ಭಾನುವಾರ, ಡಿಸೆಂಬರ್ 8, 2019
25 °C
ನ್ಯಾಯಾಧೀಶರ ನೇಮಕಕ್ಕೆ ಸಂದರ್ಶನ:

ಮೀಸಲು ಅಭ್ಯರ್ಥಿಗಳಿಗೂ ಕನಿಷ್ಠ ಅಂಕ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀಸಲು ಅಭ್ಯರ್ಥಿಗಳಿಗೂ ಕನಿಷ್ಠ ಅಂಕ ಕಡ್ಡಾಯ

ನವದೆಹಲಿ: ಜಿಲ್ಲಾ ನ್ಯಾಯಾಧೀಶ ಹುದ್ದೆಗಳಿಗೆ ಮೀಸಲು ವರ್ಗದಲ್ಲಿ ಅರ್ಜಿ ಹಾಕುವ ಅಭ್ಯರ್ಥಿಗಳಿಗೂ ಮೌಖಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ ಅಂಕಗಳನ್ನು ನಿಗದಿ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಂಗದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಂತೆ ಆಗುತ್ತದೆ ಎಂದು ಸುಪ‍್ರೀಂ ಕೋರ್ಟ್‌ ಹೇಳಿದೆ.

‘ಕನಿಷ್ಠ ಅಂಕ ನಿಗದಿ ಮಾಡುವುದು ಸೂಕ್ತ ಮಾತ್ರವಲ್ಲ ಅನಿವಾರ್ಯ ಕೂಡ. ಇದರಿಂದ ಪ್ರತಿಭೆ ಇಲ್ಲದವರು ಹುದ್ದೆಗೇರುವುದನ್ನು ತಡೆಯಬಹುದು. ಕಾಳು ಮತ್ತು ಜೊಳ್ಳು ಪ್ರತ್ಯೇಕಿಸುವುದು ಸಾಧ್ಯವಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ಅಮಿತಾವ್‌ ರಾಯ್‌ ಅವರ ಪೀಠ ಹೇಳಿದೆ.

ಮೀಸಲು ವರ್ಗದ ಅಭ್ಯರ್ಥಿಗಳಿಗೆ ಶೇ 45 ಕನಿಷ್ಠ ಅಂಕ ನಿಗದಿ ಮಾಡಿರುವುದು ಸರಿಯಾದ ಕ್ರಮ. ಕೆಲವು ಹುದ್ದೆಗಳು ಖಾಲಿ ಇವೆ ಎಂಬ ಕಾರಣಕ್ಕೆ ಸಂದರ್ಶನದ ಕನಿಷ್ಠ ಅಂಕದಲ್ಲಿ ವಿನಾಯಿತಿ ನೀಡುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. ಸಂದರ್ಶನಕ್ಕೆ 150 ಅಂಕಗಳಿವೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ 50 ಅಂಕ ಪಡೆಯಬೇಕು.

‘ಅಭ್ಯರ್ಥಿಯ ಸಾಮರ್ಥ್ಯವನ್ನು ಅಳೆಯಲು ಸಂದರ್ಶನ ಅತ್ಯುತ್ತಮ ವಿಧಾನ. ಅಭ್ಯರ್ಥಿಯ ವ್ಯಕ್ತಿತ್ವ, ಅವರಿಗೆ ನ್ಯಾಯವ್ಯವಸ್ಥೆಯ ಬಗ್ಗೆ ಇರುವ ಜ್ಞಾನ ಮತ್ತು ಸಾಮರ್ಥ್ಯ ಸಂದರ್ಶನದಲ್ಲಿ ಗೊತ್ತಾಗುತ್ತದೆ. ನ್ಯಾಯ ವ್ಯವಸ್ಥೆಯ ಬಗ್ಗೆ ಅಭ್ಯರ್ಥಿಯು ಹೊಂದಿರುವ ಜ್ಞಾನವು ಲಿಖಿತ ಪರೀಕ್ಷೆಯಲ್ಲಿ ತಿಳಿಯುತ್ತದೆ. ಆದರೆ ನ್ಯಾಯಾಧೀಶರಾಗಲು ಬೇಕಾದ ಇತರ ಗುಣಗಳು ಅವರಲ್ಲಿ ಇವೆಯೇ ಎಂಬುದನ್ನು ಲಿಖಿತ ಪರೀಕ್ಷೆ ತಿಳಿಸುವುದಿಲ್ಲ. ನಿರ್ಧಾರ ಕೈಗೊಳ್ಳುವ ಶಕ್ತಿ ಇಲ್ಲದ ವ್ಯಕ್ತಿಯೂ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ ಇದೆ’ ಎಂದು ಪೀಠ ಹೇಳಿದೆ.

ತಾನಿಯಾ ಮಲಿಕ್‌ ಮತ್ತು ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಂದರ್ಶನಕ್ಕೆ ಹಾಜರಾದ 64 ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಕನಿಷ್ಠ ಅಂಕ ಪಡೆದಿಲ್ಲ. ಹಾಗಾಗಿ ನಿಗದಿ ಮಾಡಿರುವ ಕನಿಷ್ಠ ಅಂಕ ನ್ಯಾಯಬದ್ಧವಲ್ಲ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ದೆಹಲಿ ನ್ಯಾಯಾಂಗ ಸೇವೆಗೆ ನೂರು ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿ ಈ ಅರ್ಜಿ ದಾಖಲಾಗಿತ್ತು. ಸರಾಸರಿ ಶೇ 50 ಅಂಕಗಳು ಮತ್ತು ಪ್ರತಿ ವಿಷಯದಲ್ಲಿ ಶೇ 40 ಅಂಕ ನಿಗದಿ ಮಾಡಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ದೆಹಲಿ ಹೈಕೋರ್ಟ್‌ ನಿಗದಿ ಮಾಡಿರುವ ಮಾನದಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದೆ.

ಖುಲಾಸೆ ಬಳಿಕವೂ ಶಿಸ್ತುಕ್ರಮ ಸರಿಯೇ: ಪರಿಶೀಲನೆಗೆ ‘ಸುಪ್ರೀಂ’ ನಿರ್ಧಾರ

ಭ್ರಷ್ಟಾಚಾರ ಪ್ರಕರಣದಲ್ಲಿ ಖುಲಾಸೆ ಆದ ಬಳಿಕವೂ ಶಿಸ್ತುಕ್ರಮದ ಪ್ರಕ್ರಿಯೆ ಮುಂದುವರಿಸಬಹುದೇ ಎಂಬುದನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ.

ಖುಲಾಸೆಯಾಗಿದ್ದರೂ ಇಲಾಖೆಯು ಶಿಸ್ತುಕ್ರಮ ಪ್ರಕ್ರಿಯೆ ಮುಂದುವರಿಸಿರುವುದನ್ನು ಪ್ರಶ್ನಿಸಿ ಪರಶುರಾಮ್‌ ಮತ್ತು ಇತರ ಇಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕರ್ನಾಟಕದ ಸಾರಿಗೆ ಇಲಾಖೆಯ ಮೂವರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಆರೋಪ ಬಂದಿತ್ತು. ಇವರು ನಿರ್ದೋಷಿಗಳು ಎಂದು ನ್ಯಾಯಾಲಯ  ಹೇಳಿತ್ತು. ಹಾಗಿದ್ದರೂ ಇಲಾಖೆಯು ಶಿಸ್ತುಕ್ರಮ ಪ್ರಕ್ರಿಯೆಯನ್ನು ಮುಂದುವರಿಸಿರುವುದು ಸರಿಯಲ್ಲ ಎಂದು ಹಿರಿಯ ವಕೀಲ ನೀರಜ್‌ ಕುಮಾರ್‌ ಕೌಲ್‌ ವಾದಿಸಿದರು. ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರ ಪೀಠ ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ನೀಡಿದೆ.

ನ್ಯಾಯಾಲಯವು ಆರೋಪಮುಕ್ತಗೊಳಿಸಿದ್ದರೂ ಇಲಾಖೆಯು ಶಿಸ್ತುಕ್ರಮ ಪ್ರಕ್ರಿಯೆ ಮುಂದುವರಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ 2017ರ ಆಗಸ್ಟ್‌ 31ರಂದು ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.

‘ಶಿಸ್ತುಕ್ರಮ ಪ್ರಕ್ರಿಯೆ ಮುಂದುವರಿಯಬಹುದು. ಆದರೆ ಅಂತಿಮ ನಿರ್ಧಾರ ಕೈಗೊಳ್ಳುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಪ್ರತಿಕ್ರಿಯಿಸಿ (+)