ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಳ ಸಂಚಾರ: ಸಮೂಹ ಸಾರಿಗೆ ಸಾಕಾರ

Last Updated 11 ಫೆಬ್ರುವರಿ 2018, 20:24 IST
ಅಕ್ಷರ ಗಾತ್ರ

ಬೆಂಗಳೂರು: ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಉಳಿತಾಯಕ್ಕೆ ಪ್ರತಿ ತಿಂಗಳ ಎರಡನೇ ಭಾನುವಾರ ವಾಹನ ಸಂಚಾರ ವಿರಳ ದಿನ (ಟ್ರಾಫಿಕ್ ಲೆಸ್ ಡೇ) ಆಚರಣೆ ಆರಂಭಿಸಿರುವ ಸಾರಿಗೆ ಇಲಾಖೆಯ ನಿರ್ಧಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಸಾಮಾನ್ಯ ದಿನಗಳು ಮತ್ತು ರಜಾ ದಿನಗಳಿಗೆ ಹೋಲಿಸಿದರೆ ವಿಧಾನಸೌಧದ ಮುಂದಿನ ರಸ್ತೆ, ನೃಪತುಂಗ ರಸ್ತೆ, ಬಳ್ಳಾರಿ ರಸ್ತೆ, ಎಂ.ಜಿ.ರಸ್ತೆ, ಹಳೆ ವಿಮಾನ ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರವಾಹನ ಮತ್ತು ಕಾರುಗಳ ಸಂಚಾರ ಕೊಂಚ ಕಡಿಮೆ ಇತ್ತು. ಆದರೆ, ಯಶವಂತಪುರ –ತುಮಕೂರು ರಸ್ತೆ, ಮೈಸೂರು ರಸ್ತೆಯಲ್ಲಿ ಮಾತ್ರ ಎಂದಿನ ವಾಹನ ದಟ್ಟಣೆಯೇ ಇತ್ತು.

ಸಾರಿಗೆ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಚಾರ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಚಾಲನೆ ನೀಡಿದರು. ಪರಿಸರಸ್ನೇಹಿ ವಾಹನ ಬಳಕೆ ಬೆಂಬಲಿಸಲು ಸಚಿವರು ಚಾಲುಕ್ಯ ವೃತ್ತದಿಂದ ಎಲೆಕ್ಟ್ರಿಕ್‌ ಕಾರಿನಲ್ಲೇ ವಿಧಾನಸೌಧ ಆವರಣಕ್ಕೆ ಬಂದರು.

ವಿಧಾನಸೌಧ ಮುಂಭಾಗದಿಂದ ಕಂಠೀರವ ಕ್ರೀಡಾಂಗಣದತ್ತ ಹೊರಟ ಬೈಸಿಕಲ್‌ ಮತ್ತು ಎಲೆಕ್ಟ್ರಿಕ್‌ ವಾಹನಗಳ ಜಾಥಾಕ್ಕೆ ಅವರು ಹಸಿರು ನಿಶಾನೆ ತೋರಿದರು. ಜಾಥಾದಲ್ಲಿ ನೂರಾರು ಪರಿಸರಸ್ನೇಹಿ ವಾಹನ ಬಳಕೆದಾರರು ಸಮೂಹ ಸಾರಿಗೆ ಹಾಗೂ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು. ಎಲೆಕ್ಟ್ರಿಕ್‌ ಬೈಸಿಕಲ್, ಮೋಟರ್‌ ಬೈಕ್, ಕಾರು ಹಾಗೂ ಆಟೊಗಳು ಗಮನ ಸೆಳೆದವು.

‘ಭಾನುವಾರ ಸರ್ಕಾರಿ ಕಚೇರಿಗಳು, ಶಾಲಾ, ಕಾಲೇಜು, ಬ್ಯಾಂಕ್‌ ಹಾಗೂ ಹಲವು ಖಾಸಗಿ ಕಂಪನಿಗಳ ಕಚೇರಿಗಳಿಗೆ ರಜೆ ಇರುತ್ತದೆ. ವಾಹನ ದಟ್ಟಣೆಯ ಕಡಿಮೆ ಇರುವುದು ಸಹಜ. ಬೇರೆ ದಿನಗಳಲ್ಲಿ ವಿರಳ ವಾಹನ ಸಂಚಾರ ದಿನ ಆಚರಿಸಬೇಕು. ಆಗ ಮಾಲಿನ್ಯ ಮತ್ತು ವಾಹನ ದಟ್ಟಣೆ ಎಷ್ಟರ ಮಟ್ಟಿಗೆ ಕಡಿಮೆಯಾಗುತ್ತದೆ ಎನ್ನುವುದು ಗೊತ್ತಾಗುತ್ತದೆ’ ಎನ್ನುತ್ತಾರೆ ನಗರ ಸಂಚಾರ ತಜ್ಞ ಎಂ.ಎನ್‌.ಶ್ರೀಹರಿ.

ಮೆಟ್ರೊದಲ್ಲಿ ಪ್ರಯಾಣಿಕರ ದಟ್ಟಣೆ: ಕಳೆದ ಭಾನುವಾರ ಸಂಜೆ 4 ಗಂಟೆವರೆಗೆ ಮೆಟ್ರೊ ಎರಡೂ ಮಾರ್ಗಗಳಲ್ಲಿ 1,31,864 ಮಂದಿ ಪ್ರಯಾಣಿಸಿದ್ದರೆ, ಈ ಭಾನುವಾರ ಇದೇ ಸಮಯದಲ್ಲಿ 1,38,501 ಮಂದಿ ಪ್ರಯಾಣಿಸಿದರು.

‘ಭಾನುವಾರ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಹೆಚ್ಚೇ ಇರುತ್ತದೆ. ಎಸ್‌ಡಿಎ, ಎಫ್‌ಡಿಎ ಪರೀಕ್ಷೆ ಇರುವ ಕಾರಣಕ್ಕೂ ಬಸ್‌ ಸ್ವಲ್ಪ ಹೆಚ್ಚು ಭರ್ತಿಯಾಗಿರಬಹುದು. ವಿರಳ ಸಂಚಾರ ದಿನದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಇದ್ದಂತಿಲ್ಲ’ ಎಂದು ಹೆಸರುಘಟ್ಟ–ಯಶವಂತಪುರ ಮಾರ್ಗದ ಬಿಎಂಟಿಸಿ ಬಸ್‌ ನಿರ್ವಾಹಕಿಯೊಬ್ಬರು ತಿಳಿಸಿದರು.

ಬಿಎಂಟಿಸಿ ದೈನಂದಿನ ಪಾಸ್‌ ಮತ್ತು ಮೆಟ್ರೊ ಪ್ರಯಾಣದ ಸ್ಮಾರ್ಟ್‌ ಕಾರ್ಡ್‌ದಾರರಿಗೆ ಪ್ರಯಾಣ ದರದಲ್ಲಿ ವಿಶೇಷ ರಿಯಾಯಿತಿ ನೀಡಲಾಗಿತ್ತು.

ಓಲಾ ಬೆಂಬಲ: ಅಭಿಯಾನಕ್ಕೆ ಓಲಾ ಕಂಪನಿ ಬೆಂಬಲ ಸೂಚಿಸಿದೆ. ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷ ರಿಯಾಯಿತಿ ಕೂಪನ್ ಕೂಡ ಬಿಡುಗಡೆ ಮಾಡಿದೆ ಎಂದು ಓಲಾ ಬೆಂಗಳೂರಿನ ಪ್ರಧಾನ ವ್ಯವಸ್ಥಾಪಕ ವಿಷ್ಣು ಬೊಮ್ಮರೆಡ್ಡಿ ತಿಳಿಸಿದ್ದಾರೆ.

ಬೇರೆ ರಾಜ್ಯಗಳಲ್ಲಿ ಜಾರಿಗೊಳಿಸಿ:ರೇವಣ್ಣ

ದೆಹಲಿಯ ಪರಿಸ್ಥಿತಿ ಬೆಂಗಳೂರಿಗೆ ಬರಬಾರದೆಂದು ರಾಜ್ಯ ಸರ್ಕಾರ ವಾಹನ ವಿರಳ ಸಂಚಾರ ದಿನ ಆರಂಭಿಸಿದೆ. ಇದನ್ನು ಬೇರೆ ರಾಜ್ಯಗಳಲ್ಲಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಎಚ್‌.ಎಂ.ರೇವಣ್ಣ ಸಲಹೆ ನೀಡಿದರು. ಅಧಿಕಾರಿಗಳಿಗೂ ಸಮೂಹ ಸಾರಿಗೆ ಬಳಸುವಂತೆ ಸೂಚನೆ ನೀಡುತ್ತೀರಾ ಎಂಬ ಪ್ರಶ್ನೆಗೆ ‘ಪ್ರತಿ ತಿಂಗಳ ಎರಡನೇ ಭಾನುವಾರ ಸರ್ಕಾರಿ ವಾಹನ ಬಿಟ್ಟು, ಸಮೂಹ ಸಾರಿಗೆ ಬಳಸುವಂತೆ ಅಧಿಕಾರಿಗಳಿಗೆ ಹೇಳುವ ತಾಕತ್ತು ಇದೆ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

ನಗರದಲ್ಲಿ ಸೆನ್ಸರ್‌ ಅಳವಡಿಕೆ

ಮಾಲಿನ್ಯ ಪ್ರಮಾಣ ತಿಳಿಯಲು ನಗರದ ಎಲ್ಲ ಭಾಗಗಳಲ್ಲಿ ಸೆನ್ಸರ್‍ ಅಳವಡಿಸಲಾಗುತ್ತದೆ. ಮಾಲಿನ್ಯ ನಿಯಂತ್ರಣ ಹಾಗೂ ನಿರ್ವಹಣಾ ಕೊಠಡಿ ನಿರ್ಮಿಸಲಾಗುತ್ತದೆ ಎಂದು ಮೇಯರ್ ಆರ್‌.ಸಂಪತ್‍ರಾಜ್ ತಿಳಿಸಿದರು.

ದೆಹಲಿಯಲ್ಲಿ ಮಾಲಿನ್ಯ ಮಿತಿಗಿಂತ ಶೇ 800ರಷ್ಟು ಹೆಚ್ಚಿದೆ. ನಗರದಲ್ಲಿ ಅದು ಶೇ 20ರಷ್ಟು ಹೆಚ್ಚಿದೆ. ಭವಿಷ್ಯದಲ್ಲಿ ದೆಹಲಿ ಸ್ಥಿತಿ ಬರಬಾರದು. ಮೆಟ್ರೊ, ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್‌ ಬಳಸುವ ಮೂಲಕ ವಾಯುಮಾಲಿನ್ಯ ತಗ್ಗಿಸಲು ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

* 80 ಲಕ್ಷ ಪ್ರಯಾಣಿಕರಿಗಾಗಿ ಬಿಎಂಟಿಸಿ ಬಸ್‍ಗಳನ್ನು 6,500ರಿಂದ 10,000ಕ್ಕೆ ಹೆಚ್ಚಿಸಬೇಕಿದೆ. ಎಲೆಕ್ಟ್ರಿಕ್‌ ವಾಹನಗಳಿಗೆ ಒತ್ತು ನೀಡುತ್ತೇವೆ

–ನಾಗರಾಜ್ ಯಾದವ್, ಬಿಎಂಟಿಸಿ ಅಧ್ಯಕ್ಷ

* ವಾಹನ ಸಂಚಾರ ವಿರಳ ದಿನ ಕಣ್ಣೊರೆಸುವ ಮತ್ತು ಪ್ರಚಾರ ತಂತ್ರವಷ್ಟೆ. ಇದರಿಂದ ಅಷ್ಟೇನು ಪರಿಣಾಮಕಾರಿ ಪ್ರಯೋಜನವಿಲ್ಲ

–ನರೇಶ್‌, ನಗರ ಸಂಚಾರ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT