ಮಂಗಳವಾರ, ಡಿಸೆಂಬರ್ 10, 2019
20 °C

ಪಿಎನ್‌ಬಿ ವಂಚನೆ ಹಗರಣ ತಪ್ಪಿತಸ್ಥರಿಗೆಲ್ಲ ಶಿಕ್ಷೆಯಾಗಲಿ

Published:
Updated:
ಪಿಎನ್‌ಬಿ ವಂಚನೆ ಹಗರಣ ತಪ್ಪಿತಸ್ಥರಿಗೆಲ್ಲ ಶಿಕ್ಷೆಯಾಗಲಿ

ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ₹ 11,400 ಕೋಟಿಗಳ ವಂಚನೆಯ ಹಗರಣದಲ್ಲಿ ಸಿಲುಕಿಕೊಂಡಿರುವುದು ದೇಶಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿದೆ. ದೇಶದ ಎರಡನೇ ಅತಿದೊಡ್ಡ ಬ್ಯಾಂಕ್‌ ಆಗಿರುವ ಪಿಎನ್‌ಬಿಯಲ್ಲಿ ಇದು ತಡವಾಗಿಯಾದರೂ ಬೆಳಕಿಗೆ ಬಂದಿದೆ. ಇತರ ಬ್ಯಾಂಕ್‌ಗಳ ಒಳಗೊಳಗೇ ಹೊಗೆಯಾಡುತ್ತಿರುವ ಇಂತಹ ಅದೆಷ್ಟೋ ಪ್ರಕರಣಗಳು ಇರಲಿಕ್ಕೂ ಸಾಕು. ಪಿಎನ್‌ಬಿಗೆ ಸರ್ಕಾರ ಪುನರ್ಧನ ಕೊಡುಗೆ ನೀಡಿರುವ ಮೊತ್ತದ ಎರಡು ಪಟ್ಟು ವಂಚನೆ ನಡೆದಿರುವುದು ಬ್ಯಾಂಕಿಂಗ್‌ ಕ್ಷೇತ್ರವನ್ನೇ ಅಣಕಿಸುವಂತಿದೆ. ಬ್ಯಾಂಕ್‌ಗಳಲ್ಲಿ ವಿಶ್ವಾಸ ಇರಿಸಿರುವ ಕೋಟ್ಯಂತರ ಗ್ರಾಹಕರ ಪಾಲಿನ ಆಘಾತಕಾರಿ ಸಂಗತಿ ಇದು. ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧ ಸಮರ ಸಾರಲಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವವರಿಗೆ ಇದೊಂದು ಕಣ್ಣು ತೆರೆಸುವ ಘಟನೆ. ದೇಶಿ ಬ್ಯಾಂಕಿಂಗ್‌ ವ್ಯವಸ್ಥೆಗೆ ಇದು ಎಚ್ಚರಿಕೆಯ ಗಂಟೆ ಎಂದೇ ಪರಿಗಣಿಸಬಹುದು. ವಜ್ರಾಭರಣ ವ್ಯಾಪಾರದ ನೆಪದಲ್ಲಿ ಭಾರತದ ಬ್ಯಾಂಕ್‌ಗಳ ಸಾಗರೋತ್ತರ ಶಾಖೆಗಳಿಂದ ವಿದೇಶಿ ಕರೆನ್ಸಿಗಳಲ್ಲಿ ಸಾಲ ಪಡೆಯಲು ಪಿಎನ್‌ಬಿಯನ್ನೇ  ಖಾತರಿಯಾಗಿಟ್ಟುಕೊಂಡಂತೆ ವಂಚಿಸಿ ಮೋಸ ಮಾಡಲಾಗಿದೆ. ಬ್ಯಾಂಕ್‌ಗಳ ಆಡಳಿತ ವ್ಯವಸ್ಥೆಯ ದೋಷವನ್ನು ಈ ಪ್ರಕರಣ ಎತ್ತಿ ಹೇಳಿದೆ. ಇತರ ಕೆಲ ಬ್ಯಾಂಕ್‌ಗಳೂ ಇಂತಹ ವಂಚನೆಗಳ ಸುಳಿಯಲ್ಲಿ ತಗುಲಿಹಾಕಿಕೊಂಡಿವೆ. ಬ್ಯಾಂಕ್‌ನ ಇಬ್ಬರು ಸಿಬ್ಬಂದಿ ಕೆಲ ವರ್ಷಗಳಿಂದ ಈ ವಂಚನೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇತರ ಅನೇಕರೂ ಇದರಲ್ಲಿ ಭಾಗಿಯಾಗಿರುವ ಶಂಕೆಯನ್ನು ದೃಢಪಡಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಕೆಳ ಹಂತದ ಅಧಿಕಾರಿಗಳನ್ನಷ್ಟೇ ಈ ಹಗರಣಕ್ಕೆ ಹೊಣೆಗಾರರನ್ನಾಗಿಸಿ ಕೈತೊಳೆದುಕೊಳ್ಳುವಂತಾಗಬಾರದು. ಬ್ಯಾಂಕ್‍ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸೇರಿ ಉನ್ನತ ಅಧಿಕಾರ ವರ್ಗದವರ   ಉತ್ತರದಾಯಿತ್ವವನ್ನೂ ತನಿಖೆಗೊಳಪಡಿಸುವುದು ಅತ್ಯಗತ್ಯ.  ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ಜತೆಯಾಗಿ ಸರ್ಕಾರಿ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಭ್ರಷ್ಟ ವಹಿವಾಟಿನ ಮೂಲಕ ಲಾಭ ಬಾಚಿಕೊಳ್ಳುವ ಬಂಡವಾಳಶಾಹಿ ಸ್ನೇಹಿ ವ್ಯವಸ್ಥೆಗೆ ಕೊನೆ ಹಾಡಬೇಕಾಗಿದೆ.

ವಸೂಲಾಗದ ಸಾಲದ ಮೊತ್ತ ₹ 10 ಲಕ್ಷ ಕೋಟಿಗಳಷ್ಟಾಗಿ ಬೆಟ್ಟದಂತೆ ಬೆಳೆದಿರುವಾಗಲೇ ಈ ವಂಚನೆ ಬಯಲಾಗಿದೆ. ಈ ವಂಚನೆಯ  ಪ್ರಮುಖ ಸೂತ್ರಧಾರ ದೇಶ ಬಿಟ್ಟು ಪಲಾಯನ ಮಾಡಿದ್ದಾನೆ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯವೂ ಕಣ್ಣಿಗೆ ರಾಚುತ್ತದೆ. ಇದು ಜನರ ಹಣದ ಹಗಲು ದರೋಡೆಯಲ್ಲದೆ ಮತ್ತೇನೂ ಅಲ್ಲ. ಸಾಲ ಪಡೆದ ದಗಾಕೋರರು, ಪ್ರಭಾವಿಗಳು ಉದ್ದೇಶಪೂರ್ವಕ ಸುಸ್ತಿದಾರರಾಗುವುದು ಹಾಗೂ ಅಂತಹವರ ಸಾಲ ವಜಾ ಮಾಡುವ,  ಅವರನ್ನು ಕಠಿಣವಾಗಿ ಶಿಕ್ಷಿಸದ ಪ್ರವೃತ್ತಿ ಬದಲಾಗಬೇಕಾಗಿದೆ. ಇಲ್ಲದಿದ್ದರೆ ಜನರು ಬ್ಯಾಂಕ್‌ಗಳಲ್ಲಿ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಒದಗಲಿದೆ. ಸರ್ಕಾರಿ ಒಡೆತನದಲ್ಲಿ ಇರುವ ಬ್ಯಾಂಕ್‌ಗಳ ಬಗ್ಗೆ ಜನರಲ್ಲಿನ ಅಪನಂಬಿಕೆ ದೂರ ಮಾಡುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲೆ ಇದೆ. . ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗಳು ಇದಕ್ಕೆ ಕಾರಣರಾದವರನ್ನು ನಿರ್ದಿಷ್ಟವಾಗಿ ಹೊಣೆಗಾರರನ್ನಾಗಿಸಿ ಕಠಿಣವಾಗಿ ಶಿಕ್ಷಿಸಬೇಕಾಗಿದೆ.

ಪ್ರತಿಕ್ರಿಯಿಸಿ (+)