ಬುಧವಾರ, ಡಿಸೆಂಬರ್ 11, 2019
26 °C

ಆಶ್ರಯ ನಿವೇಶನಕ್ಕೆ ಸಾವಿರಾರು ಫಲಾನುಭವಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶ್ರಯ ನಿವೇಶನಕ್ಕೆ ಸಾವಿರಾರು ಫಲಾನುಭವಿಗಳು

ಕುಣಿಗಲ್: ಆಶ್ರಯ ನಿವೇಶನಗಳ ಹಂಚಿಕೆಗಾಗಿ 23 ಎಕರೆ ಜಮೀನನ್ನು ಪುರಸಭೆ ವಶಕ್ಕೆ ಸರ್ಕಾರ ನೀಡಿ 15 ವರ್ಷವಾದರೂ ಹಂಚಿಕೆ ಮಾಡಲು ಜನಪ್ರತಿನಿಧಿ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಪುರಸಭೆ ವ್ಯಾಪ್ತಿಯ ಬಿದನಗೆರೆ ಸರ್ವೆ ನಂ 132ರಲ್ಲಿ 14.39 ಎಕರೆ ಮತ್ತು ಮಲ್ಲಘಟ್ಟ ಸರ್ವೆ ನಂ 24ರಲ್ಲಿ 9.18 ಎಕರೆ ಜಮೀನನ್ನು ಆಶ್ರಯ ನಿವೇಶನಗಳ ಹಂಚಿಕೆ ಮಾಡಲು ಕಂದಾಯ ಇಲಾಖೆಯಿಂದ ಪುರಸಭೆಗೆ 4-3-2004ರಲ್ಲಿ ಹಸ್ತಾಂತರಿಸಲಾಗಿದೆ.

ಅಂದಿನ ಶಾಸಕರಾದ ಎಸ್.ಪಿ.ಮುದ್ದಹನುಮೇಗೌಡ ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದು, 4.7.2007ರಲ್ಲಿ 1,156 ಆಶ್ರಯ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಮಂಜೂರಾತಿ ಪತ್ರ ವಿತರಿಸಿದ್ದರು. ನಂತರ ಪುರಸಭೆ ಅಧಿಕಾರ ವರ್ಗದವರು ₹ 10ಲಕ್ಷ ಹಣವನ್ನು ವ್ಯಯಿಸಿ, ವಶಕ್ಕೆ ಪಡೆದುಕೊಂಡ ಜಮೀನನ್ನು ನಿವೇಶನಗಳ ವಿಂಗಡಣೆ ಮಾಡಿ ಕಲ್ಲುಗಳನ್ನು ಹಾಕಿ ಗುರುತು ಮಾಡಿದ್ದರು. ನಂತರ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕಾಗಿತ್ತು. ಆದರೆ ಚುನಾವಣೆ ಬಂದ ಕಾರಣ ಇಡೀ ಪ್ರಕ್ರಿಯೆ ಸ್ಥಗಿತಗೊಂಡಿತು.

ರಾಮಸ್ವಾಮಿಗೌಡ ಅವರ ಅಧಿಕಾರದಲ್ಲಿ, ನಿವೇಶನ ಹಂಚಿಕೆಗೆ ಮುಂದಾದರೂ ನಿವೇಶನ ಮಂಜೂರಾತಿ ಪತ್ರ ಪಡೆದವರಲ್ಲಿ ಅರ್ಹರನ್ನು ಗುರುತಿಸುವ ಕಾರ್ಯಕ್ಕೆ ಪ್ರೋಬೆಷನರಿ ಕೆಎಎಸ್ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಿದಾಗ 1,156ರಲ್ಲಿ 856 ಅರ್ಹರನ್ನು ಗುರುತಿಸಿ ಜಿಲ್ಲಾಧಿಕಾರಿಗೆ ಮತ್ತು ಶಾಸಕರಿಗೆ ವರದಿ ನೀಡಿದ್ದು, ದಾಖಲೆಗಳು ಕಡತದಲ್ಲಿ ಸೇರಿದವೆ ಹೊರತು ಯಾವ ಪ್ರಯೋಜನವಾಗಿಲ್ಲ ಎಂದು ಪುರಸಭೆ ಸದಸ್ಯ ರಂಗಸ್ವಾಮಿ ತಿಳಿಸಿದ್ದಾರೆ.

ನಂತರ ಅಧಿಕಾರಕ್ಕೆ ಬಂದ ಶಾಸಕರಾದ ಎಚ್.ನಿಂಗಪ್ಪ. ಬಿ.ಬಿ.ರಾಮಸ್ವಾಮಿಗೌಡ ಮತ್ತು ಡಿ.ನಾಗರಾಜಯ್ಯ ಅವರು ಅನೇಕ ಆಶ್ರಯ ಸಮಿತಿ ಸಭೆಗಳನ್ನು ನಡೆಸಿದರೂ ನಿವೇಶನ ಹಂಚಿಕೆ ವಿಚಾರ ಗೊಂದಲದ ಗೂಡಾಗಿ ಇದುವರೆಗೂ ಹಂಚಿಕೆಯಾಗದೆ ನನೆಗುದಿಗೆ ಬಿದ್ದಿದೆ.

ಪ್ರತಿ ಬಾರಿಯೂ ಆಶ್ರಯ ಸಮಿತಿ ಸಭೆ ನಡೆಯುವ ವಿಷಯ ತಿಳಿದ ನಿವೇಶನ ರಹಿತರು, ಆಶ್ರಯ ನಿವೇಶನ ಹಂಚಿಕೆಯ ವಿಚಾರ ಪ್ರಚಾರವಾಗುತ್ತಿದ್ದಂತೆ ನಿವೇಶನ ಸಾವಿರಾರು ಆಕಾಂಕ್ಷಿಗಳು ನೂರಾರು ರೂಪಾಯಿಗಳನ್ನು ಖರ್ಚು ಮಾಡಿ ಅರ್ಜಿ ಸಲ್ಲಿಸುವ ಪರಿಪಾಠ ಬೆಳಸಿಕೊಂಡು ಬಂದು, ನಿವೇಶನ ದೊರೆಯದೆ ಶಾಪ ಹಾಕುತ್ತಿದ್ದಾರೆ. ನಂತರ ಮತ್ತೆ ನಿವೇಶನ ದೊರೆಯವ ಆಸೆಯಿಂದ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಮುಂದುವರಿದಿದೆ ಎಂದು ಪ್ರತಿ ಬಾರಿಯೂ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೇಣುಕಪ್ಪ ಅವರ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿ ಬಾರಿಯೂ ಆಶ್ರಯ ಸಮಿತಿಯ ರಚನೆ ತಡವಾಗುತ್ತಿರುವುದು ಒಂದು ಕಾರಣವಾದರೇ, ಬಿ.ಬಿ.ಆರ್ ಅಧಿಕಾರದಲ್ಲಿದಾಗ ಬಿಜೆಪಿ ಮುಖಂಡರು ಆಶ್ರಯ ಸಮಿತಿ ಸದಸ್ಯರಾಗಿದ್ದರು. ನಂತರ ಡಿ.ನಾಗರಾಜಯ್ಯ ಶಾಸಕರಾದಾಗ ಕಾಂಗ್ರೆಸ್ ಮುಖಂಡರು ಆಶ್ರಯ ಸಮಿತಿ ಸದಸ್ಯರಾಗಿದ್ದರು. ಈ ಕಾರಣದಿಂದಾಗಿ ಆಶ್ರಯ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರ ವರ್ಗದವರಲ್ಲಿ ಸಾಮರಸ್ಯದ ಕೊರತೆಯಿಂದಾಗಿಯೂ ಸಕಾಲದಲ್ಲಿ ಸಭೆ ನಡೆಯಲಿಲ್ಲ ನಡೆದರೂ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಆಶ್ರಯ ಸಮಿತಿಯ ಮಾಜಿ ಸದಸ್ಯ ವೆಂಕಟೇಶ್ ತಿಳಿಸಿದ್ದಾರೆ.

ಈ ನಡುವೆ ಪುರಸಭೆಯಿಂದ ನಿವೇಶನ ರಹಿತರ ಗುರುತಿಸಿವ ಕಾರ್ಯ ನಡೆಸಿದ್ದು, ಪ್ರತಿ ವಾರ್ಡ್‌ನಲ್ಲಿ ಸಮೀಕ್ಷೆ ಮಾಡಲಾಗಿದೆ ಅರ್ಜಿಗಳನ್ನು ಗಣಕಿಕರಣಗೊಳಿಸಲಾಗಿದ್ದು, ಸಮೀಕ್ಷೆ ಪ್ರಕಾರ 3,867 ನಿವೇಶನ ರಹಿತರನ್ನು ಗುರುತಿಸಲಾಗಿದೆ. ದಾಖಲಾತಿಗಳನ್ನು ಪರಿಶೀಲಿಸಿ 3,746 ಅರ್ಹರನ್ನು ಗುರುತಿಸಲಾಗಿದೆ.

ನಿವೇಶನಗಳಿಗಾಗಿ ಗುರುತಿಸಲಾಗಿ ಕಲ್ಲುಗಳನ್ನು ಹಾಕ್ಕಲಾಗಿದ್ದ 23 ಎಕರೆ ಜಮೀನು ಪಾಳುಬಿದ್ದಿದ್ದು, ನಿವೇಶನಗಳ ಗುರುತಿನ ಕಲ್ಲುಗಳು ಸಹ ಕಾಣೆಯಾಗಿದೆ. ಈಗ ಮತ್ತೆ ನಿವೇಶನ ವಿಂಗಡಣೆ ಮಾಡಬೇಕಾದರೆ ಪುರಸಭೆಗೆ ಲಕ್ಷಾಂತರ ಹಣ ಖರ್ಚು ಮಾಡಬೇಕಿದೆ ಎಂದು ಸೇವಾ ಭಾಗ್ಯ ಫೌಂಡೇಷನ್ ಕಾರ್ಯದರ್ಶಿ ವಿನೋದ್‌ಗೌಡ ತಿಳಿಸಿದ್ದಾರೆ.

ಕೊಳಚೆ ನಿರ್ಮೂಲನಾ ಮಂಡಳಿಯಿಂದ 500 ಮನೆಗಳು ಮಂಜೂರಾಗಿದ್ದು, ಸಮೂಹ ಗೃಹಗಳ ನಿರ್ಮಾಣಕ್ಕೆ ನಿವೇಶನವನ್ನು ಹುಡುಕಲಾಗುತ್ತಿದೆ. ಆದರೆ ಪುರಸಭೆ ವತಿಯಿಂದ ಬಿದನಗೆರೆ ಅಥವಾ ಮಲ್ಲಾಘಟ್ಟ ಆಶ್ರಯ ಜಮೀನನ್ನು ನೀಡಿದರೆ ಬಹುವಸತಿ ಗೃಹಗಳ ನಿರ್ಮಾಣ ಮಾಡಿ ಹಂಚಿಕೆ ಮಾಡುವುದರಿಂದ ಜಮೀನು ಉಳಿಯುತ್ತದೆ. ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಹಂಚಲು ಅನುಕೂಲವಾಗುತ್ತದೆ ಅಧಿಕಾರಿಗಳು ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಅಂದಿನ ಶಾಸಕ ಎಸ್.ಪಿ.ಮುದ್ದಹನುಮೇಗೌಡ ವಿತರಿಸಿದ ಮನೆ ಮಂಜೂರಾತಿ ಪತ್ರಗಳು ಎಂಬ ಜೇನುಗೂಡಿಗೆ ಕೈಹಾಕಿ ಕಚ್ಚಿಸಿಕೊಳ್ಳವ ಪ್ರಯತ್ನ ಯಾವ ಶಾಸಕರು ಮಾಡಲಿಲ್ಲ. ಕಾರಣ ಮುದ್ದಹನುಮೇಗೌಡ ಮನೆ ಮಂಜೂರಾತಿ ಪತ್ರ ಕೊಟ್ಟರು. ಪರಿಶೀಲನೆ ನೆಪದಲ್ಲಿ ಅನುರ್ಜಿತಗೊಳಿಸಿ ಜನರಿಂದ ಆರೋಪ ಎದುರಿಸಲಾಗದೆ ಹಾಗೇಯೇ ಮುಂದುವರಿಸಕೊಂಡು ಬಂದಿದೆ. ಮನೆ ಮಂಜೂರಾತಿ ಪತ್ರ ಕೊಟ್ಟವರು ಹಕ್ಕು ಪತ್ರ ಕೊಟ್ಟಿದ್ದರೇ ಸಮಸ್ಯೆಯೇ ಇರುತ್ತಿರಲಿಲ್ಲ. ಈಗಾಗಲೇ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರು ಎಂದು ಪುರಸಭೆ

ಸದಸ್ಯ ಕೆ.ಎಲ್.ಹರೀಶ್ ಅಭಿಪ್ರಾಯ.

ಮನೆ ಮಂಜೂರಾತಿ ಪತ್ರ ನೀಡಿದ್ದೇನೆ. ಅವುಗಳನ್ನು ಪರಿಶೀಲಿಸಿ ಅರ್ಹರನ್ನು ಆಯ್ಕೆ ಮಾಡಿ ಹಕ್ಕು ಪತ್ರ ನೀಡಬೇಕಾದ್ದು, ಅಧಿಕಾರಕ್ಕೆ ಬಂದವರು ಮತ್ತು ಅಧಿಕಾರಿಗಳು ಮಾಡಬೇಕಾಗಿತ್ತು. ಮಾಡಿಲ್ಲ ಎನ್ನುವುದು ಎಸ್.ಪಿ ಮುದ್ದುಹನುಮೇಗೌಡ ಅವರ ಅಭಿಪ್ರಾಯ.

ಟಿ.ಎಚ್‌.ಗುರುಚರಣ್‌ಸಿಂಗ್‌

ಪ್ರತಿಕ್ರಿಯಿಸಿ (+)