಿಧಾನಸಭೆ ಮೇಲೆ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

‘ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಿದ ನಂತರ ಜೈಷ್‌–ಇ–ಮಹಮ್ಮದ್’ ಉಗ್ರ ಸಂಘಟನೆ ಅಫ್ಗಾನಿಸ್ತಾನದಿಂದ ಕಾಶ್ಮೀರದವರೆಗೆ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದೆ. ಈ ಸಂಘಟನೆ ಜತೆಗೆ ಲಷ್ಕರ್–ಎ–ತಯ್ಯಿಬಾ ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಗಳು ಪರಸ್ಪರ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಿವೆ. ಇವು ಜತೆಜತೆಗೆ ಉಗ್ರ ಕೃತ್ಯ ಎಸಗುತ್ತಿರುವ ಶಂಕೆ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)