ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ವಂಚನೆ ಪರ್ವ: ಏಳು ಬ್ಯಾಂಕುಗಳಿಗೆ ₹3,695 ಕೋಟಿ ಪಾವತಿಸದ ರೊಟೊಮ್ಯಾಕ್‌ ಪ್ರವರ್ತಕ ವಿಕ್ರಮ್‌ ಕೊಠಾರಿ

Last Updated 19 ಫೆಬ್ರುವರಿ 2018, 20:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಜ್ರ ವ್ಯಾಪಾರಿ ನೀರವ್‌ ಮೋದಿ ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದ ಬೆನ್ನಿಗೇ ಮತ್ತೊಂದು ಮೋಸದ ಬಗ್ಗೆ ತನಿಖೆ ಆರಂಭವಾಗಿದೆ. ರೊಟೊಮ್ಯಾಕ್‌ ಪೆನ್‌ ತಯಾರಿಕಾ ಕಂಪನಿಯ ನಿರ್ದೇಶಕ ವಿಕ್ರಮ್‌ ಕೊಠಾರಿ ವಿರುದ್ಧ ₹3,695 ಕೋಟಿ ವಂಚನೆಯ ಆರೋಪದ ದೂರು ದಾಖಲಾಗಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸಿದೆ.

ಇದು ₹800 ಕೋಟಿ ಮೊತ್ತದ ಹಗರಣ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಕಂಪನಿಯ ಲೆಕ್ಕಪತ್ರಗಳನ್ನು ಸಿಬಿಐ ಪರಿಶೀಲಿಸಿದ ಬಳಿಕ ಏಳು ಬ್ಯಾಂಕುಗಳಿಗೆ ಪಾವತಿಸಲು ಬಾಕಿ ಇರುವ ಮೊತ್ತ ₹3,695 ಕೋಟಿ ಎಂಬ ಮಾಹಿತಿ ಸಿಕ್ಕಿತು. ಪಡೆದ ಸಾಲದ ಮೊತ್ತ ₹2,919 ಕೋಟಿ. ಆದರೆ, ಬಡ್ಡಿ ಸೇರಿ ಇದು ₹3,695 ಕೋಟಿಯಾಗಿದೆ. 2008ರಿಂದಲೇ ಈ ಸಾಲ ಪಡೆಯಲು ಆರಂಭಿಸಲಾಗಿದೆ.

ದೂರು ದಾಖಲಿಸಿಕೊಂಡ ತಕ್ಷಣವೇ ಕಾನ್ಪುರದಲ್ಲಿರುವ ಕೊಠಾರಿ ಮನೆ ಮತ್ತು ಕಚೇರಿಗಳಲ್ಲಿ ಸಿಬಿಐ ಶೋಧ ನಡೆಸಿದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ, ಆದರೆ, ವಿಕ್ರಮ್‌, ಅವರ ಹೆಂಡತಿ ಸಾಧನಾ ಮತ್ತು ಮಗ ರಾಹುಲ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಬಿಐ ತಿಳಿಸಿದೆ. 

ರೊಟೊಮ್ಯಾಕ್‌ ಕಂಪನಿಯ ಎಲ್ಲ ವಹಿವಾಟು ಕೆಲವೇ ಕೆಲವು ಖರೀದಿದಾರರು, ಮಾರಾಟಗಾರರು, ತನ್ನದೇ ಅಂಗ ಸಂಸ್ಥೆಗಳ ಜತೆ ನಡೆದಿದೆ.  ಬ್ಯಾಂಕುಗಳಿಂದ ಮುಂಗಡ ಪಡೆದುಕೊಳ್ಳುವುದಕ್ಕಾಗಿ ನಕಲಿ ದಾಖಲೆಗಳನ್ನೂ ಸಲ್ಲಿಸಲಾಗಿದೆ ಎಂದು ಸಿಬಿಐ ಹೇಳಿದೆ.

ರೊಟೊಮ್ಯಾಕ್‌ ನಿರ್ದೇಶಕರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಇ.ಡಿ. ದಾಖಲಿಸಿಕೊಂಡಿದೆ. ಸಾಲದ ಹಣವನ್ನು ಬಳಸಿಕೊಂಡು ಅಕ್ರಮ ಆಸ್ತಿ ಮಾಡಲಾಗಿದೆಯೇ ಮತ್ತು ಕಪ್ಪುಹಣ ಸಂಗ್ರಹಿಸಿಡಲಾಗಿದೆಯೇ ಎಂಬುದನ್ನು ಇ.ಡಿ. ಪರಿಶೀಲಿಸಲಿದೆ.

ವಂಚನೆಯ ಎರಡು ವಿಧಾನ

1. ರಫ್ತು ಉದ್ದೇಶಕ್ಕಾಗಿ ಸಾಲ ಪಡೆದುಕೊಳ್ಳಲಾಗಿದೆ. ಆದರೆ ಆ ಮೊತ್ತವನ್ನು ಸರಕಿನ ರಫ್ತಿಗಾಗಿ ಬಳಸಿಕೊಂಡಿಲ್ಲ. ಬದಲಿಗೆ, ವಿದೇಶದಲ್ಲಿರುವ ಕಂಪನಿಯೊಂದರ ಖಾತೆಗೆ ವರ್ಗಾಯಿಸಲಾಗಿದೆ. ಬಳಿಕ, ಈ ಮೊತ್ತವನ್ನು ಕಾನ್ಪುರದಲ್ಲಿರುವ ಕಂಪನಿ ಖಾತೆಗೆ ರಫ್ತು ಆದಾಯ ಎಂದು ತರಿಸಿಕೊಳ್ಳಲಾಗಿದೆ. ಯಾವುದೇ ಸರಕನ್ನು ರಫ್ತು ಮಾಡಿಯೇ ಇಲ್ಲ.

2. ರಫ್ತು ಉದ್ದೇಶಕ್ಕೆ ಪಡೆದುಕೊಂಡ ಸಾಲವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ಸಾಲದ ದುರ್ಬಳಕೆ ಎಂದು ಇದನ್ನು ಪರಿಗಣಿಸಲಾಗುತ್ತದೆ. ‌ರೂಪಾಯಿ ಮತ್ತು ವಿದೇಶಿ ಕರೆನ್ಸಿಯ ವಿನಿಮಯ ದರದ ವ್ಯತ್ಯಾಸದಿಂದ ಲಾಭ ಪಡೆದುಕೊಳ್ಳುವುದಕ್ಕಾಗಿ ಕೆಲವು ವಹಿವಾಟು ನಡೆಸಲಾಗಿದೆ. ರೂಪಾಯಿ ಮತ್ತು ವಿದೇಶಿ ಕರೆನ್ಸಿಯ ವಿನಿಮಯ ದರದ ವ್ಯತ್ಯಾಸದ ಲಾಭ ಪಡೆದುಕೊಳ್ಳುವುದಕ್ಕಾಗಿ ಕೆಲವು ವಹಿವಾಟು ನಡೆಸಲಾಗಿದೆ.

ಮೂವರು ಪಿಎನ್‌ಬಿ ಅಧಿಕಾರಿಗಳ ಬಂಧನ

 ವಜ್ರಾಭರಣ ಉದ್ಯಮಿ ನೀರವ್‌ ಮೋದಿಯ ₹11,400 ಕೋಟಿ ವಂಚನೆ ಹಗರಣದಲ್ಲಿ ಸಿಬಿಐ ಸೋಮವಾರ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ನ(ಪಿಎನ್‌ಬಿ) ಮೂವರು ಅಧಿಕಾರಿಗಳನ್ನು ಬಂಧಿಸಿದೆ.

ವಿದೇಶಿ ವಿನಿಮಯ ವಿಭಾಗದ ಹಿಂದಿನ ಮುಖ್ಯಸ್ಥ ಬೆಚ್ಛು ತಿವಾರಿ, ವ್ಯವಸ್ಥಾಪಕ ಯಶವಂತ್‌ ಜೋಶಿ, ರಫ್ತು ವಿಭಾಗದ ಅಧಿಕಾರಿ ಪ್ರಫುಲ್‌ ಸಾವಂತ್‌ ಅವರನ್ನು ದಿನವಿಡಿ ವಿಚಾರಣೆಗೆ ಒಳಪಡಿಸಿದ ನಂತರ ಸಂಜೆ ವೇಳೆಗೆ ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೆ ಏರಿದಂತಾಗಿದೆ.

ತಿವಾರಿ ವಂಚನೆ ಜಾಲದ ಪ್ರಮುಖ ಪಾತ್ರಧಾರಿ ಎನ್ನಲಾಗಿದ್ದು, ಬಂಧಿತರ ಮನೆಗಳನ್ನು ಸಿಬಿಐ ಜಾಲಾಡುತ್ತಿದೆ.ಮತ್ತೊಂದೆಡೆ ನೀರವ್‌ ಕಂಪನಿಯ ನಾಲ್ವರು ಹಿರಿಯ ಅಧಿಕಾರಿಗಳ ವಿಚಾರಣೆ ಮುಂದುವರೆದಿದೆ.

ಮುಂಬೈನ ಲೋವರ್‌ ಪರೇಲ್‌ನ ಪೆನಿನ್ಸುಲಾ ಬಿಸಿನೆಸ್‌ ಪಾರ್ಕ್‌ನಲ್ಲಿರುವ ನೀರವ್‌ ಒಡೆತನದ ಸಮೂಹ ಸಂಸ್ಥೆಗಳ ಕಚೇರಿಗಳಲ್ಲಿಯೂ ಸಿಬಿಐ ಅಧಿಕಾರಿಗಳು ದಾಖಲೆಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಮುಂದುವರೆದ ಇ.ಡಿ ಕಾರ್ಯಾಚರಣೆ

ಮುಂಬೈ, ಬೆಂಗಳೂರು ಸೇರಿದಂತೆ 38 ಸ್ಥಳಗಳಲ್ಲಿ ನೀರವ್‌ ಮತ್ತು ಪಾಲುದಾರ ಮೆಹುಲ್‌ ಚೋಕ್ಸಿ ಒಡೆತನದ ಕಚೇರಿ, ಚಿನ್ನಾಭರಣ ಮಳಿಗೆ, ಮನೆಯಲ್ಲಿ ಐದನೇ ದಿನವೂ ಶೋಧ ಕಾರ್ಯ ಮುಂದುವರಿದಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ದಾಖಲೆಗಳಿಗಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇನ್ನೂ ಜಾಲಾಡುತ್ತಿದ್ದಾರೆ.

ಸೋಮವಾರದ ತಪಾಸಣೆಯ ವೇಳೆ ₹22 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಪತ್ತೆಯಾಗಿದೆ. ಇದರೊಂದಿಗೆ ಐದು ದಿನಗಳಲ್ಲಿ ಒಟ್ಟು ₹5,716 ಕೋಟಿ ಸಂಪತ್ತು ವಶಪಡಿಸಿಕೊಂಡಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT