ಭಾನುವಾರ, ಡಿಸೆಂಬರ್ 8, 2019
25 °C
ಮೆಟ್ರೊದಲ್ಲಿ ಎರಡು ಬಾಗಿಲು ಮೀಸಲು l ಎಲ್ಲ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಜಾರಿ

ಮೆಟ್ರೊ ಪಯಣ: ಮಹಿಳೆಯರಿಗೆ ತುಸು ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಟ್ರೊ ಪಯಣ: ಮಹಿಳೆಯರಿಗೆ ತುಸು ನಿರಾಳ

ಬೆಂಗಳೂರು: ದಟ್ಟಣೆಯಿಂದ ಮೆಟ್ರೊ ರೈಲು ಹತ್ತಲು ಹರಸಾಹಸ ಪಡುತ್ತಿದ್ದ ಮಹಿಳೆಯರು ಸೋಮವಾರ ಈ ಕಿರಿಕಿರಿಯಿಂದ ಸ್ವಲ್ಪ ಮಟ್ಟಿನ ಮುಕ್ತಿ ಪಡೆದರು. ಮೊದಲ ಎರಡು ಬಾಗಿಲುಗಳನ್ನು ತಮಗಾಗಿಯೇ ಮೀಸಲಿರಿಸಿದ್ದರಿಂದ ತುಸು ನಿರಾಳ ಭಾವ ಅನುಭವಿಸಿದರು.

‘ನಮ್ಮ ಮೆಟ್ರೊ’ ಸೋಮವಾರದಿಂದ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೆ ತಂದಿದೆ. ಮೊದಲ ದಿನವೇ ಮಹಿಳೆಯರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೈಗೊಂಡ ಉತ್ತಮ ಉಪಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸೇವೆಯನ್ನು ಪರಿಶೀಲಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ಭೇಟಿ ನೀಡಿದರು. ಈ ವೇಳೆ ಮಹಿಳೆಯರೊಂದಿಗೆ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸೇವೆಯನ್ನು ಮಾರ್ಚ್‌ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿತ್ತು. ದಟ್ಟಣೆ ಅವಧಿಯಲ್ಲಿ ಮಾತ್ರ ಈ ಸೇವೆ ಕಲ್ಪಿಸಲು ನಿರ್ಧರಿಸಲಾಗಿತ್ತು. ಆದರೆ, ಮಹಿಳೆಯರ ಮನವಿ ಮೇರೆಗೆ ಇಡೀ ದಿನ ಈ ಸೇವೆಯನ್ನು ಒದಗಿಸಲಾಗುತ್ತದೆ. ಒಂದು ವಾರದವರೆಗೆ ನೋಡುತ್ತೇವೆ. ಪ್ರಯಾಣಿಕರಿಂದ ವ್ಯಕ್ತವಾಗುವ ಪ್ರತಿಕ್ರಿಯೆಯನ್ನು ಗಮನಿಸಿದ ಬದಲಾವಣೆ ಅಥವಾ ವಿಸ್ತರಣೆ ಮಾಡುವ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.

ಮಹಿಳೆಯರು ಯಾವುದೇ ಬೋಗಿಯಲ್ಲಿ ಹತ್ತಬಹುದು. ಆದರೆ, ಪುರುಷರು ಮಾತ್ರ ಈ ಎರಡು ಬಾಗಿಲುಗಳಲ್ಲಿ ಹತ್ತುವಂತಿಲ್ಲ ಹಾಗೂ ಇಳಿಯುವಂತಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹೇಂದ್ರ ಜೈನ್‌ ಹಾಗೂ ಅಧಿಕಾರಿಗಳು ಎಂ.ಜಿ.ರಸ್ತೆಯಿಂದ ಕೆಂಪೇಗೌಡ ರೈಲು ನಿಲ್ದಾಣದವರೆಗೆ ಸಂಚರಿಸಿದರು. ಈ ವೇಳೆ, ನಾಗಸಂದ್ರದ ಉಷಾ, ‘ರೈಲಿನ ಕೊನೆಯ ಎರಡು ಬಾಗಿಲುಗಳನ್ನೂ ಮಹಿಳೆಯರಿಗಾಗಿ ಮೀಸಲಿಡಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಮಹೇಂದ್ರ ಜೈನ್‌, ‘ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

***

ಮಹಿಳೆಯರಿಗೆ ಎರಡು ಬಾಗಿಲುಗಳನ್ನು ಮೀಸಲಿಟ್ಟಿರುವುದು ಖುಷಿಯ ವಿಚಾರ. ಗಂಡಸರ ಮಧ್ಯೆ ಮೈಕೈ ತಾಗಿಸಿಕೊಂಡು ಹೋಗಲು ಕಿರಿಕಿರಿ ಆಗುತ್ತಿತ್ತು. ಅದು ತಪ್ಪಿದಂತಾಗಿದೆ.

  – ಅರ್ಚನಾ, ಪ್ರಯಾಣಿಕರು

***

ಸಾಮಾನ್ಯ ಅವಧಿಯಲ್ಲಿ ತೊಂದರೆ ಇರುವುದಿಲ್ಲ. ಆದರೆ, ದಟ್ಟಣೆ ಅವಧಿಯಲ್ಲಿ ತೊಂದರೆ ಆಗುತ್ತದೆ. ಹೊಸ ಸೇವೆ ತೃಪ್ತಿ ತಂದಿದೆ.

– ಮಧುಕಾಂತಿ, ಕಾಲೇಜು ವಿದ್ಯಾರ್ಥಿನಿ

***

ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವವರ ಪೈಕಿ ಶೇ 50ರಷ್ಟು ಮಹಿಳೆಯರೇ ಇದ್ದಾರೆ. ಹೀಗಾಗಿ, ಹೆಚ್ಚಿನ ಬೋಗಿಗಳನ್ನು ಮಹಿಳೆಯರಿಗಾಗಿ ಮೀಸಲಿಡಬೇಕು.

–ಡಾ.ವೇದಾವತಿ, ಪ್ರಾಧ್ಯಾಪಕಿ

***

ಈ ಸೇವೆಯ ಬಗ್ಗೆ ಮಹಿಳೆಯರಿಗೆ ಮತ್ತಷ್ಟು ಅರಿವು ಮೂಡಿಸಬೇಕು. ಹೀಗಾಗಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ.

–ಸುಮಿತ್ರಾ, ಎಂ.ಜಿ.ರಸ್ತೆ ಮೆಟ್ರೊ ನಿಲ್ದಾಣದ ಸಿಬ್ಬಂದಿ

***

ಹೆಚ್ಚಿನ ಪ್ರಯಾಣಿಕರು ಇದ್ದಾಗ ಇಳಿಯಲು ಹಾಗೂ ಹತ್ತಲು ಸಮಸ್ಯೆ ಆಗುತ್ತಿತ್ತು. ಈಗ ಆರಾಮವಾಗಿ ಬೋಗಿ ಹತ್ತಬಹುದು.

–ಚಂದನಾ, ವಿದ್ಯಾರ್ಥಿನಿ

***

ಮಹಿಳೆಯರಿಗೆ ಎರಡು ಬಾಗಿಲುಗಳನ್ನು ಮೀಸಲಿಟ್ಟಿರುವುದು ಖುಷಿಯ ವಿಚಾರ. ಗಂಡಸರ ಮಧ್ಯೆ ಮೈಕೈ ತಾಗಿಸಿಕೊಂಡು ಹೋಗಲು ಕಿರಿಕಿರಿ ಆಗುತ್ತಿತ್ತು. ಅದು ತಪ್ಪಿದಂತಾಗಿದೆ.

–ಅರ್ಚನಾ

ಪ್ರತಿಕ್ರಿಯಿಸಿ (+)