ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಎಂ ಕಟಾಕ್ಷ’ಕ್ಕೆ ಕಾದಿರುವ ನೀರಾವರಿ ಯೋಜನೆಗಳು

Last Updated 12 ಫೆಬ್ರುವರಿ 2018, 8:53 IST
ಅಕ್ಷರ ಗಾತ್ರ

ಚಿಂಚೋಳಿ: ಜಿಲ್ಲೆಯ ನೀರಾವರಿ ಯೋಜನೆಗಳ ಆಧುನೀಕರಣಕ್ಕೆ ಮುಖ್ಯಮಂತ್ರಿ ಅನುದಾನ ಘೋಷಣೆ ಮಾಡಿದರೂ ಕೂಡ ಇನ್ನೂ ಕಾಮಗಾರಿ ಆರಂಭವಾಗದಿರುವುದು ರೈತರಲ್ಲಿ ಅನುಮಾನ ಹುಟ್ಟುಹಾಕಿದೆ.

ಚಿಂಚೋಳಿ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ 80 ಕಿ.ಮೀ ಮುಖ್ಯ ಕಾಲುವೆ ಹಾಗೂ ವಿತರಣಾ ನಾಲೆಗಳ ಬಲವರ್ಧನೆ, ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಆಧುನೀಕರಣ ಹಾಗೂ ಗಂಡೋರಿ ನಾಲಾ ಯೋಜನೆಗಳ ಕಾಲುವೆಗಳ ಬಲವರ್ಧನೆ, ಅಮರ್ಜಾ ಜಲಾಶಯ ಹಾಗೂ ಇತರ ಕೆರೆಗಳ ತುಂಬಿಸುವ ಯೋಜನೆ ಘೋಷಣೆಗೆ ಸೀಮಿತವಾಗಿವೆ.

ಕೆಳದಂಡೆ ಮುಲ್ಲಾಮಾರಿ ಯೋಜನೆಯ ಕಾಲುವೆ ಮತ್ತು ವಿತರಣಾ ನಾಲೆಗಳ ಆಧುನೀಕರಣ ಕಾಮಗಾರಿ ಗಾಗಿ ಸರ್ಕಾರ ₹117 ಕೋಟಿ ಮಂಜೂರು ಮಾಡಿದೆ. ಈಗಾಗಲೇ ತಾಂತ್ರಿಕ ಮತ್ತು ಹಣಕಾಸಿನ ಬಿಡ್‌ ತೆರೆಯಲಾಗಿದೆ. ಇಬ್ಬರು ಗುತ್ತಿಗೆದಾರರು ಇದರಲ್ಲಿ ಭಾಗವಹಿಸಿದ್ದಾರೆ. ಅಂದಾಜು ಪಟ್ಟಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯ ನಿಗಮ, ಮಂಡಳಿ ಸಭೆಯ ಅನುಮೋದನೆಗೆ ಕಾಯುತ್ತಿದೆ. ಇಲ್ಲಿ ಅನುಮೋದನೆ ಸಿಕ್ಕದರೆ ತಕ್ಷಣ ಕಾಮಗಾರಿ ಪ್ರಾರಂಭಿಸಬಹುದಾಗಿದೆ.

2017–18ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಕಾಲುವೆಗಳ ಬಲವರ್ಧನೆಗೆ ₹68.6 ಕೋಟಿ, ಗಂಡೋರಿ ನಾಲಾ ಯೋಜನೆಯ ಕಾಲುವೆ ಬಲವರ್ಧನೆಗೆ ₹92 ಕೋಟಿ ಮಂಜೂರು ಮಾಡಲಾಗಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ.

ಆಳಂದ, ಅಫಜಲಪುರ ತಾಲ್ಲೂಕು ಗಳಿಗೆ ವರದಾನವಾಗುವ ಭೀಮಾ ನದಿಯಿಂದ ಪ್ರವಾಹದ ಹೆಚ್ಚು ವರಿ ನೀರು ಅಮರ್ಜಾ ಹಾಗೂ ಇತರ ಕೆರೆಗಳಿಗೆ ಭರ್ತಿ ಮಾಡುವ ಯೋಜನೆ ಇನ್ನೂ ಅನೂಮೋದನೆ ಹಂತ ದಲ್ಲಿಯೇ ಇದೆ. ಇದಕ್ಕಾಗಿ ₹500 ಕೋಟಿ ಅನುದಾನದ ಅಂದಾಜು ಪಟ್ಟಿ ತಯಾರಿಸಲಾಗಿದೆ. 2004ರಿಂದ 2018ರ ಅವಧಿಯಲ್ಲಿ ಕೇವಲ 2 ಬಾರಿ ಮಾತ್ರ ಅಮರ್ಜಾ ಜಲಾಶಯ ಭರ್ತಿಯಾಗಿತ್ತು.

14 ವರ್ಷದ ಅವಧಿಯಲ್ಲಿ 12 ವರ್ಷ ಕೆರೆ ತುಂಬಿರಲಿಲ್ಲ. ಇದನ್ನು ಮನಗಂಡು ಸರ್ಕಾರ ಕೆರೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಮುಂದಾಗಿತ್ತು. ಇವುಗಳಿಗಾಗಿ ₹777 ಕೋಟಿ ಅನುದಾನದ ಅಗತ್ಯವಿದೆ. ಇವುಗಳ ಜತೆಗೆ ಬೆಣ್ಣೆತೊರಾ ಯೋಜನೆಯ ಬಲವರ್ಧನ ಅಂತಿಮ ಹಾಗೂ ಭೀಮಾ ನೀರಾವರಿ ಯೋಜನೆ ಪೂರ್ಣಗೊಳ್ಳುವ ಹಂತದಲ್ಲಿದೆ.

5 ಕೋಟಿಗಿಂತ ಅಧಿಕ ಮೊತ್ತದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಅನುಷ್ಠಾನಕ್ಕೆ ಅಂದಾಜು ಪರಿಶೀಲನಾ ಸಮಿತಿ ಮತ್ತು ತಾಂತ್ರಿಕ ಪರಿಶೀಲನಾ ಸಮಿತಿ ಪರಿಶೀಲಿಸಿದ ನಂತರ ನಿಗಮ ಮಂಡಳಿ ಅನುಮೋದನೆಯ ಅಗತ್ಯವಿದೆ. ನಿಗಮ ಮಂಡಳಿಯ ಸಭೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು ಅವರ ಕೃಪೆಗಾಗಿ ಕಾಯುತ್ತಿವೆ.

ಜತೆಗೆ, ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದ ಮುಳುಗಡೆ ಸಂತ್ರಸ್ತರ ಪುನರ್‌ವಸತಿ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ₹19 ಕೋಟಿ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿದೆ. ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಖುದ್ದು ಭೇಟಿ ನೀಡಿ ಪುನರ್‌ ವಸತಿ ಕೇಂದ್ರಗಳ ದುಸ್ಥಿತಿ ಪರಿಶೀಲಿಸಿ ವರ್ಷ ಕಳೆದರೂ ಅನುದಾನ ಭಾಗ್ಯ ಲಭಿಸಿಲ್ಲ.

ಜತೆಗೆ, ಮುಲ್ಲಾಮಾರಿ ಯೋಜನೆಯ ನಾಗರಾಳ್‌ ಜಲಾಶಯದಿಂದ ಐನಾಪುರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಇದಕ್ಕಾಗಿ ಸರ್ವೆ ನಡೆಸಿ ವಿಸ್ತೃತ ಯೋಜನೆ ರೂಪಿಸಿದ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ₹100 ಕೋಟಿ ಅನುದಾನ ಬೇಕೆಂದು ವರದಿ ನೀಡಿದ್ದಾರೆ.

ರಾಜ್ಯ ಸರ್ಕಾರ ಬಹುದಿನಗಳ ಕಾಲ ನನೆಗುದಿಗೆ ಬಿದ್ದ ಯೋಜನೆಗಳಿಗೆ ಕಾಯಕಲ್ಪ ನೀಡುತ್ತಿದ್ದು, ಅದರ ಜತೆಗೆ ಐನಾಪುರ ಏತ ನೀರಾವರಿ ಯೋಜನೆಗೂ ಹಸಿರು ನಿಶಾನೆ ತೋರಿಸುವ ವಿಶ್ವಾಸದಲ್ಲಿದೆ.

ಜಲಾಶಯ ಸುರಕ್ಷತಾ ತಜ್ಞರ ವರದಿ ಆಧರಿಸಿ ವಿಶ್ವ ಬ್ಯಾಂಕ್‌ ನೆರವಿನ ಅಡಿಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ ಅನುದಾನ ಕೆಳದಂಡೆ ಮುಲ್ಲಾಮಾರಿ ಯೋಜನೆಗೆ ಲಭಿಸಿದ್ದು ₹36 ಕೋಟಿ ಹಣ ಮಂಜೂರಾಗಿದ್ದು, ಜಲಾಶಯದ ಬಲ ವರ್ಧನೆ ಕಾಮಗಾರಿ ಪ್ರಾರಂಭವಾಗಿದೆ.
 

* * 

ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಆರಂಭಿಸಿದ ನೀರಾವರಿ ಯೋಜನೆಗಳು ಕಾಯಕಲ್ಪಕ್ಕೆ ಕಾಯುತ್ತಿವೆ. ಇವುಗಳ ಆಧುನೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅನುದಾನ ಘೋಷಣೆಗೆ ಸೀಮೀತವಾಗಬಾರದು.
ಶರಣಬಸಪ್ಪ ಮಮಶೆಟ್ಟಿ
ಜಿಲ್ಲಾ ಅಧ್ಯಕ್ಷ, ರೈತ ಸಂಘ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT